ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕ್ಕಿಂತ, ಜನ ಗಳಿಸುವುದೇ ಲೇಸು

Last Updated 22 ಅಕ್ಟೋಬರ್ 2011, 9:30 IST
ಅಕ್ಷರ ಗಾತ್ರ

ಯಾದಗಿರಿ: ಅಧಿಕಾರ ಸಿಕ್ಕರೆ ಸಾಕು ಹಣ ಮಾಡುವ ದಾರಿ ಹುಡುಕುವ ಪ್ರಯತ್ನಗಳೇ ಆರಂಭವಾಗುತ್ತವೆ. ಇರುವ ಕೆಲಸವನ್ನು ಬಿಟ್ಟು ಸಿಕ್ಕ ಅಧಿಕಾರವನ್ನು ಬಳಸಿಕೊಳ್ಳುವವರೆ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು, ಈಗಲೂ ಜೀವನ ನಿರ್ವಹಣೆಗಾಗಿ ಕಿರಾಣಿ ಅಂಗಡಿಯನ್ನೇ ಅವಲಂಬಿಸಿದ್ದಾರೆ.

ತಾಲ್ಲೂಕಿನ ಬಳಿಚಕ್ರ ಗ್ರಾಮ ಪಂಚಾಯಿತಿ ಸದಸ್ಯೆ ಮಹಾದೇವಿ ಅವರು ಕಳೆದ 13 ವರ್ಷಗಳಿಂದ ಗ್ರಾಮದಲ್ಲಿ ಎಸ್‌ಟಿಡಿ ಬೂತ್ ಇಟ್ಟುಕೊಂಡು ಸಣ್ಣಪುಟ್ಟ ವ್ಯಾಪಾರ ಮಾಡುತ್ತ ಬಂದಿದ್ದಾರೆ. ಕಳೆದ ವರ್ಷ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಳಿಚಕ್ರ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಅಧಿಕಾರ ಸಿಕ್ಕಿತೆಂದು ಅಂಗಡಿ ಮುಚ್ಚಲು ಹೋಗಿಲ್ಲ. ಇರುವ ಅಧಿಕಾರವನ್ನು ಜನರ ಒಳಿತಿಗೆ ಬಳಸುವ ಉದ್ದೇಶ ಹೊಂದಿರುವ ಅವರು, ಜೀವನ ನಿರ್ವಹಣೆಗೆ ಈ ಅಂಗಡಿಯನ್ನೇ ಅವಲಂಬಿಸಿದ್ದಾರೆ.

ಮಹಾದೇವಿ ಅವರ ಪತಿ ಹಣಮಂತ ಭಜಂತ್ರಿ, ಈ ಹಿಂದೆ ಬಳಿಚಕ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿ ಪತ್ನಿ ಮಹಾದೇವಿ ಅವರನ್ನು ಚುನಾವಣೆಗೆ ನಿಲ್ಲಿಸಿದ್ದು, ಆಯ್ಕೆಯಾಗಿದ್ದಾರೆ.
ಮಹಾದೇವಿ ಅವರ ತವರೂರು ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ. ಎಸ್ಸೆಸ್ಸೆಲ್ಸಿ ಓದಿರುವ ಮಹಾದೇವಿ, ಬಳಿಚಕ್ರದ ಹಣಮಂತ ಅವರನ್ನು ಮದುವೆಯಾದರು.

ನಂತರ ಸ್ವಾವಲಂಬಿ ಜೀವನ ನಡೆಸಲು ನಿರ್ಧರಿಸಿದ ಅವರು, ಸಣ್ಣ ಅಂಗಡಿಯೊಂದನ್ನು ಆರಂಭಿಸಿದರು. ನಿತ್ಯವೂ ಅಷ್ಟಿಷ್ಟು ವ್ಯಾಪಾರ ಮಾಡಿ, ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅವರ ಪತಿ ಹಣಮಂತ ಭಜಂತ್ರಿ ಅವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಲಭಿಸಿದಾಗಲೂ, ಈ ಅಂಗಡಿಯನ್ನು ಮುಚ್ಚಲಿಲ್ಲ. ಅಷ್ಟೇ ಏಕೆ, ತಾವೇ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾದ ನಂತರವೂ, ಮಹಾದೇವಿ ಅವರು ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಜನರನ್ನ ಗಳಸಬೇಕ ನೋಡ್ರಿ: ಉದ್ಯೋಗ ಖಾತರಿ ಯೋಜನೆ ಆರಂಭವಾದೊಡನೆ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅನುದಾನ ಬರುತ್ತಿದೆ. ಉದ್ಯೋಗ ಖಾತರಿ ಅವ್ಯವಹಾರಗಳು ಮುಗಿಲು ಮುಟ್ಟುತ್ತಿವೆ. ಆದರೆ ಮಹಾದೇವಿ ಅವರಿಗೆ ಮಾತ್ರ ಅದಾವುದು ಬೇಕಾಗಿಲ್ಲ. ಜನರ ಸೇವೆ ಮಾಡುವುದೇ ಅವರ ಉದ್ದೇಶ.

“ನೋಡ್ರಿ ರೊಕ್ಕದ ಬೆನ್ನ ಹತ್ತಿದ್ರ, ಆಗ ಅಷ್ಟ ಅರಾಮ ಇರ‌್ತೇವ್ರಿ. ಮಾಡಿಕೊಳ್ಳಾವ್ರ ಹೆಂಗರೆ ರೊಕ್ಕ ಮಾಡಿಕೋತಾರ. ರೊಕ್ಕ ಎಷ್ಟ ದಿನಾ ಇರೋದ್ರಿ. ಜನ ಮುಖ್ಯ ನೋಡ್ರಿ. ರೊಕ್ಕಕ್ಕಿಂತ, ಮಂದಿನ ಗಳಸೋದ ಭಾಳ ಕಷ್ಟ ಐತಿ. ನಾವ ನೋಡ್ರಿ, ರೊಕ್ಕದಕ್ಕಿಂತ, ಮಂದಿನ ಗಳಿಸೇವಿ. ಅದಕಿಂತ ದೊಡ್ಡ ಆಸ್ತಿ ಮತ್ತೇನ ಬ್ಯಾಡ ನೋಡ್ರಿ” ಎನ್ನುತ್ತಾರೆ ಮಹಾದೇವಿ.

ಅಧಿಕಾರ ಬಂದರೂ ತಮ್ಮ ಕಸುಬನ್ನು ಮರೆಯದ ಮಹಾದೇವಿ ಮಾದರಿ ಜೀವನ ನಡೆಸುತ್ತಿದ್ದಾರೆ. ಜನರ ಸೇವೆಯಲ್ಲಿಯೇ ತೃಪ್ತಿ ಕಾಣುತ್ತಿದ್ದಾರೆ. ಕುಟುಂಬದ ನಿರ್ವಹಣೆಗೆ ಅಂಗಡಿ ಇದ್ದರೆ, ಜನರ ಸೇವೆಗೆ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾರೆ.

“ಹುದ್ದೆ ಇರೋತನಾ ಜನರಿಗೆ ಒಳ್ಳೆದ ಮಾಡಬೇಕಂತ ಐತಿ. ಎಷ್ಟ ಕೆಲಸ ಆಗತೈತೋ ಅಷ್ಟ ಮಾಡತೇವ್ರಿ. ಉಳದದ್ದೆಲ್ಲ ದೇವರಿಗೆ ಬಿಟ್ಟದ್ರ. ಉಣ್ಣಾಕ ಯಾವ ತ್ರಾಸೂ ಇಲ್ಲ. ಹಂಗಾಗಿ ರೊಕ್ಕ ಮಾಡಿಕೋಬೇಕ ಅನ್ನೋ ಆಸೆನೂ ಇಲ್ರಿ. ಅಂಗಡಿ ಛೋಲೋ ನಡದೈತಿ. ಅದರಾಗ ಜೀವನ ನಡೆದೈತಿ. ಅದನ್ನ ಬಿಟ್ರ ಬ್ಯಾರೆ ಏನೂ ಬ್ಯಾಡ ನೋಡ್ರಿ” ಎಂದು ಮಹಾದೇವಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT