ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹುಲಿಬಾಯಿ' ಹೊಕ್ಕ ಮಹದಾನಂದ!

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಕಣ್ಣು ಹರಿಸಿದಷ್ಟೂ ದೂರ ಕಾಣುವ ದಟ್ಟ ಕಾಡು. ಗಿಡ ಮರಗಳ ನಡುವೆ ಓಡಾಡಲು ಏನೋ ಒಂಥರ ಆನಂದ. ತಣ್ಣನೆ ಗಾಳಿ, ಮರಗಳ ಸಂದಿಯಿಂದ ಇಣುಕುವ ಸೂರ್ಯ ರಶ್ಮಿ, ಸುಮಾರು 1 ಕಿ.ಮೀ. ದೂರ ಪಯಣಿಸುವ ಈ ಅನುಭವ ನಿಜಕ್ಕೂ ಅವಿಸ್ಮರಣೀಯ.

ಶಿವಮೊಗ್ಗದಿಂದ ಶೆಟ್ಟಿಹಳ್ಳಿ ಪ್ರವಾಸಿ ಮಂದಿರದ ತನಕ ವಾಹನದಲ್ಲಿ ಸಂಚರಿಸಿ ನಂತರ ಅಲ್ಲಿಂದ ಸುಮಾರು 1.50 ಕಿ.ಮೀ ಪುಟ್ಟ ನೀರಿನ ಕಾಲುವೆಯ ಮಾರ್ಗ ಹಿಡಿದು ಹೋದರೆ ಸಿಗುವುದೇ ಹುಲಿಬಾಯಿಹಳ್ಳ. ಹುಲಿಯ ಬಾಯಿಯ ರೂಪದಲ್ಲಿ ಈ ಹಳ್ಳ ಇರುವುದೇ ಈ ಹೆಸರು ಬರಲು ಕಾರಣ.

ಪಶ್ಚಿಮಘಟ್ಟದ ದಟ್ಟ ಕಾಡಿಗೆ ಹೊಂದಿಕೊಂಡಿರುವ ಶೆಟ್ಟಿಹಳ್ಳಿ ಅಭಯಾರಣ್ಯದ ಒಳಹೊಕ್ಕರೆ ಚಾರಣ ಪ್ರಿಯರ ಮನದಣಿಸುವ ಸುಂದರ ಜಲಪಾತವನ್ನು ಕಣ್ತುಂಬಿಕೊಳ್ಳುವ ಅವಕಾಶ ಹುಲಿಬಾಯಿಹಳ್ಳ ನೀಡುತ್ತದೆ. ಶೆಟ್ಟಿಹಳ್ಳಿ ಪ್ರವಾಸಿ ಮಂದಿರದ ದಟ್ಟ ಕಾಡಿನೊಳಗೆ ನಡೆದಾಡುವ ಶಬ್ದ ಹೆಚ್ಚಿಸುತ್ತಾ, ಪ್ರಕೃತಿ ಸವಿಯುತ್ತಾ ಮುಂದೆ ಸಾಗಿದಾಗ ಹುಲಿಬಾಯಿಹಳ್ಳ ಹೆಸರಿನ ಪುಟ್ಟದೊಂದು ಜಲಪಾತ ಕಣ್ಣಿಗೆ ಕಾಣುತ್ತದೆ. ನೋಡಲು ಹುಲಿಯ ಆಕಾರದ ಈ ಜಲಪಾತದಲ್ಲಿ ವರ್ಷವಿಡೀ ನೀರು ಹರಿಯುತ್ತದೆ. ಇದು ಚಿಕ್ಕದೊಂದು ಕಾಲುವೆ ಮೂಲಕ ಮುಂದೆ ಸಾಗುತ್ತಾ, ಪುರದಾಳಿನ ಡ್ಯಾಮ್‌ಗೆ ಸೇರುತ್ತದೆ.

ಚಾರಣಕ್ಕೆ ಹೆಸರು ವಾಸಿಯಾದ ಹುಲಿಬಾಯಿಹಳ್ಳದ ನಡೆದಾಡುವ ಮೂರು ಕಿ.ಮೀ. ಮಾರ್ಗ ನಿಜಕ್ಕೂ ಹತ್ತು-ಹಲವು ವಿಸ್ಮಯಗಳನ್ನು ನಮ್ಮಳಗಿನ ಕಾನನದ ಕೌತುಕವನ್ನು ಮೂಡಿಸುತ್ತದೆ. ಇಲ್ಲಿ ಚಾರಣ ಪ್ರಿಯರ ದಂಡಿಗೆ ಆನೆ, ಜಿಂಕೆ, ಕಡಬ, ಹಂದಿಗಳು ಹಾಗೂ ಹಾವು, ಮಂಗ ಸೇರಿದಂತೆ ಹತ್ತು-ಹಲವು ಬಗೆಯ ಪ್ರಾಣಿಗಳನ್ನು, ಬಗೆಬಗೆಯ ಪಕ್ಷಿಗಳನ್ನು, ಅವುಗಳ ಅಹ್ಲಾದಕರ ಕೂಗುಗಳನ್ನು ಕೇಳಿ ಮನತಣಿಸಿಕೊಳ್ಳುವ ಅಪರೂಪದ ಅವಕಾಶ.

ಆಧುನೀಕರಣದ ಬೇಗೆಗೆ ಒಂದಿಷ್ಟು ನೀರಿನ ಪೈಪ್‌ಗಳು ಕಾಣಿಸಿಕೊಳ್ಳುವ ಮೂಲಕ ಕಾಡಿನ ಅಂದಕ್ಕೆ ಕಪ್ಪು ಚುಕ್ಕೆ ಸೇರಿಕೊಂಡಿದೆ. ಅದನ್ನು ಹೊರತು ಪಡಿಸಿದರೆ ಚಾರಣದ ಈ ಜಾಗವೆಲ್ಲ ದಟ್ಟ ಕಾಡಿನ ಸವಿ ನೀಡುತ್ತವೆ.

ಹುಲಿಬಾಯಿಹಳ್ಳದ ಈ ನೀರು ಬರುವ ಜಾಗದ ಅಕ್ಕಪಕ್ಕದಲ್ಲಿ ಕೆಲ ಸಣ್ಣ ಸಣ್ಣ ಗುಹೆಗಳಿವೆ. ಅವುಗಳನ್ನು ನೋಡುತ್ತಾ ಪ್ರಾಣಿ, ಪಕ್ಷಿಗಳ ಆಟೋಟಗಳನ್ನು ವೀಕ್ಷಿಸುವ ತವಕ ಇಟ್ಟುಕೊಂಡು ಒಂದಿಡೀ ದಿನ ಮನಸೋಇಚ್ಛೆ ಆನಂದ ಪಡುವ ಅವಕಾಶ ಇಲ್ಲಿ ಲಭ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT