ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಮನೆ ಅರಿವಿನ ಹರಿಕಾರ

Last Updated 21 ಜೂನ್ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರೊ.ಲಿಂಗದೇವರು ಹಳೆಮನೆ ಅವರು ಅಕ್ಷರ ವಂಚಿತ ಜನರನ್ನು ಬೆಳೆಸಬೇಕು ಎಂಬ ಕಾಳಜಿ ಹೊಂದಿದ್ದ ಅರಿವಿನ ಹರಿಕಾರ~ ಎಂದು ಪ್ರೊ. ಎಸ್.ಜಿ.ಸಿದ್ದರಾಮಯ್ಯ ಸ್ಮರಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಸಮುದಾಯ ಸಂಸ್ಥೆಯು ಸಂಯುಕ್ತವಾಗಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಲಿಂಗದೇವರು ಹಳೆಮನೆ ರಂಗನಮನ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಕೆಳ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ ಹಳೆಮನೆ ಪ್ರೌಢಶಾಲೆಯಲ್ಲಿದ್ದಾಗಲೇ ಸಹಪಂಕ್ತಿ ಭೋಜನಕ್ಕೆ ಬೆಂಬಲ ಕೊಡುತ್ತಿದ್ದರು. ಜಾತಿ ಸ್ಥಿರಗೊಳ್ಳುವ ಕಾರಣಕ್ಕಾಗಿ ಜಾತಿ ಆಧಾರಿತ ಜನಗಣತಿಯನ್ನು ಅವರು ವಿರೋಧಿಸುತ್ತಿದ್ದರು~ ಎಂದರು.

`ಗ್ರಾಮೀಣ ಪ್ರದೇಶದ ಎಲ್ಲ ಜನರಂತೆ ಇಂಗ್ಲಿಷ್ ಬಗ್ಗೆ ಕುತೂಹಲ ಇಟ್ಟುಕೊಂಡಿದ್ದ ಹಳೆಮನೆ ಬೆಳೆದ ರೀತಿ ಮಾತ್ರ ಅನನ್ಯವಾದುದು. ನೆಲದ ಸೊಗಡಿನೊಂದಿಗೆ ಕೃತಿಗಳನ್ನು ಅನುವಾದಿಸುವ ಶಕ್ತಿ ಅವರಲ್ಲಿತ್ತು. ಅಂಕಣಗಳನ್ನು ಬರೆಯುವಾಗ ಜಾಗತಿಕ ವಿದ್ಯಮಾನಗಳ ಬಗ್ಗೆ ಮಾತನಾಡುತ್ತಿದ್ದರೂ ಈ ನೆಲದ ಗುಣದ ಹಿನ್ನೆಲೆಯಲ್ಲಿಯೇ ಅವರ ವಿಚಾರ ಧಾರೆ ಹರಿಯುತ್ತಿತ್ತು~ ಎಂದರು.

`ನಕ್ಸಲರ ಬೆಂಬಲಿಗ ಎಂದು ಕೆಲವರು ದೂರಿದಾಗ ತಾನು ಮಾರ್ಕ್ಸ್‌ವಾದಿ ಹಿಂಸಾವಾದಿಯಲ್ಲ ಎಂದು ಹೇಳಿಕೊಂಡಿದ್ದರು. ಇದ್ದುದ್ದನ್ನು ಇದ್ದ ಹಾಗೆ ಹೇಳುವ ನೈತಿಕ ಶಕ್ತಿಯನ್ನು ಅವರು ಹೊಂದಿದ್ದರು~ ಎಂಬುದಾಗಿ ತಿಳಿಸಿದರು.

ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಮಾತನಾಡುತ್ತಾ, `ಮಾರ್ಕ್ಸ್‌ವಾದಿಗಳು ಅಧಿಕಾರ, ಅಂತಸ್ತಿನ ಆಮಿಷಕ್ಕೆ ಒಳಗಾಗಿ ತಮ್ಮನ್ನು ಮಾಜಿ ಮಾರ್ಕ್ಸ್‌ವಾದಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಳೆಮನೆ ಕೊನೆಯವರೆಗೆ ಅಪ್ಪಟ ಮಾರ್ಕ್ಸ್‌ವಾದಿಯಾಗಿ ಉಳಿದರು. ನಿರ್ಗಮನದ ಬಗ್ಗೆ ಚಿಂತಿಸಬಾರದು, ಸಾಯುವ ಕಾರಣಕ್ಕಾಗಿ ಯಾವುದೇ ಕೆಲಸಗಳನ್ನು ಹಮ್ಮಿಕೊಳ್ಳುವುದು ತಪ್ಪು ಎಂಬುದು ಅವರ ನಿಲುವಾಗಿತ್ತು~ ಎಂದು ಹೇಳಿದರು.

`ತಾನು ಪಡೆದ ಜ್ಞಾನವನ್ನು ಶಿಷ್ಯರೂ ಪಡೆಯಬೇಕು ಎಂಬ ಔದಾರ್ಯದ ಗುರು ಹಳೆಮನೆ. ತನಗಿಂತಲೂ ತನ್ನ ಶಿಷ್ಯ ಬೆಳೆದರೆ ಅಂತಹವರನ್ನು ಹುರಿದುಂಬಿಸುವ ಒಳ ಸೂಕ್ಷ್ಮತೆ ಅವರಿಗಿತ್ತು. ಪ್ರಾಧ್ಯಾಪಕ, ನಾಟಕಕಾರ ಎನ್ನುವುದಕ್ಕಿಂತ ಅವರೊಳಗೆ ಒಬ್ಬ ಅಪ್ಪಟ ಮನುಷ್ಯನಿದ್ದ. ಕನ್ನಡದ ವರ್ತಮಾನ ಮುಖಹೀನವಾಗುತ್ತಿರುವ ಸಂದರ್ಭದಲ್ಲಿ ಹಳೆಮನೆ ಅವರ ಸಾವು ಕನ್ನಡ ಜಗತ್ತಿನ ಸಾವಿನಂತೆ ಭಾಸವಾಗುತ್ತಿದೆ~ ಎಂದರು.

ರಂಗತಜ್ಞ ಎಚ್.ಎಸ್.ಉಮೇಶ್, `ಕೇವಲ ಭಾಷಾಶಾಸ್ತ್ರಜ್ಞರಾಗಿ, ರಂಗಕರ್ಮಿಯಾಗಿ ಮಾತ್ರ ಹಳೆಮನೆ ನೆನಪಾಗುವುದಿಲ್ಲ. ಸಾಕ್ಷರತಾ ಮಿಷನ್‌ನ ಸಲಹೆಗಾರರಾಗಿ ಅವರ ಪರಿಶ್ರಮ ದೊಡ್ಡದಾಗಿತ್ತು. ಆ ಕಾರಣಕ್ಕಾಗಿಯೇ ಹಳೆಮನೆ ಅವರನ್ನು ಸಾಕ್ಷರತಾ ಸ್ವಯಂ ಸೇವಕರು ಕೂಡ ಸ್ಮರಿಸುತ್ತಾರೆ~ ಎಂದು ತಿಳಿಸಿದರು.
`ಹಳೆಮನೆ ಶಿಕ್ಷಣ, ರಂಗಭೂಮಿ, ಭಾಷಾ ವಿಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರು ಗುರುತಿಸಿಕೊಂಡಿದ್ದರಿಂದ ಪಾರಿಭಾಷಿಕ ಕೋಶಗಳನ್ನು ರಚಿಸುವಾಗ ಅವರನ್ನು ಸಂಪನ್ಮೂಲ ವ್ಯಕ್ತಿಯಾಗಿ ಬಳಸಿಕೊಳ್ಳಲಾಗುತ್ತಿತ್ತು. ಅಪಾರವಾದ ಓದು ಹಾಗೂ ಜನರ ದೊಡ್ಡ ಬಳಗ ಅವರ ಶಕ್ತಿಯಾಗಿತ್ತು~ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, `ಕನ್ನಡದಂತೆ ತೆಲುಗಿಗೆ ಕೂಡ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆಯಬೇಕು ಎಂಬ ಕಾಳಜಿ ಹಳೆಮನೆ ಅವರಿಗೆ ಇತ್ತು. ಈ ಕಾರಣಕ್ಕಾಗಿ ಹೈದರಾಬಾದ್‌ಗೆ ತೆರಳಿ ತೆಲುಗು ಭಾಷಿಕರಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆಯುವ ಪ್ರಕ್ರಿಯೆ ಕುರಿತು ಮಾರ್ಗದರ್ಶನ ನೀಡಿದ್ದರು~ ಎಂದು ಹೇಳಿದರು.

`ಬೆಳಗಾವಿಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸುವುದರಲ್ಲಿ ಹಳೆಮನೆ ಕೂಡ ಒಬ್ಬರಾಗಿದ್ದರು. ಅವರ ಅಕಾಲಿಕ ಮರಣದಿಂದಾಗಿ ರಂಗಾಯಣದ ಅನೇಕ ಕಾರ್ಯಗಳು ಬಾಕಿ ಉಳಿದಿವೆ. ಹಳೆಮನೆ ಅವರ ವ್ಯಕ್ತಿತ್ವ ಬೇರೆ ಬೇರೆ ರೂಪದಲ್ಲಿ ಪ್ರತ್ಯಕ್ಷವಾಗಲಿ~ ಎಂಬ ಆಶಯ ವ್ಯಕ್ತಪಡಿಸಿದರು.
ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ, ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ, ರಂಗಕರ್ಮಿ ಪ್ರೊ. ಎಸ್.ಆರ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು. ಶಿವಾಜಿರಾವ್ ಜಾಧವ್ ಅವರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT