ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಜರಾತಿ ಕೊರತೆಯಿಂದ ಶಾಲೆ ಬಂದ್

Last Updated 9 ಸೆಪ್ಟೆಂಬರ್ 2011, 8:45 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಯಮಾಕಲಹಳ್ಳಿ ಗ್ರಾಮವು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ಗ್ರಾಮಸ್ಥರು ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.  ಗೌರಿಬಿದನೂರು-ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಸಮೀಪದಲ್ಲಿದ್ದರೂ ಗ್ರಾಮವು ಅಭಿವೃದ್ಧಿ ಕಂಡಿಲ್ಲ.

`ಗ್ರಾಮದ ಪ್ರವೇಶದ್ವಾರದ ಬಳಿಯಿರುವ ಹಲವು ತಿಂಗಳುಗಳಿಂದ ಶುಚಿಗೊಂಡಿಲ್ಲ. ಚರಂಡಿಯಲ್ಲಿ ಹುಲ್ಲು ಆಳೆತ್ತರಕ್ಕೆ ಬೆಳೆದಿದ್ದು, ಅವುಗಳನ್ನು ತೆರವುಗೊಳಿಸಲಾಗಿಲ್ಲ. ಬೀದಿ ದೀಪಗಳ ಸೌಲಭ್ಯವಿಲ್ಲದ ಕಾರಣ ರಾತ್ರಿ ವೇಳೆ ಇಲ್ಲಿ ನಡೆದಾಡಲು ಭಯವಾಗುತ್ತದೆ. ಗ್ರಾಮದಲ್ಲಿ ಸಮಸ್ಯೆಗಳು ಬೆಟ್ಟದಷ್ಟಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ~ ಎಂದು ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸುತ್ತಾರೆ.

`ಚರಂಡಿ ನಿಯಮಿತವಾಗಿ ಸ್ವಚ್ಛವಾಗದ ಕಾರಣ ಸೊಳ್ಳೆಗಳ ಕಾಟ ಹೆಚ್ಚಿದೆ. ರೋಗ-ರುಜಿನಗಳಿಗೂ ಕಾರಣವಾಗಿದೆ. ಸೊಳ್ಳೆಗಳ ಕಾಟದಿಂದ ಅನಾರೋಗ್ಯಕ್ಕೀಡಾಗುತ್ತಿರುವ ಗ್ರಾಮಸ್ಥರು ಗಳಿಸಿದ ಹಣವನ್ನೆಲ್ಲ ಚಿಕಿತ್ಸೆಗಾಗಿ ವ್ಯಯ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಆರೋಗ್ಯವಾಗಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತಿಲ್ಲ~ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆರ್.ವೆಂಕಟೇಶ್ `ಪ್ರಜಾವಾಣಿ~ಗೆ ತಿಳಿಸಿದರು.

`ರಾಯಮಾಕಲಹಳ್ಳಿ ಸಮೀಪ ಕೊಂಡೇನಹಳ್ಳಿ, ದ್ವಾರಗಾನಹಳ್ಳಿ ಎಂಬ ಗ್ರಾಮಗಳಿದ್ದು, ಅಲ್ಲಿಯೂ ಸಹ ಇದೇ ರೀತಿಯ ಸಮಸ್ಯೆಗಳಿವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿರುವ ಕಾರಣದಿಂದಲೇ ಗ್ರಾಮಗಳು ಇಂತಹ ಹದಗೆಟ್ಟ ಸ್ಥಿತಿಗೆ ತಲುಪಿವೆ~ ಎಂದು ಅವರು ಆರೋಪಿಸಿದರು.

`ಗ್ರಾಮದ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಬಹುತೇಕ ಗ್ರಾಮಸ್ಥರಿಗೆ ವಸತಿಸೌಕರ್ಯ ಕಲ್ಪಿಸಲಾಗಿಲ್ಲ. ಆಶ್ರಯ ಮನೆಗಳನ್ನು ನೀಡಲಾಗಿಲ್ಲ. ಮಕ್ಕಳ ಹಾಜರಾತಿ ಕಡಿಮೆ ಎಂಬ ಕಾರಣಕ್ಕೆ ಎರಡು ವರ್ಷಗಳ ಹಿಂದೆಯೇ ಪ್ರಾಥಮಿಕ ಶಾಲೆಯನ್ನು ಮುಚ್ಚಲಾಗಿದ್ದು, ಇನ್ನೂ ತೆರೆಯ ಲಾಗಿಲ್ಲ. ಮನೆಯಿಲ್ಲದವರು ಶಾಲೆಯ ಆವರಣದಲ್ಲಿ ವಾಸಿಸು ತ್ತಿದ್ದಾರೆ. ಮಕ್ಕಳು ದೂರದಲ್ಲಿರುವ ಶಾಲೆಗಳಿಗೆ ನಡೆದು ಕೊಂಡೇ ಹೋಗಬೇಕು. ಇಲ್ಲಿ ಸರಿಯಾದ ಸಾರಿಗೆ ಸೌಕರ್ಯವೂ ಇಲ್ಲ~ ಎಂದು ಅವರು ಹೇಳಿದರು.

`ಎಲ್ಲರೂ ಅಕ್ಷರಸ್ಥರಾಗಬೇಕು ಎಂದು ಒಂದೆಡೆ ಸರ್ಕಾರ ಹೇಳುತ್ತಿದೆ, ಮತ್ತೊಂದೆಡೆ ಶಾಲೆಯನ್ನು ಮುಚ್ಚು ತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಾದ ರೂ ಹೇಗೆ? ದೂರದಲ್ಲಿರುವ ಶಾಲೆಗಳಿಗೆ ತೆರಳಿ ಮಕ್ಕಳು ಸುರಕ್ಷಿತವಾಗಿ ಮನೆಗಳಿಗೆ ಹಿಂದಿರುಗುವುದಾದರೂ ಹೇಗೆ? ಗ್ರಾಮದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವು ಬಾರಿ ಜನ ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದೇವೆ. ಆದರೆ ಈವರೆಗೆ ಸೌಜನ್ಯಕ್ಕಾದರೂ ಯಾರೂ ಸಹ ಗ್ರಾಮಕ್ಕೆ ಭೇಟಿ ನೀಡಿಲ್ಲ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT