ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ; ಜನ ತತ್ತರ

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ದೇಶದಾದ್ಯಂತ ಈರುಳ್ಳಿ, ಅಕ್ಕಿ, ಬಳ್ಳುಳ್ಳಿ, ಹಾಲು, ಖಾದ್ಯ ತೈಲ, ಮೊಟ್ಟೆ, ಹಣ್ಣು, ತರಕಾರಿ, ಪೆಟ್ರೋಲ್ ಮತ್ತಿತರ ಅವಶ್ಯಕ ಸರಕುಗಳ ಬೆಲೆಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ದಿನಕ್ಕೊಂದು ಹೊಸ ಸರಕು ಈ ಪಟ್ಟಿಗೆ ಸೇರ್ಪಡೆ ಆಗುತ್ತಿದೆ. ಪೂರೈಕೆಯಲ್ಲಿ ಕೊರತೆ ಬಿದ್ದ ಕೂಡಲೇ  ಚಿಲ್ಲರೆ ಮಾರಾಟ ಬೆಲೆ ಗಗನಕ್ಕೆ ಏರುತ್ತಿದೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರವು ಡಿಸೆಂಬರ್ ತಿಂಗಳಿನಲ್ಲಿ  ಶೇ 8.43ಕ್ಕೆ ಏರಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯು ಕಳೆದ ಎರಡು ವಾರಗಳಲ್ಲಿ ಶೇ 18.32ರಿಂದ ಶೇ  16.91ರ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದೆ. ಇದು ತೀವ್ರ  ಕಳವಳಕಾರಿ ಸಂಗತಿ. ಬೆಲೆಗಳು ಗಮನಾರ್ಹ ಪ್ರಮಾಣದಲ್ಲಿ ಏರುತ್ತಿರುವುದು  ವೇದ್ಯವಾಗುತ್ತದೆ.  ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದರೆ, ರಾಜಕಾರಣಿಗಳ ಮುಖದಲ್ಲೂ ಚಿಂತೆಯ ಗೆರೆಗಳು ಮೂಡಿವೆ. ತಕ್ಷಣಕ್ಕೆ ಬೆಲೆಗಳಂತೂ ಇಳಿಯುವ ಸೂಚನೆಗಳಂತೂ ಇಲ್ಲ.
ನಿಯಂತ್ರಣಕ್ಕೆ ಬಾರದಂತೆ ಹಣದುಬ್ಬರ ಏರುತ್ತಿರುವುದು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೂ (ಆರ್‌ಬಿಐ) ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಪರಿಸ್ಥಿತಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರರ ಮೇಲೆ ಗೂಬೆ ಕೂರಿಸುತ್ತಿವೆ. ನಾನು ಹೊಣೆಯಲ್ಲ, ನಾನಲ್ಲ ಎಂದು ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿವೆ. ಪರಿಸ್ಥಿತಿ ನಮ್ಮ ಕೈಯಲ್ಲಿ ಇಲ್ಲ. ಯಾವ ಕ್ರಮ ಕೈಗೊಳ್ಳಬೇಕು ಎಂಬುದು ತೋಚ್ತಾ ಇಲ್ಲ ಎಂದೂ ಅಸಹಾಯಕತೆ ವ್ಯಕ್ತಪಡಿಸುತ್ತಿವೆ.

ಸರಕುಗಳ ಪೂರೈಕೆ ಅಭಾವ ಉಂಟಾಗಿ, ಬೇಡಿಕೆ ಹೆಚ್ಚಿದ ಪರಿಸ್ಥಿತಿಯೇ ಹಣದುಬ್ಬರ. ಹಣದುಬ್ಬರ ಅಳೆಯಲು ಬೆಲೆ ಸೂಚ್ಯಂಕದ (price index) ನೆರವು ಪಡೆಯಲಾಗುತ್ತದೆ. 100 ಅಂಶಗಳ  ಸೂಚ್ಯಂಕದಲ್ಲಿ ಅನೇಕ ಸರಕುಗಳಿಗೆ ಅವುಗಳ ಬಳಕೆ ಮತ್ತು ಬೇಡಿಕೆ ಆಧರಿಸಿ ನಿರ್ದಿಷ್ಟ ತೂಕ / ಮೌಲ್ಯ ನಿಗದಿ ಮಾಡಲಾಗಿರುತ್ತದೆ. ಈ ಬೆಲೆ ಸೂಚ್ಯಂಕಕ್ಕೆ ಒಂದು ನಿರ್ದಿಷ್ಟ ಆಧಾರ ವರ್ಷವೂ ಇರುತ್ತದೆ.

ನಿರ್ದಿಷ್ಟ ಸರಕಿಗೆ ಯಾವ ಬಗೆಯಲ್ಲಿ ಮೌಲ್ಯ / ತೂಕ ನಿಗದಿ ಮಾಡಲಾಗಿರುತ್ತದೆ ಎನ್ನುವುದೂ ಇಲ್ಲಿ ಮುಖ್ಯವಾಗುತ್ತದೆ. ಬಹುತೇಕ ದೇಶಗಳು ಗ್ರಾಹಕ ಬೆಲೆ ಸೂಚ್ಯಂಕ (consumer price index- CPI) ಬಳಸಿದರೆ, ನಮ್ಮಲ್ಲಿ ಸಗಟು ಬೆಲೆ ಸೂಚ್ಯಂಕ ಆಧರಿಸಿ ಹಣದುಬ್ಬರ ಅಳೆಯಲಾಗುತ್ತಿದೆ. (whole sale price index- WPI). ಹೆಸರೇ ಸೂಚಿಸುವಂತೆ ‘ಗ್ರಾಹಕ ಬೆಲೆ ಸೂಚ್ಯಂಕ’ವು ಗ್ರಾಹಕರು ಬಳಸುವ ಸರಕುಗಳನ್ನು ಆಧರಿಸಿರುತ್ತದೆ.

ಸಗಟು ಬೆಲೆ ಸೂಚ್ಯಂಕವು ಸಗಟು ಮಾರುಕಟ್ಟೆ ಆಧರಿಸಿರುತ್ತದೆ. ಈ ಬೆಲೆ ಸೂಚ್ಯಂಕವು, 435 ಸರಕುಗಳನ್ನು ಒಳಗೊಂಡಿದೆ. ಇವುಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. -ಉತ್ಪಾದನಾ ಸರಕು, ಪ್ರಾಥಮಿಕ ಸರಕು ಮತ್ತು ಇಂಧನ - ವಿದ್ಯುತ್. ಇವು ಕ್ರಮವಾಗಿ ಬೆಲೆ ಸೂಚ್ಯಂಕದಲ್ಲಿ ಶೇ 63.74, ಶೇ 22.02 ಮತ್ತು ಶೇ 14.22ರಷ್ಟು ತೂಕ ಹೊಂದಿವೆ. ಇವುಗಳ ಒಟ್ಟು ಮೌಲ್ಯ ಶೇ 100 ಆಗಿರುತ್ತದೆ.

ನಿರ್ದಿಷ್ಟ ವಾರದಲ್ಲಿ ಹಣದುಬ್ಬರವು ಶೇ 8.43ರಷ್ಟು ಆಗಿದೆ ಎಂದರೆ, ಬೆಲೆ ಸೂಚ್ಯಂಕವು ಕಳೆದ ಒಂದು ವರ್ಷದ ಹಿಂದಿನ ಅದೇ ಅವಧಿಗೆ ಹೋಲಿಸಿದರೆ ಶೇ 8.43ರಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದರ್ಥ. ಅದೊಂದು ಸಗಟು ಬೆಲೆ ಸೂಚ್ಯಂಕ  ಆಧರಿಸಿದ ವಾರ್ಷಿಕ ಹಣದುಬ್ಬರದ ದರವೂ ಆಗಿರುತ್ತದೆ. ಆದರೆ, ವಾಸ್ತವದಲ್ಲಿ ಬೆಲೆಗಳು ಇದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಏರಿಕೆಯಾಗಿರುತ್ತವೆ.ಗ್ರಾಹಕ ಬೆಲೆ ಸೂಚ್ಯಂಕವು, ಸಗಟು ಬೆಲೆ ಸೂಚ್ಯಂಕಕ್ಕಿಂತ ಹೆಚ್ಚಿಗೆ ಇರುತ್ತದೆ.

ಜಾಗತಿಕ ಮಟ್ಟದಲ್ಲಿ ಅನೇಕ ದೇಶಗಳಲ್ಲಿ  ಆಹಾರ ಉತ್ಪಾದನೆ ಕುಸಿದಿರುವುದರಿಂದ ಎಲ್ಲೆಡೆ ಆಹಾರ ಬಿಕ್ಕಟ್ಟು ಉದ್ಭವಿಸಿದೆ. ಹವಾಮಾನ ಬದಲಾವಣೆ, ಬರ ಪರಿಸ್ಥಿತಿ, ಕೃಷಿ ಭೂಮಿಯನ್ನು ಜೈವಿಕ ಇಂಧನಕ್ಕೆ ಬಳಸುವ ಧಾನ್ಯಗಳನ್ನು ಬೆಳೆಯಲು ಬಳಸುವುದು, ಸರಕುಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳು ವಿಶ್ವದಾದ್ಯಂತ ಆಹಾರ ಧಾನ್ಯಗಳ ಅಭಾವಕ್ಕೆ ಕಾರಣವಾಗಿ, ಬೆಲೆಗಳು ಗಗನಕ್ಕೇರುತ್ತಿವೆ.

ವಿಶ್ವದ ಎಲ್ಲೆಡೆ ಉದ್ಭವಿಸಿದ ಪೂರೈಕೆ ಅಭಾವದಿಂದಾಗಿ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಬೇಡಿಕೆ ಹೆಚ್ಚುತ್ತಿದೆ. ಲಾಭದಾಸೆಗೆ ರಫ್ತು ಹೆಚ್ಚಿದಷ್ಟೂ, ರಫ್ತು ಮಾಡುವ ದೇಶಗಳಲ್ಲಿ ಸರಕುಗಳ ಪೂರೈಕೆ ಅಭಾವ ಸೃಷ್ಟಿಯಾಗುತ್ತದೆ. ಹೀಗಾಗಿ ಬೆಲೆಗಳು ಏರತೊಡಗುತ್ತವೆ. ಈಗ ನಮ್ಮಲ್ಲಿ ಆಗಿರುವುದೂ ಅದೇ ಪರಿಸ್ಥಿತಿ.

ಈಗಾಗಲೇ ಕೇಂದ್ರ ಸರ್ಕಾರ ಬೆಲೆ ಏರಿಕೆ ವಿರುದ್ಧ ಸಮರ ಸಾರಿದೆ.  ಅನೇಕ ಆಯವ್ಯಯ ಕ್ರಮಗಳನ್ನೂ ಕೈಗೊಂಡಿದೆ. ಅದಕ್ಕೆ ಪೂರಕವಾಗಿ ‘ಆರ್‌ಬಿಐ’, ಇನ್ನಷ್ಟು ಹಣಕಾಸು ಕ್ರಮಗಳನ್ನು (financial measures) ಕೈಗೊಳ್ಳಬೇಕಾಗಿದೆ.ಒಂದೆಡೆ ಕೈಗಾರಿಕಾ ವೃದ್ಧಿ ದರ ಕುಂಠಿತಗೊಂಡಿರುವ ಲಕ್ಷಣಗಳು, ಇನ್ನೊಂದೆಡೆ ದಾಖಲೆ ಮಟ್ಟದ ಮತ್ತು ಇನ್ನೂ ಏರುಗತಿಯಲ್ಲಿಯೇ ಇರುವ ಭೀತಿ ಮೂಡಿಸಿದ ಬೆಲೆ ಏರಿಕೆಯ ಭೂತ. ಈ ಇಕ್ಕಟ್ಟಿನ ಪರಿಸ್ಥಿತಿಯನ್ನು ಕೇಂದ್ರೀಯ ಬ್ಯಾಂಕ್ ತುಂಬ ನಾಜೂಕಾಗಿ ನಿಭಾಯಿಸಬೇಕಾಗಿದೆ.

ಅದಕ್ಕಾಗಿ ಮಾರುಕಟ್ಟೆ ಸ್ಥಿರತೆ ಯೋಜನೆ (ಎಂಎಸ್‌ಎಸ್)  ಮತ್ತು ಬ್ಯಾಂಕ್‌ಗಳ ನಗದು ಮೀಸಲು ಪ್ರಮಾಣ (ಸಿಆರ್‌ಆರ್) ಹೆಚ್ಚಳದ ಮೂಲಕ ಹಣ ಪೂರೈಕೆಗೆ ಇನ್ನಷ್ಟು ಕಡಿವಾಣ ವಿಧಿಸಿ ಬೆಲೆ ಏರಿಕೆ ಪರಿಸ್ಥಿತಿಗೆ ಮೂಗುದಾರ ಹಾಕಲು ಉದ್ದೇಶಿಸಿದೆ.ವಾರ್ಷಿಕ ಆಹಾರ ಹಣದುಬ್ಬರವು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಅದಕ್ಕೆ ಕಡಿವಾಣ ವಿಧಿಸುವಲ್ಲಿ ಹಣಕಾಸು ನೀತಿಯು ಇದುವರೆಗೆವಿಫಲವಾಗಿರುವುದು ವೇದ್ಯವಾಗುತ್ತದೆ.

ಪೂರೈಕೆ ಸರಣಿಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿಯೇ ಸರ್ಕಾರ ಹೆಚ್ಚು ಗಮನ ಹರಿಸಬೇಕಾಗಿದೆ. ಉತ್ಪಾದನೆ ಹೆಚ್ಚಿಸಿ ಪೂರೈಕೆಯಲ್ಲಿನ ಅಡಚಣೆಗಳನ್ನು ನಿವಾರಣೆ ಮಾಡದಿದ್ದರೆ ಪರಿಸ್ಥಿತಿ ತಹಬಂದಿಗೆ ಬರುವುದೂ ಇಲ್ಲ.ಆರ್ಥಿಕ ವೃದ್ಧಿ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರದೇ ಹಣದುಬ್ಬರ ನಿಗ್ರಹಿಸುವುದೇ ಸದ್ಯಕ್ಕೆ ‘ಆರ್‌ಬಿಐ’ ಮುಂದಿರುವ ಮುಖ್ಯ ಸವಾಲು ಆಗಿದೆ.

ಹಣದುಬ್ಬರವು ನಿಯಂತ್ರಣಕ್ಕೆ ಸಿಗದೇ ಹೋದರೆ, ಒಟ್ಟಾರೆ ಬೆಲೆ ಏರಿಕೆ, ಉತ್ಪಾದನಾ ವೆಚ್ಚ ಹೆಚ್ಚಳ, ಬಿಗಿ ಹಣಕಾಸು ನೀತಿಗಳು ಜಾಗತಿಕ ಮಟ್ಟದಲ್ಲಿ ದೇಶದ ಸ್ಪರ್ಧಾತ್ಮಕತೆಯೂ ಕುಗ್ಗಿಸಲಿವೆ.  ಕೃಷಿ ಉತ್ಪಾದನೆಯನ್ನು  ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ರಚನಾತ್ಮಕ ಕ್ರಮ ಕೈಗೊಳ್ಳಬೇಕಾಗಿದೆ. 

ಸರ್ಕಾರ ಕೈಗೊಂಡಿರುವ,  ಅನೇಕ ಸರಕುಗಳ ರಫ್ತು ನಿಷೇಧ ಮತ್ತು ಕೆಲ ಸರಕುಗಳ ಆಮದು ಸುಂಕದಲ್ಲಿ ಭಾರಿ ಕಡಿತದಂತಹ ಆಯವ್ಯಯ ಕ್ರಮಗಳು  ತಕ್ಷಣಕ್ಕೆ ಫಲವನ್ನೇನೂ ನೀಡಲಾರವು.  ಸರ್ಕಾರ ಏನೆಲ್ಲಾ ತಿಪ್ಪರಲಾಗ ಹಾಕಿದರೂ, ತಕ್ಷಣಕ್ಕೆ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ಕಡಿಮೆ. ಆರ್‌ಬಿಐ ಪ್ರಕಟಿಸಲಿರುವ  ಹಣಕಾಸು ನೀತಿಯ ಪರಾಮರ್ಶೆಯಲ್ಲಿ ಇನ್ನಷ್ಟು ಬಡ್ಡಿ ದರಗಳು ಹೆಚ್ಚುವ ಸ್ಪಷ್ಟ ಸೂಚನೆಗಳಂತೂ ಇವೆ. ಅದರಿಂದ ಹಣದುಬ್ಬರವು ಸ್ವೀಕಾರಾರ್ಹ ಮಟ್ಟಕ್ಕೆ ಇಳಿಯುವುದೇ? ಕಾದು ನೋಡಬೇಕು.
 
ಏನಿದು ಹಣದುಬ್ಬರ?
ಅನೇಕ ಕಾರಣಗಳಿಗೆ ಹಣದ ಪೂರೈಕೆ ಹೆಚ್ಚಿನ ಪ್ರಮಾಣದಲ್ಲಿ ಇರುವ, ಕೊಳ್ಳುವರರ ಖರೀದಿ ಸಾಮರ್ಥ್ಯ ಕುಸಿದ, ಹಲವು ಕಾರಣಗಳಿಗೆ ಪೂರೈಕೆ ಕಡಿಮೆಯಾಗಿ ಅವಶ್ಯಕ ಸರಕುಗಳ ಹಾಗೂ ಸೇವೆಗಳ ಸಾಮಾನ್ಯ ಬೆಲೆ ಮಟ್ಟ ಹೆಚ್ಚುವ ವಿದ್ಯಮಾನವೇ ಹಣದುಬ್ಬರ. ಅರ್ಥ ವ್ಯವಸ್ಥೆಯಲ್ಲಿ ಅತಿಯಾದ ಪ್ರಮಾಣದಲ್ಲಿ ಹಣದ ಪೂರೈಕೆ ಇರುವ, ಆದರೆ, ಬೇಡಿಕೆ ಇರುವಷ್ಟು ಪ್ರಮಾಣದಷ್ಟು ಸರಕುಗಳ ಪೂರೈಕೆ   ಇಲ್ಲದಿರುವ ಪರಿಸ್ಥಿತಿಯೂ  ಇದಾಗಿದೆ.

ಇದೊಂದು ಅರ್ಥ ವ್ಯವಸ್ಥೆಯಲ್ಲಿ ಬೆಲೆಗಳು ಬದಲಾಗುವ ಅಳತೆಗೋಲೂ ಹೌದು. ಯಾವುದೇ ಒಂದು ಸರಕು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದ್ದರೆ ಅರ್ಥ ವ್ಯವಸ್ಥೆಯಲ್ಲಿ ಹಣದುಬ್ಬರ ಉಂಟಾಗುತ್ತದೆ. ನಿಜ, ಇತರ ಕೆಲ ದೇಶಗಳು ಈಗಲೂ ಆರ್ಥಿಕ ವೃದ್ಧಿಗೆ ವ್ಯತಿರಿಕ್ತವಾಗಿರುವ ಹಣದಿಳಿತ (d-efl-a-t-i-on) ಪರಿಸ್ಥಿತಿ ಎದುರಿಸುತ್ತಿವೆ. ಇನ್ನೊಂದೆಡೆ  ಏರುತ್ತಿರುವ ಹಣದುಬ್ಬರ ಪರಿಸ್ಥಿತಿ ನಮ್ಮಲ್ಲಿದೆ.

ಹಣದುಬ್ಬರ ನಿಯಂತ್ರಣದಲ್ಲಿ ಇರಿಸುವ ಕ್ರಮಗಳನ್ನು ಕೈಗೊಳ್ಳುವ ಮತ್ತು ಆರ್ಥಿಕ ಪುನಶ್ಚೇತನಕ್ಕೆ  ಬೆಂಬಲ ನೀಡುವ ಅನಿವಾರ್ಯತೆಯು ಭಾರತೀಯ ರಿಸರ್ವ್ ಬ್ಯಾಂಕ್‌ನ ಎದುರಿಗಿದೆ.

ನಾನು ಜ್ಯೋತಿಷಿ ಅಲ್ಲ. ಆದರೆ, ಬೆಲೆ ಪರಿಸ್ಥಿತಿ    ತಹಬಂದಿಗೆ ತರಲಾಗುವುದು. ಮಾರ್ಚ್ ಅಂತ್ಯದ ಹೊತ್ತಿಗೆ ಬೆಲೆ ಸ್ಥಿರತೆ ಸಾಧಿಸಲಾಗುವುದು.
- ಪ್ರಧಾನಿ ಮನಮೋಹನ್ ಸಿಂಗ್

ಭಾರತದಲ್ಲಿನ ಗರಿಷ್ಠ ಮಟ್ಟದ ಹಣದುಬ್ಬರಕ್ಕೆ ಸರಕುಗಳ ಪೂರೈಕೆಯಲ್ಲಿನ ಅಡಚಣೆಗಳೇ ಮುಖ್ಯ ಕಾರಣವಾಗಿದ್ದು, ಆಹಾರ ಪದಾರ್ಥಗಳ ಬೆಲೆ ಸ್ಥಿರತೆಗೆ ಸಾಕಷ್ಟು ದೂರ ಕ್ರಮಿಸಬೇಕಾಗಿದೆ.
- ವಿಶ್ವಬ್ಯಾಂಕ್ ಅಧ್ಯಕ್ಷ ರಾಬರ್ಟ್ ಬಿ. ಜೊಯೆಲಿಕ್

ಗೋಧಿ, ಅಕ್ಕಿ, ಬೇಳೆಕಾಳು, ಎಣ್ಣೆ ಬೀಜ ಮತ್ತು ಸಕ್ಕರೆ ಮಾತ್ರ ನನ್ನ ವ್ಯಾಪ್ತಿಗೆ ಬರುತ್ತವೆ. ತರಕಾರಿಗಳ  ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ನನ್ನ ಸಚಿವಾಲಯಕ್ಕೆ ಅಧಿಕಾರ ಇಲ್ಲ.
- ಕೇಂದ್ರ ಕೃಷಿ ಸಚಿವ ಶರದ್  ಪವಾರ್

ಬೆಲೆ ಏರಿಕೆಗೆ ಕಡಿವಾಣ ವಿಧಿಸುವ ಮಂತ್ರದಂಡವು ಸರ್ಕಾರದ ಬಳಿ ಇದೆ ಎಂದು ನನಗೆ ಅನಿಸುವುದೇ ಇಲ್ಲ.
-ಕೇಂದ್ರ ಗೃಹ ಸಚಿವ ಪಿ. ಚಿದಂಬರಂ

ಜನಸಂಖ್ಯೆ ಮತ್ತು ಭೂಪ್ರದೇಶದ ದೃಷ್ಟಿಯಿಂದ ದೊಡ್ಡ ದೇಶದಲ್ಲಿ  ಆಹಾರ ಪದಾರ್ಥಗಳ ಬೆಲೆ ಏರಿಳಿತವು ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿ ಇರುತ್ತದೆ ಎಂದು ಭಾವಿಸುವುದು ತಪ್ಪು.
ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೌಸಿಕ್ ಬಸು

ನಿಮ್ಮ ಹಣದುಬ್ಬರದ ಸ್ವಲ್ಪ ಭಾಗವನ್ನು ನೀವು ನಮಗೆ ನೀಡಿದರೆ ನಮ್ಮ ಆರ್ಥಿಕ ವೃದ್ಧಿ ದರ ತ್ವರಿತಗೊಳ್ಳುವುದು ಎಂದು ಕೆಲ ವಿದೇಶಿ ಕೇಂದ್ರೀಯ ಬ್ಯಾಂಕ್‌ನ ಮುಖ್ಯಸ್ಥರು ನನಗೆ ಕೇಳಿದ್ದಾರೆ. ಇದು ಕೆಲ ದೇಶಗಳಿಗೆ ಹಣದುಬ್ಬರದ ತುರ್ತು ಅಗತ್ಯ ಇರುವುದರ ಹತಾಶೆಯ ಹೇಳಿಕೆಯಾಗಿದ್ದರೆ,  ನಾವು ಹಣದುಬ್ಬರ ನಿಯಂತ್ರಿಸುವಲ್ಲಿ ವಿಫಲವಾಗಿರುವುದರ ಹತಾಶೆಯ ಪ್ರತೀಕವೂ ಆಗಿದೆ.
-ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಿ. ಸುಬ್ಬರಾವ್

ಬಹು ಬ್ರಾಂಡ್‌ನ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಅವಕಾಶ ಮಾಡಿಕೊಟ್ಟರೆ ಶೇ 17ರಿಂದ ಶೇ 18ರಷ್ಟಿರುವ ಆಹಾರ ಹಣದುಬ್ಬರಕ್ಕೆ ಕಡಿವಾಣ ಹಾಕಬಹುದು
-ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT