ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಗಳ ಅಂಬಿಗನ ತ್ರಿವೇಣಿ ಕಥೆ

Last Updated 9 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮಲಯಾಳಂನ ಶಾಜಿ ಎನ್.ಕರುಣ್ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಸಿನಿಮಾ ನಿರ್ದೇಶಕರು. ಅವರ ‘ಪಿರವಿ’ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದ ಚಿತ್ರ. ಅವರ ಇತ್ತೀಚಿನ ‘ಕುಟ್ಟಿ ಶ್ರಾಂಕ್’ (2010) ಅತ್ಯುತ್ತಮ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ.

ಶಾಜಿ ತಮ್ಮ ಮನೋಧರ್ಮ ಯಾವ ಬಗೆಯದು ಎನ್ನುವುದನ್ನು ‘ಪಿರವಿ’ ಚಿತ್ರದ ಮೂಲಕ ಪ್ರಚುರಪಡಿಸಿದ್ದರು. ಅವರ ದೃಷ್ಟಿಕೋನ ಮನುಷ್ಯ ಸಂಬಂಧಗಳಲ್ಲಿ ಉಂಟಾಗುವ ತಳಮಳ, ತುಡಿತ, ವಿಸ್ಮಯ, ವಿಶೇಷಗಳನ್ನು ಕುರಿತಾದದ್ದು. ಈ ತವಕತಲ್ಲಣಗಳನ್ನು ದೃಶ್ಯಮಾಧ್ಯಮದಲ್ಲಿ ವೀಕ್ಷಕನಿಗೆ ಸಮರ್ಥವಾಗಿ ತಲುಪುವ ಹಾಗೆ ಪ್ರಸ್ತತಪಡಿಸುವುದು ಅವರ ಪ್ರಯತ್ನ. ಅದರಲ್ಲಿ ಹಾಸುಹೊಕ್ಕಾಗಿರುವ ಸೂಕ್ಷ್ಮ ಪದರುಗಳನ್ನು ತೆರೆದಿಟ್ಟು ಚಿತ್ರದ ಬಗ್ಗೆ ತಮಗಿರುವ ಆಶಯವನ್ನು ಪೂರೈಸಿಕೊಳ್ಳುವುದರ ಕಡೆಗೆ ಅವರ ಗಮನ. ಈ ಪ್ರಯತ್ನದಲ್ಲಿ ಯಶಸ್ವಿಯಾಗಿರುವುದು ಅವರಿಗೆ ಲಭಿಸಿರುವ ಮನ್ನಣೆಯಿಂದ ಸಾಬೀತಾಗಿದೆ.

‘ಕುಟ್ಟಿ ಶ್ರಾಂಕ್’ ಎಂದರೆ ಹೃದಯಗಳ ಅಂಬಿಗ ಎಂದು ಅರ್ಥೈಸಬಹುದು. ಚಿತ್ರದಲ್ಲಿ ಕೇರಳದಲ್ಲಿ ಯಥೇಚ್ಛವಾಗಿರುವ ಹಿನ್ನೀರಿನಲ್ಲಿ ಚಲಿಸುವ ದೋಣಿಯ ಅಂಬಿಗ ಮತ್ತು ಅವನ ಜೀವನದಲ್ಲಿ ವಿವಿಧ ರೀತಿಗಳಲ್ಲಿ ಪ್ರವೇಶಮಾಡುವ ಯುವತಿಯರ ನಡುವೆ ನೇಯ್ದುಕೊಳ್ಳುವ ಸಂಬಂಧಗಳನ್ನು ಒಳಗೊಂಡ ಮೂರು ಪ್ರತ್ಯೇಕ ಕಥಾಧಾರೆಗಳಿವೆ. ಮೂವರು ಯುವತಿಯರಿಗೆ ಅವರಿಗಾಗಿ ನಿಯೋಜಿಸಲ್ಪಟ್ಟ ಪಾತ್ರಗಳಿದ್ದರೆ, ಆ ಮೂವರೊಂದಿಗೆ ವ್ಯವಹರಿಸಬೇಕಾದವನು ಒಬ್ಬನೇ. ಪ್ರತಿಯೊಬ್ಬರ ಜೊತೆಗೂ ಅವನ ಪಾತ್ರ ಬದಲಾಗುತ್ತದೆ. ಯುವತಿಯರು ಬೇರೆ ಬೇರೆ ವರ್ಗಕ್ಕೆ ಮತ್ತು ಧರ್ಮಗಳಿಗೆ ಸೇರಿದವರು. ಈ ಕಾರಣದಿಂದಾಗಿ ಚಿತ್ರದಲ್ಲಿ ಪ್ರತಿಯೊಬ್ಬ ಯುವತಿ ಹಾಗೂ ಅಂಬಿಗ ಮತ್ತು ಇತರ ಪೋಷಕ ಪಾತ್ರಗಳನ್ನು ಒಳಗೊಂಡ ಕಥನದ ಮುಂದುವರಿಕೆಗೆ ಅಗತ್ಯವಾದ ಹಿನ್ನೆಲೆ, ಸ್ಥಳ ಹಾಗೂ ವಸ್ತುಗಳು ಒಂದೊಂದಕ್ಕೂ ಭಿನ್ನವಾಗುತ್ತವೆ.

ಒಂದೇ ಚಿತ್ರದಲ್ಲಿ ಕೆಲವು ಕಥೆಗಳಿರುವುದು ಹೊಸತೇನಲ್ಲ. ಅಕಿರಾ ಕುರಸೋವಾನ ‘ರಾಶೋಮಾನ್’, ಅಲೆಜಾಂಡ್ರೋ ಗೋನ್ಜಾಲಿಸ್ ಇನಾರಿತುನ ‘ಅಮರೋಸ್ ಪೆರೋಸ್’ ಚಿತ್ರಗಳಲ್ಲೂ ಮೂರು ಕಥೆಗಳಿವೆ. ನಾನ್ ಲೀನಿಯರ್ ಎಂದು ಕರೆಯಬಹುದಾದ ಈ ಚಿತ್ರಗಳಲ್ಲೂ ಮುಖ್ಯಪಾತ್ರಗಳು ಬದಲಾಗದೆ ಅವುಗಳಿಗೆ ಪೋಷಕವಾದ ಅಂಶಗಳು ಬದಲಾಗುತ್ತವೆ. ‘ಕುಟ್ಟಿ ಶ್ರಾಂಕ್’ ಇವುಗಳಿಂದ ಪ್ರತ್ಯೇಕವಾಗಿ ನಿಲ್ಲುತ್ತದೆ. 

ಸಮುದ್ರದ ದಡದಲ್ಲಿ ಸತ್ತುಬಿದ್ದಿರುವ ರಾಜಾ ಪೋಷಾಕಿನ ವ್ಯಕ್ತಿಯೊಬ್ಬನ ಚಿತ್ರಿಕೆಯೊಂದಿಗೆ ‘ಕುಟ್ಟಿ ಶ್ರಾಂಕ್’ ಆರಂಭವಾಗುತ್ತದೆ. ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ಇಟ್ಟಿರುವ ರಾಜನ ಪೋಷಾಕಿನಲ್ಲಿರುವ ಹೆಣವನ್ನು ಗುರುತಿಸಲು ಬರುತ್ತಾಳೆ. ಸತ್ತವನನ್ನು ಕುಟ್ಟಿ ಶ್ರಾಂಕ್ ಎಂದು ಗುರುತಿಸಿದ ಅವಳು ಮೊದಲ ಕಥೆಗೆ ಕಾರಣಳಾಗುತ್ತಾಳೆ. ಅವಳು ಫ್ಯೂಡಲ್ ಸಂಸ್ಕೃತಿಯ ಶ್ರೀಮಂತ ವರ್ಗದ ಮೂಪನ್ನನ ತಂಗಿ ರೇವಮ್ಮ (ಪದ್ಮಪ್ರಿಯ).

ಹದಿನಾಲ್ಕು ವರ್ಷಗಳ ಹಿಂದೆ ಮಾನಸಿಕ ಆಘಾತಕ್ಕೊಳಗಾಗಿ ಅವನನ್ನು ತೊರೆದುಹೋದವಳು. ತನ್ನೆದುರೇ ತನ್ನ ತಾಯಿಯ ಹತ್ಯೆಯಾದ ಆಘಾತ ಅವಳಲ್ಲಿ ತಾನಿರುವ ಕಡೆ ರಕ್ತವಿರುತ್ತದೆ ಎನ್ನುವ ನಂಬಿಕೆಗೆ ಬುನಾದಿಯಾಗಿರುತ್ತದೆ. ನಿರ್ದೇಶಕರು ಈ ನಂಬಿಕೆಯನ್ನು ಹಾಗೂ ಅದರ ಮೂರ್ತರೂಪವಾದ ರಕ್ತವನ್ನು ಕುರಿತ ಹಾಗೆ ಮಾಂಟಾಜುಗಳನ್ನು ಬಳಸಿದ್ದಾರೆ. ಇವು ಅವಳು ಬಾಲಕಿಯಾಗಿದ್ದಾಗ ಮರದ ಕೊರಡೊಂದನ್ನು ಸೀಳುವ ಗರಗಸದಲ್ಲಿ ವ್ಯಕ್ತಿಯೊಬ್ಬನನ್ನು ಹಾಕಿ, ಅದರಿಂದ ಚಿಲ್ಲೆಂದು ಪುಟಿಯುವ ರಕ್ತ ಅವಳ ಮುಖದ ಮೇಲೆ ರಾಚುವುದು, ಮನೆಯಲ್ಲಿನ  ಬಾತುಕೋಳಿ ಹೆಜ್ಜೆ ಹಾಕಿದ ಕಡೆಯಲ್ಲೆಲ್ಲ ರಕ್ತವಿರುವುದು, ಅವಳ ಜೊತೆಗಿರುವಾಗಲೆಲ್ಲ ಕುಟ್ಟಿ ಶ್ರಾಂಕ್‌ನ ಮೂಗಿನ ಹೊಳ್ಳೆಯಲ್ಲಿ ರಕ್ತವಿರುವುದು- ಇತ್ಯಾದಿಗಳಲ್ಲಿ ಕಾಣಲು ಸಿಗುತ್ತದೆ. ಇಷ್ಟಕ್ಕೂ ಹಿಂದೂ ಧರ್ಮೀಯಳಾಗಿದ್ದ ರೇವಮ್ಮ ಮೂಪನ್‌ನನ್ನ ವಿರೋಧಿಸಿ ಬೇರೆ ಕಡೆ ಓದಲು ಹೋದವಳು ತನ್ನ ಸಹಪಾಠಿ ಪ್ರಸನ್ನ ಬೌದ್ಧಧರ್ಮವನ್ನು ಸ್ವೀಕರಿಸಿದ ತರುವಾಯ ಬೌದ್ಧ ಸನ್ಯಾಸಿನಿಯಾಗಿ, ಅವನ ಸಲಹೆಯಂತೆ ತನ್ನ ಹಳೆಯ ಪ್ರದೇಶ ಮಲಬಾರಿಗೆ ಬಂದಿರುತ್ತಾಳೆ. ರೇವಮ್ಮ ತನ್ನಣ್ಣನ ಶ್ರೀಮಂತಿಕೆಗೆ ವಾರಸುದಾರಳಾಗಲು ನಿರಾಕರಿಸುತ್ತಾಳೆ. ಕೋಪಗೊಂಡ ಮೂಪನ್‌ನ ಇಚ್ಛೆಯಂತೆ ಪ್ರಸನ್ನನನ್ನು ಮುಗಿಸಲು ಬಂದ ಕುಟ್ಟಿ ಶ್ರಾಂಕ್‌ನಲ್ಲಿ ರೇವಮ್ಮನ ಅಂತರಂಗದ ಮಾತುಗಳು ಬದಲಾವಣೆಯನ್ನು ತರುತ್ತದೆ. ಆದರೂ ಅವನಿಗೆ ಪ್ರಸನ್ನನನ್ನು ರಕ್ಷಿಸುವುದು ಸಾಧ್ಯವಾಗುವುದಿಲ್ಲ. ಚಿತ್ರದ ಈ ಭಾಗದ ಬಹುಪಾಲನ್ನು ಫ್ಲಾಶ್‌ಬ್ಯಾಕ್ ತಂತ್ರದಲ್ಲಿ ಚಿತ್ರಿಸಲಾಗಿದೆ. ಒತ್ತಡದಲ್ಲಿ, ಕ್ಷೇಮಕರ ವಾತಾವರಣದ ಹುಡುಕಾಟದಲ್ಲಿ ಮತ್ತು ಭಯದ ಹಿನ್ನೆಲೆಯಲ್ಲಿ ನೆಲೆಸಿದ ಅಸಹಾಯಕತೆಯನ್ನು ರೇವಮ್ಮ ಯಶಸ್ವಿಯಾಗಿ ಬಿಂಬಿಸುತ್ತಾಳೆ.
ಚಿತ್ರದ ಪ್ರಾರಂಭದಲ್ಲಿ ರೇವಮ್ಮ ಪೋಲೀಸ್ ಠಾಣೆಯ ಬಳಿ ಇದ್ದ ದೃಶ್ಯವನ್ನು ಅಲ್ಪ ಬದಲಾವಣೆಯೊಂದಿಗೆ ಮರುಕಳಿಸಿ ಸತ್ತವನನ್ನು ಗುರುತಿಸುವುದಕ್ಕೆ ಇನ್ನೊಬ್ಬ ಯುವತಿ ವೇಮನ್ನಾ (ಕಮಲಿನಿ ಮುಖರ್ಜಿ) ಬರುತ್ತಾಳೆ. ಅದು ಎರಡನೆಯ ಕಥೆಗೆ ನಾಂದಿಯಾಗುತ್ತದೆ. ಕುಟ್ಟಿ ಶ್ರಾಂಕ್ ಈ ಮೊದಲು ಆ ಪ್ರದೇಶದಲ್ಲಿಯೂ ದೋಣಿಯೊಂದರ ಅಂಬಿಗನಾಗಿರುತ್ತಾನೆ. ಮಧ್ಯಮ ವರ್ಗದ ಕ್ರಿಶ್ಚಿಯನ್ ಆದ ವೇಮನ್ನಳ ಅಣ್ಣ (ಸುರೇಶ್ ಕೃಷ್ಣ) ಒಬ್ಬ ನಾಟಕಕಾರ ಮತ್ತು ರಂಗನಿರ್ದೇಶಕ. ಈ ಸಲದ ಸಮಾರಂಭಕ್ಕೆ ರಾಜ ಮತ್ತು ಅವನ ಪ್ರೇಯಸಿಯ ಪಾತ್ರಗಳಿರುವ ನಾಟಕವನ್ನು ಪ್ರದರ್ಶಿಸುವ ಉದ್ದೇಶ ಅವನಿಗಿರುತ್ತದೆ. ತನ್ನ ತಂಗಿ ಹೆಣ್ಣು ಪಾತ್ರ ಮಾಡಲಿ ಎಂದು ಅವನು ನಿರ್ಧರಿಸಿದಾಗ ಗಂಭೀರ ಪ್ರಮಾಣದ ಪ್ರೇಮ ಪ್ರಕರಣ ಜರುಗುತ್ತದೆ. ವೇಮನ್ನಾ ಕುಟ್ಟಿ ಶ್ರಾಂಕ್‌ನನ್ನು ಪ್ರೇಮಿಸುತ್ತಿದ್ದರೆ ನಾಟಕದ ಗುಂಪಿನಲ್ಲಿರುವ ಇನ್ನೊಬ್ಬ ವೇಮನ್ನಾಳಲ್ಲಿ ಅನುರಕ್ತನಾಗಿರುತ್ತಾನೆ.

ದೋಣಿಯಲ್ಲಿಯೇ ನಡೆಯುವ ನಾಟಕದ ರಿಹರ್ಸಲ್ ದೃಶ್ಯಗಳು ಮನೋಹರವಾಗಿವೆ. ಅದರಲ್ಲಿನ ಪ್ರೇಮಿಗಳು ಹಾಡುವ ನಿಧಾನ ಗತಿಯ ಇಂಪಾದ ಹಾಡು ಮತ್ತು ಮಂದ್ರಸ್ಥಾಯಿಯ ಭಾವಾಭಿನಯ ಹಾಗೂ ಹಸ್ತಮುದ್ರಿಕೆಗಳು ಹಿತವೆನಿಸುತ್ತದೆ. ಇದು ನಾಟಕದಲ್ಲಿನ ಹಾಡಾದರೂ ಕುಟ್ಟಿ ಶ್ರಾಂಕ್ ಕುರಿತು ವೇಮನ್ನಳಿಗಿರುವ ಪ್ರೇಮಭಾವನೆಯನ್ನು ಒಂದು ರೀತಿಯಲ್ಲಿ ಸಾರ್ವಜನಿಕವಾಗಿಯೇ ಪ್ರಕಟಿಸುತ್ತದೆ. ಆದರೆ ನಾಟಕ ಬಿಟ್ಟು ವೈಯಕ್ತಿಕವಾಗಿ ಕುಟ್ಟಿ ಶ್ರಾಂಕ್‌ಗೆ ಅವಳ ಬಗ್ಗೆ ಯಾವ ಭಾವನಾತ್ಮಕ ಸಂಬಂಧವಿಲ್ಲದಿರುದು ಸೋಜಿಗವೆನಿಸುತ್ತದೆ. ಸಮೀಪ ಚಿತ್ರಿಕೆಗಳು ಇದನ್ನು ಮನದಟ್ಟು ಮಾಡುತ್ತವೆ. ತನ್ನ ಅಣ್ಣ ಸತ್ತ ನಂತರವೂ ಮದುವೆಗೆ ಬಲವಂತ ಮಾಡುತ್ತಿದ್ದವನಿಗೆ ವೇಮನ್ನಾ ವಿಷ ಕುಡಿದು ಸಾಯುವಂತೆ ಮಾಡುತ್ತಾಳೆ.

ಮೂರನೆಯವಳು ಕಾಳಿ (ಮೀನಾ ಕುಮಾರಿ) ಸತ್ತವನನ್ನು ಗುರುತಿಸುವದಕ್ಕೆ ಬಂದಾಗ ಮೊದಲಿನ ಇಬ್ಬರಿಗೆ ಮೂರು ಆಶ್ಚರ್ಯಗಳು ಕಾದಿರುತ್ತವೆ. ಅವಳು ಮೂಕಿ ಮತ್ತು ಬಸುರಿ. ಸತ್ತಿರುವವನು ಕುಟ್ಟಿ ಶ್ರಾಂಕ್ ಅಲ್ಲವೆಂದು ಕಾಳಿ ಹೇಳುತ್ತಾಳೆ. ಕೊನೆಗೂ ಇದಕ್ಕೆ ಕಾರಣ ನಿಗೂಢವಾಗಿಯೇ ಉಳಿಯುತ್ತದೆ. ಚಿತ್ರದ ಮೂರು ಹೆಣ್ಣುಪಾತ್ರಗಳಲ್ಲಿ ಹೆಚ್ಚಿನ ಪುಷ್ಟಿ ಮತ್ತು ಅವಕಾಶ ಕೆಳವರ್ಗದ ಕಾಳಿ ಪಾತ್ರಕ್ಕೆ ದೊರಕಿದೆ. ಮೀನಾ ಕುಮಾರಿ ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ. ರೇವಮ್ಮಳದು ನಂಬಿಕೆಯ ವಿಷಯವಾದರೆ ಕಾಳಿಯದು ಮೂಢ ನಂಬಿಕೆಯ ವಿಷಯ.

ಸ್ಥಳೀಯನೊಬ್ಬ ಉನ್ನಿತನ್‌ಗೆ (ಸಾಯಿಕುಮಾರ್) ಜೀವನದಲ್ಲಿ ಉಂಟಾದ ದುರಂತಗಳಿಗೆ ಕಾಳಿ ಕಾರಣಳೆಂದು, ಅವನ ನಂಬಿಕೆ ಮತ್ತು ಅಲ್ಲಿ ಕಟ್ಟಲು ಪ್ರಯತ್ನಿಸುತ್ತಿರುವ ಸೇತುವೆ ಕೆಲಸ ಪೂರೈಸುವುದಕ್ಕೆ ಕಾಳಿಯನ್ನು ಬಲಿ ಕೊಟ್ಟರೆ ಸರಿಹೋಗುತ್ತೆಂದು ಅವನ ಮೂಢ ನಂಬಿಕೆ. ಇದಕ್ಕೆ ಇತರರ ಬೆಂಬಲವೂ ಇರುತ್ತದೆ. ಇಂಥ ವಿಷವರ್ತುಲದಲ್ಲಿ ಸಿಲುಕಿರುವ ಕಾಳಿ ಹಾವು ಕಡಿದ ಕುಟ್ಟಿ ಶ್ರಾಂಕ್‌ನನ್ನು ಬದುಕಿಸುತ್ತಾಳೆ ಮತ್ತು ಅವನ ಪ್ರೇಮವನ್ನು ಪಡೆಯುತ್ತಾಳೆ. ಈ ಪ್ರಸಂಗದಲ್ಲಿ ಕಾಳಿಯ ಮನವನ್ನು ಅರಿತಿರುವ ವಿಶೇಷ ಶಕ್ತಿಯುಳ್ಳ, ಅವಳನ್ನು ಕುರಿತು ಕಾದಂಬರಿಯನ್ನು ಬರೆಯುತ್ತಿರುವ ಮತ್ತು ಕಾಳಿಯ ಬದಲಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಉನ್ನಿತನ್ನನ ವಿಷಾದ ತುಂಬಿದ ಸೊಸೆ ನಳಿನಿ (ವಹೀದಾ) ತನಗೆ ಒಂಟಿತನವಿದ್ದರೂ ಕಾಳಿಯ ಸುಖ ಬಯಸುವುದು ಹೊಸತಾಗಿದೆ. ಮೊದಲೆರಡು ಪ್ರಸಂಗದಲ್ಲಿ ಆದಂತೆ ಇಲ್ಲಿಗೂ ಮೂಪನ್ನಿನ ಕಡೆಯವರು ಕುಟ್ಟಿಯ ತಲೆದಂಡಕ್ಕಾಗಿ ಬೆನ್ನಟಿದಾಗ ಅವನು  ಕಾಳಿಯ ಜೊತೆ ಕಾಲ್ತೆಗೆಯಬೇಕಾಗುತ್ತದೆ.

ಕುಟ್ಟಿ ಶ್ರಾಂಕ್‌ನ ಪಾತ್ರದಲ್ಲಿ ಮಮ್ಮುಟಿ ಇಡೀ ಚಿತ್ರದಲ್ಲಿ ಬೇರೆ ಬೇರೆ ಭಾವ ಪ್ರಪಂಚದ ಅಪೇಕ್ಷೆಯನ್ನು ಮೆಲುಸ್ತರದಲ್ಲಿ, ಕೊಂಚ ಕಡಿಮೆ ಆಯಿತೇನೋ ಎನ್ನಿಸುವ ಹಾಗೆ ಅಭಿನಯಿಸಿದ್ದಾರೆ. ನಿರ್ದೇಶರ ಅಪೇಕ್ಷೆಗಳಿಗೆ ಅಗತ್ಯ ಸಹಕಾರ ಸಂಬಂಧಿಸಿದ ಎಲ್ಲರಿಂದ ಒದಗಿದ್ದರೂ ಛಾಯಾಗ್ರಾಹಕರ ಬೆಂಬಲವನ್ನು ಪ್ರತ್ಯೇಕವಾಗಿ ಹೆಸರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT