ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟೂರು ಹೌದಾಲಿನಲ್ಲಿ ಶೋಕಸಾಗರ

Last Updated 2 ಜನವರಿ 2012, 8:35 IST
ಅಕ್ಷರ ಗಾತ್ರ

ಮೂಡುಬಿದಿರೆ: ಚಿಕ್ಕಮಗಳೂರಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಹತ್ಯೆಯಾದ ನಯನಾ (22) ಮೂಲತಃ ಪಡುಕೊಣಾಜೆ ಗ್ರಾಮದ ಹೌದಾಲು ನಿವಾಸಿಯಾಗಿದ್ದು ಈ ಆಘಾತಕಾರಿ ಸುದ್ದಿಯಿಂದ ಹುಟ್ಟೂರಿನ ಜನ ಬೆಚ್ಚಿ ಬಿದ್ದಿದ್ದಾರೆ.

ಭಾನುವಾರ ಮಧ್ಯಾಹ್ನ ನಯನಾ ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತಂದಾಗ ಜನ ಶೋಕಸಾಗರದಲ್ಲಿ ಮುಳುಗಿದರು. ಇಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ನಯನಾ ಅವರ ತಂದೆ ಆನಂದ ನಾಯ್ಕ ಅವರು ಪೂರ್ವಮ್ಮ ಅವರನ್ನು ವಿವಾಹವಾದ ಬಳಿಕ ಚಿಕ್ಕಮಗಳೂರಿನ ಟಿಪ್ಪು ನಗರಕ್ಕೆ ತೆರಳಿದ್ದರು. ಅಲ್ಲಿ ಹೊಟೇಲ್ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ನಾಗೇಶ್ ಮತ್ತು ನಯನಾ ಎಂಬ ಇಬ್ಬರು ಮಕ್ಕಳು. ಮಗಳು ನಯನಾ ಅವರಿಗೆ ತಾ.ಪಂ.ಕಚೇರಿಯಲ್ಲಿ ಕೆಲಸ ಸಿಕ್ಕಿದ ಬಳಿಕ ಮನೆಯ ಜವಾಬ್ದಾರಿ ಸ್ವಲ್ಪ ಕಡಿಮೆಯಾಯಿತು ಎಂದು ಮನೆಯವರು ಖುಷಿಯಲ್ಲಿದ್ದರು. ಆದರೆ ಆ ಸಂತೋಷ ಕೆಲವೇ ದಿನಗಳಲ್ಲಿ ದೂರವಾಗಿದೆ.

ನಯನಾ ಅವರು ಚಿಕ್ಕಮಗಳೂರಿನ ತಾ.ಪಂ.ನಲ್ಲಿ ಒಂದು ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಊಟದ ಸಮಯದಲ್ಲಿ ಸ್ಥಳೀಯ ಎಂ.ಜಿ ರಸ್ತೆಯ ಕಂಪ್ಯೂಟರ್ ಕೇಂದ್ರದ ಶಿಕ್ಷಕ ಸುಬ್ರಹ್ಮಣ್ಯ (36) ಎಂಬಾತ ತಾ.ಪಂ. ಕಚೇರಿಯ ಎರಡನೇ ಮಹಡಿಗೆ ಬಂದು ಆಕೆಯ ಕುತ್ತಿಗೆಗ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎಂಬ ಆರೋಪ ಇದೆ. ಮಧ್ಯಾಹ್ನ ಊಟದ ಸಮಯವಾಗಿದ್ದುದರಿಂದ ಕಚೇರಿಯಲ್ಲಿದ್ದ ಹೆಚ್ಚಿನವರೆಲ್ಲಾ ಹೊರಗೆ ಹೋಗಿದ್ದರು. ಸ್ವಲ್ಪ ಹೊತ್ತಿನ ನಂತರ ಸಿಬ್ಬಂದಿ ಬಂದು ನೋಡಿದಾಗಲೇ ಕೊಲೆ ವಿಚಾರ ಬೆಳಕಿಗೆ ಬಂದಿತ್ತು.

ನಯನಾ ಇದಕ್ಕೆ ಮೊದಲು ಯುವ ಡಾಟ್.ಕಂ ಕಂಪ್ಯೂಟರ್ ಸೆಂಟರ್‌ಗೆ ಕಂಪ್ಯೂಟರ್ ಕಲಿಯಲು ಹೋಗುತ್ತಿದ್ದಳು. ಅಲ್ಲಿನ ಶಿಕ್ಷಕ ಸುಬ್ರಹ್ಮಣ್ಯ (36) ಎಂಬಾತ ತನ್ನನ್ನು ಪ್ರೀತಿಸುವಂತೆ ಈಕೆಯನ್ನು ಪೀಡಿಸುತ್ತಿದ್ದ. ಇದನ್ನು ಯುವತಿ ತಿರಸ್ಕರಿಸಿದ್ದರಿಂದಲೇ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT