ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದಿಂದ ಗೆಲ್ಲುವುದು ಅಸಾಧ್ಯ: ಸಿದ್ದರಾಮಯ್ಯ

Last Updated 15 ಏಪ್ರಿಲ್ 2013, 9:40 IST
ಅಕ್ಷರ ಗಾತ್ರ

ಮೈಸೂರು:`ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅಧಿಕಾರ ಶಾಶ್ವತ ಅಲ್ಲ' ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ ಪಕ್ಕದ ಮೈದಾನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಮಾವೇಶದಲ್ಲಿ ನೂರಾರು ಮಂದಿಯನ್ನು ಪಕ್ಷಕ್ಕೆ ಬರಮಾಡಿ ಕೊಂಡ ಬಳಿಕ ಮಾತನಾಡಿದರು.

`ರಾಜ್ಯದಲ್ಲಿ ಆಡಳಿತ ಸಂಪೂರ್ಣ ನಾಶ ಆಗಿದೆ. ಸಂಪತ್ತನ್ನು ಲೂಟಿ ಮಾಡಲಾಗಿದೆ. ಕೆಲವರು ಜೈಲಿಗೆ ಹೋಗಿ ಬಂದರೆ, ಮತ್ತೆ ಕೆಲವರು ಜಾಮೀನು ಪಡೆದಿದ್ದಾರೆ. ಜೈಲಿಗೆ ಹೋಗುವವರೂ ಇದ್ದಾರೆ. ರಾಜ್ಯದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಎಂದೂ ಕಂಡರಿಯದ ಭ್ರಷ್ಟಾಚಾರ ಮಾಡಿತು. ಸಚಿವರಾಗಿದ್ದ ಹಾಲಪ್ಪ ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಮಾಡಿದರು. ಬರ ಕುರಿತು ಗಂಭೀರ ಚರ್ಚೆ ನಡೆಯುವಾಗ ಮೂವರು ಸಚಿವರು ಸದನದಲ್ಲಿ ಅಶ್ಲೀಲ ವೀಡಿಯೊ ವೀಕ್ಷಿಸಿ ವಿಧಾನಸಭೆಯ ಪಾವಿತ್ರ್ಯತೆ ಹಾಳು ಮಾಡಿದರು. ಇದು ರಾಜ್ಯಕ್ಕೆ ಕಪ್ಪು ಚುಕ್ಕೆ' ಎಂದು ಹರಿಹಾಯ್ದರು.

`ಗಣಿ ಸಂಪತ್ತನ್ನು ಲೂಟಿ ಮಾಡಿದ ಜನಾರ್ದನ ರೆಡ್ಡಿ ಚಿನ್ನದ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಚಿನ್ನದ ಕುರ್ಚಿ ಕೂರುತ್ತಿದ್ದರು. ಇಂದು ಜೈಲು ಸೇರಿರುವ ರೆಡ್ಡಿ ಅಲ್ಯುಮೀನಿಯಂ ತಟ್ಟೆ ಯಲ್ಲಿ ಊಟ ಮಾಡುತ್ತಿದ್ದಾರೆ. ಹಣದಿಂದ ಎಲ್ಲವನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಇದೇ ಸಾಕ್ಷಿ' ಎಂದು ಹೇಳಿದರು.

ಕೊಟ್ಟ ಮಾತಿಗೆ ನಡೆದುಕೊಂಡಿಲ್ಲ:
`ಜೆಡಿಎಸ್ ಅವಕಾಶವಾದಿ ಪಕ್ಷ. ದೇವೇಗೌಡ ಕುಟುಂಬದವರು ಕೊಟ್ಟ ಮಾತಿನಂತೆ ಎಂದೂ ನಡೆದುಕೊಂಡಿಲ್ಲ. ಐದಾರು ಜಿಲ್ಲೆಗಳನ್ನು ಹೊರತು ಪಡಿಸಿದರೆ ಬೇರೆಲ್ಲೂ ಜೆಡಿಎಸ್ ಇಲ್ಲ. ಆದರೆ ಕುಮಾರಸ್ವಾಮಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ 30 ಸೀಟುಗಳನ್ನು ಪಡೆಯಲು ಸಾಧ್ಯವಿಲ್ಲ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ' ಎಂದು ಹೇಳಿದರು.

`ಶಾಸಕ ಎಂ.ಸತ್ಯನಾರಾಯಣ ಅವರು ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ರಬಹುದು. ಅದನ್ನು ಮನ್ನಿಸಬೇಕು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದು ಸತ್ಯನಾರಾಯಣ ಅವರನ್ನು ಗೆಲ್ಲಿಸ ಬೇಕು. ಈ ಬಾರಿಯ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸುತ್ತಾರೆ.

ಈ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿ ಕೊಳ್ಳಬೇಡಿ. ದುಡ್ಡಿನಿಂದ ರಾಜಕಾರಣ ಮಾಡಿ ಜನರ ಪ್ರೀತಿ-ವಿಶ್ವಾಸ ಗೆಲ್ಲಲು ಸಾಧ್ಯವಿಲ್ಲ. ನಾನೆಂದೂ ಕೆಟ್ಟ ಕೆಲಸ ಮಾಡಿಲ್ಲ. ರಾಜ್ಯದ ಮುಖ್ಯಮಂತ್ರಿ ಯನ್ನು ಆರಿಸಿ ಕಳುಹಿಸುವ ಅವಕಾಶ ನಿಮಗೆ ಒದಗಿ ಬಂದಿದೆ. ಮತದಾರರೇ ನನಗೆ ಶ್ರೀರಕ್ಷೆ. ಕೆ.ಆರ್.ಮಿಲ್ ಕಾಲೋನಿಯ ಸಮಸ್ಯೆಗಳು ನೂರಾರಿವೆ. ಅದನ್ನೆಲ್ಲ ಪರಿಹರಿಸು ತ್ತೇವೆ' ಎಂದು ಭರವಸೆ ನೀಡಿದರು.

ಶಾಸಕ ಸತೀಶ್ ಜಾರಕಿಹೊಳಿ, ಚಾಮುಂಡೇಶ್ವರಿ ಕ್ಷೇತ್ರದ ಎಐಸಿಸಿ ವೀಕ್ಷಕ ಶೇಖರ್, ಶಾಸಕರಾದ ಎಂ.ಸತ್ಯನಾರಾಯಣ, ಡಾ.ಎಚ್.ಸಿ. ಮಹದೇವಪ್ಪ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮಾಜಿ ಮೇಯರ್ ವಾಸು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಎಐಸಿಸಿ ವೀಕ್ಷಕ ಶೇಖರ್, ಕೆಪಿಸಿಸಿ ಸದಸ್ಯ ನರಸೇಗೌಡ, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸಿ.ದಾಸೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಉಪಸ್ಥಿತರಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಎಲ್.ರೇವಣ ಸಿದ್ದಯ್ಯ, ನಿರ್ದೇಶಕರಾದ ರಾಜೇಂದ್ರ ಸಿಂಗ್‌ಬಾಬು, ಎನ್.ಆರ್.ನಂಜುಂಡೇಗೌಡ, ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಕೃಷ್ಣಪ್ಪ, ಬಿಜೆಪಿ ಪ್ರಭು, ಜೆಡಿಎಸ್‌ನ ಸ್ವಾಮಿಗೌಡ ಉಪಸ್ಥಿತರಿದ್ದರು.

ಮಾತೃ ಪಕ್ಷಕ್ಕೆ ವಾಪಸ್
ಕೇಂದ್ರ ಪರಿಹಾರ ನಿಧಿ ಮಾಜಿ ಅಧ್ಯಕ್ಷ ಮಂಜೇಗೌಡ ಮೊದಲು ಕಾಂಗ್ರೆಸ್‌ನಲ್ಲಿದ್ದರು. ನಂತರ ಬಿಜೆಪಿ ಸೇರಿದ್ದರು. ಸ್ವಲ್ಪ ದಿನಗಳ ಕಾಲ ಕೆಜೆಪಿಯೊಂದಿಗೆ ಗುರುತಿಸಿಕೊಂ ಡಿದ್ದರು. ಕಳೆದ ಡಿ.2 ರಂದು ಜೆಡಿಎಸ್ ಸೇರ್ಪಡೆಯಾಗಿ, ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾ ಗಿದ್ದರು.

ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದ ಮಾಜಿ ಸಚಿವ ಜಿ.ಟಿ. ದೇವೇಗೌಡರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ನೀಡಿತು. ಇದರಿಂದ ಬೇಸತ್ತ ಮಂಜೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT