ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಚ್ಯುತಿಗೆ ಹೆದರುವುದಿಲ್ಲ: ಹಿರೇಮಠ

Last Updated 4 ಡಿಸೆಂಬರ್ 2013, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಸಕ ರಮೇಶ್‌ ಕುಮಾರ್‌ ಅವರು ಹಕ್ಕುಚ್ಯುತಿ ಮಂಡನೆ  ಮೂಲಕ ಬೆದರಿಸಿದರೂ ನಾನು ಹೆದರುವುದಿಲ್ಲ, ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್‌.ಆರ್. ಹಿರೇಮಠ ತಿರುಗೇಟು ನೀಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಮೇಶ್‌ ಕುಮಾರ್‌ ಅವರ ಬೆದರಿಕೆ ತಂತ್ರಗಳಿಂದ  ನನ್ನ ನೈತಿಕ ಸ್ಥೈರ್ಯ ಕುಗ್ಗುವುದಿಲ್ಲ’ ಎಂದರು. ‘ನನ್ನ ಹೇಳಿಕೆ ಹೇಗೆ ಹಕ್ಕುಚ್ಯುತಿ ಆಗುತ್ತದೆ ಎಂಬುದನ್ನು ರಮೇಶಕುಮಾರ್‌ ಮೊದಲು ತಿಳಿಯಬೇಕು. ಈ ಮಾತನ್ನು ಅವರಿಗೆ ಕೇಳಲು ನನಗೆ ಮುಜುಗರವಾಗುತ್ತಿದೆ’ ಎಂದು ವ್ಯಂಗ್ಯವಾಡಿದರು.

‘ನಾನು ಯಾವ ರೀತಿಯಲ್ಲಿ ಅವರ ಹಕ್ಕುನ್ನು ಚ್ಯುತಿಗೊಳಿಸಿದ್ದೇನೋ ಗೊತ್ತಿಲ್ಲ. ಸಂವಿಧಾನದಲ್ಲಿ ಸ್ವತಂತ್ರವಾಗಿ ಮಾತನಾಡುವ ಹಕ್ಕು ಸಾಮಾನ್ಯ ನಾಗರಿಕನಿಗೆ ಇದೆ. ಅದನ್ನು ಬಳಸಿಕೊಂಡು ಜನಪ್ರತಿನಿಧಿಯ ಕಾರ್ಯ ಚಟುವಟಿಕೆಯನ್ನು ಪ್ರಶ್ನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಹಕ್ಕುಚ್ಯುತಿ ಮಂಡನೆ ಕಾನೂನಿನ ಪ್ರಕಾರ ಅಸಮರ್ಥನೀಯ’ ಎಂದರು. 
 
‌‘ಶ್ರೀನಿವಾಸಪುರದ ಹೊಸಹೂಡ್ಯಾ ಗ್ರಾಮದಲ್ಲಿ 60ಕ್ಕೂ ಹೆಚ್ಚಿನ ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಕಬಳಿಸಿರುವ ಬಗ್ಗೆ ದಾಖಲೆಗಳು ನನ್ನ ಬಳಿ ಇವೆ. ಅವುಗಳನ್ನು ಹಂತ ಹಂತವಾಗಿ ಸಮಯಕ್ಕೆ ತಕ್ಕಂತೆ ಬಿಡುಗಡೆ ಮಾಡುತ್ತೇನೆ’ ಎಂದು ತಿಳಿಸಿದರು.
ಅರಣ್ಯ ಭೂಮಿ ಒತ್ತುವರಿ ಬಗ್ಗೆ ಸಮೀಕ್ಷೆ ನಡೆಸಲು ನಿವೃತ್ತ ಐಎಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್‌ ಅವರ ನೇತೃತ್ವದ ತಂಡ ಹೊಸಹೂಡ್ಯಾ ಗ್ರಾಮಕ್ಕೆ ಹೋಗದಂತೆ ಒತ್ತಡ ಹೇರಲಾಗಿತ್ತು.

ಆದರೂ ತಂಡ  ಸಮೀಕ್ಷೆ ನಡೆಸಿತು. ಅದರ ವರದಿಯಲ್ಲಿ ರಮೇಶ್‌ ಕುಮಾರ್‌ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಬಗ್ಗೆ ಉಲ್ಲೇಖ ಇದೆ’ ಎಂದು ಹೇಳಿ, ಸಂಬಂಧಪಟ್ಟ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ಆ ಸಮಯದಲ್ಲಿ ಅರಣ್ಯಾಧಿಕಾರಿಯಾಗಿದ್ದ ಪುಷ್ಕರ್‌ ಅವರ ಮೇಲೆ ನಾನಾ ರೀತಿಯ ಒತ್ತಡ ಹೇರುವ ಮೂಲಕ ಮರು ಸಮೀಕ್ಷೆಗೆ ಆದೇಶ ನೀಡುವಂತೆ ಮಾಡಲಾಯಿತು.  ಈ ಆದೇಶವನ್ನು ಪ್ರಶ್ನಿಸಿದ ಇಲಾಖೆಯ ಉನ್ನತ ಅಧಿಕಾರಿಗಳು ಪುಷ್ಕರ್‌ ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು  ವಿವರಿಸಿದರು.

‘ದಾಖಲೆಗಳ ಮಹತ್ವ ಅರಿಯಿರಿ’
ದಾಖಲೆಗಳ ಮಹತ್ವ ಅರಿಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಸಂತೋಷ್‌ ಲಾಡ್‌ ಮತ್ತು ಜನಾರ್ದನ ರೆಡ್ಡಿ ಅವರು ದಾಖಲೆಗಳನ್ನು ತೋರಿಸಿ ಎಂದು ಸವಾಲು ಹಾಕಿದ್ದರು. ಈಗ ರಮೇಶ್‌ ಕುಮಾರ್‌ ಅವರೂ ಸಹ ಅದೇ ಹಾದಿ ಹಿಡಿದು ದಾಖಲೆಗಳನ್ನು ಕೇಳುತ್ತಿದ್ದಾರೆ. ಇನ್ನಾದರೂ ಅವರು ದಾಖಲೆಗಳ ಮಹತ್ವ ಅರಿತು ಅಕ್ರಮವಾಗಿ ಕಬಳಿಸಿರುವ ಅರಣ್ಯ ಭೂಮಿಯನ್ನು ಸರ್ಕಾರಕ್ಕೆ ಹಿಂತಿರುಗಿಸಲಿ.
-ಎಸ್‌.ಆರ್‌.ಹಿರೇಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT