ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಆಶಾವಾದ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಚಿತ್ರ: ಪ್ರಾರ್ಥನೆ

ಕನ್ನಡ ಶಾಲೆಗಳ ಅವಗಣನೆ ಕೆಲವು ವರ್ಷಗಳಿಂದ ಚರ್ಚೆಯ ವಸ್ತು. ಇತ್ತೀಚೆಗೆ ಸರ್ಕಾರ ಅಂತ ಕೆಲವು ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ಮಾಡಿದಾಗಲಂತೂ ಚರ್ಚೆ ಕಾವು ಪಡೆದುಕೊಂಡಿತು. ತುಂಬಾ ಸೂಕ್ಷ್ಮವೂ ಸಂಕೀರ್ಣವೂ ಆದ ಈ ಸಮಸ್ಯೆಯ ಹಲವು ಮಗ್ಗಲುಗಳನ್ನು ಬಿಚ್ಚಿಡುವ ಚಿತ್ರವಾಗಿ `ಪ್ರಾರ್ಥನೆ~ ಗಮನಾರ್ಹ ಪ್ರಯತ್ನ.

ಪತ್ರಕರ್ತ ಸದಾಶಿವ ಶೆಣೈ ಚೊಚ್ಚಿಲ ನಿರ್ದೇಶನಕ್ಕೆ ಹೆಕ್ಕಿಕೊಂಡಿರುವ ವಸ್ತುವಿನ ಕಾರಣಕ್ಕೆ ಭರವಸೆ ಮೂಡಿಸುತ್ತಾರೆ. ಜೆ.ಎಂ.ಪ್ರಹ್ಲಾದ್‌ಗೆ ಇಂಥದೊಂದು ಕಥೆಯನ್ನು ಕಟ್ಟಿಕೊಟ್ಟಿದ್ದಕ್ಕೆ ಶಹಬ್ಬಾಸ್‌ಗಿರಿ ಸಲ್ಲಬೇಕು. ವಸ್ತು, ನಿರೂಪಣೆಯ ದೃಷ್ಟಿಯಿಂದಲೂ ಸಿನಿಮಾ ಸ್ತುತ್ಯರ್ಹ.

ಹಳ್ಳಿಶಾಲೆಯ ಮೇಷ್ಟರೊಬ್ಬರು ಆ ಶಾಲೆಯನ್ನು ಉಳಿಸಿಕೊಳ್ಳಲು ಪಡುವ ಪಡಿಪಾಟಲು ಚಿತ್ರದ ಕಥೆ. ಅದಕ್ಕೆ ಅವರ ಪತ್ನಿ, ಗೆಳೆಯನಿಂದಲೇ ಸೃಷ್ಟಿಯಾಗುವ ವೈರುಧ್ಯ ಪರಿಸ್ಥಿತಿ ಸಹಜವಾಗಿ ಮೂಡುವಂಥದ್ದು. ನಾಟಕ ಕಲಿಸುವ ಅವರ ಇನ್ನೊಂದು ಹವ್ಯಾಸವೂ ಚೆನ್ನಾಗಿ ಬಳಕೆಯಾಗಿದೆ. ಚಿತ್ರದಲ್ಲಿ ಕಾಣುವ ಮನರಂಜನೆಯ ಏಕೈಕ ಅಂಶವೆಂದರೆ ಈ ನಾಟಕ ಪ್ರಸಂಗ.

ಇಷ್ಟೆಲ್ಲಾ ಪರಿಕರಗಳಿದ್ದೂ ಸಿನಿಮಾ ಹಾಗೂ ಅದರ ತಂತ್ರಜ್ಞಾನ ವ್ಯಾಕರಣದ ದೃಷ್ಟಿಯಿಂದ `ಪ್ರಾರ್ಥನೆ~ ಪೇವಲವೆನ್ನಿಸುತ್ತದೆ. ರಾಮಚಂದ್ರ ಐತಾಳರ ಕ್ಯಾಮೆರಾ ಕಣ್ಣು ಕೂಡ ಅಂಥ ತಪ್ಪುಗಳನ್ನು ಯಾಕೆ ಮಾಡಿತೋ ಎಂಬ ಪ್ರಶ್ನೆ ಮೂಡುತ್ತದೆ. ಅನುಭವಿ ನಟ ಅನಂತನಾಗ್ ಕೂಡ ಕೆಲವು ಸಂದರ್ಭಗಳಲ್ಲಿ ಭಾವತೀವ್ರತೆ ಇಲ್ಲದಂತೆ ಕಾಣುವುದು ಇನ್ನೊಂದು ಲೋಪ.

ಅಭಿನಯದಲ್ಲಿ ಪ್ರಕಾಶ್ ರೈ, ಪವಿತ್ರಾ ಲೋಕೇಶ್ ಹಾಗೂ ಅಶೋಕ್ ಹೆಚ್ಚು ಗಮನ ಸೆಳೆಯುತ್ತಾರೆ. ಮಾಸ್ಟರ್ ಸಚಿನ್ ಹಾಗೂ ಮಾಸ್ಟರ್ ಮನೋಜ್ ಪಾತ್ರಗಳಿಗೆ ಇನ್ನಷ್ಟು ಜೀವ ತುಂಬಬಹುದಿತ್ತು. ಸುಧಾ ಮೂರ್ತಿಯವರ ಉಪಸ್ಥಿತಿಯಿಂದ ಕೂಡ ಚಿತ್ರಕ್ಕೆ ಹೆಚ್ಚೇನೂ ಅನುಕೂಲವಾಗಿಲ್ಲ.

ಚಿತ್ರದ ಅಂತ್ಯ ಮನಮುಟ್ಟುವಂತಿದೆ. ಕುಸಿದು ಬಿದ್ದ ಶಾಲೆ ನೋಡುತ್ತಾ ಮೇಷ್ಟರು ಹಾಗೂ ಅವರ ಪಟ್ಟ ಶಿಷ್ಯ ಮತ್ತೆ ಕಟ್ಟುವ ಕನಸು ಕಾಣುವುದು ಆಶಾವಾದದ ಬಿಂಬ. ಸಿನಿಮಾ ಕೂಡ ಅಂಥ ಆಶಾವಾದದ ಕಾರಣಕ್ಕೆ ಆಪ್ತವೆನ್ನಿಸುತ್ತದೆ. ಸದಾಶಿವ ಶೆಣೈ ಮುಂದಿನ ನಡೆಗಳ ಬಗ್ಗೆ ಕುತೂಹಲ ಇಟ್ಟುಕೊಳ್ಳಬಹುದು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT