ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಹೊಳೆಯಿಂದ ವಿವಾದದ ಸಮುದ್ರದೆಡೆಗೆ!

ಮೋದಿ ಸಾಗಿ ಬಂದ ಹಾದಿ...
Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ‘ಮಿಲಿಯರ್‌ ಡಾಲರ್‌ ಬೇಬಿ’ ಎಂದೇ ಖ್ಯಾತಿ ಪಡೆದಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಉಗಮಕ್ಕೆ ಮೂಲ ಕಾರಣ ರಾಜಸ್ತಾನದ ಉದ್ಯಮಿ ಲಲಿತ್‌ ಕುಮಾರ್ ಮೋದಿ. ಈ ಪರಿಕಲ್ಪನೆ ಭಾರತ ಮಾತ್ರವಲ್ಲ; ವಿಶ್ವದ ಕ್ರಿಕೆಟ್‌ಗೆ ಹೊಸ ತಿರುವು ನೀಡಿತು.

ಬಿಸಿಸಿಐನತ್ತ ಹಣದ ಹೊಳೆಯೇ ಹರಿದು ಬಂತು. ಆದಾಯ ದ್ವಿಗುಣ­ಗೊಂಡಿತು. ಐಪಿಎಲ್‌ ಆರಂಭವಾಗಿದ್ದು 2008ರಲ್ಲಿ. ಅದರ ಮುಖ್ಯಸ್ಥರಾಗಿ 49 ವರ್ಷ ವಯಸ್ಸಿನ ಮೋದಿ ಅವರನ್ನು ನೇಮಿಸಲಾಗಿತ್ತು. ಮೊದಲ ವರ್ಷವೇ ಭರ್ಜರಿ ಯಶಸ್ಸು ಲಭಿಸಿತು.

ಆದರೆ ಯಶಸ್ಸನ್ನು ಹಿಬಾಲಿಸಿದ್ದು ವಿವಾದಗಳು. 2010ರ ಹರಾಜು ಪ್ರಕ್ರಿಯೆ ವೇಳೆಗೆ ಮೋದಿ ಪತನ ಶುರುವಾಗಿತ್ತು. ಆ ಸಂದರ್ಭದಲ್ಲಿ ಪುಣೆ ಹಾಗೂ ಕೊಚ್ಚಿ ಫ್ರಾಂಚೈಸ್‌ಗಳು ಹೊಸದಾಗಿ ಲೀಗ್‌ಗೆ ಸೇರ್ಪಡೆಯಾಗಿದ್ದವು. ಆದರೆ ಕೊಚ್ಚಿಯ ಮಾಲೀಕತ್ವದ ಬಗ್ಗೆ ಟ್ವಿಟರ್‌ ಮೂಲಕ ಮೋದಿ ಹಲವು ಗೋಪ್ಯ ವಿಷಯಗಳನ್ನು ಬಹಿರಂಗಪಡಿಸಿದ್ದರು. ಆಗ ಭುಗಿಲೆದ್ದ ವಿವಾದ ಕೇಂದ್ರ ಸಚಿವ ಶಶಿ ತರೂರ್‌ ಅವರ ರಾಜೀನಾಮೆಗೆ ಕಾರಣವಾಗಿತ್ತು.

ಬಿಸಿಸಿಐ ಹಾಗೂ ಐಪಿಎಲ್‌ ನಡುವಿನ ಗೋಪ್ಯ ವಿಷಯಗಳನ್ನು ಬಹಿರಂಗ­ಪಡಿಸಿದ ಆರೋಪಕ್ಕೆ ಮೋದಿ ಗುರಿ­ಯಾ­ದರು. 2010ರ ಐಪಿಎಲ್‌ ಟೂರ್ನಿಯ ಫೈನಲ್‌ ಬಳಿಕ ಮೋದಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತು­ಗೊಳಿಸ­ಲಾಯಿತು.

ಮೋದಿ ನಡೆಸಿದ್ದಾರೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಮಂಡಳಿಯು ವಿಚಾರಣೆ ಆರಂಭಿಸಿತು. ಅರುಣ್‌ ಜೇಟ್ಲಿ ಹಾಗೂ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನೊಳಗೊಂಡ ಶಿಸ್ತು ಸಮಿತಿ ರಚಿಸಿತು. ಈ ಸಮಿತಿ ಜುಲೈನಲ್ಲಿ 134 ಪುಟಗಳ ವರದಿಯನ್ನು ಸಲ್ಲಿಸಿತ್ತು.

ಮೋದಿ 2005ರಿಂದ 2010ರವರೆಗೆ ಬಿಸಿಸಿಐ ಉಪಾಧ್ಯಕ್ಷರಾಗಿಯೂ ಕಾರ್ಯ­ನಿರ್ವಹಿಸಿದ್ದರು. ಅಷ್ಟು ಮಾತ್ರವಲ್ಲದೇ, ರಾಜಸ್ತಾನ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ­ರಾಗಿದ್ದರು. ಸದ್ಯ ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಉಪಾಧ್ಯಕ್ಷರಾಗಿದ್ದರು. ಆದರೆ ಆಜೀವ ನಿಷೇಧ ಹೇರಿರುವುದರಿಂದ ಆ ಸ್ಥಾನದಲ್ಲಿ ಮುಂದುವರಿಯುವಂತಿಲ್ಲ.

ಲಂಡನ್‌ನಲ್ಲಿ ನೆಲೆಸಿರುವ ಮೋದಿ
ಹಲವು ಆರೋಪಗಳಿಗೆ ಗುರಿಯಾಗಿರುವ ಮೋದಿ ಕೆಲ ವರ್ಷಗಗಳಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ ಸುದ್ದಿ ವಾಹಿನಿಗಳಿಗೆ ಅವರು ಹಲವು ಬಾರಿ ನೇರ ಸಂದರ್ಶನ ನೀಡಿದ್ದಾರೆ.

ಉದ್ಯಮಿ ಮೋದಿ ‘ಮೋದಿ ಎಂಟರ್‌ಪ್ರೈಸಸ್‌’ನ ಅಧ್ಯಕ್ಷ ಕೂಡ. ತಂಬಾಕು ಕಂಪೆನಿ ‘ಗಾಡ್‌ಫ್ರೇ ಫಿಲಿಪ್ಸ್‌ ಇಂಡಿಯಾ’ದ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಇದ್ದಾರೆ. ಅವರು ಓದಿದ್ದು ಅಮೆರಿಕದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT