ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ ಖಂಡನಾರ್ಹ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಭೂಷಣ್ ಮೇಲೆ ಸುಪ್ರೀಂ ಕೋರ್ಟ್ ಆವರಣದಲ್ಲಿನ ಅವರ ಕಚೇರಿಯಲ್ಲಿ ನಡೆದ ದೈಹಿಕ ಹಲ್ಲೆ ಅಮಾನವೀಯ ಕೃತ್ಯ. ಇದಕ್ಕೆ ಕಾರಣರಾದವರು `ಶ್ರೀರಾಮಸೇನೆ~ ಇಲ್ಲವೇ `ಭಗತ್‌ಸಿಂಗ್ ಕ್ರಾಂತಿ ಸೇನೆ~ ಯಾವುದಕ್ಕಾದರೂ ಸೇರಿದವರಿರಲಿ, ಕಾನೂನನ್ನು ಕೈಗೆತ್ತಿಕೊಂಡಿರುವುದು ಖಂಡನಾರ್ಹ. ತಮ್ಮ ಕಚೇರಿಯಲ್ಲಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದ ಪ್ರಶಾಂತ್ ಭೂಷಣ್ ಅವರತ್ತ ನುಗ್ಗಿದ ದುಷ್ಕರ್ಮಿಗಳು ಮನಬಂದಂತೆ ಹಲ್ಲೆ ನಡೆಸಿದ್ದನ್ನು ಅದೇ ಸುದ್ದಿವಾಹಿನಿ ಸೆರೆ ಹಿಡಿದು ಪ್ರಸಾರ ಮಾಡಿದ್ದರಿಂದ ಪ್ರಕರಣ ಬಯಲಿಗೆ ಬರುವಂತಾಯಿತು. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರೂ ಆಗಿರುವ ಭೂಷಣ್ ಅವರ ಮೇಲೆ ನಡೆದ ಈ ಹಲ್ಲೆಯಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ದುಷ್ಕರ್ಮಿಗಳ ವಿರುದ್ಧ ತಕ್ಷಣವೇ ಕ್ರಮ ಆರಂಭಿಸಿದೆ. ಹಲ್ಲೆ ನಡೆಸಿದ ಮೂವರು ಈಗಾಗಲೇ ದೆಹಲಿ ಪೊಲೀಸರಿಗೆ ಸಿಕ್ಕಿದ್ದಾರೆ. ಕಾನೂನು ಪ್ರಕಾರ ಅವರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆ ಕೊಡಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಘಟನೆಗೆ ಸಂಬಂಧಿಸಿ ಕೇಂದ್ರ ಗೃಹಸಚಿವರು ತೀವ್ರವಾಗಿ ಪ್ರತಿಕ್ರಿಯೆ ನೀಡಿರುವುದರಿಂದ ಈ ಪ್ರಕರಣ ನ್ಯಾಯಬದ್ಧ ವಿಚಾರಣೆಗೆ ಒಳಗಾಗುವ ನಿರೀಕ್ಷೆ ಮೂಡಿಸಿದೆ. ಜನಲೋಕಪಾಲ ಮಸೂದೆಗೆ ಆಗ್ರಹಿಸಿ ಜನಾಂದೋಲನ ರೂಪಿಸುತ್ತಿರುವ ನಾಗರಿಕ ಸಮಿತಿಯ ಪ್ರಮುಖ ಸದಸ್ಯರೂ ಆಗಿರುವ ಪ್ರಶಾಂತ್ ಭೂಷಣ್, ಜನಮತ ಗಣನೆ ಕುರಿತಾಗಿ ನಡೆದ ಒಂದು ಚರ್ಚೆಯ ಸಂದರ್ಭದಲ್ಲಿ ಕಾಶ್ಮೀರದ ಜನತೆಯ ಹಕ್ಕನ್ನು ಸಮರ್ಥಿಸಿದ್ದು ಹಲ್ಲೆಗೆ ಕಾರಣವೆಂದು ಪ್ರಾರಂಭಿಕ ವರದಿಗಳು ತಿಳಿಸಿವೆ.

ಇದೇನೇ ಇರಲಿ, ನಾಗರಿಕ ಸಮಾಜದಲ್ಲಿ ಹಿಂಸೆಗೆ ಆಸ್ಪದವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಂವಿಧಾನ ನೀಡಿರುವ ಹಕ್ಕು. ಅದನ್ನು ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿ ಬಳಸಿಕೊಳ್ಳುವಾಗ ಸಾಮಾಜಿಕ ಕಾರ್ಯಕರ್ತರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕಾಗುತ್ತದೆ. ಆದರೂ ಭಿನ್ನಮತ ವ್ಯಕ್ತವಾದಾಗ ಅದನ್ನು ವಾದದ ನೆಲೆಯಲ್ಲಿ, ಇಲ್ಲವೇ ಕಾನೂನು ನೆಲೆಯಲ್ಲಿ ಎದುರಿಸಬೇಕೇ ಹೊರತು ಬಲಪ್ರಯೋಗದಿಂದ ಅಲ್ಲ. ದೈಹಿಕ ಹಿಂಸೆಯ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ನಡೆಸುವ ಯಾವುದೇ ಸಂಘಟನೆಯ ಪ್ರಯತ್ನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಾಶ್ಮೀರದ ಜನತೆ ಭಾರತದ ಜೊತೆ ತಮ್ಮ ಭವಿಷ್ಯವನ್ನು ಕಂಡುಕೊಂಡ ಸಂಗತಿ ಈಗಾಗಲೇ ನಡೆದ ಸಾರ್ವತ್ರಿಕ ಚುನಾವಣೆಗಳ ಮೂಲಕ  ಅಂತರರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟವಾಗಿದೆ. ಅದು ಭಾರತದ ಅವಿಭಾಜ್ಯ ಅಂಗವೆಂಬುದು ಇತ್ಯರ್ಥವಾಗಿರುವ ವಿಷಯ. ಆದರೂ ಈ ವಿಷಯದ ಕುರಿತಾಗಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಅಪರಾಧವಲ್ಲ. ಭೂಷಣ್ ಅವರ ಅಭಿಮತವನ್ನು ಒಪ್ಪಲಾಗದಿದ್ದರೆ ಅದನ್ನು ಕಾನೂನು ಪ್ರಕಾರ ಎದುರಿಸಬೇಕೇ ಹೊರತು ಬಲಪ್ರಯೋಗದಿಂದ ಅಲ್ಲ. ಸಾಮಾಜಿಕ ಕಾರ್ಯಕರ್ತರನ್ನು ದೈಹಿಕ ಹಿಂಸೆಯಿಂದ ಹಿಮ್ಮೆಟ್ಟಿಸಲು ನಡೆಯುವ ಪ್ರಯತ್ನಗಳಿಗೆ ಕಾನೂನು ಪ್ರಕಾರ  ಕಠಿಣ ಶಿಕ್ಷೆಯಾಗುವಂತೆ ಕೇಂದ್ರ ಸರ್ಕಾರ ನೋಡಿಕೊಂಡರೆ ಇಂಥ ದುಷ್ಟ ಪ್ರವೃತ್ತಿಗೆ ಕಡಿವಾಣ ಬೀಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT