ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ ಬದಲು ‘ಊಟ, ವಸತಿ’ ಅನುದಾನ

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ದೊರಕದ ಮೆಟ್ರಕ್‌ ನಂತರದ  ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ‘ಸ್ವಯಂ ಊಟ ಮತ್ತು ವಸತಿ ಯೋಜನೆ’ಗೆ ಇದೇ 28ರಂದು ಚಾಲನೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದರು.

‘20 ಸಾವಿರ ಮಕ್ಕಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಾರ್ಷಿಕ ತಲಾ ₨ 15,000 ನೆರವನ್ನು ನೀಡಲಾಗುವುದು. ಈ ವರ್ಷ ಇದಕ್ಕಾಗಿ ₨ 30 ಕೋಟಿ ಮೀಸಲಿಡಲಾಗಿದೆ. ಆನ್‌ಲೈನ್‌ ಮೂಲಕವೇ ಅರ್ಜಿ ಪಡೆದು, ಅರ್ಹ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲಾಗುವುದು’ ಎಂದು ಶನಿವಾರ ಪತ್ರಕರ್ತರಿಗೆ ವಿವರಿಸಿದರು.

ಮಿತಿ ಹೆಚ್ಚಳ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಪಡೆಯಲು  ನಿಗದಿಪಡಿಸಿದ್ದ ಆದಾಯದ ಮಿತಿಯನ್ನು ಪರಿಷ್ಕರಿಸಲಾಗಿದೆ.  ಶೈಕ್ಷಣಿಕ ಪ್ರವೇಶ, ತರಬೇತಿ, ಶಿಷ್ಯವೇತನ, ಶುಲ್ಕ ವಿನಾಯಿತಿ ಮತ್ತಿತರ ಸೌಲಭ್ಯಗಳಿಗೆ ಈ ಮಿತಿ ಅನ್ವಯವಾಗಲಿದೆ. ಪ್ರವರ್ಗ 1ರ ವಿದ್ಯಾರ್ಥಿಗಳು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆಯಲು ಹಿಂದೆ ₨ 2 ಲಕ್ಷ ಆದಾಯ ಮಿತಿ ಇತ್ತು. ಅದನ್ನು ₨ 2.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇತರ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ಇದ್ದ ಆದಾಯ ಮಿತಿಯನ್ನು ₨ 44,500 ರಿಂದ ₨1 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದರು.

ನರ್ಸಿಂಗ್‌ ಹಾಗೂ ಅರೆ ವೈದ್ಯಕೀಯ ತರಬೇತಿ ಪಡೆಯಲು ನೀಡುವ ಧನಸಹಾಯ ಮತ್ತಿತರ ಸೌಲಭ್ಯಗಳನ್ನು ಪಡೆಯಲು ಪ್ರವರ್ಗ–1ರ ವಿದ್ಯಾರ್ಥಿ ಗಳಿಗೆ ₨ 2.5 ಲಕ್ಷಕ್ಕೆ ಹೆಚ್ಚಿಸಿದ್ದರೆ, ಇತರೆ ವರ್ಗಗಳ ವಿದ್ಯಾರ್ಥಿಗಳಿಗೆ ಈ ಮಿತಿಯನ್ನು ₨ 1 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಶುಲ್ಕ ವಿನಾಯಿತಿ, ಊಟ ಮತ್ತು ವಸತಿ, ಹೊಲಿಗೆ ತರಬೇತಿ, ಕೇಂದ್ರ ಪುರಸ್ಕೃತ ವಿದ್ಯಾರ್ಥಿ ವೇತನ ಸೌಲಭ್ಯಗಳಿಗೂ ಇದೇ ಮಿತಿ ಅನ್ವಯವಾಗುತ್ತದೆ.

ಕೇಂದ್ರ ನಾಗರಿಕ ಸೇವಾ ಪರೀಕ್ಷೆ, ರಾಜ್ಯ ಆಡಳಿತ ಸೇವಾ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ನೆರವು ನೀಡುವ ಯೋಜನೆಗೆ ಪ್ರವರ್ಗ 1ರ ವಿದ್ಯಾರ್ಥಿಗಳಿಗೆ ₨ 4.5 ಲಕ್ಷ ಮತ್ತು ಇತರೆ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ರೂ 3.5 ಲಕ್ಷ ಮಿತಿ ನಿಗದಿ ಮಾಡಲಾಗಿದೆ. ವಿದೇಶ ವ್ಯಾಸಂಗಕ್ಕೆ ನೆರವು ನೀಡುವ ಯೋಜನೆಗೆ ಎಲ್ಲ ಪ್ರವರ್ಗಗಳಿಗೂ ₨ 4.5 ಲಕ್ಷ ಆದಾಯ ಮಿತಿ ನಿಗದಿ ಮಾಡಲಾಗಿದೆ. ಕಾನೂನು ತರಬೇತಿಗೆ ಈ ಮಿತಿಯನ್ನು ಅನುಕ್ರಮವಾಗಿ ₨ 3.5 ಲಕ್ಷ ಮತ್ತು ₨ 2.5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಪ್ರವರ್ಗ 1ರ ವಿದ್ಯಾರ್ಥಿಗಳಿಗೆ ₨ 1 ಲಕ್ಷ ಹಾಗೂ ಇತರೆ ಪ್ರವರ್ಗಗಳಿಗೆ ರೂ 44,500 ಆದಾಯ ಮಿತಿ ನಿಗದಿ ಮಾಡಲಾಗಿದೆ. ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆಗಳ ಪ್ರವೇಶಕ್ಕೂ ಇದೇ ಮಿತಿ ಅನ್ವಯ ವಾಗಲಿದೆ. ಮೆಟ್ರಿಕ್‌ ನಂತರದ ಅರ್ಹ ತಾ ವಿದ್ಯಾರ್ಥಿ ವೇತನ ಸೌಲಭ್ಯ ಪಡೆ ಯಲು ಇದ್ದ ಆದಾಯದ ಮಿತಿಯನ್ನು ಅನುಕ್ರಮವಾಗಿ ₨ 2.5 ಲಕ್ಷ ಮತ್ತು ₨ 2 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT