ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಹೊಂದಿಸಲು ಕರ್ಮಾಕರ್ ಪರದಾಟ

Last Updated 30 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮಾರ್ಚ್‌ನಲ್ಲಿ ಡೆನ್ಮಾರ್ಕ್‌ನಲ್ಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಅರ್ಹತಾ ಸ್ಪರ್ಧೆ ಇದೆ. ಅದಕ್ಕೆ ಕನಿಷ್ಠ ಒಂದೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ. ಅದನ್ನು ನಾನು ಹೇಗೆ ಬರಿಸಲಿ. ಕೇಂದ್ರ ಸರ್ಕಾರವಾಗಲಿ, ಭಾರತ ಪ್ಯಾರಾಲಿಂಪಿಕ್ ಸಮಿತಿಯಾಗಲಿ ಸಹಾಯ ನೀಡುತ್ತಿಲ್ಲ. ಪ್ರಾಯೋಜಕರೂ ಇಲ್ಲ. ಈಜು ತೊರೆಯುವುದೊಂದೇ ನನ್ನ ಮುಂದೆ ಉಳಿದಿರುವ ದಾರಿ~

-ಕಾಮನ್‌ವೆಲ್ತ್ ಕ್ರೀಡಾಕೂಟದ ಅಂಗವಿಕಲರ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದುಕೊಟ್ಟ ಪ್ರಶಾಂತ್ ಕರ್ಮಾಕರ್ ಈ ರೀತಿ `ಪ್ರಜಾವಾಣಿ~ಯೊಂದಿಗೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಲಂಡನ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಅರ್ಹತಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಸವನಗುಡಿ ಈಜು ಕೇಂದ್ರ (ಬಿಎಸಿ)ದಲ್ಲಿ ತರಬೇತಿ ನಿರತರಾಗಿರುವ ಪ್ರಶಾಂತ್ ಹಣದ ಸಮಸ್ಯೆ ಕಾರಣ ವಿದೇಶದಲ್ಲಿ ನಡೆಯುವ ಸ್ಪರ್ಧೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಅರ್ಜುನ ಪ್ರಶಸ್ತಿ ಪುರಸ್ಕೃತ ಕರ್ಮಾಕರ್ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮೂಲತಃ ಕೋಲ್ಕತ್ತದ ಅವರು ಹರಿಯಾಣದ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದಾರೆ. ಅಂಗವಿಕಲರಾಗಿ ಈ ಹುದ್ದೆ ಪಡೆದ ದೇಶದ ಮೊದಲ ಪೊಲೀಸ್.

`ಹರಿಯಾಣದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ನನಗೆ ಸಬ್ ಇನ್‌ಸ್ಪೆಕ್ಟರ್ ಹುದ್ದೆ ನೀಡಿದರು. ಅಂಗವಿಕಲನಾಗಿ ಈ ಹುದ್ದೆ ಪಡೆದ ಮತ್ತೊಬ್ಬರಿಲ್ಲ. ಈ ಜವಾಬ್ದಾರಿ ನೀಡಿದ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಆದರೆ ಇದರಿಂದ ಬರುವ ಹಣ ನನ್ನ ಅಭ್ಯಾಸಕ್ಕೆ ಸಾಕಾಗುವುದಿಲ್ಲ. ಇನ್ನು ವಿದೇಶಕ್ಕೆ ತೆರಳಲು, ಅಲ್ಲಿ ವಾಸ್ತವ್ಯ ಹೂಡಲು ನಾನು ಏನು ಮಾಡಬೇಕು~ ಎಂದು ಅವರು ಪ್ರಶ್ನಿಸುತ್ತಾರೆ.

ಪ್ರಶಾಂತ್ ಏಳನೇ ವಯಸ್ಸಿನಲ್ಲಿದ್ದಾಗ ಬಸ್ಸು ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದರು. ಬಳಿಕ ಈ ನ್ಯೂನತೆಯನ್ನು ಮರೆಯಲು ಈಜು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು. ಆದರೆ ಪಶ್ಚಿಮ ಬಂಗಾಳ ಸರ್ಕಾರ ಯಾವುದೇ ಸಹಾಯ ನೀಡದ ಕಾರಣ ಹರಿಯಾಣಕ್ಕೆ ವಲಸೆ ಹೋಗಿದ್ದರು.

ಪ್ರಶಾಂತ್ 2010ರ ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ 50 ಮೀಟರ್ ಫ್ರೀಸ್ಟೈಲ್‌ನ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಕ್ರೀಡಾಪಟು. ಸದ್ಯ ಅವರು ಏಷ್ಯಾದಲ್ಲಿ ಮೂರನೇ ರ‌್ಯಾಂಕ್ ಹೊಂದಿದ್ದಾರೆ. `ಸಾಲ ಪಡೆದ ಹಣದಿಂದ ನಾನು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತಯಾರಿ ನಡೆಸಿದ್ದೆ. ಅಂಗವಿಕಲ ಕ್ರೀಡಾಪಟುಗಳತ್ತ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ~ ಎಂದು ಅವರು ದೂರುತ್ತಾರೆ.

ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ಕೋಚ್ ಪ್ರದೀಪ್ ಕುಮಾರ್ ಹಾಗೂ ನಿಹಾರ್ ಅಮಿನ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವವರಲ್ಲಿ ಕರ್ಮಾಕರ್ ಕೂಡ ಒಬ್ಬರು. ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಭಾರತದ ಈಜುಪಟುಗಳಿಗೆ ತರಬೇತಿ ನೀಡಲು ಕೇಂದ್ರ ಕ್ರೀಡಾ ಸಚಿವಾಲಯವು ಉದ್ಯಾನ ನಗರಿಯ `ಬಿಎಸಿ~ಯನ್ನು ಆಯ್ಕೆ ಮಾಡಿದೆ.

ಲಂಡನ್ ಪ್ಯಾರಾಲಿಂಪಿಕ್ಸ್ ಆಗಸ್ಟ್ 29ಕ್ಕೆ ಆರಂಭವಾಗಲಿದೆ. ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳಲು ಆಗಸ್ಟ್ 15ರವರೆಗೆ ಅವಕಾಶವಿದೆ. ಅದಕ್ಕಾಗಿ ಡೆನ್ಮಾಕ್ ಹಾಗೂ ಜರ್ಮನಿಯಲ್ಲಿ ನಡೆಯಲಿರುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು.

`ನಾನು ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದ ಮೇಲೆ ನನ್ನನ್ನು ಪೂರ್ಣವಾಗಿ ಪೊಲೀಸ್ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಅದರಲ್ಲಿ ನನ್ನ ಸಾಮರ್ಥ್ಯ ತೋರಿಸುತ್ತೇನೆ~ ಎಂದು ಪ್ರಶಾಂತ್ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT