ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರರ್‌ ಪ್ರಿಯೆ...

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ನನಗೆ ಹಾರರ್‌ ಚಿತ್ರಗಳಲ್ಲಿ ನಟಿಸುವ ಆಸೆ’ ಎಂದು ನಕ್ಕರು ನಟಿ ಸಂಗೀತಾ ಭಟ್‌. ತೆರೆಯ ಮೇಲೆ ಸುಂದರವಾಗಿ ಕಾಣಿಸಿಕೊಳ್ಳುವಂಥ ಪಾತ್ರಗಳೇ ಬೇಕು ಎನ್ನುವ ನಟಿಯರ ನಡುವೆ ಕೊಂಚ ವಿಭಿನ್ನ ಈ ನಟಿ. ಹಾರರ್‌ ಚಿತ್ರಗಳೆಂದರೆ ಇಷ್ಟ. ಅಂಥ ಚಿತ್ರಗಳಲ್ಲಿ ನಟಿಸಬೇಕೆನ್ನುವುದು ಬಹುದಿನಗಳ ಕನಸು ಎನ್ನುವ ಅವರು, ಗ್ಲಾಮರಸ್‌ ಪಾತ್ರವಾಗಲೀ, ಪಕ್ಕಾ ಸಾಂಪ್ರದಾಯಿಕ ಮನೆತನದ ಯುವತಿಯ ಪಾತ್ರವಾಗಲೀ, ಎಲ್ಲದಕ್ಕೂ ಸೈ ಎನ್ನುತ್ತಾರೆ.

ಹೊಸಬರ ಚಿತ್ರ ‘ಮಾಮು ಟೀ ಅಂಗಡಿ’ ಮೂಲಕ ಸಂಗೀತಾ ಬಣ್ಣದ ಲೋಕದಲ್ಲಿ ಎರಡನೇ ಇನ್ನಿಂಗ್ಸ್‌ ಪ್ರಾರಂಭಿಸಿದ್ದಾರೆ. ತ್ರಿಕೋನ ಪ್ರೇಮಕಥೆಯ ಈ ಚಿತ್ರದಲ್ಲಿ ಅವರದು ಸಂಪ್ರದಾಯಸ್ಥ ಮನೆತನದ ಯುವತಿ.

ಕಾಸರಗೋಡು ಮೂಲದ ಕುಟುಂಬವಾದರೂ ಸಂಗೀತಾ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ. ಸಿನಿಮಾ ಆಸಕ್ತಿ ರಕ್ತದಲ್ಲಿಯೇ ಹರಿದುಬಂದದ್ದು. ಅಮ್ಮ ಮಂಜುಳಾ ಭಟ್‌ ‘ಮೂರೂವರೆ ವಜ್ರಗಳು’ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಬಾಲಕಲಾವಿದೆಯಾಗಿ ನಟಿಸಿದ್ದವರು. ಹೀಗಾಗಿ ನಟನೆಯ ಆಸಕ್ತಿ ಸಹಜವಾಗಿಯೇ ಅವರಲ್ಲಿ ಮೂಡಿತ್ತು.

ಸಂಗೀತಾ ಆರು ವರ್ಷದ ಹಿಂದೆಯೇ ಸಿನಿಮಾ ಪಯಣಕ್ಕೆ ಕಾಲಿಟ್ಟವರು. ಪಿಯುಸಿ ಓದುತ್ತಿದ್ದಾಗ ಫೋಟೊ ತೆಗೆಸಿಕೊಳ್ಳಲು ಸ್ಟುಡಿಯೊ ಒಂದಕ್ಕೆ ಹೋಗಿದ್ದಾಗ ಅಲ್ಲಿ ಸಂಗೀತಾರನ್ನು ನೋಡಿದ ಚಿತ್ರ ನಿರ್ಮಾಪಕರೊಬ್ಬರು ‘ನನ್ನ ಚಿತ್ರದಲ್ಲಿ ನಟಿಸುತ್ತೀರಾ’ ಎಂದು ಕೇಳಿದರು. ತಾನಾಗಿಯೇ ಒಲಿದು ಬಂದ ಅವಕಾಶವನ್ನು ಒಲ್ಲೆ ಎನ್ನಲಿಲ್ಲ. ಕುಟುಂಬದ ಪ್ರೋತ್ಸಾಹವೂ ಬೆನ್ನಿಗಿತ್ತು. ಬಾಲರಾಜ್‌ ಜೊತೆ ‘ಮಣ್ಣಿನ ಮಡಿಲು’ ಚಿತ್ರಕ್ಕೆ ಬಣ್ಣ ಹಚ್ಚಿದರು. ಚಿತ್ರೀಕರಣ ಮುಗಿಸಿದ್ದರೂ ಸಿನಿಮಾ ಬಿಡುಗಡೆಯ ಭಾಗ್ಯ ಕಾಣಲಿಲ್ಲ.

ತಮಿಳು ಚಿತ್ರರಂಗದಲ್ಲಿಯೂ ಅದೃಷ್ಟ ಪರೀಕ್ಷೆ ನಡೆಸಿದ ಸಂಗೀತಾ ಇಬ್ಬರು ನಾಯಕಿಯರ ಚಿತ್ರವೊಂದರಲ್ಲಿ ನಟಿಸಿದರು. ಅಲ್ಲಿ ಅವಕಾಶಗಳು ಸಿಕ್ಕರೂ ಓದು ಮುಂದುವರೆಸುವ ಅನಿವಾರ್ಯತೆಯಿಂದ ತವರಿಗೆ ಮರಳಿದರು. ಓದಿನ ನಡುವೆಯೇ ‘ಭಾಗ್ಯವಂತರು’ ಧಾರಾವಾಹಿಯಲ್ಲಿ ಕೆಲಕಾಲ ಬಣ್ಣ ಹಚ್ಚಿದರು.

ಈಗ ಬಿ.ಎ. ಇಂಗ್ಲಿಷ್‌ ಸಾಹಿತ್ಯದ ಅಂತಿಮ ವರ್ಷ ಓದುತ್ತಿರುವ ಸಂಗೀತಾ, ‘ಮಾಮು ಟೀ ಅಂಗಡಿ’ಯ ಬೆನ್ನಲ್ಲೇ ಯೋಗರಾಜ್‌ ಭಟ್ಟರ ಗರಡಿಯಲ್ಲಿ ಬೆಳೆದ ನಿರ್ದೇಶಕ ವೀರೇಂದ್ರ ಅವರ ಮೊದಲ ಚಿತ್ರ ‘ಪ್ರೀತಿ ಗೀತಿ ಇತ್ಯಾದಿ’ಯಲ್ಲಿ ನಾಯಕಿಯಾಗುವ ಅವಕಾಶವನ್ನೂ ಗಿಟ್ಟಿಸಿದ್ದಾರೆ. ಚಿತ್ರದ ಆಡಿಷನ್‌ನಲ್ಲಿ ಭಾಗವಹಿಸಿದ ಅವರು ನಾಯಕಿಯಾಗಿ ಆಯ್ಕೆಯಾದ ಸುದ್ದಿ ಆ ದಿನ ರಾತ್ರಿಯೇ ಕಿವಿಗೆ ಬಿದ್ದಾಗ ಸಂಭ್ರಮದಿಂದ ಕುಣಿದಾಡಿದರಂತೆ. ಯೋಗರಾಜ್‌ ಭಟ್ಟರ ಸಿನಿಮಾದಲ್ಲಿ ನಟಿಸುವ ಹಂಬಲ ಒಂದು ಬಗೆಯಲ್ಲಿ ಈಡೇರುತ್ತಿದೆ ಎಂಬ ಖುಷಿ ಅವರದು. ನಿರ್ದೇಶಕ ಪವನ್‌ ಒಡೆಯರ್‌ ಈ ಚಿತ್ರದ ನಾಯಕ. ಚಿತ್ರದಲ್ಲಿ ಅವರದು ಮಧ್ಯಮವರ್ಗ ಕುಟುಂಬದ ಕಾಲೇಜು ವಿದ್ಯಾರ್ಥಿನಿಯ ಪಾತ್ರ.

ಆರು ವರ್ಷವಾಗುವವರೆಗೂ ನಟ ಶ್ರೀನಾಥ್‌ ವಸಿಷ್ಠ ಅವರ ಪತ್ನಿ ವಂದ್ಯಾ ಶ್ರೀನಾಥ್‌ ಬಳಿ ಭರತನಾಟ್ಯ ಕಲಿತ ಸಂಗೀತಾ, ಚಿಕ್ಕಂದಿನಲ್ಲಿ ಶಾಸ್ತ್ರೀಯ ಗಾಯನವನ್ನೂ ಅಭ್ಯಸಿಸಿದ್ದರು. ಸಿನಿಮಾ ಲೋಕದಲ್ಲಿ ಅಭಿನಯದಷ್ಟೇ ನೃತ್ಯಕ್ಕೂ ಮಹತ್ವ ಎನ್ನುವುದು ಅವರ ಅಭಿಪ್ರಾಯ. ಹೀಗಾಗಿ ಬೆಲ್ಲಿ ಡ್ಯಾನ್ಸ್‌ ಕಲಿಯುವುದರಲ್ಲಿ ಅವರು ಮಗ್ನರಾಗಿದ್ದಾರೆ.

ನಟನೆ ಮತ್ತು ಓದು ಎರಡನ್ನೂ ಬಿಡಲು ಅವರು ಸಿದ್ಧರಿಲ್ಲ. ಪದವಿ ಬಳಿಕ ಎಂಬಿಎ ಓದುವುದು ಅವರ ಗುರಿ. ‘ಎರಡನ್ನೂ ಒಟ್ಟಿಗೆ ನಿಭಾಯಿಸುವ ಸಾಮರ್ಥ್ಯ ನನಗಿದೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಅವರು. ‘ನಾನು ನಟಿಸುವ ಚಿತ್ರಗಳಲ್ಲಿ ಒಂದಾದರೂ ಹಾಡಿಗೆ ದನಿ ನೀಡಬೇಕು’ ಎಂದು ಗಾಯನದ ಆಸಕ್ತಿಯನ್ನೂ ಅವರು ಬಿಚ್ಚಿಡುತ್ತಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT