ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತೂರು ಮೆಚ್ಚುವ ಹಾಕತ್ತೂರು ಪ್ರೌಢಶಾಲೆ

Last Updated 13 ನವೆಂಬರ್ 2011, 8:05 IST
ಅಕ್ಷರ ಗಾತ್ರ

ಮಡಿಕೇರಿ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನರು ಒಂದೊಮ್ಮೆ ಹಾಕತ್ತೂರಿನ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರೆ, ತಮ್ಮ ಅಭಿಪ್ರಾಯ ಬದಲಾಯಿಸದಿದ್ದರೆ ಕೇಳಿ! ಅಷ್ಟರ ಮಟ್ಟಿಗೆ ಶಾಲೆಯ ವಾತಾ ವರಣ, ಶಿಕ್ಷಣದ ಗುಣಮಟ್ಟ, ಶಿಕ್ಷಕರ ಕಾಳಜಿ, ಇವೆಲ್ಲವುಗಳ ಜೊತೆಗೆ ಫಲಿ ತಾಂಶ ಕೂಡ ಪ್ರಭಾವ ಬೀರುವಂತಿದೆ.
ಮಡಿಕೇರಿಯಿಂದ ಆರೇಳು ಕಿ.ಮೀ. ದೂರದಲ್ಲಿರುವ ಹಾಕತ್ತೂರು ಗ್ರಾಮ ಇದೆ. ಕಾಫಿ ತೋಟಗಳು ಹಾಗೂ ನಿಸರ್ಗದ ಸೌಂದರ್ಯದಿಂದ ಗ್ರಾಮ ಸುತ್ತುವರಿದಿದೆ. ಇಲ್ಲಿರುವ ಗ್ರಾಮಸ್ಥರು ಮುಖ್ಯವಾಗಿ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿದು ಜೀವನ ನಡೆಸುತ್ತಾರೆ.

ಗ್ರಾಮಸ್ಥರ ಆರ್ಥಿಕ ಸ್ಥಿತಿ ಸಾಧಾರಣವಾಗಿದ್ದರೂ, ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ ಎಂದು ಬಯಸುತ್ತಾರೆ. ಅದಕ್ಕಾಗಿ ಬಹುತೇಕ ಮಕ್ಕಳು ಶಾಲೆಗಳ ಮೆಟ್ಟಿಲು ಏರಿದ್ದಾರೆ. ಇಂತಹ ವಾತಾವರಣದಲ್ಲಿ 1981ರಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಗೊಂಡಿದೆ. ಅಂದಿನಿಂದ ಇಂದಿನವರೆಗೆ ಅತ್ಯುತ್ತಮ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ.

ಶಾಲೆಗೆ ಅತ್ಯುತ್ತಮವಾದ ಕಟ್ಟಡವಿದೆ. ಪಾಠ ಪ್ರವಚನಗಳಿಗೆ ಕೊಠಡಿಗಳಲ್ಲದೇ, ವಾಚನಾಲಯ, ಪ್ರತ್ಯೇಕ ಶೌಚಾಲಯ, ಹೊಲಿಗೆ ತರಬೇತಿ ಹಾಗೂ ಕಂಪ್ಯೂಟರ್ ತರಗತಿಗೆಂದು ಪ್ರತ್ಯೇಕ ಕೊಠಡಿಗಳು ಇಲ್ಲಿವೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ಈ ಪ್ರೌಢಶಾಲೆಯಲ್ಲಿ 212 ಮಕ್ಕಳು ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಶಾಲೆಯು ಶೇ 97ರಷ್ಟು ಫಲಿತಾಂಶ ಸಾಧಿಸಿದೆ. ಇದು ಆಕಸ್ಮಿಕವಾಗಿ ಬಂದಂತಹದ್ದಲ್ಲ. ಇದರ ಹಿಂದಿನ ವರ್ಷ 2009-2010ರಲ್ಲಿ ಶೇ 93ರಷ್ಟು, ಅದರ ಹಿಂದಿನ ವರ್ಷ 2008-2009ರಲ್ಲಿ ಶೇ 83ರಷ್ಟು ಹೀಗೆ ಇತಿಹಾಸ ಕೆದಕುತ್ತಾ ಹೋದರೆ ಹುಬ್ಬೇರಿಸುವಂತೆ ಈ ಶಾಲೆ ಸಾಧನೆ ತೋರಿದೆ.
ಮಕ್ಕಳ ಈ ಸಾಧನೆಗೆ ಶಿಕ್ಷಕ ವೃಂದದ ಪರಿಶ್ರಮ ಹಾಗೂ ಗ್ರಾಮಸ್ಥರ ನೆರವು ಕಾರಣವಾಗಿದೆ. ಶಾಲೆಯಲ್ಲಿರುವ ಒಟ್ಟು 13 ಶಿಕ್ಷಕರು ಆಸಕ್ತಿಯಿಂದ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ.

ವಿಶೇಷ ದತ್ತು ಯೋಜನೆ 
ಈ ಶಾಲೆಯಲ್ಲೊಂದು ವಿಶೇಷವಾದ ಯೋಜನೆಯಿದೆ. ಪ್ರತಿಯೊಬ್ಬ ಶಿಕ್ಷಕ ಪ್ರತಿ ವರ್ಷ ಒಬ್ಬ ಬಡವಿದ್ಯಾರ್ಥಿಯನ್ನು ದತ್ತು ತೆಗೆದುಕೊಳ್ಳುವುದು. ಆ ವಿದ್ಯಾರ್ಥಿಯ ಇತರೆ ವೆಚ್ಚಗಳನ್ನು (ಸಾರಿಗೆ, ಪಠ್ಯೇತರ ಚಟುವಟಿಕೆ, ಇತ್ಯಾದಿ) ಶಿಕ್ಷಕರೇ ಭರಿಸುವಂತಹದ್ದು. ಇಂತಹ ಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವುದರಲ್ಲಿ ಅನುಮಾನವಿಲ್ಲ.

ಪಠ್ಯೇತರ ಚಟುವಟಿಕೆ
ಕೇವಲ ಪಾಠ ಪ್ರವಚನಗಳಿಗೆ ಸೀಮಿತವಾಗದೇ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಹೊಲಿಗೆ ತರಬೇತಿ ಕಲಿಸಿಕೊಡುವುದು, ತರಕಾರಿ ಬೆಳೆಯವುದರ (ಕೃಷಿ) ಬಗ್ಗೆ ಹೇಳಿಕೊಡುವುದು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಲಾಗುತ್ತದೆ.

ಇದೇ ವರ್ಷದ ಜನವರಿಯಲ್ಲಿ ಮಕ್ಕಳೇ ಬೆಳೆದಂತಹ ತರಕಾರಿಗಳನ್ನು ಮಾರಾಟ ಮಾಡಲು `ಮಕ್ಕಳ ಸಂತೆ~ಯನ್ನು ಆಯೋಜಿಸಲಾಗಿತ್ತು. ಇಂತಹ ಕಾರ್ಯಕ್ರಮಗಳನ್ನು ಕಂಡು ಹಲವು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಲಹಾ ಪೆಟ್ಟಿಗೆ
ಶಾಲೆಯ ಮುಂಭಾಗದಲ್ಲಿ ಸಲಹಾ ಪೆಟ್ಟಿಗೆಯೊಂದನ್ನು ಇಡಲಾಗಿದೆ. ಶಾಲೆಗೆ ಆಗಮಿಸುವ ಗಣ್ಯರಾಗಲಿ, ಗ್ರಾಮಸ್ಥರಾಗಲಿ ಅಥವಾ ಸ್ವತಃ ಶಾಲಾಮಕ್ಕಳೇ ಆಗಲಿ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಸಲಹೆಗಳನ್ನು ಈ ಪೆಟ್ಟಿಗೆಯಲ್ಲಿ ಹಾಕಬಹುದಾಗಿದೆ.
 
ಆರ್ಥಿಕ ನೆರವು:ಪ್ರೋತ್ಸಾಹ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಯ ಮುಂದಿನ ವರ್ಷದ ವಿದ್ಯಾಭ್ಯಾಸದ ಶುಲ್ಕವನ್ನು ಶಾಲೆಗಳ ದಾನಿಗಳಿಂದ ಹಾಗೂ ಗ್ರಾಮಸ್ಥರಿಂದ ನೀಡುವ ವ್ಯವಸ್ಥೆಯೂ ಇಲ್ಲಿದೆ.

2010-2011ನೇ ಸಾಲಿನಲ್ಲಿ ಅತಿ ಹೆಚ್ಚು (ಶೇ 92) ಅಂಕಗಳಿಸಿದ ಪೂಜಾ ಎನ್ನುವ ವಿದ್ಯಾರ್ಥಿನಿಗೆ ಪ್ರಥಮ ಪಿ.ಯು.ಸಿ.ಗೆ ತಗಲುವ ಶುಲ್ಕದ ವೆಚ್ಚವನ್ನು ನೀಡಲಾಗಿತ್ತು.

ಇಲ್ಲಿನ ಎಲ್ಲ ಮಕ್ಕಳಿಗೆ ಒಂದಲ್ಲ ರೀತಿಯಲ್ಲಿ ಶಿಷ್ಯವೇತನ ದೊರಕಿಸಿಕೊಡಲು ಶಾಲಾ ಮಂಡಳಿ ಪ್ರಯತ್ನಿಸುತ್ತದೆ ಎನ್ನುವುದು ವಿಶೇಷ.

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಇಂತಹ ಶಾಲೆಗಳು ಎಲ್ಲೆಡೆ ಸ್ಥಾಪನೆಯಾಗಲಿ. ಇಲ್ಲಿನ ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಇತರ ಶಾಲೆಗಳಿಗೆ ಹಾಗೂ ಗ್ರಾಮಗಳಿಗೆ ಮಾದರಿಯಾಗಲಿ ಎನ್ನುವುದು ಪ್ರಜ್ಞಾವಂತರ ಒತ್ತಾಸೆ.

`ಗ್ರಾಮಸ್ಥರ ನೆರವು ಮುಖ್ಯ~
ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಎಷ್ಟೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರ ಸಹಾಯವಿಲ್ಲದೇ ಉತ್ತಮ ಶಾಲೆಗಳನ್ನು ರೂಪಿಸುವುದು ಸಾಧ್ಯವಿಲ್ಲ~ ಎಂದು ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಎ. ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮ ಶಾಲೆಗೆ ಭೂಮಿ ದಾನ  ನೀಡಿರುವ ನಾರಾಯಣ ರಾವ್ ದ್ವಾರಕಾ, ಗ್ರಾಮಸ್ಥರಾದ ದಂಬೆಕೊಡಿ ಲೀಲಾವತಿ ಚಿನ್ನಪ್ಪ, ಮಂದೇರ ನಾಣಯ್ಯ, ಸಾಬು ತಿಮ್ಮಯ್ಯ ಶಾಲೆಗೆ ಸಾಕಷ್ಟು ಆರ್ಥಿಕ ಸಹಾಯ ನೀಡಿದ್ದಾರೆ. ಇದಲ್ಲದೇ ಎಸ್‌ಡಿಎಂಸಿ ಅಧ್ಯಕ್ಷ ಪಿ.ಬಿ. ಕುಶಾಲಪ್ಪ ಶಾಲಾಡಳಿತಕ್ಕೆ ಸಂಪೂರ್ಣ ಸಹಕರಿಸುತ್ತಾರೆ ಎಂದು ಅವರು ತಿಳಿಸಿದರು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT