ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ ಹಿಡಿಯದ, ಕುಟುಂಬ ಜೀವಿ: ಪತ್ನಿಯ ಅಭಿಮಾನ

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಎಷ್ಟೇ ಒತ್ತಡದಲ್ಲಿರಲಿ, ರಾಜಕೀಯದಲ್ಲಿ ಎಷ್ಟೇ ದೊಡ್ಡ ಜವಾಬ್ದಾರಿ, ಸವಾಲು ಎದುರಾಗಲಿ ಕೌಟುಂಬಿಕ ಜವಾಬ್ದಾರಿಯನ್ನು ಅವರು ಎಂದೂ ಕಡೆಗಣಿಸಿದವರಲ್ಲ... ಕುಟುಂಬ ಜೀವನವನ್ನು ಗಾಢವಾಗಿ ಪ್ರೀತಿಸುವ ವ್ಯಕ್ತಿತ್ವ ಅವರದು... ಮನೆಯವರ ಜೊತೆಯಲ್ಲಾಗಲಿ, ಸಾರ್ವಜನಿಕ ವಲಯದಲ್ಲಾಗಲಿ ಯಾವುದಕ್ಕೂ ಹಟ ಹಿಡಿಯುವ ಸ್ವಭಾವ ಅವರದಲ್ಲ...~

ನಿಯೋಜಿತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಕುರಿತು ಪತ್ನಿ ಶಿಲ್ಪಾ ಅವರ ಪ್ರೀತಿಯ ಮಾತು ಇದು. `ಮನೆಗೆ ಬರುತ್ತಲೇ ಅವರು ಮೊದಲು ಕರೆಯುವ ಹೆಸರು ನನ್ನದೇ. ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲಿ, ಅವರಿಗೆ ನನ್ನ ಬೆಂಬಲ ಬೇಕೇ ಬೇಕು. ಯಶಸ್ವಿ ಪುರುಷನ ಹಿಂದೆ ಹೆಣ್ಣಿನ ಬೆಂಬಲ ಇರಬೇಕಲ್ಲವಾ?~ ಎಂದು ಶಿಲ್ಪಾ ಅಭಿಮಾನದಿಂದ ಪ್ರಶ್ನಿಸುತ್ತಾರೆ.

ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಎದುರಾಗಿರುವ ಬರದ ಸಮಸ್ಯೆ ಒಂದೆಡೆಯಾದರೆ, ಆಡಳಿತಾರೂಢ ಬಿಜೆಪಿಯ ಬಿಕ್ಕಟ್ಟು ಇನ್ನೊಂದೆಡೆ. ಇಂಥ ಸಂಕೀರ್ಣ ಪರಿಸ್ಥಿತಿಯಲ್ಲಿ ಶೆಟ್ಟರ್ ಅವರು ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಏರಲಿದ್ದಾರೆ.

ಮುಖ್ಯಮಂತ್ರಿಯಾಗಲಿರುವ ತಮ್ಮ ನಾಯಕನನ್ನು ನೋಡಲು, ಶುಭ ಕೋರಲು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಪ್ರದೇಶಗಳಿಂದ ಶೆಟ್ಟರ್ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಅವರ ಇಲ್ಲಿನ ಸರ್ಕಾರಿ ನಿವಾಸ `ಕಾವೇರಿ~ಗೆ ಬುಧವಾರ ಭೇಟಿ ನೀಡಿದರು. `ಕಾವೇರಿ~ಯ ತುಂಬೆಲ್ಲ ಜನಜಾತ್ರೆ. ಬರುವವರು, ಶುಭ ಕೋರುವವರು, ಸಂತಸ ಹಂಚಿಕೊಳ್ಳುವವರ ಸಂಖ್ಯೆ ಅಗಣಿತ. ಇಷ್ಟೆಲ್ಲ ಗಡಿಬಿಡಿಯ ನಡುವೆಯೇ ಶೆಟ್ಟರ್ ಅವರ ಪತ್ನಿ ಶಿಲ್ಪಾ ಹಾಗೂ ತಾಯಿ ಬಸವಣ್ಣೆಮ್ಮ     `ಪ್ರಜಾವಾಣಿ~ ಜೊತೆ ಮಾತಿಗೆ ಕುಳಿತರು.

`ನಮ್ಮ ಮದುವೆ ಆದಾಗ ಅವರು (ಶೆಟ್ಟರ್) ಹುಬ್ಬಳ್ಳಿಯಲ್ಲಿ ವಕೀಲರಾಗಿದ್ದರು. ಮದುವೆಯಾದ ನಂತರವೂ ಸುಮಾರು 12 ವರ್ಷ ವಕೀಲರಾಗಿ ಕೆಲಸ ಮಾಡಿದ್ದಾರೆ. ಅವರು ತುಂಬ ಪ್ರೀತಿಸುವ ವೃತ್ತಿ ಅದು~ ಎಂದು ಶಿಲ್ಪಾ ನೆನಪಿಸಿಕೊಂಡರು. ಚಿಕ್ಕಂದಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ವಕೀಲರಾಗಿದ್ದ ಅವಧಿಯಲ್ಲಿ ಮನೆಯವರ ಜೊತೆ ಕಳೆಯಲು ಅವರಿಗೆ ಹೆಚ್ಚಿನ ಸಮಯ ದೊರೆಯುತ್ತಿತ್ತು. ರಾಜಕಾರಣ ಪ್ರವೇಶಿಸಿದ ನಂತರ ಕುಟುಂಬದ ಸದಸ್ಯರಿಗಾಗಿ ಮೊದಲಿನಷ್ಟು ಸಮಯ ನೀಡಲು ಅವರಿಗೆ ಸಾಧ್ಯವಾಗಿಲ್ಲ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

`ಸಿಟ್ಟು ಬರುತ್ತೆ!~: ಸಾರ್ವಜನಿಕ ಜೀವನದಲ್ಲಿ ಯಾವತ್ತೂ ಕೋಪ ಪ್ರದರ್ಶಿಸದ ಶೆಟ್ಟರ್ ಅವರು ಮನೆಯಲ್ಲಿ ಸಿಟ್ಟು ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಶಿಲ್ಪಾ! `ಹಿಂದೊಮ್ಮೆ ನಾನು ಯಾವುದೋ ಕೆಲಸದಲ್ಲಿ ಮಗ್ನಳಾಗಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿರಲಿಲ್ಲ. ಇದರಿಂದ ನನ್ನ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿತ್ತು. ಆ ಸಂದರ್ಭದಲ್ಲಿ ಅವರು ನನ್ನ ಮೇಲೆ ಸಿಟ್ಟಾಗಿದ್ದರು. ಈಗಲೂ ಅಷ್ಟೇ, ನಾನು ಆರೋಗ್ಯದ ಕಡೆ ನಿಗಾ ವಹಿಸದಿದ್ದರೆ ಅವರಿಗೆ ಕೋಪ ಬರುತ್ತದೆ~ ಎಂದು ಹೇಳಿದರು.

`ಮಾವ ಇರಬೇಕಿತ್ತು...~: `ಮಾವ (ಶೆಟ್ಟರ್ ತಂದೆ) ಶಿವಪ್ಪ ಶಿವಮೂರ್ತಪ್ಪ ಶೆಟ್ಟರ್ ಅವರೂ ವೃತ್ತಿಯಿಂದ ವಕೀಲರು. ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದವರು. ನನ್ನ ಮಗ ದೊಡ್ಡ ಹೆಸರು ಮಾಡುತ್ತಾನೆ, ಜನರಿಗೆ ಒಳ್ಳೆಯದಾಗುವಂಥ ಕೆಲಸ ಮಾಡುತ್ತಾನೆ ಎಂದು ಹೇಳುತ್ತಿದ್ದರು. ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಂದರ್ಭದಲ್ಲಿ ಮಾವ ಇಲ್ಲದಿರುವ ನೋವು ಕಾಡುತ್ತಿದೆ~ ಎಂದು ಮೌನವಾದರು.

ತಾಯಿಯ ಸಂಭ್ರಮ: ಶೆಟ್ಟರ್ ಅವರ ತಾಯಿ ಬಸವಣ್ಣೆಮ್ಮ ಅವರು ಮಗನ ಬೆಳವಣಿಗೆ ನೋಡಿ ಸಂಭ್ರಮಿಸುತ್ತಿದ್ದರು. ಸಂಭ್ರಮದ ನಡುವೆ ಅವರಲ್ಲಿ ಮಾತೇ ಮಾಯವಾದಂತಿತ್ತು. `ಚಿಕ್ಕ ವಯಸ್ಸಿನಿಂದಲೂ ಪುಸ್ತಕಗಳ ಓದು, ನಾಟಕ ನೋಡುವ ಹುಚ್ಚು ಮಗನಿಗೆ ಅಂಟಿಕೊಂಡಿದೆ. ಮನೆಯಲ್ಲಿ ಪುಟ್ಟ ಗ್ರಂಥಾಲಯ ಮಾಡಿಕೊಂಡಿದ್ದಾನೆ. ಮಗ ರಾಜ್ಯದ ಮುಖ್ಯಮಂತ್ರಿ ಆಗುತ್ತಾನೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಈಗಂತೂ ಬಹಳ ಖುಷಿ ಆಗುತ್ತಿದೆ~ ಎಂದು ಅವರು ಹೇಳಿದರು.

`ಮನೆ ಮತ್ತು ಆರ್‌ಎಸ್‌ಎಸ್...~: `ನಮ್ಮ ಮನೆಯವರು (ಶಿವಪ್ಪ) ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಮನೆಯ ಹಿರಿಯರು ನೀಡಿದ ಸಂಸ್ಕಾರ, ಆರ್‌ಎಸ್‌ಎಸ್‌ನ ಹಿರಿಯರ ಜೊತೆ ಚಿಕ್ಕಂದಿನಿಂದಲೂ ಇದ್ದ ಒಡನಾಟ, ಮಗನ ವ್ಯಕ್ತಿತ್ವ ರೂಪಿಸಿದವು. ಶಾಂತ ಸ್ವಭಾವದ, ಯಾವುದಕ್ಕೂ ಬೇಸರ ಮಾಡಿಕೊಳ್ಳದ ವ್ಯಕ್ತಿತ್ವ ಅವನದು. ಎಲ್ಲರೊಂದಿಗೂ ಹೊಂದಿಕೊಳ್ಳುತ್ತಾನೆ.  ಮನೆಯವರು ಈ ಸಂಭ್ರಮ ನೋಡಲು ಇರಬೇಕಿತ್ತು~ ಎಂದು ಬಸವಣ್ಣೆಮ್ಮ ಭಾವುಕರಾಗಿ ನುಡಿದರು.

`ನನ್ನ ಮೈದುನ (ಪತಿಯ ತಮ್ಮ) ಸದಾಶಿವಶೆಟ್ಟರ್ ಅವರೂ ಜನಸಂಘದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ನನ್ನ ಪತಿ ಆಗ ವಕೀಲಿ ವೃತ್ತಿ ಮಾಡಿಕೊಂಡಿದ್ದರು. ಸದಾಶಿವ ಅವರ ಅಕಾಲಿಕ ಮರಣದಿಂದಾಗಿ, ನನ್ನ ಮನೆಯವರು ರಾಜಕೀಯ ಪ್ರವೇಶಿಸುವಂತೆ ಆಯಿತು. ಆರ್‌ಎಸ್‌ಎಸ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ (ಎಬಿವಿಪಿ) ಸಕ್ರಿಯನಾಗಿದ್ದ ಮಗನೂ ಮುಂದೆ ರಾಜಕೀಯದಲ್ಲಿ ತೊಡಗಿಸಿಕೊಂಡ. ಅನಂತಕುಮಾರ್ (ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ) ಹಾಗೂ ನನ್ನ ಮಗ ಪಕ್ಷದ ಚಟುವಟಿಕೆಯಲ್ಲಿ ಒಟ್ಟಾಗಿ ಪಾಲ್ಗೊಳ್ಳುತ್ತಿದ್ದರು~ ಎಂದು ಅವರು ತಮ್ಮ ಚದುರಿದ ನೆನಪುಗಳನ್ನು ತೆರೆದಿಟ್ಟರು.

ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳಲಿರುವ `ಮಗ~ನ ಕುರಿತು `ಅಮ್ಮ~ನ ಆಶಯ ಇದು: `ಯಾರಿಗೂ ಅನ್ಯಾಯವಾಗದಂತೆ ನಿಗಾ ವಹಿಸು. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗು. ಯಾವುದೇ ಸಮಸ್ಯೆ ಎದುರಾದರೂ ಸಮಾಧಾನದಿಂದ ನಿಭಾಯಿಸು~. ಆಶಯವನ್ನು ವಾಸ್ತವಕ್ಕೆ ತರುವ ಸಾಮರ್ಥ್ಯ ಮಗನಿಗಿದೆ ಎಂಬುದು `ಅಮ್ಮ~ನ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT