ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರುಷ ಹೆಚ್ಚಿಸಿದ ವಿದ್ಯಾರ್ಥಿ ವೇತನ

Last Updated 25 ಜುಲೈ 2012, 19:30 IST
ಅಕ್ಷರ ಗಾತ್ರ

ಪರದೆಯ ಹಿಂದಿದ್ದ ಸಾವಿರಾರು ಯುವ ಮನಸ್ಸುಗಳು ಅಲ್ಲಿ ಆನಂದದಿಂದ ನಲಿದಾಡುತ್ತಿದ್ದವು. ಆತ್ಮವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿದ್ದ ಆ ಕಣ್ಣುಗಳಲ್ಲಿ ಸಾಧನೆಯ ಹಂಬಲ ಪುಟಿದೇಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಸಾಧನೆಯ ಆಕಾಂಕ್ಷೆಗೆ ಇಂಬುಗೊಡುವ ನಿಟ್ಟಿನಲ್ಲಿ ಬಜಮ್-ಎ-ನಿಸ್ವಾನ್ ಚಾರಿಟಬಲ್ ಟ್ರಸ್ಟ್ ಶಿವಾಜಿನಗರದಲ್ಲಿರುವ ಸಮದ್ ಹೌಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೇ ಈ ಎಲ್ಲಾ ಹೆಣ್ಣುಮಕ್ಕಳ ಹುರುಪು, ಸಂತಸಕ್ಕೆ ಕಾರಣ.

ಸುಮಾರು 39 ವರ್ಷಗಳಿಂದ ಮುಸ್ಲಿಂ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿರುವ ಈ ಟ್ರಸ್ಟ್ ಬುಧವಾರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 2800 ಪ್ರತಿಭಾನ್ವಿತ ಮುಸ್ಲಿಂ ಯುವತಿಯರಿಗೆ 80 ಲಕ್ಷ ರೂಪಾಯಿಯ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಿದೆ. ಈ ಮೂಲಕ ಮುಸ್ಲಿಂ ಯುವತಿಯರ ಶಿಕ್ಷಣಕ್ಕೆ ಬೆಂಬಲ ನೀಡುವುದು ಟ್ರಸ್ಟ್‌ನ ಉದ್ದೇಶ.

ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಂದ ಆರಂಭಿಸಿ ಸ್ನಾತಕೋತ್ತರ ಪದವಿ ಮಾಡುತ್ತಿರುವ ವಿದ್ಯಾರ್ಥಿನಿಯರ, ಶೈಕ್ಷಣಿಕ ಹಿನ್ನೆಲೆ ಹಾಗೂ ಕೌಟುಂಬಿಕ ಸ್ಥಿತಿಗತಿಗಳನ್ನು ಆಧರಿಸಿ ವಿದ್ಯಾರ್ಥಿ ವೇತನ ಪಡೆಯುವವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ ವೈದ್ಯಕೀಯ ಕೋರ್ಸ್ ವಿದ್ಯಾರ್ಥಿನಿಯರಿಗೆ ತಲಾ 35 ಸಾವಿರ ರೂಪಾಯಿ, ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ 25 ಸಾವಿರ, ಪದವಿ ವಿದ್ಯಾರ್ಥಿಗಳಿಗೆ 10 ಸಾವಿರ, ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ 2500 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಯಿತು. ಆಯಾ ಕೋರ್ಸ್‌ಗಳನ್ನಾಧರಿಸಿ ವಿದ್ಯಾರ್ಥಿ ವೇತನದ ಮೊತ್ತವನ್ನು ನಿರ್ಧರಿಸಲಾಗಿತ್ತು.

`ರಂಜಾನ್ ಸಂದರ್ಭದಲ್ಲಿ ಸಂಗ್ರಹವಾಗುವ ಝಕಾತ್ ಹಾಗೂ ಸ್ವಂತ ಇಚ್ಛೆಯಿಂದ ದೇಣಿಗೆ ನೀಡುವವರ ಸಹಕಾರದಿಂದ ಇಷ್ಟು ಮೊತ್ತದ ವಿದ್ಯಾರ್ಥಿ ವೇತನ ನೀಡಲು ಸಾಧ್ಯವಾಗಿದೆ. ಹೆಣ್ಣುಮಗಳೊಬ್ಬಳು ಕಲಿತರೆ ಇಡೀ ಕುಟುಂಬವೇ ಶಿಕ್ಷಣ ಪಡೆದಂತೆ ಎಂಬ ಗಾಂಧೀಜಿಯವರ ವಾಕ್ಯವನ್ನು ಅತಿಯಾಗಿ ನೆಚ್ಚಿಕೊಂಡು ಆ ನಿಟ್ಟಿನ ಪ್ರಯತ್ನದಲ್ಲಿದ್ದೇವೆ. ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿರುವುದು ಹಾಗೂ ಅವರೆಲ್ಲ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಲು ಹಾಗೂ ತಂದೆಯ ಕಷ್ಟಕ್ಕೆ ಬೆನ್ನೆಲುಬಾಗಿ ನಿಲ್ಲುವ ಆಸೆ ತೋರುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ~ ಎನ್ನುತ್ತಾರೆ ಟ್ರಸ್ಟ್‌ನ ಸದಸ್ಯರೊಬ್ಬರು.

`ಬಜಮ್-ಎ-ನಿಸ್ವಾನ್ ನೀಡಿದ ವಿದ್ಯಾರ್ಥಿ ವೇತನದಿಂದ ನನ್ನ ಕುಟುಂಬಕ್ಕಿದ್ದ ಸ್ವಲ್ಪ ಭಾರ ಕಡಿಮೆ ಆಗಿದೆ. ನಾನು ಮತ್ತು ನನ್ನ ತಂಗಿ ಇಬ್ಬರನ್ನೂ ಓದಿಸುವುದು ತಂದೆಗೆ ಕಷ್ಟವಾಗುತ್ತಿತ್ತು. ಅಲ್ಲದೆ ವಿದ್ಯಾರ್ಥಿ ವೇತನದಿಂದ ನನ್ನ ಶಿಕ್ಷಣದ ಹಾದಿ ಈಗ ಸುಗಮವಾಗಿದೆ. ತಂದೆ ತಾಯಿಗಳು ಮಕ್ಕಳಿಗೆ ಬೇಗ ಮದುವೆ ಮಾಡದೆ ಅವರ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ನೀಡಲಿ ಎಂದು ಹಾರೈಸುತ್ತೇನೆ~ ಎಂದು ಖುಷಿ ವ್ಯಕ್ತಪಡಿಸಿದರು ದಂತ ವೈದ್ಯಕೀಯ ವಿಭಾಗದಲ್ಲಿ 35 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಪಡೆದ ಶಿಫಾ ಹುಸೇನ್.

`ಶಿಕ್ಷಣವೇ ಎಲ್ಲ. ಇಂದಿನ ದಿನಮಾನಗಳಲ್ಲಿ ಯಾವುದೂ ಉಚಿತವಾಗಿ ಬಂದು ಬೀಳುವುದಿಲ್ಲ. ಎಲ್ಲದಕ್ಕೂ ನಾವು ಒಂದಿಷ್ಟು ವಿನಿಯೋಗಿಸಲೇ ಬೇಕು. ಯಶಸ್ಸು ಕೂಡ ಇದರಿಂದ ಹೊರತಾಗಿಲ್ಲ. ಶಿಕ್ಷಣ ಹುಡುಗಿಯರನ್ನು ತಲುಪಿದಾಗ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ. ಹೀಗಾಗಿ ಝಕಾತ್ ಹಣ ಹಾಗೂ ದೇಣಿಗೆ ಸಂಗ್ರಹಿಸಿ ಆ ಮೊತ್ತದಿಂದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡುತ್ತೇವೆ. ಶಾಲೆಗಳನ್ನು ಕೂಡಾ ದತ್ತು ತೆಗೆದುಕೊಂಡು ಹಲವು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸುತ್ತಿದ್ದೇವೆ. ಹೆಣ್ಣು ಮಕ್ಕಳು ವಿದ್ಯಾವಂತರಾಗಿ ಸ್ವತಂತ್ರವಾಗಿ ಬದುಕುವಂತಾಗಬೇಕು~ ಎಂದು ಟ್ರಸ್ಟ್‌ನ ಆಶಯವನ್ನು ತಿಳಿಸಿದರು ಅಧ್ಯಕ್ಷೆ ಹುಸ್ನಾ ಜಿಯುಲ್ಲಾ ಷರೀಫ್.

ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಶಾಂತಿನಗರ ಶಾಸಕ ಹ್ಯಾರಿಸ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು.

ಹಲವು ವರ್ಷಗಳಿಂದ ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಅವರಿಗೆ ತರಬೇತಿ ನೀಡುವ ಬಗ್ಗೆಯೇ ಕಾರ್ಯಪ್ರರ್ವತ್ತವಾಗಿರುವ ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುವವರೆಲ್ಲರೂ ಮಹಿಳೆಯರೇ ಎಂಬುದು ಮತ್ತೊಂದು ವೈಶಿಷ್ಟ್ಯ. ಪ್ರಸ್ತುತ 20 ಮಂದಿ ಮಹಿಳೆಯರು ಟ್ರಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಬಾರಿಯೂ ದೊಡ್ಡ ಮೊತ್ತದ ಸಂಗ್ರಹಣೆ ಮಾಡುತ್ತಿದ್ದಾರೆ. ಈ ವರ್ಷ 80 ಲಕ್ಷ ರೂಪಾಯಿ ಹಣ ಸಂಗ್ರಹವಾಗಿರುವುದೇ ಇದಕ್ಕೆ ಸಾಕ್ಷಿ. ಈ ಮೂಲಕ ಹೆಣ್ಣೊಂದು ಕಲಿತರೆ ಕುಟುಂಬ, ಸಮುದಾಯವೇ ಸುಶಿಕ್ಷಿತವಾಗುತ್ತದೆ ಎಂಬ ಮಾತನ್ನು ನಿಜವಾಗಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT