ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ವಿಚಿತ್ರಗಳ ನಡುವೆ ಬದಲಾದ ರಾಜಕೀಯ ಚಿತ್ರ

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ಬೆಳಗಾವಿಯಿಂದ ಹತ್ತು ಕಿ.ಮೀ. ದೂರದಲ್ಲಿ, ಹಲಗಾ ದಿಣ್ಣೆಯ ಮೇಲೆ ಶೋಭಿಸುತ್ತಿರುವ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲದ ಚೊಚ್ಚಲ ಅಧಿವೇಶನ ಯಾವ ಗಂಭೀರ ಸಮಸ್ಯೆಗೂ ತೀವ್ರವಾಗಿ ಸ್ಪಂದಿಸಲಿಲ್ಲ. ನಿಷ್ಠುರ ನಡೆಗೂ ಸಾಕ್ಷಿ ಆಗಲಿಲ್ಲ. ಚುನಾವಣಾ ರಾಜಕೀಯದ ಲಾಭ-ನಷ್ಟಗಳ ಲೆಕ್ಕಾಚಾರವೇ ಕಲಾಪದ ತೆರೆಮರೆಯ ಸೂತ್ರಧಾರನಂತೆ ಕೆಲಸ ಮಾಡಿತು.  

ಮೊದಲು, ಅಧಿವೇಶನ ಸೇರುವುದರ ಕುರಿತೇ ಅನುಮಾನಗಳು ವ್ಯಕ್ತವಾಗಿದ್ದವು. ಸೇರಿದ ಮೇಲೆ ಕಲಾಪ ನಡೆಯುವುದರ ಬಗೆಗೆ ಶಂಕೆ ಉಂಟಾಯಿತು. ಈ ಶಂಕೆ ನಿವಾರಣೆ ಆಗುವ ಮೊದಲೇ ಚಳಿಗಾಲದ ಅಧಿವೇಶನದ ಅವಧಿ (ಡಿ. 5ರಿಂದ 13) ಮುಗಿಯಿತು.
ಹೊಸಿಲಲ್ಲಿ ನಿಂತಿರುವ ವಿಧಾನಸಭೆ ಚುನಾವಣೆ, ಕಲಾಪದ ಆಗು-ಹೋಗುಗಳನ್ನು ದೂರದಿಂದಲೇ ನಿಯಂತ್ರಿಸುತ್ತಿತ್ತು. ಆಡಳಿತ ಮತ್ತು ವಿರೋಧ ಪಕ್ಷಗಳ ನಡೆಯನ್ನು ಅದು ತನ್ನ ತೆಕ್ಕೆಗೆ ತೆಗೆದುಕೊಂಡಂತೆ ಭಾಸವಾಯಿತು. ಸದಸ್ಯರನ್ನು ಚುನಾವಣೆಯ ಗುಂಗು ಆವರಿಸಿತ್ತು. ಮೊಗಸಾಲೆಯಲ್ಲಿ ಅವಕಾಶ ದೊರೆತಾಗೆಲ್ಲ ಅದು ವ್ಯಕ್ತವಾಗುತ್ತಲೇ ಇತ್ತು.

ಅಂತಃಕಲಹದ ಬೇಗುದಿಗೆ ಸಿಲುಕಿರುವ ಆಡಳಿತಾರೂಢ ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಮಗ್ಗುಲು ಮುಳ್ಳಾಗಿ ಪರಿಣಮಿಸಿತು. ಅಧಿವೇಶನದ ಅವಧಿಯುದ್ದಕ್ಕೂ ಅದು ಚುಚ್ಚುತ್ತಲೇ ಇತ್ತು. ಕೆಜೆಪಿ ಹಾವೇರಿಯಲ್ಲಿ ಆಯೋಜಿಸಿದ್ದ ಸಮಾವೇಶ, ಅಧಿವೇಶನ ಅವಧಿಯ ಮೊದಲ ಮೂರು ದಿನ ಚರ್ಚೆಯ ಕೇಂದ್ರವಾಗಿತ್ತು.

ಆಡಳಿತ ಪಕ್ಷದ ಎಚ್ಚರಿಕೆಯನ್ನು ಧಿಕ್ಕರಿಸಿ ವಿಧಾನಸಭೆಯ 14 ಮಂದಿ ಸದಸ್ಯರು ಕೆಜೆಪಿ ಸಮಾವೇಶದ ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಂಡ ಕಾರಣ ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರದ ನಾಡಿಬಡಿತದಲ್ಲಿ ಏರುಪೇರು ಉಂಟಾಯಿತು. ಆದರೆ, ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ವಿರೋಧ ಪಕ್ಷಗಳೇ ತಯಾರು ಇರಲಿಲ್ಲ. ಈ ಕುರಿತು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದು ಬಿಟ್ಟರೆ, ಸರ್ಕಾರದ ಮೂಗು ಹಿಡಿಯುವ ಕೆಲಸಕ್ಕೆ ಹೋಗಲಿಲ್ಲ. ಹೀಗಾಗಿ ಎದುರಾಗಿದ್ದ ಗಂಡಾಂತರದಿಂದ ಸರ್ಕಾರ ಸುಲಭವಾಗಿ ಪಾರಾಯಿತು. ಸರ್ಕಾರವನ್ನು ಉರುಳಿಸುವ ಯತ್ನಕ್ಕೆ ಕೈಹಾಕಿದರೆ ಚುನಾವಣೆಯಲ್ಲಿ ತಮಗೇ ತಿರುಗುಬಾಣ ಆದೀತು ಎಂಬ ಅಳುಕು ವಿರೋಧ ಪಕ್ಷಗಳಿಗೆ ಇತ್ತೆ?

ಬಿಜೆಪಿ ಒಳಜಗಳ ಮೊಗಸಾಲೆಯಲ್ಲಿ ನಿತ್ಯ ಪ್ರತಿಧ್ವನಿಸುತ್ತಿತ್ತು. ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಭಿನ್ನಮತೀಯರಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ಮೊಗಸಾಲೆಯನ್ನೇ ಬಳಸಿಕೊಂಡರು. ಕೆಜೆಪಿ ಬಣದ ವಕ್ತಾರಿಕೆಯನ್ನು ವಹಿಸಿಕೊಂಡಂತೆ ಶಾಸಕ ನೆಹರೂ ಓಲೇಕಾರ ಅವರು ಇವರಿಬ್ಬರಿಗೂ ಉತ್ತರಿಸುತ್ತಿದ್ದರು.

ಸದನದ ಸದಸ್ಯರಲ್ಲದ ಯಡಿಯೂರಪ್ಪ, ಸೆಂಟ್ರಲ್ ಹಾಲ್ ಮಧ್ಯೆ ಕುಳಿತು ಅಕ್ಕಪಕ್ಕದಲ್ಲಿರುವ ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರನ್ನು ತಮ್ಮತ್ತ ಸೆಳೆದುಕೊಂಡು, `ಈ ಸೌಧ ನನ್ನ ಕೊಡುಗೆ' ಎಂದು ಆಡಳಿತ ಪಕ್ಷವನ್ನು ಅಣಕಿಸಿದ್ದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು.  

ಅಧಿವೇಶನ ಬುಧವಾರ ಆರಂಭವಾಯಿತು. ಅದೇ ದಿನ, ತಮಿಳುನಾಡಿಗೆ ತಾತ್ಕಾಲಿಕವಾಗಿ ನಿತ್ಯ 10 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತು. ಇದು ಸಹಜವಾಗಿಯೇ ಸದನದಲ್ಲಿ ಪ್ರಸ್ತಾಪ ಆಯಿತು. ನೀರು ಬಿಡುವ ಅಥವಾ ಬಿಡದಿರುವ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಹೊರಹಾಕಲಿಲ್ಲ.

ಸರ್ಕಾರದ ನಿಲುವು ವಿರೋಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಧರಣಿ ನಡೆಸಿದರು. ಏಳು ದಿನಗಳ ಅಧಿವೇಶನದಲ್ಲಿ ಎರಡು ದಿನಗಳ ಕಲಾಪ ಇದಕ್ಕೆ ಬಲಿಯಾಯಿತು. ಆದರೆ, ಪರಿಹಾರೋಪಾಯಗಳ ಬಗ್ಗೆ ಒಂದಿಬ್ಬರು ಶಾಸಕರು ಅನುಷ್ಠಾನಯೋಗ್ಯ ಸಲಹೆ ನೀಡಿದ್ದು ಬಿಟ್ಟರೆ, ಈ ನಿಟ್ಟಿನಲ್ಲಿ ಬೇರೆ ಯಾರೂ ಬೆಳಕು ಬೀರಲಿಲ್ಲ.

ಸಂಕಷ್ಟ ಸ್ಥಿತಿಯಲ್ಲಿ ಬಳಸಿಕೊಳ್ಳಲು ಅನುವಾಗುವಂತೆ ಕರ್ನಾಟಕ ಮತ್ತು ತಮಿಳುನಾಡು ಕೂಡಿ ಪ್ರತ್ಯೇಕ ಅಣೆಕಟ್ಟು ನಿರ್ಮಿಸಬೇಕು ಎಂದು ಶ್ರವಣಬೆಳಗೊಳ ಶಾಸಕ ಸಿ.ಎಸ್.ಪುಟ್ಟೇಗೌಡ ಸಲಹೆ ಮಾಡಿದರು. ಪಕ್ಷಗಳ ನಿಲುವು ಕೂಡ ರಾಜಕೀಯ ಲಾಭ-ನಷ್ಟದ ವರ್ತುಲದಲ್ಲೇ ಒದ್ದಾಡಿತು. ಕೋರ್ಟ್ ಆದೇಶ ಉಲ್ಲಂಘಿಸಲು ಆಗದು ಎಂದು ಮೊಗಸಾಲೆಯಲ್ಲಿ ಅಭಿಪ್ರಾಯಪಟ್ಟವರೇ, ಸದನದ ಒಳಗೆ `ಯಾವುದೇ ಕಾರಣಕ್ಕೂ ನೀರು ಬಿಡಬಾರದು' ಎಂದು ಅಬ್ಬರಿಸಿದರು! ಬೆಳೆ ಪದ್ಧತಿ ಬದಲಿಸುವುದು ಅನಿವಾರ್ಯ ಎಂಬ ಮಾತುಗಳೂ ಮೊಗಸಾಲೆ ಬಿಟ್ಟು ಒಳಗೆ ಹೋಗಲಿಲ್ಲ.

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 1892ರಿಂದ ಇಲ್ಲಿಯವರೆಗೆ ಆಗಿರುವ ಬೆಳವಣಿಗೆಗಳನ್ನು ಒಳಗೊಂಡ ವಿವರವಾದ ಹೇಳಿಕೆಯನ್ನು ಮುಖ್ಯಮಂತ್ರಿ ನೀಡಿದರು. ರಾಜ್ಯದ ರೈತರಿಗೆ ಮಾರಕವಾದ 1924ರ ಒಪ್ಪಂದವನ್ನು ಪ್ರಶ್ನಿಸಲು ಮತ್ತು ರದ್ದುಗೊಳಿಸಲು ಇದ್ದ ಅವಕಾಶಗಳನ್ನು ರಾಜ್ಯ ಕಳೆದುಕೊಂಡಿದೆ ಎಂದು ತಣ್ಣನೆಯ ಸ್ವರದಲ್ಲಿ ಹಿಂದಿನ ಸರ್ಕಾರಗಳತ್ತ ಬೆಟ್ಟು ಮಾಡಿದರು. ಆದರೆ, `ಮುಂದೇನು' ಎಂಬ ಪ್ರಶ್ನೆಗೆ, ನಿಯೋಗ, ಮನವರಿಕೆಗಳ ಹೊರತಾಗಿ ಖಚಿತವಾದ ಯಾವ ಸೂತ್ರವೂ ಸರ್ಕಾರದ ಕಡೆಯಿಂದ ಬರಲಿಲ್ಲ.

ಕೃಷ್ಣಾ ಕಣಿವೆಯ ನೀರಾವರಿ ಯೋಜನೆಗಳ ಕುರಿತು ಒಂದಷ್ಟು ಚರ್ಚೆ ನಡೆಯಿತು ಎಂಬುದು ಸಮಾಧಾನದ ಸಂಗತಿ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವುದಾಗಿ ಮತ್ತು ಅದಕ್ಕೆ ಬೇಕಾಗಿರುವ ಅನುದಾನವನ್ನು ಕಾಲಕಾಲಕ್ಕೆ ಒದಗಿಸುವುದಾಗಿ ಸರ್ಕಾರ ಪ್ರಕಟಿಸಿ, ಉತ್ತರ ಕರ್ನಾಟಕ ಭಾಗದ ರೈತರ ಆಶಾಕಿರಣವನ್ನು ಜೀವಂತವಾಗಿರಿಸಿತು. ಕಬ್ಬು ಬೆಳೆಗಾರರ ಸಮಸ್ಯೆಯೂ ಸದನದಲ್ಲಿ ಪ್ರಸ್ತಾಪವಾಯಿತು. ಹಲವು ರಾಜ್ಯಗಳಲ್ಲಿ ಜಾರಿ ಆಗಿರುವ ರಾಜ್ಯ ಸಲಹಾ ಬೆಲೆ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸಲು ಸಿದ್ಧತೆ ನಡೆದಿದೆ ಎಂದು ಸರ್ಕಾರ ಹೇಳಿತಾದರೂ ಅದು ಕೈಗೂಡಲಿಲ್ಲ.

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವ ಮಸೂದೆಗೆ ಸಂಬಂಧಿಸಿದ ಚರ್ಚೆ-ಉತ್ತರಗಳು ಮೇಲ್ಮಟ್ಟದಲ್ಲೇ ತೇಲಿಹೋದವು. ಚುನಾಯಿತ ಸರ್ಕಾರದ ಅಧಿಕಾರ ಮೊಟಕು ಮಾಡುವಂತಹ ನಿಯಮಗಳನ್ನು ಬದಲಿಸುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದ ರಾಜ್ಯ ಸರ್ಕಾರ, ಆ ಭಾಗದ ಜನರು ಮತ್ತು ಮುಖಂಡರ ಒತ್ತಡಕ್ಕೆ ಸಿಲುಕಿ ನಿಲುವು ಬದಲಿಸಿತು.

ಚುನಾಯಿತ ಸರ್ಕಾರದ ಅಧಿಕಾರ ಮೊಟಕು ಮಾಡುವುದರಿಂದ ಆಗುವ ಸಾಧಕ-ಬಾಧಕ ಮತ್ತು ತೆಲಂಗಾಣ, ವಿದರ್ಭ ಮಾದರಿಗಳನ್ನು ಒರೆಗೆ ಹಚ್ಚುವ ಸಣ್ಣ ಪ್ರಯತ್ನ ಕೂಡ ಆಗಲಿಲ್ಲ. `ಸಂಸತ್ತಿನ ಇದೇ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗಲಿ' ಎಂದು ಸದನದ ಹೊರಗೆ ಮೊಳಗಿದ ಜನಪ್ರಿಯ ಘೋಷಣೆಯೇ ಸದನದ ಒಳಗೂ ಕೇಳಿಸಿತು.ರಾಮನಗರ ಜಿಲ್ಲೆಯ ವಿವಿಧೆಡೆ ಲೋಕೋಪಯೋಗಿ ಕಾಮಗಾರಿಗಳ ಗುತ್ತಿಗೆ ನೀಡುವಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ವಾಗ್ದಾಳಿ ನಡೆಸಿ ಸರ್ಕಾರವನ್ನು ಪೇಚಿಗೆ ಸಿಲುಕಿಸಿದರು. `ರೂ 500 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಕಾನೂನು ಉಲ್ಲಂಘಿಸಿ ಮೂವರು ಗುತ್ತಿಗೆದಾರರಿಗೆ ನೀಡಲಾಗಿದೆ. ಇಲಾಖೆಯಲ್ಲಿ ಯಾರಿಗೆ, ಯಾರ ಮೂಲಕ ಲಂಚ ನೀಡಲಾಗಿದೆ ಎಂಬ ಸಾಕ್ಷ್ಯವನ್ನೂ ನಾನೇ ಹೇಳಿಸುತ್ತೇನೆ' ಎಂದು ಸವಾಲು ಎಸೆದರು. ಅವರ ಮಾತಿಗೆ ಮಣಿದ ಸರ್ಕಾರ, ಅಕ್ರಮಗಳ ಕುರಿತು ತನಿಖೆ ನಡೆಸಲು ಸದನ ಸಮಿತಿ ರಚಿಸುವುದಾಗಿ ಪ್ರಕಟಿಸಿತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) 24,075 ಕೋಟಿ ರೂಪಾಯಿ ಮೊತ್ತದ ಆಸ್ತಿ ಅತಿಕ್ರಮಣ ಮತ್ತು ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡಿರುವ ಗಣಿಗಾರಿಕೆಯ ಅಕ್ರಮಗಳ ಬಗ್ಗೆ ಮಂಡನೆಯಾದ ಮಹಾಲೇಖಪಾಲರ (ಸಿಎಜಿ) ವರದಿಗಳು ಚರ್ಚೆಗೇ ಒಳಗಾಗಲಿಲ್ಲ. ಗೋವಧೆ ನಿಷೇಧ ಮಸೂದೆ ಮಂಡಿಸಲು ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ಅವಕಾಶವನ್ನೇ ನೀಡಿರಲಿಲ್ಲ. ವಿಪರ್ಯಾಸ ಎಂದರೆ ಅಂತಿಮವಾಗಿ ಆ ಮಸೂದೆ ಚರ್ಚೆ ಇಲ್ಲದೆಯೇ ಅಂಗೀಕಾರ ಪಡೆಯಿತು.

ಕೃಷ್ಣಾ ನದಿ ನೀರಿನ ಬಳಕೆ ಕುರಿತು ಚರ್ಚೆ ಪೂರ್ಣಗೊಂಡಿಲ್ಲ. ಸಿಎಜಿ ವರದಿ ಕುರಿತೂ ಚರ್ಚೆ ನಡೆಯಬೇಕು. ಈ ಹಿನ್ನೆಲೆಯಲ್ಲಿ ಅಧಿವೇಶನದ ಅವಧಿಯನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಬೇಕು ಎಂಬ ಬೇಡಿಕೆಯನ್ನು ಪ್ರತಿಪಕ್ಷಗಳು ಸರ್ಕಾರದ ಮುಂದೆ ಇಟ್ಟಿದ್ದವು. ಈ ಬೇಡಿಕೆಗೆ ಸರ್ಕಾರ ಒಪ್ಪದೇ ಇದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಕಲಾಪವನ್ನು ಬಹಿಷ್ಕರಿಸಿದರು.

ವಿಚಿತ್ರ ಎಂದರೆ ಬೇಡಿಕೆ ಮಂಡನೆಗೆ ಮೊದಲೇ ಪ್ರತಿಪಕ್ಷಗಳ ನಾಯಕರು, ಶಾಸಕರು ಬಸ್ಸು, ರೈಲು ಮತ್ತು ವಿಮಾನ ಪ್ರಯಾಣದ ಟಿಕೆಟ್‌ಗಳನ್ನು ಗುರುವಾರ ಸಂಜೆಗೆ ಕಾಯ್ದಿರಿಸಿದ್ದರು. ಅಂದರೆ, ಬೇಡಿಕೆ ಈಡೇರದು ಎಂಬುದು ಅವರಿಗೆ ಮೊದಲೇ ಗೊತ್ತಿತ್ತು ಎಂದಾಯಿತು, ಅಲ್ಲವೆ?! ಪ್ರತಿಪಕ್ಷಗಳ ಗೈರುಹಾಜರಿಯಲ್ಲಿ 19 ಮಸೂದೆಗಳಿಗೆ ವಿಧಾನಸಭೆ ಒಪ್ಪಿಗೆ ನೀಡಿತು.

ಈ ಪೈಕಿ ಒಂಬತ್ತು ಮಸೂದೆಗಳಿಗೆ ಬಿಜೆಪಿಯ ಹಲವು ಸದಸ್ಯರಿಂದಲೇ ವಿರೋಧ ವ್ಯಕ್ತವಾಯಿತು. ಆಡಳಿತ ಪಕ್ಷದ ಒಂದು ಗುಂಪೇ ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿತು. ಹೊಸದಾಗಿ 13 ಖಾಸಗಿ ವಿಶ್ವವಿದ್ಯಾಲಯಗಳ ಆರಂಭಕ್ಕೆ ಅನುವು ಮಾಡುವ ಮಸೂದೆಗಳಿಗೂ ಚರ್ಚೆ ಇಲ್ಲದೆ ಅಂಗೀಕಾರದ ಮುದ್ರೆ ಬಿತ್ತು. ಕಂದಾಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ನಿರ್ಮಿಸಿಕೊಂಡಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ಭೂ ಕಂದಾಯ ತಿದ್ದುಪಡಿ ಮಸೂದೆಯೂ ಸದನದ ಅಂಗೀಕಾರ ಪಡೆಯಿತು.

ಮೊದಲ ಅಧಿವೇಶನ. ಅರ್ಥಪೂರ್ಣ ಚರ್ಚೆ ಮೂಲಕ ಉತ್ತರ ಕರ್ನಾಟಕ ಜನತೆಗೆ ಹೊಸ ಸಂದೇಶ ರವಾನಿಸಬೇಕು ಎಂಬುದು ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ಆಶಯವಾಗಿತ್ತು. ಆದರೆ, ಸಭಾಧ್ಯಕ್ಷರ ಚಹಾ ಕೊಠಡಿಯೇ ಕೆಜೆಪಿಯ ಅನಧಿಕೃತ ಸಭೆಗೆ ಬಳಕೆ ಆಗುವ ಮೂಲಕ ಸುವರ್ಣ ವಿಧಾನಸೌಧ, ಮೊದಲ ಅಧಿವೇಶನದಲ್ಲೇ ಕೆಟ್ಟ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಈ ಸಭೆಗೆ ಯಡಿಯೂರಪ್ಪ ಬೆಂಬಲಿಗ ಸಚಿವರೇ ಶಾಸಕರನ್ನು ಒಟ್ಟುಗೂಡಿಸಿದರು. ಸಭೆ ಮುಗಿದ ಬಳಿಕ ಏನೂ ಆಗೇ ಇಲ್ಲ ಎಂಬಂತೆ ಸರ್ಕಾರದ ಪರವಾಗಿ ಸದನದಲ್ಲಿ ಹೇಳಿಕೆ ಓದಿದರು. ಸಚಿವರ ಇಂತಹ ದ್ವಿಪಾತ್ರ ಬೇರೆ ಎಲ್ಲೂ ಕಂಡಿರಲಿಕ್ಕೆ ಸಾಧ್ಯ ಇಲ್ಲ! ಅಧಿವೇಶನದ ಸ್ಥಳ ಬದಲಾದ ಕೂಡಲೇ ಚರ್ಚೆಯ ಗುಣಮಟ್ಟ ಬದಲಾಗುತ್ತದೆ ಎಂದು ನಿರೀಕ್ಷಿಸಲಾದೀತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT