ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಯ ಶಿಲಾ ಸಂಪತ್ತು

Last Updated 23 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಹಂಪಿ ಪರಿಸರ ಅತ್ಯಂತ ವಿಶಿಷ್ಟವಾದುದು. ಸಾವಿರಾರು ವರ್ಷಗಳ ಹಿಂದೆ ನಿಸರ್ಗ ರೂಪಿಸಿದ ಬೃಹತ್ ಶಿಲಾ ಸಮೂಹಗಳು ಹಂಪಿ ಪರಿಸರಕ್ಕೆ ರಮಣೀಯತೆಯ ಜತೆಗೆ ರೂಕ್ಷತೆಯನ್ನೂ ತಂದು ಕೊಟ್ಟಿವೆ. ಹಂಪಿ ಪರಿಸರದಲ್ಲಿದ್ದ ಶಿಲಾ ಸಂಪತ್ತನ್ನು ಬಳಸಿಕೊಂಡು ವಿಜಯನಗರದ ಅರಸರು ಬೃಹತ್ ದೇವಸ್ಥಾನಗಳು, ಕೋಟೆ ಕೊತ್ತಲಗಳನ್ನು ನಿರ್ಮಿಸಿದರು. ನಿಸರ್ಗ ಸಹಜ ಹಾಗೂ ಮಾನವ ನಿರ್ಮಾಣಗಳು ಹಂಪಿಯ ಪರಿಸರಕ್ಕೆ ಭವ್ಯತೆಯನ್ನು ತಂದುಕೊಟ್ಟಿವೆ. ಹಂಪಿಯ ಸ್ಮಾರಕಗಳ ಜತೆಗೆ ಇಂದಿಗೂ ಬೀಡುಬೀಸಾಗಿ ಬಿದ್ದುಕೊಂಡಿರುವ ಬೃಹತ್ ಬಂಡೆಗಳು ಹಂಪಿಯ ವೈಶಿಷ್ಟ್ಯ.

ಹಂಪಿಯಲ್ಲಿ ಸಾಮಾಜ್ಯವೊಂದು ತಲೆ ಎತ್ತಿದ್ದರಿಂದ ಅದು ಜಗತ್ತಿನ ಗಮನಕ್ಕೆ ಬಂತು. ಇಲ್ಲದೇ ಹೋಗಿದ್ದರೆ ಅದು ಕಗ್ಗಲ್ಲು ಬಂಡೆಗಳ ಪ್ರದೇಶವಾಗಿ ಉಳಿಯುತ್ತಿತ್ತು. ಈ ಪರಿಸರದಲ್ಲಿ ಹರಿಯುವ ತುಂಗಭದ್ರಾ ನದಿ ಅಲ್ಲಿ ಸಾಮ್ರಾಜ್ಯದ ಸ್ಥಾಪನೆಗೆ ಕಾರಣವಾಯಿತು. ಎತ್ತರದ ಬೆಟ್ಟ, ಗುಡ್ಡಗಳ ನಡುವಣ ಬಯಲು ಪ್ರದೇಶದಲ್ಲಿ ವಿಜಯನಗರ ಸಾಮಾಜ್ಯ ಸ್ಥಾಪನೆಯಾಯಿತು. ಅದಕ್ಕೆ ಪೂರಕವಾಗಿ ರಾಜಧಾನಿ ಹಂಪಿ ತಲೆ ಎತ್ತಿತು.

ಹಂಪಿಗೆ ನಿಸರ್ಗದ ರಕ್ಷಣೆ ಇದೆ ಎಂಬ ಕಾರಣಕ್ಕೆ ಅಲ್ಲಿ ಸಾಮ್ರಾಜ್ಯ ಸ್ಥಾಪನೆಯಾಯಿತು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.
ಹಂಪಿ ಪರಿಸರ ಇತಿಹಾಸ ಪೂರ್ವ ಕಾಲದಿಂದಲೂ ಮಾನವರ ನೆಲೆಯಾಗಿತ್ತು ಎಂಬುದಕ್ಕೆ ಅನೇಕ ಪುರಾವೆಗಳಿವೆ. ಅಲ್ಲಿ ನಾಗರಿಕತೆ ತಲೆ ಎತ್ತಿದ ಕಾಲಘಟ್ಟ ಯಾವುದು ಎಂಬುದನ್ನು ಖಚಿತವಾಗಿ ಹೇಳುವ ದಾಖಲೆಗಳಿಲ್ಲ.ಹಂಪಿಯ ಸುತ್ತಲಿನ ಶಿಲಾ ಸಂಪತ್ತು ಹಾಗೂ ತುಂಗಭದ್ರಾ ನೀರನ್ನು ಬಳಸಿಕೊಂಡು ಯಾವುದೋ ಕಾಲಘಟ್ಟದಲ್ಲಿ ಆರಂಭವಾದ ‘ಬದುಕು’ ವಿಕಾಸಗೊಳ್ಳುತ್ತ ವಿಜಯನಗರದ ಅರಸರ ಕಾಲದಲ್ಲಿ ಪರಿಪೂರ್ಣತೆ ಕಂಡಿತು.

ವಿಜಯನಗರ ಅರಸರ ಕಾಲದಲ್ಲಿ ಅಲ್ಲಿ ಕೋಟೆ, ಕೊತ್ತಲಗಳು, ಅರಮನೆಗಳು ಹಾಗೂ ಅಸಂಖ್ಯಾತ ದೇವಸ್ಥಾನಗಳು ನಿರ್ಮಾಣವಾದವು. ಇವನ್ನೆಲ್ಲ ಕಟ್ಟಿದವರು ಯಾರು? ನಿರ್ಮಾಣ ಕಾಮಗಾರಿ ಆರಂಭವಾದದ್ದು ಯಾವ ದಿನ? ಮುಗಿದ ದಿನ ಯಾವುದು? ಎಂಬ ಖಚಿತ ಮಾಹಿತಿಗಳಿಲ್ಲ.

ಹಂಪಿ ನಗರ ನಿರ್ಮಾಣದ ವಾಸ್ತುಶಿಲ್ಪಿ ಯಾರು? ಯಾವ ಅರಸರ ಕಾಲದಲ್ಲಿ ಯಾವ್ಯಾವ ದೇವಸ್ಥಾನಗಳು ನಿರ್ಮಾಣವಾದವು ಎಂಬ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಕೆಲವೇ ಮಾಹಿತಿಗಳು ಇತಿಹಾಸದಲ್ಲಿ ದಾಖಲಾಗಿವೆ. ವಿಜಯನಗರವನ್ನು ಅಳಿದ ಅನೇಕ ಅರಸರು ತಮ್ಮ ಜೀವಿತಾವಧಿಯಲ್ಲಿ ಅಪ್ರತಿಮ ಎನ್ನಿಸುವಂತಹ ದೇವಸ್ಥಾನಗಳನ್ನು ನಿರ್ಮಿಸುತ್ತ ಹೋದರು. ಅಲ್ಲಿನ ಪರಿಸರದಲ್ಲಿ ಸಮೃದ್ಧವಾಗಿದ್ದ ಶಿಲೆಗಳನ್ನೇ ಬಳಸಿಕೊಂಡು ಕಲೆ ಅರಳಿತು. 

 ಬೇಟೆಯಾಡಿ ಬದುಕುತ್ತಿದ್ದ ಆದಿ ಮಾನವರು ಬೇಸಾಯವನ್ನು ರೂಢಿಸಿಕೊಂಡಿದ್ದು, ಗುಹೆಗಳಲ್ಲಿ ವಾಸ ಮಾಡುತ್ತಿದ್ದವರು ಮನೆಗಳನ್ನು ನಿರ್ಮಿಸಿಕೊಂಡದ್ದು ವಿವಿಧ ಕಾಲಘಟ್ಟಗಳಲ್ಲಿ ಆದ ಬೆಳವಣಿಗೆ. ಈ ಬೆಳವಣಿಗೆಯೊಂದಿಗೆ ಮನುಷ್ಯರಲ್ಲಿ ಕಲಾವಂತಿಕೆಯೂ ವಿಕಸನಗೊಳ್ಳುತ್ತ ಹೋಯಿತು. ವಿಜಯ ವಿಠ್ಠಲ ದೇವಾಲಯ ಸಂಕೀರ್ಣದಲ್ಲಿರುವ ಏಕಶಿಲೆಯ ಕಲ್ಲಿನ ರಥದ ಇದಕ್ಕೆ ಅತ್ಯುತ್ತಮ ಉದಾಹರಣೆ. ಬಳಸಿಕೊಳ್ಳದೇ ಉಳಿದ ಅಸಂಖ್ಯಾತ ಶಿಲೆಗಳು ಹಂಪಿಯಲ್ಲಿವೆ. ಅನೇಕ ಕಲ್ಲುಬಂಡೆಗಳನ್ನು ಅವುಗಳ ಮೂಲರೂಪದಲ್ಲೇ ಉಳಿಸಿಕೊಂಡಿದ್ದು ಆ ಕಾಲದ ಜನರ ಕಲಾ ಪ್ರಜ್ಞೆಗೆ ಸಾಕ್ಷಿ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹಂಪಿ ಹಾಳಾಯಿತು. ಹಲವು ಶತಮಾನಗಳ ಕಾಲ ವಿಜಯನಗರದ ಶಿಲ್ಪಿಗಳು, ವಾಸ್ತುಶಾಸ್ತ್ರಜ್ಞರು ನಿರ್ಮಾಣ ಮಾಡಿದ ಅತ್ಯದ್ಭುತ ಶಿಲ್ಪ ಕಲಾ ವೈಭವವನ್ನು ಶತ್ರು ಸೈನಿಕರು ಆರು ತಿಂಗಳು ಹಂಪಿಯಲ್ಲಿ ಬೀಡುಬಿಟ್ಟು ನಾಶ ಮಾಡಿದರು! ಹಂಪಿ ಸುತ್ತ ಮುತ್ತ 1500 ಕ್ಕೂ ಹೆಚ್ಚು ಸ್ಮಾರಕಗಳಿವೆ. ಜನ ಸಾಮಾನ್ಯರಿಗೆ ಹಂಪಿ ಪರಿಸರ ವಿಸ್ಮಯ ಹಾಗೂ ವಿಷಾದ ಭಾವಗಳನ್ನು ಏಕಕಾಲಕ್ಕೆ ಉಂಟುಮಾಡುತ್ತವೆ.

 ಮುಗಿಲಿನತ್ತ ಮುಖ ಮಾಡಿದ ಬೃಹತ್ ಶಿಲೆಗಳು, ದೂರದಲ್ಲಿ ನಿಂತು ನೋಡಿದರೆ ಅಂಗಾತ ಮಲಗಿದ ಅಂಗನೆಯಂತೆ ಕಾಣುವ ಕಲ್ಲು ಬಂಡೆ, ಸಣ್ಣ ಕಲ್ಲಿನ ಆಸರೆಯ ಮೇಲೆ ನೂರಾರು ವರ್ಷಗಳಿಂದ ನಿಂತ ಬೃಹತ್ ಬಂಡೆಗಳು, ಆನೆಗಿಂತ ದೊಡ್ಡ ಆಕಾರದ ಬಂಡೆಗಳು, ಛತ್ರಿ ಆಕಾರದ, ಏರಿಕೆ ಕ್ರಮದಲ್ಲಿರುವ, ಅಚ್ಚುಕಟ್ಟಾಗಿ ಜೋಡಿಸಿಟ್ಟಂತಹ, ಬಿಗಿದಪ್ಪಿ ನಿಂತ, ಪರಸ್ಪರ ಅಸರೆಯಾಗಿ ನಿಂತ, ಸಮರಸದ ಬದುಕಿನ ಸಂಕೇತದಂತೆ ಕಾಣುವ ಹತ್ತಾರು ಬಂಡೆಗಳು ನೋಡುಗರನ್ನು ಅಚ್ಚರಿಗೊಳಿಸುತ್ತವೆ.

ಸಾವಿರಾರು ವರ್ಷಗಳಿಂದ ತುಂಗಭದ್ರಾ ನದಿ ತನ್ನ ದಾರಿಯುದ್ದಕ್ಕೂ ಕಲ್ಲು ಬಂಡೆಗಳನ್ನು ಬಳಸಿಕೊಂಡು ಹರಿಯುವ ಪ್ರಕ್ರಿಯೆಯಲ್ಲಿ ಹಲವಾರು ವೈಶಿಷ್ಟ್ಯಗಳು ನಿರ್ಮಾಣವಾಗಿವೆ. ವಿಭಿನ್ನ ಶಿಲೆಗಳು  ಹಂಪಿಗೆ ವಿಶಿಷ್ಟ ಸೌಂದರ್ಯವನ್ನು ತಂದುಕೊಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT