ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳು ಒಂದಾಗಿ ದೇಶ ರಕ್ಷಣೆಗೆ ಮುಂದಾಗಿ

Last Updated 13 ಅಕ್ಟೋಬರ್ 2011, 6:15 IST
ಅಕ್ಷರ ಗಾತ್ರ

ಕೊಲ್ಹಾರ: ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ, ಭ್ರಷ್ಟಾಚಾರಗಳ ನಿರ್ಮೂಲನೆಗೆ ದೇಶದ ಯುವ ಜನಾಂಗ ಮುಂದಾಗಬೇಕೆಂದು ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ಬಿ. ಪಟ್ಟಣಶೆಟ್ಟಿ ಸಲಹೆ ನೀಡಿದರು.

ಸಮೀಪದ ಹಣಮಾಪುರ ಗ್ರಾಮದಲ್ಲಿ ನೇತಾಜಿ ಸುಭಾಸಚಂದ್ರ ಬೋಸ್ ಯುವಕ ಮಂಡಳಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿ.ಎಚ್.ಪಿ. ಗ್ರಾಮ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.

ದೇಶದಲ್ಲಿರುವ ಹಿಂದೂಗಳು ಭೇದಭಾವನೆಯನ್ನು ಕಿತ್ತುಹಾಕಿ ನಾವೆಲ್ಲರೂ ಒಂದೇ ಎನ್ನುವ ಸಂಕಲ್ಪ ಮಾಡಿ ದೇಶದ ಭ್ರಷ್ಟಾಚಾರ, ಭಯೋತ್ಪಾದನೆ ಮಟ್ಟಹಾಕಿ ದೇಶ ರಕ್ಷಣೆಗಾಗಿ ಹೋರಾಟ ಮಾಡಬೇಕೆಂದು ಹೇಳಿದರು.

ದೇಶದಲ್ಲಿ ಇನ್ನೂ ಅನೇಕ ಗ್ರಾಮಗಳಲ್ಲಿ ಅಸ್ಪೃಶ್ಯತೆಯನ್ನು ಕಾಣುತ್ತಿದ್ದೇವೆ ಅದನ್ನು ಸಂಪೂರ್ಣವಾಗಿ ಕಿತ್ತು ಹಾಕಿ, ಗ್ರಾಮಗಳಲ್ಲಿ ಸಹೋದರತ್ವ ಭಾವನೆಯಿಂದ ಜೀವನ ಸಾಗಿಸಿದಾಗ ಬಸವಣ್ಣ, ಡಾ.ಬಿ.ಆರ್ ಅಂಬೇಡ್ಕರ ಅವರ ತತ್ವ ಆದರ್ಶಗಳನ್ನು ಪಾಲಿಸಿದಂತಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಸಿಂಡಿಕೇಟ್ ಸದಸ್ಯ ಮಲ್ಲಿಕಾರ್ಜುನ ದೇವರಮನಿ, ಹಿಂದೂಗಳಲ್ಲಿನ ಒಗ್ಗಟ್ಟಿನ ಕೊರತೆಯ ಲಾಭವನ್ನು ಅನ್ಯ ಧರ್ಮೀಯರು ಮತಾಂತರಗೊಳಿಸುವ ಮೂಲಕ ಹಿಂದೂ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಾರಣ ಹಿಂದೂಗಳು ಧರ್ಮದ ಬಗ್ಗೆ ಜಾಗೃತರಾಗಬೇಕಾದ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಸಂಗನಗೌಡ ಪಾಟೀಲ, ರಾಮಗೊಂಡಪ್ಪ ಬರಗಿ, ವಿಠ್ಠಲ ಕಂಕಣವಾಡಿ, ನಿಂಗರಾಜ ಹಳ್ಳೂರ, ಮದು ಗಡ್ಡಿ, ಶಿವಾನಂದ ನಾಗರಾಳ, ಮಲ್ಲಿಕಾರ್ಜುನ ಕುಬಕಡ್ಡಿ, ಸಂಗಮೇಶ ಕುಬಕಡ್ಡಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಸಾತಪುರ: ಶೌಚಾಲಯ ನಿರ್ಮಾಣ ಭರವಸೆ
ಇಂಡಿ: ಕಳೆದ ಹಲವಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಿರುವ ಸಾತಪುರ ಗ್ರಾಮಕ್ಕೆ ಇಷ್ಟರಲ್ಲೇ ಕುಡಿಯುವ ನೀರು ಮತ್ತು ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸಿ ಕೊಡುವುದಾಗಿ ಶಾಸಕ ಡಾ. ಸಾರ್ವಭೌಮ ಬಗಲಿ ಭರವಸೆ ನೀಡಿದರು. ಅವರು ಮಂಗಳವಾರ ಗ್ರಾಮದಲ್ಲಿ  ಲಕ್ಷ್ಮೀಗುಡಿ ನಿರ್ಮಿಸಲು ತಮ್ಮ ಅನುದಾನದಲ್ಲಿ 2 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿ. ಅದಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮದ ಪ್ರಾಥಮಿಕ ಶಾಲೆಗೆ ಕಂಪೌಂಡ್ ನಿರ್ಮಿಸಿಕೊಡಬೇಕೆಂದು ಮನವಿ ಸ್ವೀಕರಿಸಿದ ಅವರು ಇಷ್ಟರಲ್ಲೇ ಮಾಡುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಕಾಸೂಗೌಡ ಬಿರಾದಾರ, ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ, ಎಸ್.ಟಿ.ಪಾಟೀಲ, ಸಾಹೇಬಗೌಡ  ಮಾತನಾಡಿದರು. ವೇದಿಕೆಯಲ್ಲಿ ಯುವ ಧುರೀಣ ಸಂಕೇತ ಬಗಲಿ, ಸಂಜೀವ ಭೈರಶೆಟ್ಟಿ, ಮಾಳಪ್ಪ ಗುಡ್ಲ, ಮಲ್ಲಪ್ಪ ಗುಡ್ಲ, ಕಲ್ಲಪ್ಪ, ದೇವಪ್ಪ, ಕಲ್ಲಣ್ಣ, ಲಕ್ಕಪ್ಪ, ಸಾತಪ್ಪ, ರವಿ ಗುಡ್ಲ ಉಪಸ್ಥಿತರಿದ್ದರು
.
ನಿಡಗುಂದಿ ಸಮಗ್ರ ಅಭಿವೃದ್ಧಿಗೆ ಬದ್ಧ: ಬೆಳ್ಳುಬ್ಬಿ
ಆಲಮಟ್ಟಿ: ನಿಡಗುಂದಿ ಪಟ್ಟಣದ ಸಮಗ್ರ ಅಭಿದ್ಧಿಗೆ ಬದ್ಧನಾಗಿದ್ದು, ಇಲ್ಲಿಯವರೆಗೆ ಇಲ್ಲಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದ್ದೇನೆ ಎಂದು ಶಾಸಕ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ನಿಡಗುಂದಿ ಗ್ರಾ.ಪಂ.ಗೆ ಭೇಟಿ ನೀಡಿದಾಗ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಿಡಗುಂದಿಯ ಜಾಕ್‌ವೆಲ್ ಬಳಿ ಇರುವ ಕುಡಿಯುವ ನೀರಿನ ಪೈಪ್‌ಗೆ ಹೂಳು ತುಂಬಿದಾಗ ರೂ. 5 ಲಕ್ಷ  ಮಂಜೂರು ಮಾಡಿಸಿ ಅದನ್ನು ಸ್ವಚ್ಛಗೊಳಿಸಲಾಗಿದೆ. ನಿಡಗುಂದಿಯ ಸ್ಮಶಾನದ ಜಾಗ ವಿವಾದದ ಸಂದರ್ಭದಲ್ಲಿ ಸುಮಾರು 17 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ, ನಿಡಗುಂದಿಯ ಎಸ್.ಸಿ. ಕಾಲೋನಿಯಲ್ಲಿ ರೂ. 15 ಲಕ್ಷ ಚರಂಡಿ ರಸ್ತೆ, ಶೌಚಾಲಯ ನಿರ್ಮಾಣ, ನಿಡಗುಂದಿಯ 10 ವಿವಿಧ ದೇವಸ್ಥಾನಗಳಿಗೆ ತಲಾ ಒಂದು ಲಕ್ಷ ರೂಪಾಯಿನಂತೆ ಅನುದಾನ ನೀಡಲಾಗಿದ್ದು, ಮಸೀದಿ ನಿರ್ಮಾಣಕ್ಕೆ ರೂ. 1.50 ಲಕ್ಷ ಹಣ ಬಿಡುಗಡೆಗೊಳಿಸಲಾಗಿದೆ ಎಂದರು.

ನಿಡಗುಂದಿ ಜನತೆಗೆ ಅಗತ್ಯವಾಗಿದ್ದ ನೆಮ್ಮದಿ ಕೇಂದ್ರ ಸ್ಥಾಪಿಸಲಾಗಿದ್ದು, ಅತ್ಯಂತ ಅಗತ್ಯವಾಗಿದ್ದ ಇಬ್ಬರು ಪಿ.ಎಸ್.ಐ. ಇರುವ ಬಲಾಢ್ಯ ಠಾಣೆಯನ್ನು ಸ್ಥಾಪಿಸಲಾಗಿದೆ ಎಂದು ಬೆಳ್ಳುಬ್ಬಿ ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ಇರುವ ನೇಕಾರರಿಗೆ ಮಳೆಯಿಂದ ಅಪಾರ ಹಾನಿಯಾದಾಗ ಸಮಾಜದ ಎಲ್ಲಾ ಮನೆಗಳಿಗೂ ತಲಾ ಎರಡು ರೂ. ಸಾವಿರ ಪ್ರತ್ಯೇಕ ಅನುದಾನ ನೀಡಲಾಗಿದೆ ಎಂದು ಬೆಳ್ಳುಬ್ಬಿ ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ. ಶಿಕ್ಷಣ ತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ, ಗ್ರಾ.ಪಂ. ಅಧ್ಯಕ್ಷ ಶಿವಾನಂದ ಮುಚ್ಚಂಡಿ, ಎ.ಪಿ.ಎಂ.ಸಿ. ಸದಸ್ಯ ಎಮ್.ಕೆ. ಮಾಮಣಿ, ತಾ.ಪಂ. ಮಾಜಿ ಅಧ್ಯಕ್ಷ ಡಾ. ಸಿ.ಐ. ಕಾಜಗಾರ, ಅಶೋಕ ರೇಶ್ಮಿ, ರಾಮಕೃಷ್ಣ ಕಾಳಗಿ, ಎಮ್.ಬಿ. ಉಳ್ಳಾಗಡ್ಡಿ, ಬಸವರಾಜ ಬಾಗೇವಾಡಿ, ಪ್ರಕಾಶ ರೇಶ್ಮಿ, ಬಸಯ್ಯ ಸಾಲಿಮಠ, ಮಹಾಂತಯ್ಯ ಗಣಾಚಾರಿ, ನಾಗಯ್ಯ ಗಣಾಚಾರಿ ಮೊದಲಾದವರಿದ್ದರು.

`ಮಠ ಮಾನ್ಯಗಳ ಕೊಡುಗೆ ಅಪಾರ~

ತಾಂಬಾ: `ಸಮಾಜದಲ್ಲಿ ಶಾಂತಿ ಸಹಬಾಳ್ವೆ ಹಾಗೂ ಸಮಾನತೆ ಮೂಡಿಸಿ, ಧಾರ್ಮಿಕ ತಳಹದಿಯ ಮೇಲೆ ಸಮಾಜದಲ್ಲಿ ಬದಲಾವಣೆ ತರುವಲ್ಲಿ ಮಠ ಮಾನ್ಯಗಳ ಕೊಡುಗೆ ಅಪಾರ~ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ತಾಂಬಾ ಗ್ರಾಮದಲ್ಲಿ ಮಂಗಳವಾರ, ಶ್ರೀ ಗುರುಬಸವ ವಿರಕ್ತಮಠದ ಭೂಮಿಪೂಜೆ  ನೇರವೇರಿಸಿ ಅವರು ಮಾತನಾಡಿದರು. ಸಂಸದರ ನಿಧಿಯಿಂದ ರೂ. 2 ಲಕ್ಷ, ಶಾಸಕರ ನಿಧಿಯಿಂದ ರೂ. 4 ಲಕ್ಷ ಮತ್ತು ಬಂಥನಾಳದ ಶ್ರೀ ಸಂಗನಬಸವೇಶ್ವರ ಮಠಕ್ಕೆ ಸಂಸದರ ನಿಧಿಯಿಂದ ರೂ. 5 ಲಕ್ಷ ಅನುದಾನ ನೀಡಲಾಗಿದೆ ಎಂದರು.

ಬಂಥನಾಳದ ವೃಷಭಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  ಎಸ್. ಎಸ್. ಕಲ್ಲೂರ, ಎಸ್. ಎನ್. ಮೂಲಿಮನಿ, ಈರಣ್ಣ ಹಿಪ್ಪರಗಿ, ಆರ್. ಸಿ. ನಿಂಬಾಳ, ನಾಗಪ್ಪ ಕುರಬತ್ತಳಿ, ರುದ್ರಪ್ಪ ನವದಗಿ, ಜಿ. ಎಮ್. ಗುಳಗಿ, ಎಸ್.ಜಿ. ಸೋಮನಿಂಗ. ಬಿ.ಬಿ. ಭರಮಣ್ಣ, ಬಿ. ಎಂ. ಭರಮಣ್ಣ. ಐ.ಸಿ.ಬ್ಯಾಕೋಡ, ಮಾದೇವ ಮಸಳಿ, ಎಸ್.ವಿ. ಮುಂಜಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT