ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಿಕೆ ಉತ್ತರ ನೀಡುವುದು ನಿಲ್ಲಿಸಿ

Last Updated 10 ಜನವರಿ 2014, 5:57 IST
ಅಕ್ಷರ ಗಾತ್ರ

ಯಾದಗಿರಿ: ಅಧಿಕಾರಿಗಳು ಹಾರಿಕೆ ಉತ್ತರ ನೀಡುವುದನ್ನು ನಿಲ್ಲಿಸಬೇಕು. ಜನಪ್ರತಿನಿಧಿಗಳ ಮಾತಿಗೆ ಕಿಮ್ಮತ್ತಿಲ್ಲ­ದಂತಾಗಿದೆ. ತಾಲ್ಲೂಕಿನಾದ್ಯಂತ ಸಸಿ ನೆಡುವುದಾಗಿ ಹೇಳಿ ಅರಣ್ಯ ಇಲಾಖೆ­ಯಿಂದ ಲಕ್ಷಾಂತರ ಅನುದಾನ ಅವ್ಯವ­ಹಾರ ನಡೆದಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಸದಸ್ಯ ಶರಣಪ್ಪ ಮೋಟ್ನಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಸದಸ್ಯರ ಆರೋಪದ ಕುರಿತು ವಿವರಣೆ ನೀಡಿದ ತಾಲ್ಲೂಕು ಅರಣ್ಯ ಇಲಾಖೆ ಅಧಿಕಾರಿ, ವರದಿ ನೀಡುವು­ದಾಗಿ ಹೇಳಿದರು. ಆದರೂ ಇದಕ್ಕೆ ಒಪ್ಪದ ಸದಸ್ಯರು, ಈ ಬಗ್ಗೆ ಲೋಕಾ­ಯುಕ್ತ ತನಿಖೆಯಾಗಲಿ ಎಂದು ಪಟ್ಟು ಹಿಡಿದರು.

ಮಧ್ಯೆ ಪ್ರವೇಶಿಸಿದ ತಾಲ್ಲೂಕು ಪಂಚಾ­ಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಸತೀಶ ಜಮಾದಾರ, ಈ ಬಗ್ಗೆ ಮತ್ತೊಮ್ಮೆ ತನಿಖೆ ನಡೆಸ­ಲಾಗುವುದು. ತನಿಖೆಯ ಸಂದರ್ಭ­ದಲ್ಲಿ ಎಲ್ಲ ಸದಸ್ಯರನ್ನೂ ಕಾಮಗಾರಿ ನಡೆದ ಸ್ಥಳಕ್ಕೆ ಕರೆದೊಯ್ಯಲಾಗುವುದು ಎಂದು ಭರವಸೆ ನೀಡುವ ಮೂಲಕ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರು.

ಆದರೂ ಪಟ್ಟು ಬಿಡದ ಸದಸ್ಯರು, ತನಿಖೆ ನಡೆಸಿದ ತಂಡದ ವರದಿಯನ್ನು ಅಧಿಕಾರಿಗಳು ನಮಗೆ ನೀಡುತ್ತಿಲ್ಲ. ಕಳೆದ ಬಾರಿಯ ಸಾಮಾನ್ಯ ಸಭೆಯಲ್ಲಿ ತನಿಖಾ ತಂಡವನ್ನು ರಚಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ವರದಿ ತಂದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸದಾಶಿವರಡ್ಡಿ ಬೆಳಗೇರಾ, ತನಿಖಾ ತಂಡ ನೀಡಿದ ವರದಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಏಕೆ ಮುಂದಾ­ಗುತ್ತಿಲ್ಲ. ಇದರಿಂದ ಅವರೂ ಅವ್ಯವ­ಹಾರದಲ್ಲಿ ಭಾಗಿಯಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾ­ಗು­ತ್ತದೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕ­ಳಿಗೆ ಪೌಷ್ಟಿಕ ಆಹಾರ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಬಹುತೇಕ ಅಂಗನ­ವಾಡಿ ಕೇಂದ್ರಗಳಲ್ಲಿ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುತ್ತಿಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಸಣ್ಣ ಸಾಬಯ್ಯಾ ಮಾತ­ನಾಡಿ, ಅರಣ್ಯ ಇಲಾಖೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ನಡೆಸಿ, ಕೂಲಿ ಕಾರ್ಮಿಕ­ರಿಗೆ ಹಣ ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಹಣಮಂತ ಲಿಂಗೇರಿ ಮಾತನಾಡಿ, ಲಿಂಗೇರಿ ಗ್ರಾಮಕ್ಕೆ ಪೂರೈಕೆ ಆಗುತ್ತಿರುವುದು ಕುಡಿಯುವ ನೀರಿನಲ್ಲಿ ಕ್ಲೋರೈಡ್ ಅಂಶ ಇರುವು­ದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ ಕಳೆದ ವರ್ಷ ಈ ನೀರನ್ನು ಪರೀಕ್ಷೆಗಾಗಿ ಅಧಿಕಾರಿಗಳು ತೆಗೆದುಕೊಂಡು ಹೋಗಿ­ದ್ದಾರೆ. ಆದರೆ ಅದರ ಫಲಿತಾಂಶ ಮಾತ್ರ ಇನ್ನೂ ಬಂದಿಲ್ಲ ಎಂದು ಸಭೆ ಗಮನಕ್ಕೆ ತಂದರು.

ತಾ.ಪಂ. ಅಧ್ಯಕ್ಷೆ ಶೋಭಾರಾಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶರಣಮ್ಮ ಕವಾಲ್ದಾರ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಿ, ಸದಸ್ಯರಾದ ಮಾರುತಿ ಮುಂಡಾಸ್, ಶ್ರೀಲಕ್ಷ್ಮಿ ಚಂಡ್ರಕಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT