ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಹೊನ್ನು ಹರಾಜಿಗೆ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ರಾಜರಾಣಿಯರು ಧರಿಸುತ್ತಿದ್ದ ಆಭರಣಗಳು, ಚಿನ್ನ-ಬೆಳ್ಳಿಯ ಪೀಠೋಪಕರಣಗಳು, ಬಗೆಬಗೆಯ ಕರಕುಶಲ ವಸ್ತುಗಳು, ಹರಳು, ವಜ್ರಗಳಿಂದ ರೂಪಿತವಾದ ಆನೆ, ಚಿಟ್ಟೆ, ಮಯೂರ, ಹಾರ, ತಾಜಮಹಲ್.... ಹೀಗೆ ರಾಜ ವೈಭೋಗವೇ ಅಲ್ಲಿ ಮೆರೆಯುತ್ತಿತ್ತು. ಅವೆಲ್ಲವೂ ಮತ್ತೆಮತ್ತೆ ಕಣ್ತುಂಬಿಕೊಳ್ಳುವ ಆಸೆ ಬಿತ್ತುವಷ್ಟು ಆಕರ್ಷಕವಾಗಿದ್ದವು.

ಇವೆಲ್ಲ ಕಂಡದ್ದು ಯಾವುದೋ ವಸ್ತು ಸಂಗ್ರಹಾಲಯದಲ್ಲಲ್ಲ; ಉದ್ಯಾನನಗರಿಯ ಐಟಿಸಿ ವಿಂಡ್ಸರ್ ಮ್ಯಾನರ್ ಹೋಟೆಲ್‌ನಲ್ಲಿ. ಆ ಕಾಲದ ಆಭರಣಗಳು ಇಲ್ಲೇಕೆ ಎನ್ನಬೇಡಿ. ದೇಶದ ಮುಂಚೂಣಿ ಫೈನ್ ಆರ್ಟ್ ಹರಾಜು ಕಂಪೆನಿ `ಬಿಡ್ ಹ್ಯಾಮರ್~ ಈ ವಸ್ತುಗಳ ಹರಾಜು ನಡೆಸುತ್ತಿದೆ.

ಪಚ್ಚೆ ಹರಳು ಹಾರಗಳು, ಠಾಕೂರರು- ಜಮೀನ್ದಾರರು ಬಳಸುತ್ತಿದ್ದ ಆಭರಣಗಳು, ಅಂದಿನ ಕಾಲದ ಗೃಹೋಪಯೋಗಿ ವಸ್ತುಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿದ್ದವು.

ಕೃತಕ ಆಭರಣಗಳನ್ನು ಕೊಂಡು ಹೆಂಗಳೆಯರಿಗೆ ಬೇಸರವಾಗಿದ್ದರೆ ನಮ್ಮ ಪ್ರಾಚೀನ ಶ್ರೀಮಂತ ಆಭರಣಗಳತ್ತ ಒಮ್ಮೆ ಕಣ್ಣುಹಾಯಿಸಬಹುದು. ಇದುವರೆಗೂ ವಸ್ತು ಸಂಗ್ರಹಾಲಯದಲ್ಲಷ್ಟೇ ಇವುಗಳನ್ನು ನೋಡಿ ತೃಪ್ತಿ ಪಟ್ಟುಕೊಂಡು ಹೊರನಡೆಯುತ್ತಿದ್ದವರು ಕಂಡಾಪಟ್ಟೆ ಕಾಸು ಬಿಚ್ಚದರೆ ತಮ್ಮ ಮನೆ ತುಂಬಿಸಿಕೊಳ್ಳಬಹುದು.

ಯೂರೋಪಿಯನ್, ರಾಜಸ್ತಾನಿ, ಗುಜರಾತಿ ಮತ್ತು ದಕ್ಷಿಣ ಭಾರತೀಯ ಜ್ಯುವೆಲರಿಗಳು ಇಲ್ಲಿ ದೊರೆಯುತ್ತವೆ. ಅವುಗಳೆಲ್ಲಾ 1930ನೇ ಇಸವಿಯಲ್ಲಿ ತಯಾರಾದಂಥವು. `ನೆಕ್ ಟು ನೇವಲ್~ ಕಂಠೀಹಾರ, ಕರಕುಶಲತೆಯಿಂದ ಕೂಡಿದ `ಹನ್ಸಾಲಿ~ ಹರಾಜಿನ ಪ್ರಮುಖ ಆಕರ್ಷಣೆಗಳು. ವಜ್ರ, ಪಚ್ಚೆ, ಹರಳುಗಳು, ರೂಬಿ, ಜೆಮ್ ಸ್ಟೋನ್, ಚಿನ್ನಗಳಿಂದ ತಯಾರಿಸಲ್ಪಟ್ಟ ಆಭರಣಗಳು ಎಲ್ಲರ ಮನಸೆಳೆಯುತ್ತಿವೆ.

ದೇಶದಲ್ಲಿ ಮೊದಲ ಬಾರಿಗೆ `ಜ್ಯುವೆಲರಿ ಅಂಡ್ ಇಂಡಿಯನ್ ಸಿಲ್ವರ್ ಇನ್‌ಕ್ಲೂಡಿಂಗ್ ಫರ್ನಿಚರ್ ಅಂಡ್ ಕಲೆಕ್ಟಬಲ್ಸ್~ ಹೆಸರಿನಡಿ ಈ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಉದ್ಯಾನನಗರಿಯ ಜನತೆಗೆ ನೋಡುವ ಅವಕಾಶ ಲಭಿಸಿದೆ.

ಹರಾಜು ಪ್ರಕ್ರಿಯೆಗೂ ಮೊದಲು ಇಲ್ಲಿ ಆಭರಣಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕರ ವೀಕ್ಷಣೆಗೆ ಜನವರಿ 27 ಮತ್ತು 28ರಂದು ಕಂಪೆನಿಯ ಆವರಣದಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 7ರ ಸಮಯದಲ್ಲಿ ಅವಕಾಶವಿದೆ. ಇದೇ ಹೊಟೆಲ್‌ನಲ್ಲಿ ಜನವರಿ 30ರಂದು ಹರಾಜು ನಡೆಯಲಿದೆ.

`ಮಹಿಳೆಯರು, ಯುವತಿಯರು, ಆಭರಣ ಸಂಗ್ರಹಕಾರರಿಗೆ ಇದು ಉತ್ತಮ ಅವಕಾಶ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆಂಬ ವಿಶ್ವಾಸವಿದೆ. ಹರಾಜಿನಲ್ಲಿ ಭಾಗವಹಿಸುವವರು ಮೊದಲೇ ಹೆಸರನ್ನು ನೋಂದಾಯಿಸಿಕೊಳ್ಳಬೇಕು~ ಎನ್ನುತ್ತಾರೆ ಕಂಪೆನಿಯ ವ್ವಸ್ಥಾಪಕ ನಿರ್ದೇಶಕ ಬೆಹರ್ ದಾದಾ.

15 ಸಾವಿರದಿಂದ 75 ಲಕ್ಷ  ರೂಪಾಯಿ ಮೌಲ್ಯದ ಆಭರಣಗಳು ಇಲ್ಲಿ ಲಭ್ಯ. ದುಬಾರಿಯೆನಿಸಿದರೆ ನಮ್ಮ ಪ್ರಾಚೀನ ವೈಭೋಗದ ಐಸಿರಿಯನ್ನು ಒಮ್ಮೆ ಕಣ್ತುಂಬಿಕೊಂಡು ಬರಬಹುದು.

ಜಯನಗರದಲ್ಲಿರುವ ಬಿಡ್ ಅಂಡ್ ಹ್ಯಾಮರ್ ಲಿಮಿಟೆಡ್, 226, 39ನೇ `ಸಿ~ ಕ್ರಾಸ್, 8ನೇ ಮುಖ್ಯ ರಸ್ತೆ, 5ನೇ ಬ್ಲಾಕ್ ಇಲ್ಲಿ ಸಾರ್ವಜನಿಕರು ಆಭರಣಗಳ ಐಸಿರಿಯನ್ನು ಕಣ್ತುಂಬಿಕೊಳ್ಳಬಹುದು. ಮಾಹಿತಿಗಾಗಿ: 3202 9681/2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT