ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಬಿಟ್ಟ ಬಿದಿರು: ಕಣ್ಮರೆಯಾದ ಕಣಿಲೆ

Last Updated 18 ಜೂನ್ 2011, 8:50 IST
ಅಕ್ಷರ ಗಾತ್ರ

ವಿಶೇಷ ವರದಿ
ನಾಪೋಕ್ಲು:
ಕೊಡಗಿನ ಬಹುತೇಕ ಮೀಸಲು ಅರಣ್ಯದಲ್ಲಿ ಬಿದಿರು ಹೂಬಿಟ್ಟಿದೆ. ಪ್ರತಿ 40-50 ವರ್ಷಗಳಿಗೊಮ್ಮೆ ಬಿದಿರಿನಲ್ಲಿ ಹೂ ಬಿಡುವುದು ನೈಸರ್ಗಿಕ ನಿಯಮವಾದರೂ ಇದರಿಂದ ಕಾಡಿನಲ್ಲಿ, ಕಾವೇರಿ ನದಿ ತೀರಗಳಲ್ಲಿ ಬಿದಿರು ಒಣಗಿ ಅವಸಾನದ ಅಂಚಿಗೆ ತಲುಪಿವೆ.

ಇದರಿಂದಾಗಿ ಪ್ರತಿ ಮಳೆ ಗಾಲದ ಆರಂಭದಲ್ಲಿ ಹೇರಳವಾಗಿ ಸಿಗುತ್ತಿದ್ದ ಕಣಿ ಲೆಯೂ ಇಲ್ಲವಾಗಿದೆ. ಅಂತೆಯೇ ಈ ವರ್ಷ ಕೊಡ ಗಿನ ಮಳೆಗಾಲದ ತರಕಾರಿಯ ಸ್ಥಾನದಿಂದ ಕಣಿಲೆ ಮರೆಯಾಗಿವೆ. ಕಾವೇರಿ ನದಿ ತೀರದುದ್ದಕ್ಕೂ ಬಿದಿರ ಮೆಳೆಗಳು ಒಣಗಿದ್ದು ಕಣಿಲೆ ಕಣ್ಮರೆಯಾಗಿದೆ.

ಮಳೆಗಾಲದಲ್ಲಿ ಕೊಡಗಿನವರು ಬಳಸುವ ತರಕಾರಿಗಳ ಪಟ್ಟಿಯಲ್ಲಿ ಕಣಿಲೆಗೆ ಮೊದಲ ಸ್ಥಾನ. ಊರ ಸಂತೆಯಲ್ಲಿ, ಮಾರುಕಟ್ಟೆಯಲ್ಲಿ ಕಣಿಲೆ ಕಾಣ ಸಿಕ್ಕಿದರೆ ಬೇರೆ ತರಕಾರಿ ಕೊಳ್ಳುವುದನ್ನು ಬಿಟ್ಟು ಕಣಿಲೆಯನ್ನು ಕೊಂಡುಕೊಳ್ಳುವಲ್ಲಿ ಬಹಳ ಆಸಕ್ತಿ ತೋರುತ್ತಾರೆ.

ಮಳೆಗಾಲ ಬಂತೆಂದರೆ ಹಳ್ಳಿಗಳ ಲ್ಲೇಕೆ? ಕೊಡಗಿನ ಪಟ್ಟಣಗಳಲ್ಲೂ ಕಣಿಲೆಗೆ ವಿಶೇಷ ಬೇಡಿಕೆ. ನಿಮ್ಮಲ್ಲಿ ಕಣಿಲೆ ಇದೆಯಾ? ನೋಡಿ ಎಲ್ಲಾದರೂ ಸಿಕ್ಕರೆ ನಮಗೊಂದಿಷ್ಟು ಕಣಿಲೆ ತಲುಪಿಸಿ ಎಂದು ನಗರದವರು ಹಳ್ಳಿಗರನ್ನು ಕೋರುವ ದೃಶ್ಯ ಸಾಮಾನ್ಯ. ಹಳ್ಳಿಗರೂ ಅಷ್ಟೇ ಸಿಕ್ಕಲ್ಲಿಂದ ಕಣಿಲೆಯನ್ನು ಕುಯ್ದು ತಂದು ಮಾರಾಟ ಮಾಡಿ ಒಂದಷ್ಟು ಕಾಸು ಗಿಟ್ಟಿಸಿಕೊಳ್ಳುತ್ತಾರೆ.

ಕಣಿಲೆ ಶೀತ ಪ್ರದೇಶಕ್ಕೆ, ಅಲ್ಲಿನ ಹವಾಮಾನಕ್ಕೆ ಹೇಳಿ ಮಾಡಿಸಿದ ಜನಪ್ರಿಯ ತರಕಾರಿ. ಸಾಕಷ್ಟು ವೈವಿಧ್ಯಮಯ ಸ್ವಾದಿಷ್ಟ ಖಾದ್ಯಗಳನ್ನು ಅದರಿಂದ ಮಾಡಬಹುದು. ಅಡುಗೆ ನುರಿತವರ ಕೈಯಲ್ಲಿ ಕಣಿಲೆ ನಾನಾ ರೀತಿಯ ಸ್ವಾದಿಷ್ಟ ತಿಂಡಿ ತಿನಿಸು ಗಳಾಗಿ ಬಾಯಲ್ಲಿ ನೀರೂರಿಸುತ್ತವೆ.

ಮಳೆಗಾಲದಲ್ಲಿ ಕಣಿಲೆಯ ಸಾರು, ಪಲ್ಯ, ಪತ್ರೊಡೆ, ವಡೆ, ರೊಟ್ಟಿ, ಉಂಡಲಕಾಳು, ಉಪ್ಪಿನಕಾಯಿ ಮುಂತಾದ ಹಲವು ವಿಶಿಷ್ಟ ತಿಂಡಿ ತಿನಿಸುಗಳ ತಯಾರಿಕೆಗೆ ಕಣಿಲೆಯನ್ನು ಬಳಸಿಕೊಳ್ಳುವ ಗುಟ್ಟು ಕೊಡಗಿನ ಮಹಿಳೆಯರಿಗೆ ಗೊತ್ತಿದೆ. ಇದೇನಿದು ಕಣಿಲೆ? ಎಂದು ಕೊಡಗಿನೇತರರು ಅಚ್ಚರಿಪಡ ಬಹುದು.
 
ಕೊಡಗಿನಂತೆ ಇತರೆಡೆಗಳಲ್ಲಿ ಕಣಿಲೆ ಯನ್ನು ಬಳಸುವವರು ಬಹಳ ಕಡಿಮೆ. ದಕ್ಷಿಣ ಕನ್ನಡದವರಿಗಂತೂ ಕಣಿಲೆಯ ಬಗ್ಗೆ ಅಸಡ್ಡೆಯೇ. ಹಾಗೆಂದು ಕಣಿಲೆ ಅಸಡ್ಡೆ ತೋರುವ ವಸ್ತುವೇನಲ್ಲ. ಜನಪ್ರಿಯ ತರಕಾರಿಯಾಗಿ ಮೆರೆಯುವ ಕಣಿಲೆ ಬಿದಿರಿನ ಎಳೆಯ ಕುಡಿಗಳು.

ಬಿದಿರಿನೊಡನೆ ಮನುಷ್ಯನದು ಒಂದು ವಿಧದ ಭಾವನಾತ್ಮಕ ಸಂಬಂಧ. ಅನಂತ ವಿಸ್ಮಯಗಳ, ಅಪಾರ ಬಳಕೆಗಳ ಬಿದಿರು ಎಲ್ಲರಿಗೂ ಪರಿಚಿತ ಸಸ್ಯ. ಹೇರಳವಾಗಿ ಅದು ಲಭ್ಯವೂ ಕೂಡಾ. ನಿತ್ಯ ಬಳಕೆಯಲ್ಲಿರುವ ಬಿದಿರಿನ ಬುಟ್ಟಿ, ತಟ್ಟೆ, ಮೊರ, ತಡಿಕೆಗಳು ಸುಮಧುರ ಕಲಾಕೃತಿಗಳು ಒತ್ತಟ್ಟಿ ಗಿರಲಿ, ಬಿದಿರು ಮೊಳಕೆಯೊಡೆದು ಬರುವಾಗಲೇ  ಜನಸಾಮಾನ್ಯರ ಅಹಾರವಾಗಿ ಬಳಕೆಯಾಗುವುದು ವಿಶಿಷ್ಟವೇ ಸರಿ.

ಬಿದಿರು ಕೇವಲ ಒಂದು ಹುಲ್ಲು ಸಸ್ಯ. ಎಂತದೇ ಪರಿಸರದಲ್ಲಿ ಉಳಿಯಬಲ್ಲ, ಬೆಳೆಯಬಲ್ಲ ಸಾಮರ್ಥ್ಯ ಹೊಂದಿರುವ ಬಿದಿರು ಹಲವಾರು ವರ್ಷಗಳಿಂದ ಭೂಮಿಯಲ್ಲಿ ಅಸ್ತಿತ್ವವನ್ನು ಕಂಡುಕೊಂಡಿದೆ. ಯಾವ ಹುಲ್ಲನ್ನು ಹೋಲದಿದ್ದರೂ ಬಿದಿರು ಅಪ್ಪಟ ಹುಲ್ಲು ಸಸ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅದು ಬಹುವಾರ್ಷಿಕ ಬದುಕಿನ ಹುಲ್ಲುಗಿಡ. ಇದಕ್ಕೆ ಕಾಂಡವಿದೆ. ಬಹುಗಣ್ಣುಗಳ ಈ ಕಾಂಡ ಒಳಗೆಲ್ಲ ಬರಿ ಟೊಳ್ಳು.

ಬಿದಿರ ಮೆಳೆ ನೆಲದೊಳಗೆ ಲೈಸೋಮುಗಳ ಜಾಲವನ್ನೇ ಹರಿಯಬಿಟ್ಟಾಗ ಅಲ್ಲಿಂದೆಲ್ಲ ಹೊಸಹೊಸದಾಗಿ ಮೊಳಕೆಯೊಡೆದು ಕಣಿಲೆ ರೂಪುಗೊಳ್ಳುತ್ತದೆ. ಕಣಿಲೆಯನ್ನು ಕಡಿಯದೆ ಬಿಟ್ಟರೆ ಎತ್ತರೆತ್ತರಕ್ಕೇರಿ ಬಿದಿರ ಮೆಳೆ ರೂಪುಗೊಳ್ಳುತ್ತದೆ.

ಕಾಡಿನ ಬಿದಿರಿನಲ್ಲಿ ಹೂ ಬಿಟ್ಟಿರುವುದರಿಂದ ಬಿದಿರಿನ ಮೆಳೆಗಳಿಂದ ಬಿದಿರು ಬತ್ತ ನೆಲಕ್ಕುರುಳುತ್ತದೆ. ಕಾಡಿನಲ್ಲಿ ಆದಿವಾಸಿಗಳು ಬಿದಿರಿನ ಮೆಳೆಗಳಿಂದ ಬತ್ತವನ್ನು ಹೆಕ್ಕಿ ಸಂಗ್ರಹಿಸಿಕೊಂಡು ಆಹಾರಕ್ಕೆ ಉಪಯೋಗಿಸುತ್ತಾರೆ. ಮಾತ್ರವಲ್ಲ ಈ ಬಿದಿರು ಬತ್ತದಿಂದ ಅಕ್ಕಿಮಾಡಿ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಸದ್ಯಕ್ಕೆ ಹೂ ಬಿಟ್ಟ ಬಿದಿರಿನಿಂದ ಈ ಉಪಯೋಗ ಬಿಟ್ಟರೆ ಸ್ವಾದಿಷ್ಟ ಕಣಿಲೆಯ ರುಚಿ ಮಾತ್ರ ಕೊಡಗಿನ ಮಂದಿಗೆ ಸಿಗದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT