ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹುಬ್ಬಳ್ಳಿಯಲ್ಲಿ ಆಡಲು ಮತ್ತೆ ಬರುತ್ತೇವೆ'

ಆಟಗಾರರಿಗೆ ಸಿಹಿ; ಸಂಘಟಕರಿಗೆ ಬ್ಯಾಟಿನಲ್ಲಿ ಸಹಿ
Last Updated 26 ಡಿಸೆಂಬರ್ 2012, 7:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಯದ ಸಿಹಿ ಸವಿಯಲು ಉಭಯ ತಂಡಗಳಿಗೂ ಸಾಧ್ಯವಾಗಲಿಲ್ಲವಾದರೂ ಪಂದ್ಯದ ಕೊನೆಯಲ್ಲಿ ಎರಡು ಕಡೆಯವರ ಮುಖದಲ್ಲಿ ಮಂದಹಾಸ ಮೂಡಿತ್ತು. ದೂರದಿಂದ ಬಂದ ಹರಿಯಾಣ ತಂಡದವರು ಇಲ್ಲಿನ ಆತಿಥ್ಯ, ಸೌಲಭ್ಯ ಇತ್ಯಾದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಆತಿಥೇಯರು ಸಂಘಟಕರ ಕುರಿತು ಒಳ್ಳೆಯ ಅಭಿಪ್ರಾಯವನ್ನು ಹೇಳಿದರು.

ಎರಡು ದಶಕಗಳ ನಂತರ ನಡೆದ, ಕೆಎಸ್‌ಸಿಎ ಹೊಸ ಮೈದಾನಕ್ಕೆ ಕಳೆ ತಂದ ರಣಜಿ ಪಂದ್ಯದ ಕೊನೆಯ ದಿನವಾದ ಮಂಗಳವಾರ ಕೆಎಸ್‌ಸಿಎ ಧಾರವಾಡ ವಲಯದ ವತಿಯಿಂದ ಆಟಗಾರರಿಗೆ ಪೇಡಾ ಪೊಟ್ಟಣಗಳನ್ನು ಕಾಣಿಕೆಯಾಗಿ ನೀಡಲಾಯಿತು. ಪಂದ್ಯವನ್ನು ಸುಸೂತ್ರವಾಗಿ ಆಯೋಜಿಸಿದ್ದಕ್ಕೆ ಸಂತಸಗೊಂಡ ಉಭಯ ತಂಡಗಳ ನಾಯಕರು ವಲಯ ಸಂಚಾಲಕ ಬಾಬಾ ಭೂಸದ ಹಾಗೂ ಅಧ್ಯಕ್ಷ ವೀರಣ್ಣ ಸವಡಿ ಅವರಿಗೆ ಎಲ್ಲ ಆಟಗಾರರ ಸಹಿ ಒಳಗೊಂಡ ಬ್ಯಾಟ್ ನೀಡಿ ಹೃದಯ ತಂಪಾಗಿಸಿದರು. ಇಲ್ಲಿ ಇನ್ನೂ ಪ್ರಥಮ ದರ್ಜೆ ಪಂದ್ಯಗಳು ಸಾಕಷ್ಟು ನಡೆಯಲಿರುವ ಭರವಸೆ ಮೂಡಿದ್ದರಿಂದ ಕರ್ನಾಟಕದ ಆಟಗಾರರು ಸಾರ್ವಜನಿಕರಿಗೆ ಹೇಳಿದರು: `ಮತ್ತೆ ಬರುತ್ತೇವೆ, ಹುಬ್ಬಳ್ಳಿಯಲ್ಲಿ ಆಡುತ್ತೇವೆ'

ಪಂದ್ಯ ಮುಗಿದ ನಂತರ ಮೈದಾನದಲ್ಲಿ ಸರಳ ಸಮಾರಂಭ ನಡೆಯುತ್ತಿದ್ದಾಗ ಗ್ಯಾಲರಿಯಿಂದ ಕೇಳಿ ಬಂದ ಬೇಡಿಕೆಗೆ ಸ್ಪಂದಿಸಿ ಮೈಕ್ ಹಿಡಿದು ನಿಂತ ರಾಬಿನ್ ಉತ್ತಪ್ಪ `ಚೆನ್ನಾಗಿ ಪಂದ್ಯವನ್ನು ಸಂಘಟಿಸಿದ್ದು ಸಂತಸ ತಂದಿದೆ, ನಾಲ್ಕು ದಿನ ಕೂಡ ಭಾರಿ ಸಂಖ್ಯೆಯಲ್ಲಿ ಬಂದ ಪ್ರೇಕ್ಷಕರು ನಮಗೆ ಹುಮ್ಮಸ್ಸು ತುಂಬಿದ್ದಾರೆ' ಎಂದು ಹೇಳಿದರು.

`ಹುಬ್ಬಳ್ಳಿಯ ಮೈದಾನ ಅತ್ಯುತ್ತಮವಾಗಿದೆ. ಮುಂದೆಯೂ ಇಲ್ಲಿ ಆಡಲು ಬರುತ್ತೇವೆ. ಆಗಲೂ ಇದೇ ರೀತಿಯಲ್ಲಿ ಸ್ಪಂದಿಸಬೇಕು' ಎಂದು ಕರ್ನಾಟಕದ ಪರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಉತ್ತಪ್ಪ ಹೇಳಿದರು. ಹೊಸ ವರ್ಷದ ಶುಭಾಶಯಗಳನ್ನು ಹೇಳುತ್ತಿದ್ದಂತೆ ಗ್ಯಾಲರಿಯಲ್ಲಿ ಹರ್ಷೋದ್ಗಾರ ಕೇಳಿ ಬಂತು.

ಹರಿಯಾಣ ನಾಯಕ ಅಮಿತ್ ಮಿಶ್ರಾ ಹಾಗೂ ಕರ್ನಾಟಕ ತಂಡದ ನಾಯಕ ಸ್ಟುವರ್ಟ್ ಬಿನ್ನಿ ಕೂಡ ಕೃತಜ್ಞತೆಯ ನುಡಿಗಳನ್ನಾಡಿದರು.
ಉಭಯ ತಂಡಗಳ ವ್ಯವಸ್ಥಾಪಕರಾದ ಸಂಜಯ ದೇಸಾಯಿ ಮತ್ತು ಸುರೀಂದರ್ ಸಿಂಗ್ ಹುಬ್ಬಳ್ಳಿಯ ಮೈದಾನವನ್ನು ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.

ಪಾಂಡೆಗೆ ಭಾರಿ ಬೇಡಿಕೆ
ಆಟಗಾರರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವಾಗ ಸ್ಫೋಟಕ ಬ್ಯಾಟ್ಸಮನ್, ಕರ್ನಾಟಕದ ಮನೀಶ್ ಪಾಂಡೆ ಡ್ರೆಸ್ಸಿಂಗ್ ರೂಂಗೆ ತೆರಳಿದ್ದರು. ಪಾಂಡೆಯೂ ಮಾತನಾಡಬೇಕು ಎಂದು ಗ್ಯಾಲರಿಯಿಂದ ಬೇಡಿಕೆ ಬಂತು. ಕಾರ್ಯಕ್ರಮ ನಿರೂಪಿಸುತ್ತಿದ್ದ ಧಾರವಾಡದ ವಸಂತ ಮುರುಡೇಶ್ವರ ಅವರು ಪಾಂಡೆ ಹೊರ ಬಂದು ಮಾತನಾಡಬೇಕೆಂದು ಕೋರಿದರು.

ಆದರೆ ಅವರು ಬರಲಿಲ್ಲ. ಮತ್ತೆ ಬೇಡಿಕೆ ಇಟ್ಟರು. ಅಷ್ಟರಲ್ಲಿ ಗ್ಯಾಲರಿಯಿಂದಲೂ ಒತ್ತಡ ಹೆಚ್ಚಾಯಿತು. ಕೊನೆಗೆ ಪಾಂಡೆ ಬಾರದೇ ಇದ್ದರೆ ಪ್ರೇಕ್ಷಕರು ಜಾಗ ಬಿಟ್ಟು ಕದಲುವುದಿಲ್ಲ ಎಂದು ವಸಂತ ಅವರು ಘೋಷಿಸಿದರು. ಅಷ್ಟರಲ್ಲಿ ಓಡೋಡಿ ಬಂದು ಸಣ್ಣ ದನಿಯಲ್ಲಿ ಎಲ್ಲರಿಗೂ ವಂದನೆ ಸಲ್ಲಿಸಿದರು.
ನಂತರ ಸ್ಟುವರ್ಟ್ ಬಿನ್ನಿ ಜೊತೆ ಪ್ರೇಕ್ಷಕರ ಬಳಿಗೆ ತೆರಳಿದ ಅವರು ಎಲ್ಲರಿಗೂ ಕೈಯಲ್ಲೇ `ಹಾಯ್' ಹೇಳಿದರು, `ಥಮ್ಸ-ಅಪ್' ಮಾಡಿ ಮುಂದೆ ಚೆನ್ನಾಗಿ ಆಡುತ್ತೇವೆ ಎಂದು ಪರೋಕ್ಷವಾಗಿ ಹೇಳಿದರು.

ಎಲ್ಲ ಸುಸೂತ್ರವಾಗಿ ನಡೆಯಲು ನೆರವು ನೀಡಿದ ಸಾರ್ವಜನಿಕರು ಹಾಗೂ ಆಟಗಾರರಿಗೆ ಬಾಬಾ ಭೂಸದ ಧನ್ಯವಾದ ಅರ್ಪಿಸಿದರು.
ಕದಲದ ಜನರು: 20 ವರ್ಷಗಳ ನಂತರ ನಗರದಲ್ಲಿ ನಡೆದ ಮೊಲದ ರಣಜಿ ಪಂದ್ಯವನ್ನು ನಾಲ್ಕು ದಿನ ವೀಕ್ಷಿಸಿ ಕಣ್ಣುತುಂಬಿಕೊಂಡ, ಹರಿಯಾಣ ಬಾಲಂಗೋಚಿಗಳು ಎಂಟನೇ ವಿಕೆಟ್‌ಗೆ ಮಾಡಿದ ದಾಖಲೆಯನ್ನು ಸವಿದ, ಕುನಾಲ್ ಕಪೂರ್ ಅವರ `ಉಭಯ ಶತಕ'ಗಳ ದಾಖಲೆಗೆ ಸಾಕ್ಷಿಯಾದ, ಸ್ಟಾರ್ ಬ್ಯಾಟ್ಸಮನ್ ರಾಬಿನ್ ಉತ್ತಪ್ಪ ಅವರ ಬ್ಯಾಟಿಂಗ್ ಕಾವ್ಯದ ಸವಿಯುಂಡ ಹಾಗೂ ಅಮಿತ್ ಮಿಶ್ರಾ-ಜೋಗೀಂದರ್ ಶರ್ಮಾ ಬೌಲಿಂಗ್ ಕಣ್ಣಾರೆ ಕಂಡ ಪ್ರೇಕ್ಷಕರು ಪಂದ್ಯ ಮುಗಿದರೂ ಕದಲಲಿಲ್ಲ.

ಕೆಲವರು ಕುಳಿತಲ್ಲೇ ಆಟಗಾರರ ಚಲನವಲನಗಳನ್ನು ನೋಡಲು ಕಾತರರಾದರೆ ಇನ್ನು ಕೆಲವರು ಮೈದಾನಕ್ಕೆ ನುಗ್ಗಿ ನೆಚ್ಚಿನ ಆಟಗಾರರನ್ನು ಸನಿಹದಿಂದ ನೋಡುವ ಪ್ರಯತ್ನ ಮಾಡಿ ಪೊಲೀಸರಿಂದ ಬೈಸಿಕೊಂಡರು. ಮತ್ತೆ ಕೆಲವರು ಗೇಟ್ ಬಳಿ ನಿಂತು ಆಟಗಾರರ ಬಸ್ ಸಾಗುವುದನ್ನು ಕಾದರು. ಬಸ್‌ಗಳು ಹೋದ ನಂತರವೇ ಅವರು ಕೂಡ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT