ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಸರ್ವಸಮ್ಮತ ಆಯ್ಕೆ

Last Updated 1 ಏಪ್ರಿಲ್ 2011, 9:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊನೆಗೂ ಕಾಂಗ್ರೆಸ್ ಪಕ್ಷದಲ್ಲಿನ ಒಂದು ಬಣ ತನ್ನ ರಾಜಕೀಯ ಬಲವನ್ನು ಪ್ರದರ್ಶಿಸಿದೆ. ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ದೀಪಕ್ ಚಿಂಚೋರೆ ಆಯ್ಕೆಯಾಗುವ ಮೂಲಕ ಈ ಬಣ ತನ್ನ ಹಠವನ್ನೂ ಸಾಧಿಸಿಕೊಂಡಿದೆ. ಪಕ್ಷದೊಳಗೆ ಯಾವುದೇ ಭಿನ್ನಮತವಿಲ್ಲದೇ ನಡೆದ ಸರ್ವಸಮ್ಮತ ಆಯ್ಕೆ ಇದು ಎಂಬುವುದನ್ನು ಬಿಂಬಿಸುವ ವಿಫಲ ಯತ್ನಗಳು ನಡೆದಿವೆಯಾದರೂ ಅವಳಿನಗರ ಹಾಗೂ ಜಿಲ್ಲಾ ಕಾಂಗ್ರೆಸ್ ರಾಜಕೀಯವನ್ನು ಗಮನಿಸಿದವರು ಇವುಗಳನ್ನು ನಂಬುವುದು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ.

ದೀಪಕ್ ಚಿಂಚೋರೆ ಅವರೇ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಾರೆ ಎಂಬುದಾಗಿ ಈ ಮೊದಲೇ ‘ಪ್ರಜಾವಾಣಿ’ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಮಾಜಿ ಸಚಿವರೂ ಆಗಿರುವ ಪ್ರಮುಖ ನಾಯಕರೊಬ್ಬರ ಅನುಯಾಯಿಗಳಿಗೆ ಇದು ಹಿನ್ನಡೆಯಾಗಲಿದೆ ಎಂಬುದಾಗಿಯೂ ವರದಿಯಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ನೀಡಿದ್ದ ಪತ್ರವೇ ವರದಿಗೆ ಆಧಾರವಾಗಿತ್ತು.

ಆದರೆ ಮಾಜಿ ಸಚಿವರ ಬಣಕ್ಕೆ ಹಿನ್ನಡೆಯಾಗಲಿದೆ ಎನ್ನುವ ಮಾಹಿತಿಯನ್ನು ಅವರ ಅನುಯಾಯಿಗಳು ಸಂಪೂರ್ಣ ಅಲ್ಲಗಳೆದಿದ್ದರು. ಮಾಜಿ ಸಚಿವರ ಬಣಕ್ಕೆ ಹಿನ್ನಡೆಯಾಗಲಿದೆ ಎನ್ನುವ ಮಾಹಿತಿ ಸರಿಯಲ್ಲ ಎಂಬುದಾಗಿಯೂ ಅವರ ಬೆಂಬಲಿಗರು ಹೇಳಿದ್ದರು. ಸರ್ವಸಮ್ಮತವಾಗಿ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ ಎನ್ನುವ ಮಾತನ್ನೂ ಸೇರಿಸಿದ್ದರು. ಜೊತೆಗೆ ಕೆಪಿಸಿಸಿ ಅಧ್ಯಕ್ಷರೇ ಸ್ಥಾನಿಕ ಸಂಸ್ಥೆಯೊಂದರ ವಿರೋಧ ಪಕ್ಷದ ನಾಯಕರು ಯಾರಾಗಬೇಕು ಎಂಬ ಬಗ್ಗೆ ಹೆಚ್ಚು ಗಮನಹರಿಸಲಾರರು ಎನ್ನುವ ಮಾತೂ ಕೇಳಿ ಬಂದಿತ್ತು.

ಈಗ ರಾಜಕೀಯವಾಗಿ ಸರ್ವಸಮ್ಮತವಾಗಿಯೇ ಆಯ್ಕೆ ನಡೆದಿದೆ. ಆದರೆ ಇದು ‘ಸರ್ವಸಮ್ಮತ’ ಎಂಬುದಾಗಿ ಓದಿಕೊಳ್ಳಬೇಕಾದಂತಹ ಆಯ್ಕೆ ಎಂಬುದಾಗಿ ರಾಜಕೀಯ ವಲಯ ವಿಶ್ಲೇಷಣೆ ಮಾಡುತ್ತಿದೆ. ಬೇರೆ ಪಕ್ಷಗಳ ಮಾತು ಹಾಗಿರಲಿ. ಕಾಂಗ್ರೆಸ್ ಕಾರ್ಯಕರ್ತರೇ ತಮ್ಮ ಹೆಸರನ್ನು ಗೋಪ್ಯವಾಗಿಡಿ ಎಂದು ಹೇಳಿ, ಕಾಂಗ್ರೆಸ್‌ನ ಇಲ್ಲಿನ ಒಂದು ಬಣಕ್ಕೆ ಇದು ಸಂಪೂರ್ಣ ಹಿನ್ನಡೆ ಎಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೊಳ್ಳುತ್ತಿದ್ದಾರೆ.

ಈಗ ನಡೆದಿರುವ ಆಯ್ಕೆ ನಗರದ ಹಾಲಿ ಕಾಂಗ್ರೆಸ್ ಅಧ್ಯಕ್ಷರ ಬಣಕ್ಕೆ ಆದ ಹಿನ್ನಡೆಯೋ ಅಥವಾ ಅವರ ಸಮ್ಮತಿಯೂ ಇದಕ್ಕೆ ಇದೆಯೋ ಎಂದು ಕೇಳಿದರೆ ಒಮ್ಮತಾಭಿಪ್ರಾಯ ಬರಲು ಸಾಧ್ಯವೇ ಇಲ್ಲ. ಏಕೆಂದರೆ ಜಿಲ್ಲೆ ಹಾಗೂ ಅವಳಿನಗರ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮಿತಿ ಮೀರಿ ಇರುವುದು ರಾಜಕೀಯವನ್ನು ಹತ್ತಿರದಿಂದ ನೋಡಿದವರಿಗೆ ತಿಳಿದ ವಿಷಯವೇ. ಅನೇಕ ಹಿರಿಯ ಧುರೀಣರಿಗೆ ಇದೆಲ್ಲದರ ಸ್ಪಷ್ಟ ಚಿತ್ರಣವಿದ್ದರೂ ಇಲ್ಲಿನ ಕಾಂಗ್ರೆಸ್ ಗುಂಪುಗಾರಿಕೆಯನ್ನು ಕೊನೆಗಾಣಿಸಲು ಕಳೆದೊಂದು ದಶಕದಿಂದ ಸಾಧ್ಯವೇ ಆಗಿಲ್ಲ.

ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಹುಬ್ಬಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಗುಂಪುಗಾರಿಕೆ ಇಲ್ಲಿದೆ ಎನ್ನುವುದು ಅವರ ಗಮನಕ್ಕೆ ಬರುವಂತೆಯೇ ಎದ್ದು ಕಂಡಿತ್ತು. ಪರಮೇಶ್ವರ ಅವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದವರು ಯಾರ್ಯಾರು; ಹುಬ್ಬಳ್ಳಿಯವರೇ ಆದ ಮಾಜಿ ಸಚಿವರೊಬ್ಬರು ಏಕೆ ಅಲ್ಲಿ ಕಾಣಿಸಿಕೊಳ್ಳಲಿಲ್ಲ; ಈ ಮಾಜಿ ಸಚಿವರ ಕಡೆಯವರು ಹಾಲಿ ಅಧ್ಯಕ್ಷರು ಮತ್ತವರ ಬೆಂಬಲಿಗರಿಂದ ಸಾಕಷ್ಟು ದೂರದಲ್ಲಿ ನಿಂತಿದ್ದು ಏಕೆ; ಹೀಗೆ ದೂರ ನಿಂತವರ ಪೈಕಿ ಮಾಜಿ ಮೇಯರ್ ಒಬ್ಬರೂ ಇರಲಿಲ್ಲವೇ ಎನ್ನುವ ಪ್ರಶ್ನೆಗಳು ಕಾಂಗ್ರೆಸ್ ಒಳಗಡೆಯಿಂದಲೇ ಕೇಳಿ ಬರುತ್ತಿವೆ. ಏನೇ ಆಗಲಿ, ದೀಪಕ್ ಚಿಂಚೋರೆ ಅವರು ‘ಸರ್ವಾನುಮತದಿಂದ’ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಯನ್ನು ಮಹಾನಗರ ಕಾಂಗ್ರೆಸ್ ಅಧ್ಯಕ್ಷರು ದೃಢೀಕರಿಸಿದ್ದಾರೆ.

ಪಾಲಿಕೆ ವಿರೋಧಪಕ್ಷ ನಾಯಕರಾಗಿ ಚಿಂಚೋರೆ
ಹುಬ್ಬಳ್ಳಿ: ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ದೀಪಕ್ ಚಿಂಚೋರೆ ಆಯ್ಕೆಯಾದರು. ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಎಂ. ಹಿಂಡಸಗೇರಿಯವರು ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಚಿಂಚೋರೆ ಅವರನ್ನು ಆಯ್ಕೆಗೊಳಿಸಿದರು. ಗುರುವಾರ ಪಾಲಿಕೆಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಚಿಂಚೋರೆ ಅವರನ್ನು ಗೌರವಿಸಲಾಯಿತು.ಪಾಲಿಕೆ ಸದಸ್ಯರಾದ ದೊರೆರಾಜ ಮಣಿಕಂಟ್ಲ, ಮಾಜಿ ಮೇಯರ್ ಅನಿಲಕುಮಾರ ಪಾಟೀಲ, ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಬ್ಲಾಕ್ ಅಧ್ಯಕ್ಷ ಹೇಮಂತ ಗುರ್ಲಹೊಸೂರ, ವಸಂತ ಅರ್ಕಾಚಾರ, ಪರಶುರಾಮ ಚುರಮರಿ, ಸಲೀಂ ಕರಡಿಗುಡ್ಡ, ರಾಜು ಢವಳೆ, ಯಮನೂರ ಜಾಧವ, ಜಯಂತ ಸಾಗರ, ಬಂಗಾರೇಶ ಹಿರೇಮಠ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT