ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹಿಂದೂ ಅಲ್ಪಸಂಖ್ಯಾತ'ರೆಂದು ಘೋಷಿಸಿ: ರಘು

Last Updated 3 ಸೆಪ್ಟೆಂಬರ್ 2013, 5:35 IST
ಅಕ್ಷರ ಗಾತ್ರ

ದಾವಣಗೆರೆ: `ಮಡಿವಾಳರು ಸೇರಿದಂತೆ ಹಿಂದುಳಿದಿರುವ ಎಲ್ಲ ಸಣ್ಣ ಸಮುದಾಯ ಒಗ್ಗೂಡಿಸಿ `ಹಿಂದೂಗಳಲ್ಲಿ ಅಲ್ಪಸಂಖ್ಯಾತರು' ಎಂದು ಘೋಷಣೆ ಮಾಡಬೇಕು. ಈ ಕ್ರಮದಿಂದ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ' ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ರಘು ಒತ್ತಾಯಿಸಿದರು.

ನಗರದ ಮಾಚಿದೇವ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಅಭದ್ರತೆ, ಆರ್ಥಿಕ ಹಿನ್ನಡೆ, ಶೈಕ್ಷಣಿಕ ಅವಕಾಶಗಳಿಂದ ವಂಚಿತವಾಗಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವವರಲ್ಲಿ ಮಡಿವಾಳ ಸಮುದಾಯವೂ ಒಂದು. ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಒತ್ತಾಯ ಅನಿವಾರ್ಯ. ಸಮರ್ಥ ರಾಜಕೀಯ ನಾಯಕತ್ವ ಹಾಗೂ ಜಾಗೃತಿ ಕೊರತೆಯಿಂದ ಸಮುದಾಯ ಹಿಂದುಳಿದಿದೆ. ಚುನಾವಣೆಯಲ್ಲಿ ಸ್ಪರ್ಧಿಸುವವರ ಸೋಲು, ಗೆಲುವು ನಿರ್ಧರಿಸುವ ಸಾಮರ್ಥ್ಯ ಸಮುದಾಯದ ಮತಗಳಿಗೆ ಇದೆ. ಆದ್ದರಿಂದ ರಾಜಕೀಯದಲ್ಲಿ ನಿರ್ಣಾಯಕ ಶಕ್ತಿಯಾಗಿ ಬೆಳೆಯುವ ನಿಟ್ಟಿನಲ್ಲಿ ಮನಸ್ಸು ಮಾಡಬೇಕು ಎಂದು ಕರೆ ನೀಡಿದರು.

ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ದಾವಣಗೆರೆಯಲ್ಲಿ ಸಮುದಾಯದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಹಾಸ್ಟೆಲ್‌ಗೆ ಅನುದಾನ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಸಮುದಾಯದ ಅಭಿವೃದ್ಧಿಗೆ ಎಲ್ಲ ಸಹಕಾರ ಕೊಡಲಾಗುವುದು ಎಂದು ಭರವೆ ನೀಡಿದರು.

ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ಈ ತಿಂಗಳ ಮೂರನೇ ವಾರದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಒಂದು ತಿಂಗಳಿನಿಂದ ಪ್ರತಿ ಶನಿವಾರ ಬೆಂಗಳೂರಿನಲ್ಲಿ `ಮನೆ ಮನೆಗೆ ಮಾಚಿದೇವ ದರ್ಶನ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಸಮಾರೋಪವು ಸೆ.5ರಂದು ಬೆಂಗಳೂರಿನ ಮಾಚಿದೇವ ದೇವಾಲಯದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಶೇಷಾದ್ರಿಪುರ ಕಾಲೇಜಿನ ಡಾ.ಅಶೋಕ ಕುಮಾರ್ ಮಡಿವಾಳ ಮಾಚಯ್ಯ ಅವರ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ನೀಡಿ, `ಮಡಿವಾಳ ಮಾಚಯ್ಯ ಅನುಭವ ಮಂಟಪಕ್ಕೆ ಶಕ್ತಿ ನೀಡಿದವರು. ನಮ್ಮಲ್ಲಿರುವ ಗುಣಗಳಿಗೆ ಮುನಿಯಬೇಕೇ ಹೊರತು ಅನ್ಯರ ಮೇಲಲ್ಲ ಎಂದು ಬೋಧಿಸಿದರು. ತಮ್ಮ ಜ್ಞಾನ ಜ್ಯೋತಿಯನ್ನು ನಾಡಿಗೇ ಪಸರಿಸಿದ ಅವರು, ಬಟ್ಟೆ ಮಾತ್ರವಲ್ಲದೇ ಸಮಾಜದ ಕೊಳೆಯನ್ನೇ ತೊಳೆಯುವ ಶಕ್ತಿ ಹೊಂದಿದ್ದರು' ಎಂದು ಹೇಳಿದರು.

ಬೆಂಗಳೂರಿನ ದೊಡ್ಡಬೆಲೆ ಲಕ್ಷ್ಮಣಮಠದ ಶಿವಾನಂದಪುರಿ ಸ್ವಾಮೀಜಿ, ಮೂಡಬಿದಿರೆಯ ಕರಿಂಜೆ ಮಹಾಮಠದ ಮುಕ್ತಾನಂದ ಸ್ವಾಮೀಜಿ, ಮಹಾನಗರ ಪಾಲಿಕೆ ಸದಸ್ಯರಾದ ಎಚ್.ಜಿ.ಉಮೇಶ್ ಆವರಗೆರೆ, ದಿನೇಶ್ ಕೆ.ಶೆಟ್ಟಿ, ರೇಖಾ ನಾಗರಾಜ, ಅನ್ನಪೂರ್ಣಮ್ಮ, ಮಡಿವಾಳ ಸಮುದಾಯದ ಮುಖಂಡರಾದ ಎಂ.ನಾಗೇಂದ್ರಪ್ಪ, ಎ.ರಾಮಚಂದ್ರಪ್ಪ, ಜಿ.ಎಚ್.ನಾಗರಾಜ, ಯರಬಾಳಿ ಉಮಾಪತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT