ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಮಾಲಿನ್ಯ

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಹಬ್ಬ ಅಂದರೆ ಸಾಕು. ಸಾಲು ಸಾಲು ಬಾಳೆ ದಿಂಡು, ಕಬ್ಬು, ಮಾವಿನ ತೋರಣ, ಬಣ್ಣಬಣ್ಣದ ಹೂ. ಇವಿಷ್ಟೂ ಎಲ್ಲಾ ಕಡೆ ಇದ್ದೇ ಇರುತ್ತವೆ. ಆದರೆ ಬೆಂಗಳೂರನಲ್ಲಿ ಮಾತ್ರ ಕುಂಬಳಕಾಯಿ ಭರಾಟೆಯೂ ಬಹಳ.

ಹಬ್ಬದ ಮೊದಲ ದಿನ ಕಣ್ಣಿಗೆ ತಂಪು ಅನಿಸುವಂತ ಈ ಹಸಿರು ಸಿರಿ ಮಾರುಕಟ್ಟೆಯ ರಸ್ತೆಯೊಳಗ ಮದುವೆ ದಿಬ್ಬಣಕ್ಕೆ ಶೃಂಗಾರ ಮಾಡಿಕೊಂಡ ಹುಡುಗಿಯರಂತೆ ಸಾಲು ಸಾಲು ನಿಂತಿರುತ್ತವೆ. ಹಬ್ಬದ ದಿನವೂ ಅಷ್ಟೆ! ಹಬ್ಬದ ಮರುದಿನ ನೋಡಿದ್ರ ಸಾಕು, ಹಸಿರು ಸಿರಿ ಎಲ್ಲೆಂದರಲ್ಲಿ ಕಾಲು ಮುರಿದುಕೊಂಡು, ಮುಖ ಸೆಟೆಸಿಗೊಂಡು ಬಿದ್ದಿರುತ್ತವೆ.

ಹಬ್ಬಕ್ಕೆ ಮಂಗಳಕರವಾದ ಎಲ್ಲ ತಳಿರು ತೋರಣಗಳು ಕಸದ ಸಾಲಿಗೆ ಸೇರುತ್ತವೆ. ಚೌತಿಯಿಂದಲೇ ಕಸ ಸಂಗ್ರಹಿಸುವ ಕೆಲಸ ಶುರು ಆಗುತ್ತದೆ. ಆಗೆಲ್ಲ ಜಲ ಮಾಲಿನ್ಯ; ಈಗ ಹಸಿರು ಮಾಲಿನ್ಯ. ನಂತರದ ದೀಪಾವಳಿಗೆ ವಾಯು ಹಾಗೂ ಶಬ್ದ ಮಾಲಿನ್ಯ.

ನಾವ್ಯಾಕೆ ಹಬ್ಬವನ್ನು ಇಷ್ಟು ಕಲುಷಿತಗೊಳಿಸುತ್ತೇವೆ? ಹಿಂಕೆ ಎಲ್ಲಕ್ಕೂ ಪ್ರಾಣಿ ಬಲಿ ಕೊಡುತ್ತಿದ್ದರು. ನಂತರ ಅಹಿಂಸೆಯನ್ನು ಪ್ರತಿಪಾದಿಸಲು, ಜೀವಬಲಿಯ ಬದಲಿಗೆ ಈ ಕೂಷ್ಮಾಂಡ ಸ್ಫೋಟವನ್ನು ಆರಂಭಿಸಿದರು. ಅದರ್ಲ್ಲಲೂ ರಕ್ತ ತರ್ಪಣದ ನೋಟ ಸಿಗಲಿ ಎಂದು ಕುಂಕುಮವನ್ನೂ ಅರ್ಪಿಸುತ್ತಿದ್ದರು.

ಆದರೆ ಈಗ ಈ ಕುಂಬಳ ಸಿಡಿತದ ನಂತರ ಈ ತ್ಯಾಜ್ಯ ನಿರ್ವಹಣೆ ಹೇಗೆ ಎಂಬುದೇ ಪ್ರಶ್ನೆಯಾಗಿದೆ. ಒಮ್ಮೆ ನೆಲಕ್ಕೆ ಸಿಡಿದು, ಬೀಜ ಚೆದುರಿ, ಕುಂಕುಮ ಭೂ ಸ್ಪರ್ಶಿಸಿದರೆ ಆ ವರೆಗಿನ ಕುಂಬಳದ ಮಹತ್ವವೂ ನೆಲಕ್ಕೆ ಬಿದ್ದಂತೆಯೇ. ಮುಂದೆ ಅದರ ಜವಾಬ್ದಾರಿ ಯಾರಿಗೆ? ಸಮರದ ನಂತರ ಹಾಳು ಬಿದ್ದಿರುವ ಹಾಳೂರಿನಂತೆ ಕಾಣುವ  ಈ ಕಸಕ್ಕೆ ವಾರಸುದಾರರು ಯಾರು?

ಪುಣ್ಯಕ್ಕೆ ಎಲ್ಲರೂ ಪಾಲುದಾರರು. ಆದರೆ ಊರನ್ನೇ ಗಬ್ಬೆಬ್ಬಿಸುವ ಈ ಕಸಕ್ಕೆ ಯಾರೂ ಹೊಣೆಗಾರರಲ್ಲ. ತಮ್ಮ ಮನೆಯ ಕಸ, ಬೀದಿಗೆಸೆದರೆ ಸಾಕು, ಅವರ ಜವಾಬ್ದಾರಿ ಮುಗಿದಂತೆ.

ಬೀದಿ ಬದಿಯ ಕಸ ಬಿಬಿಎಂಪಿ ಕಸದ ಬುಟ್ಟಿಗೆ ಬಂದರೆ ಕಸ ಗುಡಿಸುವವರ ಜವಾಬ್ದಾರಿಯೂ ಮುಗಿಯಿತು. ಆದರೆ ನಂತರ, ಪ್ರತಿ ದಿನಕ್ಕಿಂತ ಎರಡು ಪಟ್ಟು ಹೆಚ್ಚಾಗುವ ಈ ತ್ಯಾಜ್ಯವನ್ನು ಸಾಗಿಸುವುದ ಹೇಗೆ? ಸುರಿಯುವುದಾದರೂ ಎಲ್ಲಿ?
ಇಂಥ ಪ್ರಶ್ನೆಗಳು ಎದುರಾದ ತಕ್ಷಣ `ಇದ್ಯಾವುದೋ ಸಿನಿಕ ಮನಸಿನ ಪ್ರಶ್ನೆಗಳು.
ಹಬ್ಬವನ್ನು ಆಸ್ವಾದಿಸಲಾಗದ ನಾಸ್ತಿಕರ ಪ್ರಶ್ನೆಗಳು.
 
ಪರಿಸರ ಪ್ರೇಮದ ಹೆಸರಿನಲ್ಲಿ ಸಂಪ್ರದಾಯವನ್ನೇ ಅಲ್ಲಗಳೆಯುವವರು~ ಎಂದು ಮೇಲ್ನೋಟಕ್ಕೆ ಎನಿಸಬಹುದು. ಇದೆಲ್ಲಕ್ಕೂ ಮಿಗಿಲಾಗಿ ಆಚರಣೆಯ ಹೆಸರಿನಲ್ಲಿ ನಿಜಕ್ಕೂ ಪರಿಸರವನ್ನು ಬಲಿ ಕೊಡುವುದು ಅದೆಷ್ಟು ಸರಿ?

ಬಾಗಿಲಿಗೆ ತೋರಣ ಇರಲಿ. ಒಮ್ಮೆ ಕಟ್ಟಿದರೆ ಮತ್ತೊಂದು ಹಬ್ಬದವರೆಗೂ ಇರುತ್ತದೆ. ವೀಳ್ಯದೆಲೆಗಳನ್ನು ತಿಂದು ಮುಗಿಸಬಹುದು. ಆದರೆ ಈ ಬಾಳೆ ದಿಂಡು ಹಾಗೂ ಕುಂಬಳ ಕಾಯಿಗಳನ್ನು ಮಾಡುವುದೇನು?

ಗಣೇಶ ಚೌತಿಗೆ ಪರ್ಯಾಯ ಮಾರ್ಗವನ್ನು ಕಂಡುಕೊಂಡರು. ಪ್ರಕೃತಿಗೆ ಸಮೀಪವೆನಿಸುವ ಬಣ್ಣವಿಲ್ಲದ, ಅಪ್ಪಟ ಮಣ್ಣಿನ ಗಣಪನನ್ನು ಕೊಂಡು ತಂದರು. ಕೆಲವರು ಸಾಂಕೇತಿಕವಾಗಿ ಮನೆಯಲ್ಲಿಯೇ ವಿಸರ್ಜನೆ ಮಾಡಿದರು. 

ದೀಪಗಳ ಸಾಲಿನ ಹಬ್ಬ ದೀಪಾವಳಿಗೆಂದೇ ಕಡಿಮೆ ಹೊಗೆಯ ಪಟಾಕಿಗಳ ಉತ್ಪಾದನೆಯಾಗುತ್ತಿದೆ. ಶಬ್ದವಿಲ್ಲದ ಪಟಾಕಿಗಳ ಬಳಕೆಗೆ ಹೆಚ್ಚು ಪ್ರಚಾರ ಸಿಗುತ್ತಿದೆ. ಬಿರುಸು ಬಾಣಗಳ ಬಿರುಸುತನ ಕಡಿಮೆಯಾಗುವಂತೆ ಸಾಕಷ್ಟು ಪ್ರಚಾರ ಸಿಗುತ್ತಿದೆ.

ಆದರೆ ಕೇವಲ ಅಲಂಕಾರ ಹಾಗೂ ಶುಭ ಸಂಕೇತ ಎಂಬ ಕಾರಣಕ್ಕೆ ಬಾಳೆ ತೋಟದಿಂದ ದಿಂಡುಗಳನ್ನು ಕಡಿದು ತರುವುದು, ರಸ್ತೆ ಬದಿಯ ಮರಗಳನ್ನು ಬೋಳು ಮಾಡುವುದು ಎಷ್ಟು ಸರಿ?

ಸಮೃದ್ಧಿಯ ಸಂಕೇತವಾಗಿರುವ ಹಸಿರು ಸಿರಿ ಬೆಳೆಸುವುದರಿಂದ ಹಬ್ಬವಾಗುತ್ತದೆಯೇ ಹೊರತು, ಕತ್ತರಿಸಿ, ಸ್ಫೋಟಿಸಿ, ಕಸದ ರಾಶಿ ಹೆಚ್ಚಿಸುವುದರಿಂದಲ್ಲ.
ಭಕ್ತಿ ಪ್ರಿಯ ಶಿವ ಮೆಚ್ಚುವುದು ಮನದೊಳಗಣ ಪರಿಶುದ್ಧ ಭಕ್ತಿಯನ್ನೇ ಹೊರತು ಈ ಆಡಂಬರವನ್ನಲ್ಲ ಕೂಷ್ಮಾಂಡ ಸ್ಫೋಟವನ್ನಲ್ಲ. ಪುಣ್ಯಗಳಿಕೆಯ ಅಭಿಲಾಷೆಗೆ ಹಲವು ದಾರಿಗಳಿವೆ. ದೀನಬಂಧು ನಾರಾಯಣನನ್ನು ಒಲಿಸಲು ಸಾಕಷ್ಟು ಅವಕಾಶಗಳಿವೆ. 
 
ಅಪಾರ್ಟ್‌ಮೆಂಟ್‌ಗಳಲ್ಲಿದ್ದರೆ, ಮನೆಗೊಂದು ಕುಂಬಳದ ಬದಲು, ಕಟ್ಟಡಕ್ಕೊಂದು ಕುಂಬಳವನ್ನು ತಂದು ಎಲ್ಲ ಒಟ್ಟಾಗಿ ಪೂಜಿಸಬಹುದು. ಮಳಿಗೆಗಳಿಗೂ ಇದೇ ನಿಯಮವನ್ನು ಅನ್ವಯಿಸಬಹುದು. ಆಗ ತಾನಾಗಿಯೇ ಎಲ್ಲರೂ ಒಂದು. ಒಂದೇ ದೇವರತ್ತ ನಮ್ಮ ಒಲವು. ಒಂದೇ ಬಗೆಯ ಆರಾಧನೆ ಎಂಬ ಒಮ್ಮತಕ್ಕೆ ಬರಬಹುದು.

ಹಬ್ಬದಾಚರಣೆಗಳ ಹಿನ್ನೆಲೆ ಸಂಪ್ರದಾಯಗಳೇನೇ ಇದ್ದರೂ ಉದ್ದೇಶವಂತೂ ಒಂದೇನೆ. ಅದು ಎಲ್ಲರನ್ನೂ ಒಗ್ಗೂಡಿಸುವ ಸಂಪ್ರದಾಯ. ಜಾತ್ರೆ ಇರಲಿ, ದೇವಸ್ಥಾನವಿರಲಿ... ಈ ನೆಪದಿಂದಲಾದರೂ ಒಗ್ಗೂಡಿದರೆ, ಭೂದೇವಿಯ ಮೇಲಿನ ಸಿರಿದೇವಿಯನ್ನು ಉಳಿಸಿದ ಪುಣ್ಯ ಎಲ್ಲರಿಗೂ ಲಭಿಸುತ್ತದೆ.
 
ನಮ್ಮ ಮುಂದಿನ ಪೀಳಿಗೆಗಾಗಿ ಹಸಿರು ಭರಿತ ಭೂಮಿಯನ್ನು ನೀಡುವುದಕ್ಕಿಂತ ದೊಡ್ಡ ಕೊಡುಗೆಯಾಗಲೀ, ದೈವಾರಾಧನೆಯಾಗಲೀ ಯಾವುದೂ ಇಲ್ಲ.
ಆದರೆ ಇದಕ್ಕೆ ಎಲ್ಲರೂ ಯೋಚಿಸಬೇಕು. ಯೋಜಿಸಬೇಕು. ಕಾರ್ಯಗತಗೊಳಿಸಬೇಕು. ಅದು ನಮ್ಮಿಂದಾದೀತೆ? ಆಗದ ಕೆಲಸವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT