ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ವಿವಿಧೆಡೆ 14 ಕಾಮಗಾರಿ ಉದ್ಘಾಟನೆ

Last Updated 17 ಅಕ್ಟೋಬರ್ 2012, 9:20 IST
ಅಕ್ಷರ ಗಾತ್ರ

ಹರಿಹರ: `ಬಿ.ಪಿ. ಹರೀಶ್ ಅವರು ಶಾಸಕರಾದ ನಂತರ ತಾಲ್ಲೂಕಿನ ವಿವಿಧ ಕಾಮಗಾರಿಗಳಿಗೆ ಸುಮಾರು ರೂ 500 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳ ಗುಣಮಟ್ಟ ತೃಪ್ತಿ ತಂದಿದೆ~ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಪೂರ್ಣಗೊಂಡ ಯುಐಡಿಎಸ್‌ಎಸ್‌ಎಂಟಿ ಯೋಜನೆ ಅಡಿಯಲ್ಲಿ ಪೂರ್ಣಗೊಂಡ 14 ಕಾಮಗಾರಿಗಳನ್ನು ಮಂಗಳವಾರ ಉದ್ಘಾಟಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಯುಐಡಿಎಸ್‌ಎಸ್‌ಎಂಟಿ ಯೋಜನೆ ಅಡಿ ರೂ 52 ಕೋಟಿ ವೆಚ್ಚದ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಕೆಎಂಆರ್‌ಪಿಒ ಅನುದಾನ ರೂ 18 ಕೋಟಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ನಗರದ ಅಭಿವೃದ್ಧಿಗಾಗಿ 85 ಕೋಟಿ ಅನುದಾನ ಮಂಜೂರಾಗಿದೆ.
 
ನ್ಯಾಯಾಲಯ ಸಂಕೀರ್ಣಕ್ಕೆ 10.75 ಕೋಟಿ, ತುಂಗಭದ್ರಾ ಸೇತುವೆಗೆ 19 ಕೋಟಿ, ಪ್ರಥಮದರ್ಜೆ ಕಾಲೇಜಿಗೆ 3.25 ಕೋಟಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ 8.75 ಕೋಟಿ, ಸರ್ಕಾರಿ ಆಸ್ಪತ್ರೆ ಉನ್ನತೀಕರಣಕ್ಕೆ 5.75 ಕೋಟಿ, ಮಿನಿ ವಿಧಾನಸೌಧಕ್ಕೆ 3 ಕೋಟಿ, ಈಜುಕೊಳಕ್ಕೆ 2 ಕೋಟಿ, ದಾವಣಗೆರೆ-ಹರಿಹರ ರೈಲ್ವೆ ಗೇಟ್ ಪಕ್ಕದ ಬೈಪಾಸ್ ರಸ್ತೆಗೆ 16 ಕೋಟಿ, ಕೊಳಚೆ ಪ್ರದೇಶದ ಕಟ್ಟಡಕ್ಕೆ 2 ಕೋಟಿ ಅನುದಾನ ಮಂಜೂರಾಗಿದೆ.
 
ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನು ಕೆಲವು ಪೂರ್ಣಗೊಳ್ಳುವ ಹಂತದಲ್ಲಿವೆ. ಬಿ.ಪಿ. ಹರೀಶ್ ಅವರ ಸಾಧನೆ ಏನು? ಎಂದು ಪ್ರಶ್ನಿಸುವವರಿಗೆ ಕಾಮಗಾರಿಗಳೇ ಉತ್ತರವಾಗಲಿವೆ ಎಂದು ವಿರೋಧಿಗಳಿಗೆ ಕುಟುಕಿದರು.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸಂಸದರು ತಮ್ಮ ಅನುದಾನದಲ್ಲಿ ತಾಲ್ಲೂಕಿಗೆ 2 ಕೋಟಿ ಅನುದಾನ ನೀಡಿದ್ದಾರೆ. ಬನ್ನಿಕೋಡು- ಸಲಗನಹಳ್ಳಿ- ಕಡ್ಲೆಗೊಂದಿ- ಬನ್ನಿಕೋಡು ಗ್ರಾಮಗಳನ್ನು ಕೂಡಿಸುವ ಸುಮಾರು 8 ಕಿ.ಮೀ ಕಾಂಕ್ರೀಟ್ ರಸ್ತೆಯನ್ನು ಪ್ರಾಯೋಗಿಕವಾಗಿ ನಿರ್ಮಿಸಿ ಪರೀಕ್ಷೆ ನಡೆಸಲಾಯಿತು.

ಈ ಪರೀಕ್ಷೆಯಲ್ಲಿ ನೀರಾವರಿ ಸೌಲಭ್ಯ ಇರುವ ಗ್ರಾಮಾಂತರ ಪ್ರದೇಶಗಳಿಗೆ ಡಾಂಬರ್ ರಸ್ತೆಗಿಂತ ಕಾಂಕ್ರೀಟ್ ರಸ್ತೆ ಹೆಚ್ಚು ಉಪಯುಕ್ತ ಎಂಬ ಫಲಿತಾಂಶ ದೊರೆತಿದೆ. ಡಾಂಬರ್ ರಸ್ತೆಗಳಿಗೆ ಪ್ರತಿ ವರ್ಷ ಹಣ ವ್ಯಯಿಸುವುದಕ್ಕಿಂತ ಕಾಂಕ್ರೀಟ್ ರಸ್ತೆ ನಿರ್ಮಿಸುವುದೇ ಉತ್ತಮ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ರಮೇಶ ಮೆಹರ‌್ವಾಡೆ, `ದೂಡಾ~ ಮಾಜಿ ಅಧ್ಯಕ್ಷ ಯಶವಂತರಾವ್, `ದೂಡಾ~ ಸದಸ್ಯ ನಾಗರಾಜ್ ಐರಣಿ, ನಗರಸಭೆ ಪೌರಾಯುಕ್ತ ಎಂ.ಕೆ. ನಲವಡಿ, ಎಇಇ ಮಹಮದ ಗೌಸ್ ಉಪಸ್ಥಿತರಿದ್ದರು.

ಶ್ಲಾಘನೆ!
`ಇದರಲ್ಲಿ ನೀರು ಬರುತ್ತಿದೆ. ಬೋರ್‌ವೆಲ್ ಚೆನ್ನಾಗಿದೆ. ಬೋರ್‌ವೆಲ್‌ನ್ನು ಚರಂಡಿಯ ಪಕ್ಕಕ್ಕೆ ಪೈಪ್‌ಲೈನ್ ಮೂಲಕ ತೆಗೆದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಸಿ~ ಎಂದು ನಗರಸಭೆ ಪೌರಾಯುಕ್ತ ಎಂ.ಕೆ. ನಲವಡಿ ಅವರಿಗೆ ಸಂಸದ ಸಿದ್ದೇಶ್ವರ ಸೂಚನೆ ನೀಡಿದರು.

ನಗರದ ವಿದ್ಯಾನಗರ `ಬಿ~ ಬ್ಲಾಕ್‌ನ ಯುಐಡಿಎಸ್‌ಎಸ್‌ಎಂಟಿ ಕಾಮಗಾರಿ ಗಳನ್ನು ಉದ್ಘಾಟಿಸಿ, ಕಾಮಗಾರಿ ಪರಿಶೀಲನೆ ನಡೆಸಿ, `ಪತ್ರಿಕೆ~ಯಲ್ಲಿ ಅ. 16ರಂದು ಪ್ರಕಟಗೊಂಡ `ರಸ್ತೆ ಕಾಮಗಾರಿ ಕಳಪೆ: ದೂರು~ ಎಂಬ ಲೇಖನಕ್ಕೆ ಸಂಬಂಧಿಸಿಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು .

ಆಸ್ಪತ್ರೆ ಕಾಂಪೌಂಡ್ ಬದಿಯಲ್ಲಿರುವ ಚರಂಡಿಗೆ ಪಕ್ಕದ ಚರಂಡಿಯಿಂದ ಲಿಂಕ್ ನೀಡಲು ಅನುದಾನದ ಕೊರತೆ ಇತ್ತು. ಅದನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಮುಂದಿನ ಬಾರಿ ಅನುದಾನ ಬಿಡುಗಡೆಯಾದಾಗ ಚರಂಡಿಗೆ ಲಿಂಕ್ ನೀಡುವ ವ್ಯವಸ್ಥೆ ಮಾಡಲಾಗುವುದು. ರಸ್ತೆ ಬದಿಯ್ಲ್ಲಲಿ ಸಾಕಷ್ಟು ಪಾರ್ಥೇನಿಯಂ ಬೆಳೆದಿದೆ. ಅದನ್ನು ಕೂಡಲೇ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ.

ಬೇರೆ ನಗರಕ್ಕೆ ಹೋಲಿಸಿದಾಗ ಹರಿಹರ ನಗರದ ಯುಐಡಿಎಸ್‌ಎಸ್‌ಎಂಟಿ ಕಾಂಕ್ರಿಟ್ ರಸ್ತೆ ಕಾಮಗಾರಿ ಸೂಪರ್ ಆಗಿದೆ ಎಂದು ಶಹಭಾಸ್‌ಗಿರಿ ನೀಡಿ, ಮುಂದಿನ ಕಾಮಗಾರಿ ಉದ್ಘಾಟನೆಗೆ ಕಾರು ಹತ್ತಿದರು. ದೂರು ಹೇಳಲು ಬಂದ ಸ್ಥಳೀಯರು ಏನು ಮಾತನಾಡಬೇಕು ಎಂದು ತೋಚದೇ ತಮ್ಮ ಮನೆಗಳಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT