ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಕೆಲಸಕ್ಕೆ ಹೆಸರುವಾಸಿ ಕುಸುಬೆ

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಒಕ್ಕಲು ಮಾಡಿದ ನಂತರ ಉಳಿದ ಕುಸುಬೆ ದಂಟು, ದೇಟು, ಎಲೆ, ರವದೆಯಂತಹ ರಾಶಿ ರಾಶಿ ಕಸವನ್ನು ಬಿಸಾಕುತ್ತಿದ್ದೀರಾ? ಇದು ಸರಿಯಲ್ಲ. ಏಕೆಂದರೆ ಕುಸುಬೆ ಕೂಡ ತಿಪ್ಪೆಗೆ ಹಾಕಿದರೆ ಅದು ಕೊಳೆತು ಗೊಬ್ಬರವಾಗುವುದಲ್ಲದೇ ಇದರಿಂದ ಕೂಡ ಅನೇಕ ಪ್ರಯೋಜನಗಳೂ ಇವೆ.

ಕುಸುಬೆ ಕಸ ಜೈವಿಕ ಶಿಥಲೀಯವಲ್ಲ. ಹೊಲಗದ್ದೆಗಳಿಗೆ ಹಾಕಿದರೆ ಬೆಳೆಗೆ ಬಿಳಿ ಕಸ ಬಾಧಿಸುವ ಭಯ ಎನ್ನುವುದು ತಪ್ಪು ತಿಳಿವಳಿಕೆ. ಕುಸುಬೆ ಕಸಕ್ಕೂ ಬಿಳಿ ಕಸದ ಬಾಧೆಗೂ ಯಾವುದೇ ಸಂಬಂಧವಿಲ್ಲ. ಇದನ್ನು ವ್ಯರ್ಥವಾಗಿ ಬಿಸಾಡುವುದೆಂದರೆ ಅಮೂಲ್ಯ ಜೈವಿಕ ಗೊಬ್ಬರವನ್ನೇ ವ್ಯರ್ಥಮಾಡಿದಂತೆ, ಅಮೂಲ್ಯ ಪೋಷಕಾಂಶಗಳನ್ನೇ ಪೋಲು ಮಾಡಿದಂತೆ.

ಹಿಂಗಾರಿ ಜೋಳ, ಕರಿಕಡಲೆ, ಗೋಧಿ ಬೆಳೆಗಳಲ್ಲಿ 8-10 ಸಾಲಿಗೊಂದರಂತೆ ಕುಸುಬೆ ಬೆಳೆಯನ್ನು ಮಿಶ್ರ ಬೆಳೆಯಾಗಿ ಬೆಳೆಯುವುದು ವಾಡಿಕೆ. ಮುಳ್ಳಿನಿಂದ ಕೂಡಿದ ಎಲೆಗಳಿರುವುದರಿಂದ ದನಗಳಿಂದ ರಕ್ಷಣೆಗೆ, ಕಳ್ಳಕಾಕರ ನಿಯಂತ್ರಣಕ್ಕೆ ಹಿಂಗಾರಿ ಬೆಳೆಗಳ ಸುತ್ತಲ ಬದುಗಳಲ್ಲಿಯೂ ಕುಸುಬಿ ಬೆಳೆಯಲಾಗುತ್ತಿದೆ.

ಔಷಧಿಯ ಆಗರ
`ಕ್ಯಾರ್ಥಮಸ್ ಟಿಂಕ್ಟೋರಿಯಸ್' ವೈಜ್ಞಾನಿಕ ಹೆಸರಿನ ಕುಸುಬೆ ಔಷಧಿಯ ಆಗರವೇ ಆಗಿದೆ. ಒಣಗಿದ ಕುಸುಬೆ ಕುಸುಮಗಳನ್ನು ಪುಡಿ ಮಾಡಿ ಕುದಿಯುವ ನೀರಿಗೆ ಸೇರಿಸಿ ಕಷಾಯ ಮಾಡಿಕೊಂಡು ಕುಡಿಯಬೇಕು.

ನೆಗಡಿ, ಋತುಸ್ರಾವದ ಸಮಯದ ಹೊಟ್ಟೆನೋವು, ಸಂಧಿ ವಾತ, ಆಮವಾತಕ್ಕೆ ಇದು ರಾಮಬಾಣ ಎನ್ನುತ್ತಾರೆ ಹಾವೇರಿಯ ಆಯುರ್ವೇದ ತಜ್ಞೆ ಡಾ. ಅಶ್ವಿನಿ ವಸ್ತ್ರದ. ಮಲಬದ್ಧತೆಯಿಂದ ನರಳುವವರೂ ಈ ಪಾನೀಯ ಸೇವಿಸಿದರೆ ಬೇಧಿ ವಾಸಿಯಾಗುತ್ತದೆ, ದೇಹದ ಬಲವರ್ಧನೆಯೂ ಆಗುತ್ತದೆ ಎನ್ನುತ್ತಾರೆ. ಹೂವು, ಕಾಂಡ, ಎಲೆ, ಬೀಜ, ಬೇರು, ತೊಗಟೆ, ಬೊಗಟೆ ಹೀಗೆ ಕುಸುಬೆಯ ಒಂದೊಂದು ಕಣವೂ ಔಷಧಮಯವೇ. ಇವುಗಳಿಂದ ಸಂಸ್ಕರಿಸಿದ ತೈಲದಿಂದ ಮಸಾಜ್ ಮಾಡಿಕೊಂಡರೆ ವಿವಿಧ ರೀತಿಯ ನೋವು, ಆಮವಾತ, ಮೈ ತುರಿಕೆ, ಹಳೆಯ ಗಾಯಗಳೆಲ್ಲ ಹೊರಟು ಹೋಗುತ್ತವೆ.

ಕುಸುಬೆಯ ಎಳೆಯ ಎಲೆಗಳನ್ನು ಹಸಿ ತರಕಾರಿಯಾಗಿಯೂ ಪಚಡಿಯಾಗಿಯೂ, ಬೇಳೆಯೊಂದಿಗೆ ಬೇಯಿಸಿ ಪಲ್ಯ ಮಾಡಿಕೊಂಡು ಊಟ ಮಾಡುವ ರೂಢಿ ಹಾವೇರಿ, ರಾಣಿಬೆನ್ನೂರ ಭಾಗದಲ್ಲಿ ಪ್ರಚಲಿತವಿದೆ. ಕುಸುಬೆ ಬೀಜವನ್ನು ನೆನೆಸಿ, ರುಬ್ಬಿ ಸೋಸಿ ತೆಗೆದ ಹಾಲನ್ನು ಹಾಕಿ ಮಾಡಿದ ಅಕ್ಕಿ ಹುಗ್ಗಿ ಈ ಭಾಗದ ಜನರಿಗೆ ಪ್ರತಿ ಹಬ್ಬದಲ್ಲಿ ಮಾಡುವ ಒಂದು ವಿಶೇಷ ಸಾಂಪ್ರದಾಯಿಕ ಭಕ್ಷ್ಯವಾಗಿದೆ. ಇದು ಬೆಲ್ಲ, ಸಕ್ಕರೆ ಬಳಸದ ಹುಗ್ಗಿಯಲ್ಲದ ಹುಗ್ಗಿ ಕೂಡ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT