ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೆ ಸರಿದ ಜಿಂದಾಲ್ ಸಂಸ್ಥೆ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ತೀವ್ರ ಚರ್ಚೆಗೆ ಗ್ರಾಸ ಒದಗಿಸಿದ್ದ ಡಾ. ಸೀತಾರಾಮ್ ಜಿಂದಾಲ್ ಅರ್ಥಶಾಸ್ತ್ರ ಶಾಲೆ ಸ್ಥಾಪನೆಯಿಂದ ಹಿಂದೆ ಸರಿದಿರುವುದಾಗಿ ಜಿಂದಾಲ್ ಸಂಸ್ಥೆ ತಿಳಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಈ ಶಾಲೆ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ನೂರು ಕೋಟಿ ರೂಪಾಯಿ ದೇಣಿಗೆ ನೀಡಲು ಸಂಸ್ಥೆಯು ಮುಂದೆ ಬಂದಿತ್ತು.

ಶಾಲೆ ಸ್ಥಾಪನೆ ಮಾಡುವುದರಿಂದ ವಿ.ವಿ. ಜಮೀನು ಕಳೆದುಕೊಳ್ಳಲಿದೆ. ಇದರಿಂದ ವಿ.ವಿಗೆ ಯಾವುದೇ ಲಾಭವಿಲ್ಲ. ಶಾಲೆ ಸ್ಥಾಪನೆಯಾದರೂ ಅದರ ಮೇಲೆ ವಿ.ವಿ.ಗೆ ಯಾವುದೇ ರೀತಿಯ ನಿಯಂತ್ರಣ ಇರುವುದಿಲ್ಲ. ಆದ್ದರಿಂದ ಜ್ಞಾನಭಾರತಿ ಆವರಣದಲ್ಲಿ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬಾರದು ಎಂದು ವಿ.ವಿ. ವಿದ್ಯಾ ವಿಷಯಕ ಪರಿಷತ್ತಿನ ಸಭೆಯಲ್ಲಿ ಕೆಲ ಸದಸ್ಯರು ಒತ್ತಾಯಿಸಿದ್ದರು.

ಜಮೀನು ಪರಭಾರೆ, ಶಾಲೆಯ ಮೇಲೆ ವಿ.ವಿ.ಯ ಹಿಡಿತ ಮುಂತಾದ ಗೊಂದಲಗಳನ್ನು ನಿವಾರಿಸಲು ಸಮಿತಿಯೊಂದನ್ನು ರಚಿಸಲು ವಿ.ವಿ.ಯ ಕುಲಪತಿ ಡಾ.ಎನ್. ಪ್ರಭುದೇವ್ ಅವರು ನಿರ್ಧರಿಸಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಂದಾಲ್ ಅರ್ಥಶಾಸ್ತ್ರ ಶಾಲೆ ಸ್ಥಾಪನೆ ಪ್ರಸ್ತಾವವನ್ನು ಸಂಸ್ಥೆಯು ಹಿಂದಕ್ಕೆ ಪಡೆದಿದೆ.

`ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ತಿನ ಸಭೆಯಲ್ಲಿ ನಡೆದ ಚರ್ಚೆಯ ಸುದ್ದಿ ಹಲವು ಪತ್ರಿಕೆಗಳಲ್ಲಿ ಜ. 14ರಂದು ಪ್ರಕಟಗೊಂಡಿದ್ದನ್ನು ಓದಿ ಆಶ್ಚರ್ಯ ಮತ್ತು ಅಘಾತವಾಯಿತು. ಅರ್ಥಶಾಸ್ತ್ರ ಶಾಲೆ ಸ್ಥಾಪಿಸುವ ಒಳ್ಳೆಯ ಉದ್ದೇಶದಿಂದ ನೂರು ಕೋಟಿ ರೂಪಾಯಿ ದೇಣಿಗೆ ನೀಡುವ ನಿರ್ಧಾರವನ್ನು ಪರಿಷತ್ತಿನ ಕೆಲ ಸದಸ್ಯರು ತಪ್ಪಾಗಿ ಅರ್ಥೈಸಿದ್ದಾರೆ. ಒಬ್ಬ ಸದಸ್ಯರಂತೂ ಇದನ್ನು ಹೂಡಿಕೆ ಎಂದು ಕರೆದಿದ್ದಾರೆ. ಇನ್ನೊಬ್ಬರು ಭೂಮಿ ಮಾರಾಟ ಎಂದು ಆಪಾದಿಸಿದ್ದಾರೆ.

ದೇಶದ ಪ್ರತಿಷ್ಠಿತ ಕಂಪೆನಿ ಆಗಿರುವ ಜಿಂದಾಲ್ ಸಂಸ್ಥೆಯ ಉದ್ದೇಶಿತ ಶಾಲೆ ಆರಂಭವನ್ನು ಬುದ್ಧಿವಂತರೆನಿಸಿಕೊಂಡ ಪರಿಷತ್ತಿನ ಸದಸ್ಯರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಭೂಮಿಯನ್ನೇ ಗುರುತಿಸುವ ಮುನ್ನ ಭೂಮಿ ಮಾರಾಟ ಎಂದಿದ್ದಾರೆ~ ಎಂದು ಜಿಂದಾಲ್ ಪತ್ರಿಕಾ ಪ್ರಕಟಣೆಯಲ್ಲಿ ವಿಷಾದಿಸಿದೆ.

`ಸುದ್ದಿ ಮಾಡುವ ಉದ್ದೇಶದಿಂದ ಕೆಲವರು ಈ ರೀತಿಯ ಆಪಾದನೆ ಮಾಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತವನ್ನು ದಾನ ಹೇಗೆ ಮಾಡುತ್ತಾರೆ ಎಂಬ ಅನುಮಾನ ಅವರಿಗೆ ಕಾಡಿರಬಹುದು. ಲಂಡನ್ ಅರ್ಥಶಾಸ್ತ್ರ ಶಾಲೆ ಮಾದರಿಯಲ್ಲಿ ಈ ಶಾಲೆಯನ್ನು ಆರಂಭಿಸುವ ಉದ್ದೇಶ ಇತ್ತು. ಇದಕ್ಕಾಗಿ ಯಾವುದೇ ಪೂರ್ವ ಷರತ್ತು ಇಲ್ಲದೆ ನೂರು ಕೋಟಿ ಹಣ ನೀಡಲು ನಿರ್ಧರಿಸಲಾಗಿತ್ತು. ಆಡಳಿತದಲ್ಲಿ ಅಥವಾ ಪ್ರತಿ ದಿನದ ವ್ಯವಹಾರದಲ್ಲಿ ಕೈ ಹಾಕುವ ಉದ್ದೇಶ ಅಥವಾ ಭೂಮಿ ಮಾಲೀಕತ್ವದ ಪ್ರಸ್ತಾವ ಸಂಸ್ಥೆಗೆ ಇರಲಿಲ್ಲ. ಆಕಾಂಕ್ಷಿ ವಿದ್ಯಾರ್ಥಿಗಳಿಗಾಗಿ ಅತ್ಯುತ್ತಮವಾದ ಶಾಲೆ ನಿರ್ಮಿಸುವ ಯೋಚನೆ ಮಾತ್ರ ಇತ್ತು~ ಎಂದು ಸಂಸ್ಥೆಯು ತಿಳಿಸಿದೆ.

`ಆಪಾದನೆಗಳಿಂದ ಕಂಪೆನಿಯ ಗೌರವಕ್ಕೆ ಧಕ್ಕೆ ಉಂಟಾಗಿದೆ. ಆದ್ದರಿಂದ ಶಾಲೆ ಸ್ಥಾಪನೆಯಲ್ಲಿ ನಮಗೆ ಆಸಕ್ತಿ ಇಲ್ಲ. ನೂರು ಕೋಟಿ ರೂಪಾಯಿ ನೀಡಿ ವಿವಾದ ಮತ್ತು ಅನಗತ್ಯ ಆರೋಪಗಳಿಗೆ ಗುರಿಯಾಗಲು ಸಂಸ್ಥೆ ಸಿದ್ಧವಿಲ್ಲ. ಆದ್ದರಿಂದ ಪ್ರಸ್ತಾವದಿಂದ ಹಿಂದಕ್ಕೆ ಸರಿದಿದ್ದೇವೆ~ ಎಂದು ಜಿಂದಾಲ್ ಸಂಸ್ಥೆ ತಿಳಿಸಿದೆ.

`ಈ ಶಾಲೆಯ ಸ್ಥಾಪನೆಗೆ ಕೆಲ ಗಣ್ಯರು ಬೆಂಬಲ ಸೂಚಿಸಿದ್ದರು. ಕೇವಲ ಕೆಲವರ ಅನುಮಾನದಿಂದ ಒಂದು ಉನ್ನತ ಉದ್ದೇಶವೊಂದು ಈಡೇರದೆ ಹೋದದ್ದಕ್ಕೆ ಇದೊಂದು ಉತ್ತಮ ನಿದರ್ಶನ. ವಿ.ವಿ.ಯ ಗೌರವ ಹೆಚ್ಚಿಸುವ ಯೋಜನೆಯನ್ನು ನಿಲ್ಲಿಸಿದವರೇ ಇದಕ್ಕೆ ಉತ್ತರ ನೀಡಲಿ. ಅವರಿಗೆಲ್ಲ ನಮ್ಮ ಶುಭ ಹಾರೈಕೆ~ ಎಂದು ಸಂಸ್ಥೆಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT