ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳು ತೆರವು ಎಂಬ ನನಸಾಗದ ಕನಸು

ಕರೆ ಉಳಿಸಿ ಭಾಗ - 4
Last Updated 26 ಜುಲೈ 2013, 9:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ಪುರಾತನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತದೆ. ಬೃಹತ್ ಸ್ವರೂಪದ ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಜಿಲ್ಲಾ ಕೇಂದ್ರದಲ್ಲಂತೂ ವಿನೂತನ ಮಾದರಿಯ ಕಟ್ಟಡಗಳ ನಿರ್ಮಾಣಕ್ಕಾಗಿ ಪೈಪೋಟಿಯೇ ಏರ್ಪಡುತ್ತದೆ. ಆದರೆ ಶತಶತಮಾನಗಳಿಂದ ಜೀವಧಾರೆ ಎರೆದ ಕೆರೆಗಳ ಜೀರ್ಣೋದ್ಧಾರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮಳೆಯಿಲ್ಲದೇ ಕೆರೆ ಪ್ರದೇಶದಲ್ಲಿ ಆವರಿಸಿಕೊಂಡಿರುವ ಹೂಳು ತೆರವುಗೊಳಿಸುವುದರ ಬಗ್ಗೆ ಒಬ್ಬರೂ ಸಹ ಧ್ವನಿಯೆತ್ತುವುದಿಲ್ಲ. ಕೆರೆಯಲ್ಲಿ ಮತ್ತೆ ನೀರು ತುಂಬಿಸುವ ಕನಸನ್ನೂ ಯಾರು ಕಾಣುವುದಿಲ್ಲ'.

ಅಕ್ಷರಶಃ ಜಿಲ್ಲೆಯ ಯಾವುದೇ ತಾಲ್ಲೂಕಿನ ಯಾವುದೇ ಗ್ರಾಮಕ್ಕೆ ತೆರಳಿದರೂ ಇಂತಹ ಮಾತುಗಳು ಪದೇ ಪದೇ ಕೇಳಿ ಬರುತ್ತವೆ. ಕೆರೆಯ ಸಮೀಪದಲ್ಲೇ ದೇವಾಲಯದ ಜೀರ್ಣೋದ್ಧಾರ ಇಲ್ಲವೇ ದೇವತಾಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರುತ್ತದೆ. ಆದರೆ ಕೆರೆಯಲ್ಲಿ ತುಂಬಿರುವ ಹೂಳು ಮತ್ತು ಬೆಳೆದಿರುವ ಗಿಡಗಂಟಿಗಳತ್ತ ಯಾರ ಗಮನವೂ ಹೋಗುವುದಿಲ್ಲ. ಸಮೀದಪದಲ್ಲೇ ಕಟ್ಟಡ ನಿರ್ಮಾಣವಾಗುತ್ತಿದ್ದರೆ, ರಸ್ತೆ ಮತ್ತು ಇನ್ನಿತರ ಸೌಕರ್ಯ ಕಲ್ಪಿಸಲಾಗುತ್ತದೆ. ಆದರೆ ಕೆರೆಯ ಸ್ಥಿತಿ ಸುಧಾರಿಸುವ ಬಗ್ಗೆ ಒಬ್ಬರೂ ಅಗತ್ಯ ಕ್ರಮ ತೆಗೆದುಕೊಳ್ಳುವುದಿಲ್ಲ.

ಜಿಲ್ಲೆಯ ಬಹುತೇಕ ಕೆರೆ ಪ್ರದೇಶಗಳು ಜನರ ಪಾಲಿಗೆ ಹಾಳುಕೊಂಪೆಯಂತಾಗಿದ್ದು, ಬೇರೆ ಬೇರೆ ಕಾರಣಕ್ಕೆ `ಸದ್ಬಳಕೆ'ಯಾಗುತ್ತಿವೆಯೇ ಹೊರತು ಪುನರ್ಜೀವ ಕೊಡುವುದರ ಬಗ್ಗೆ ಚಿಂತನೆಯೇ ನಡೆಯುತ್ತಿಲ್ಲ. ಕೆರೆಗಳ ಹೂಳೆತ್ತಲೆಂದೇ ಸರ್ಕಾರದಿಂದ ಬಿಡುಗಡೆಯಾಗುವ ಕೋಟ್ಯಂತರ ರೂಪಾಯಿ ಎಲ್ಲಿ ಖರ್ಚಾಗುತ್ತಿದೆ ಎಂದು ಪ್ರಶ್ನಿಸುವ ಜಿಲ್ಲೆಯ ಪರಿಸರವಾದಿಗಳು, ಬೆಂಗಳೂರಿಗೆ ಮಾತ್ರವೇ ಸೀಮಿತಗೊಳಿಸಲಾಗಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯನ್ನು ರಾಜ್ಯದಾದ್ಯಂತ ಯಾಕೆ ವಿಸ್ತರಿಸಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

`ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲ ಎತ್ತಿನಹೊಳೆ ನೀರಾವರಿ ಯೋಜನೆ ಕುರಿತು  ಪ್ರಸ್ತಾಪಿಸುವ ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರು ಕೆರೆಗಳಲ್ಲಿನ ಹೂಳು ತೆರವುಗೊಳಿಸಿಯೆಂದು ಕರೆ ನೀಡುತ್ತಾರೆ. ಇನ್ನೇನೂ ಎತ್ತಿನಹೊಳೆಯಿಂದ ನೀರು ಹರಿದುಬರುತ್ತದೆ. ಕೆರೆಪ್ರದೇಶವನ್ನು ಎಲ್ಲ ರೀತಿಯ ಹೂಳುಗಳಿಂದ ಮುಕ್ತಗೊಳಿಸಿಯೆಂದು ಜಿಲ್ಲಾಡಳಿತದ ಅಧಿಕಾರಿಗಳಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಮತ್ತು ಸ್ಥಳೀಯ ಮುಖಂಡರಿಗೆ ಹೇಳುತ್ತಾರೆ. ಆದರೆ ಅವರು ಜಿಲ್ಲೆಯಿಂದ ನಿರ್ಗಮಿಸಿದ ಮರುಕ್ಷಣವೇ ಹೂಳು ತೆರವುಗೊಳಿಸುವ ವಿಷಯವು ಮರೆಯಾಗುತ್ತದೆ. ಪರಿಸ್ಥಿತಿ ಹೀಗಿದ್ದರೆ, ಕೆರೆಯಲ್ಲಿನ ಹೂಳು ಹೇಗೆ ತೆರವಾಗುತ್ತದೆ' ಎಂದು ಶಾಶ್ವತ ನೀರಾವರಿ ಹೋರಾಟಗಾರರು ಪ್ರಶ್ನಿಸುತ್ತಾರೆ.

`ಬಹುತೇಕ ಕೆರೆಪ್ರದೇಶಗಳಲ್ಲಿ ರಾಶಿಗಟ್ಟಲೇ ಮಣ್ಣು ಆವರಿಸಿಕೊಂಡಿದ್ದರೆ, ಯಥೇಚ್ಛವಾಗಿ ಗಿಡಗಂಟಿಗಳು ಬೆಳೆದಿವೆ. ಶೇಖರಣೆಯಾಗಿರುವ ಹೂಳು ತೆರೆವುಗೊಳಿಸುವುದು ಅಷ್ಟೇ ಅಲ್ಲ, ಕೆರೆಯ ಗಡಿಯನ್ನು ಗುರುತು ಮಾಡುವವರು ಕೂಡ ಇಲ್ಲದಂತಹ ಪರಿಸ್ಥಿತಿಯಿದೆ. ಇಷ್ಟು ಜಾಗ ಕೆರೆಗೆ ಸೇರಿದ್ದು, ಇಷ್ಟು ಒತ್ತುವರಿಯಾಗಿದೆ ಎಂದು ಹೇಳುವ ದಾಖಲೆಪತ್ರಗಳು ಕೂಡ ಸಿಗುವುದಿಲ್ಲ. ಒತ್ತುವರಿಯಾಗಿರುವ ಕುರಿತು ದೂರು ನೀಡಿದಾಗ ಜಿಲ್ಲಾಡಳಿತ ಅಥವಾ ತಾಲ್ಲೂಕು ಆಡಳಿತದ ಅಧಿಕಾರಿಗಳು ಅಪರೂಪಕ್ಕೆ ಸರ್ವೆ ಪ್ರಕ್ರಿಯೆ ನಡೆಸುತ್ತಾರೆ. ಆದರೆ ಅವರು ಕೆರೆ ಗಡಿಯನ್ನು ಸ್ಪಷ್ಟವಾಗಿ ಗುರುತಿಸುವುದಿಲ್ಲ. ಗಡಿ ಸುತ್ತಲೂ ಬೇಲಿಯನ್ನು ಹಾಕಲ್ಲ. ಹೂಳು ತೆಗೆಯಲ್ಲ' ಎಂದು ಅವರು ಆರೋಪಿಸುತ್ತಾರೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆ ನಡೆದಾಗಲೆಲ್ಲ, ಕೆರೆಗಳಲ್ಲಿನ ಹೂಳು ತೆರವುಗೊಳಿಸುವುದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತದೆ. ಮಳೆಗಾಲ ಆರಂಭಕ್ಕೂ ಮುನ್ನ ಕೆರೆಗಳಲ್ಲಿನ ಹೂಳು ತೆಗೆಯುವ ಮತ್ತು ಒತ್ತುವರಿ ತೆರವುಗೊಳಿಸುವ ಕುರಿತು ಹಿರಿಯ ಅಧಿಕಾರಿಗಳು ಇಲ್ಲವೇ ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆಯವರಿಗೆ ಹೇಳುತ್ತಾರೆ. ಆದರೆ ಬಹುತೇಕ ಸಂದರ್ಭದಲ್ಲಿ ಹೂಳು ತೆರವುಗೊಳಿಸುವ ಪ್ರಕ್ರಿಯೆ ಕಡತ ಅಥವಾ ದಾಖಲೆಪತ್ರಗಳಲ್ಲಿ ದಾಖಲಾಗುತ್ತದೆ ಹೊರತು ಅನುಷ್ಠಾನಕ್ಕೆ ಬರುವುದಿಲ್ಲ. ಇದಕ್ಕೆ ಕಾರಣಗಳನ್ನು ಅಧಿಕಾರಿಗಳೇ ನೀಡುತ್ತಾರೆ.

`ಹೂಳು ತೆರವುಗೊಳಿಸುವ ಪ್ರಕ್ರಿಯೆ ಕೈಗೊಳ್ಳುವಂತೆ ಸರ್ಕಾರದಿಂದ ಆದೇಶ ಬರುತ್ತದೆಯಾದರೂ ಅನುದಾನ ತ್ವರಿತವಾಗಿ ಬರುವುದಿಲ್ಲ. ಇದರಿಂದ ತೆರವು ಪ್ರಕ್ರಿಯೆ ಸ್ವಲ್ಪ ವಿಳಂಬವಾಗುತ್ತದೆ. ಆದರೆ ಒತ್ತುವರಿ ತೆರವುಗೊಳಿಸಲು ಭಾರಿ ಹರಸಾಹಸವನ್ನೇ ಮಾಡಬೇಕು. ಕೆರೆಪ್ರದೇಶವನ್ನು ಒತ್ತುವರಿ ಮಾಡಿಕೊಂಡವರು ರಾಜ್ಯ ಸರ್ಕಾರ ಅಥವಾ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಪ್ರಭಾವಿ ವ್ಯಕ್ತಿಯಾಗಿರುತ್ತಾರೆ. ಒತ್ತುವರಿಯನ್ನು ಪರಿಶೀಲಿಸಲು ಒಬ್ಬರು ಅಥವಾ ಇಬ್ಬರು ಹೋದರೆ, ಅವರ ಕಡೆಯವರು ತುಂಬ ಜನರು ಸೇರಿಬಿಡುತ್ತಾರೆ. ಇಲ್ಲದಿದ್ದರೆ, ಉನ್ನತ ಮಟ್ಟದ ವ್ಯಕ್ತಿಯಿಂದ ನಮಗೆ ದೂರವಾಣಿ ಕರೆ ಬಂದು ಬಿಡುತ್ತದೆ' ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದರು.

ಚಿಕ್ಕಬಳ್ಳಾಪುರ ಕೆರೆಗಳಿಂದ ನೀರಾವರಿ!
ಚಿಕ್ಕಬಳ್ಳಾಪುರ: 1884ರ ಪ್ರಥಮ ಮೋಜಿಣಿ ಪ್ರಕಾರ, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಒಟ್ಟು 281 ಗ್ರಾಮಗಳಿದ್ದು, ಕೃಷಿ ಮೂಲಗಳಿಂದ  ಒಟ್ಟು 1.01 ಲಕ್ಷ ರೂಪಾಯಿ ಆದಾಯ ನಿಗದಿಪಡಿಸಲಾಗಿತ್ತು. ಪರಿಷ್ಕೃತ ದರಗಳಂತೆ 37,173 ಎಕರೆಗಳಿಂದ  ಒಟ್ಟು 1,09,370 ರೂಪಾಯಿ ನಿಗದಿಪಡಿಸಲಾಯಿತು. ನೀರಾವರಿ ಆಧಾರದ ಮೇಲೆ ಚಿಕ್ಕಬಳ್ಳಾಪುರ ತಾಲ್ಲೂಕನ್ನು ಉತ್ತರ ಮತ್ತು ದಕ್ಷಿಣ ಪೆನ್ನಾರ್ ಜಲಾನಯನ ಪ್ರದೇಶವೆಂದು ವಿಂಗಡಿಸಲಾಗಿತ್ತು.

ಮೈಸೂರು ಸಂಸ್ಥಾನದ ಕಾಲಾವಧಿಯಲ್ಲಿ ಅವಿಭಿಜತ ಕೋಲಾರ ಜಿಲ್ಲೆಯ ನೀರಾವರಿ ವ್ಯವಸ್ಥೆ ಮತ್ತು ಕೆರೆಗಳ ಬಗ್ಗೆ ಅಧ್ಯಯನ ಮಾಡಿರುವ ಪ್ರಾಧ್ಯಾಪಕ ಡಾ. ಟಿ.ವಿ.ನಾಗರಾಜ್ ಪ್ರಕಾರ, ಮೈಸೂರು ಸಂಸ್ಥಾನದ ಅವಧಿಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಇರಲಿಲ್ಲ. ಕೆರೆಗಳ ನೆರವಿನಿಂದಲೇ ಕೃಷಿ ಚಟುವಟಿಕೆ ನೆರವೇರುತಿತ್ತು.

1908ರ ಸರ್ಕಾರಿ ಅಂಕಿ ಅಂಶ ಪ್ರಕಾರ, ತಾಲ್ಲೂಕಿನಲ್ಲಿ ಒಟ್ಟು 124 ಕೆರೆಗಳಿದ್ದವು. ಅವುಗಳಲ್ಲಿ 28 ದೊಡ್ಡಕೆರೆಗಳು ಮತ್ತು 96 ಸಣ್ಣಕೆರೆಗಳು. ಸರ್ಕಾರದ್ದು 27 ದೊಡ್ಡಕೆರೆಗಳು ಮತ್ತು 70 ಸಣ್ಣಕೆರೆಗಳಾದರೆ, ಖಾಸಗಿಯದ್ದು ಒಂದು ದೊಡ್ಡ ಕೆರೆ ಮತ್ತು 26 ಸಣ್ಣಕೆರೆಗಳಿವೆ. ತಾಲ್ಲೂಕಿಗೆ ಪ್ರತಿ ಚದರ ಮೈಲಿಗೆ 0.49 ಕೆರೆ, ಪ್ರತಿ 457 ಜನರಿಗೆ ಒಂದು ಕೆರೆ, ಪ್ರತಿ ಕೆರೆಗೆ 2.16 ಹಳ್ಳಿಗಳಿವೆ.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಗೋಪಾಲಕೃಷ್ಣ ಅಮಾನಿ ಕೆರೆ ಅತ್ಯಂತ ದೊಡ್ಡಕೆರೆಯಾಗಿದ್ದು, 715 ಎಕರೆ ಅಚ್ಚುಕಟ್ಟು ಹೊಂದಿದ್ದು, 711 ಎಕರೆ ನೀರು ನಿಲ್ಲುವಂತಹ ಕೆರೆ ಅಂಗಳದ ಪ್ರದೇಶವಿತ್ತು. 13.5 ಅಡಿಗಳಷ್ಟು ಆಳ ಮತ್ತು 896 ಯೂನಿಟ್‌ಗಳಷ್ಟು ಪ್ರಮಾಣ ಹೊಂದಿತ್ತು. ಎರಡು ಎಕರೆಯಷ್ಟು ಅಚ್ಚುಕಟ್ಟು ಹೊಂದಿದ್ದ ಆನೆಮಡಗು ತಾಲ್ಲೂಕಿನಲ್ಲೇ ಅತ್ಯಂತ ಚಿಕ್ಕ ಕೆರೆಯೆಂದು ಪರಿಗಣಿಸಲಾಗಿತ್ತು.

ತಾಲ್ಲೂಕಿನ 124 ಕೆರೆಗಳಿಂದ ಒಟ್ಟು 7439 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವಿತ್ತು. ಇದರಲ್ಲಿ 5697 ಎಕರೆ ಪ್ರದೇಶಕ್ಕೆ ಸರ್ಕಾರಿ ದೊಡ್ಡಕೆರೆಗಳಿಂದ ಮತ್ತು 1100 ಎಕರೆ ಪ್ರದೇಶಕ್ಕೆ ಸರ್ಕಾರಿ ಸಣ್ಣ ಕೆರೆಗಳಿಂದ ಲಭ್ಯವಾಗುತಿತ್ತು. ಖಾಸಗಿ ಕೆರೆಗಳಿಂದ 642 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವಿತ್ತು. ಅದರಲ್ಲಿ 166 ಎಕರೆ ಪ್ರದೇಶಕ್ಕೆ ದೊಡ್ಡಕೆರೆ ಮತ್ತು 476 ಎಕರೆ ಪ್ರದೇಶಕ್ಕೆ ಸಣ್ಣ ಕೆರೆಗಳಿಂದ ನೀರು ಲಭ್ಯವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT