ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು `ದೂಡಾ' ನಿವೇಶನ ವಾಪಸ್

ಸೈಟು ಹಿಂದಿರುಗಿಸಿದ ಪ್ರಭಾವಿಗಳು, ರಾಜಕಾರಣಿಗಳು, ಪತ್ರಕರ್ತರು
Last Updated 21 ಡಿಸೆಂಬರ್ 2012, 9:25 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜೆ.ಎಚ್. ಪಟೇಲ್ ಬಡಾವಣೆಯ ಮೊದಲ ಹಂತದಲ್ಲಿ ನಿವೇಶನ ಪಡೆದವರ ಪೈಕಿ ಪತ್ರಕರ್ತರು, ಪ್ರಭಾವಿಗಳ  ಸಹಿತ 8 ಮಂದಿ ತಾವು ಪಡೆದ ನಿವೇಶನವನ್ನು ಹಿಂದಿರುಗಿಸಿದ್ದಾರೆ.

ಮಾಧ್ಯಮಗಳು, ಕೆಲವು ಸಂಘಟನೆಗಳು ದೂಡಾದಿಂದ ಅಕ್ರಮವಾಗಿ, ಬೇನಾಮಿ ಹೆಸರಿನಲ್ಲಿ ನಿವೇಶನ ಪಡೆದ ಬಗ್ಗೆ ಬಹಿರಂಗ ಆರೋಪ ಮಾಡಿರುವುದು, ಚುನಾವಣೆ ಸಮೀಪಿಸುತ್ತಿರುವುದೂ ನಿವೇಶನ ವಾಪಸ್ ನೀಡಲು ಕಾರಣ ಎಂದು `ದೂಡಾ' ಮೂಲಗಳು ತಿಳಿಸಿವೆ.

ಕಳೆದ ವರ್ಷ `ದೂಡಾ' ವತಿಯಿಂದ 507 ನಿವೇಶನಗಳನ್ನು ಹಂಚಲಾಗಿತ್ತು, ಅದರಲ್ಲಿ, ಪತ್ನಿ, ಮಕ್ಕಳು ಹಾಗೂ ಬಂಧುಗಳ ಹೆಸರಿನಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರೂ ಇದ್ದರು. ಈ ರೀತಿ ಪ್ರಭಾವ ಬಳಸಿಕೊಂಡು ನಿವೇಶನ ಪಡೆದವರಲ್ಲಿ ಪ್ರಭಾವಿ ರಾಜಕಾರಣಿಗಳು, ಕೆಲವು ಪಕ್ಷದ ಕಾರ್ಯಕರ್ತರು, ಪಾಲಿಕೆ ಸದಸ್ಯರು ಸೇರಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ದೂಡಾ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

25ಕ್ಕೂ ಹೆಚ್ಚು ನಿವೇಶನ ವಾಪಸ್?
ಆದರೆ, ಅಕ್ರಮ ನಿವೇಶನದ ಬಗ್ಗೆ ಹೋರಾಟ ನಡೆಸುತ್ತಿರುವ ಶ್ರೀರಾಮಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಣಿಕಂಠ ಹೇಳುವಂತೆ, ದೂಡಾಕ್ಕೆ ಸುಮಾರು 25 ಮಂದಿ ನಿವೇಶನ ವಾಪಸ್ ಮಾಡುವುದಾಗಿ ಅರ್ಜಿ ಸಲ್ಲಿಸಿದ್ದಾರೆ.

ಕೆಲವರು ಕಟ್ಟಿದ ಹಣವೂ ಬೇಡ ನಿವೇಶನವೂ ಬೇಡ ಎನ್ನುತ್ತಿದ್ದಾರೆ. ವಾಪಸ್ ಮಾಡಿರುವವರು ತಮ್ಮ ತಪ್ಪಿನ ಅರಿವು, ಕಾನೂನು ಕ್ರಮಕ್ಕೆ ಹೆದರಿ ನಿರ್ಧಾರ ಕೈಗೊಂಡಿದ್ದಾರೆ. ನಿವೇಶನ ವಾಪಸ್ ಮಾಡಿದ ಮಾತ್ರಕ್ಕೆ ಅವರು ನಿರಪರಾಧಿಗಳಾಗುವುದಿಲ್ಲ. ಅವರಿಗೆ ಕಾನೂನು ಕ್ರಮ ಜರುಗುವ ತನಕ ಹೋರಾಡುವುದಾಗಿ ತಿಳಿಸಿದರು.

ಯಾಕೆ ವಾಪಸ್?
ಬಹುತೇಕರು ಮುಂದಿನ ಬಾರಿ ಪಾಲಿಕೆ, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು. ಚುನಾವಣಾ ಆಯೋಗಕ್ಕೆ ಆಸ್ತಿ ದಾಖಲೆ ಸಲ್ಲಿಸುವಾಗ ಈ ರೀತಿ ಬೇನಾಮಿ ಹೆಸರಿನ ನಿವೇಶನಗಳಿದ್ದರೆ ಕಾನೂನು ತೊಡಕುಂಟಾಗಬಹುದು ಎಂಬ ಆತಂಕ ಮನೆ ಮಾಡಿದೆ. ಇನ್ನು ಕೆಲವರು ಸಮಾಜದಲ್ಲಿ ಗಣ್ಯ ಸ್ಥಾನಮಾನ ಹೊಂದಿದ್ದು, ಮಾಧ್ಯಮಗಳಲ್ಲಿ ಅವರ ಹೆಸರು ಕಾಣಿಸಿಕೊಳ್ಳುವುದನ್ನು ಬಯಸದವರು, ಆರೋಪಗಳಿಂದ ಬೇಸತ್ತು ನಿವೇಶನ ಹಿಂದಿರುಗಿಸಿದ್ದಾರೆ.

ಕಾಯ್ದೆ ತಿದ್ದುಪಡಿಗೆ ಪ್ರಸ್ತಾವ
ಮುಂದೆ `ದೂಡಾ' ನಿವೇಶನಕ್ಕೆ ಅರ್ಜಿ ಸಲ್ಲಿಸಬೇಕಾದರೆ ದೇಶದ ಯಾವುದೇ ಭಾಗದಲ್ಲಿಯೂ ಯಾವುದೇ (ಸ್ವಂತ, ಖಾಸಗಿ) ನಿವೇಶನ, ಜಮೀನು, ಮನೆ ಹೊಂದಿರಲೇಬಾರದು. ಹೊಂದಿದ್ದಲ್ಲಿ ಅಂಥವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ನೀಡಬಾರದು ಎಂದು ನಿಯಮದಲ್ಲಿ ತಿದ್ದುಪಡಿ ತರಲು ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

  ಇದೇ ಬೇಡಿಕೆ ಕೋರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೂ ಪ್ರಸ್ತಾವ ಸಲ್ಲಿಸಿದೆ. ಕ್ಯಾಬಿನೆಟ್‌ನಲ್ಲಿ ಮಂಡನೆಯಾದ ಬಳಿಕ ಒಪ್ಪಿಗೆ ದೊರೆತಲ್ಲಿ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಬಹುದು ಎಂದು ದೂಡಾ ಆಯುಕ್ತ ಜಯಪ್ರಕಾಶ್ ತಿಳಿಸಿದರು.

2ನೇ ಹಂತ: 2,248 ಅರ್ಜಿ
ಜೆ.ಎಚ್. ಪಟೇಲ್ ಬಡಾವಣೆಯ ಎರಡನೇ ಹಂತದ 178 ನಿವೇಶನಗಳಿಗೆ 2,248 ಅರ್ಜಿಗಳು ಬಂದಿವೆ. ಆ ಬಡಾವಣೆಯಲ್ಲಿ ಸ್ಮೃತಿ ಕನ್ಸಲ್ಟೆಂಟ್ ಕಂಪೆನಿಯು ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಗುತ್ತಿಗೆ ಪಡೆದಿದ್ದು ಕಾಮಗಾರಿ ಆರಂಭಿಸಿದೆ. ಅದರ ಬಳಿಕ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಮುಖ್ಯಾಂಶಗಳು
ನಿಯಮ ಬಿಗಿಗೊಳಿಸಲು ಪ್ರಸ್ತಾವ
8 ನಿವೇಶನ ವಾಪಸ್
ವಾಪಸಾತಿ ಹೆಚ್ಚಳ ಸಾಧ್ಯತೆ
ಚುನಾವಣೆ ಹಿನ್ನೆಲೆ
2ನೇ ಹಂತಕ್ಕೆ 2,248 ಅರ್ಜಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT