ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಸಂಶೋಧನೆ ಕೈಗೊಳ್ಳಲು ಸಲಹೆ

Last Updated 6 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣಾಭಿವೃದ್ಧಿ, ವಿದ್ಯುತ್, ಜಲಸಂಪನ್ಮೂಲ, ನೈರ್ಮಲೀಕರಣ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಶೋಧನೆಗಳನ್ನು ಕೈಗೊಳ್ಳಲು ಗಮನ ಹರಿಸಬೇಕೆಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜೆ.ಕೃಷ್ಣ ಪಾಲೇಮಾರ್ ವಿಜ್ಞಾನಿಗಳಿಗೆ ಕರೆ ನೀಡಿದರು.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಜ್ಞಾನಿಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆಗಳನ್ನು ಕೈಗೊಂಡು ಸಮಾಜಕ್ಕೆ ಹೊಸ ಹೊಸ ಕೊಡುಗೆಗಳನ್ನು ನೀಡಬೇಕು. ವಿಜ್ಞಾನಿಗಳಿಂದ ಸಮಾಜದ ನಿರೀಕ್ಷೆ ಬಹಳಷ್ಟಿದೆ. ನಿಮ್ಮ ಶ್ರಮವನ್ನು ಸರ್ಕಾರ ಗುರುತಿಸಿ ಈ ಪ್ರಶಸ್ತಿ ನೀಡಿದೆ. ಪ್ರಶಸ್ತಿ ಬಂದಿರುವುದರಿಂದ ನಿಮ್ಮ ಮೇಲಿನ ಜವಾಬ್ದಾರಿಯೂ ಹೆಚ್ಚಾಗಿದೆ ಎಂದರು.

‘ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳವಣಿಗೆಗೆ ಕಟಿಬದ್ಧವಾಗಿರುವ ರಾಜ್ಯ ಸರ್ಕಾರವು ಇಲಾಖೆಗೆ ನೀಡುತ್ತಿರುವ ಅನುದಾನವನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಿ’ ಎಂದ ಅವರು, ‘ವಿದ್ಯಾರ್ಥಿಗಳಲ್ಲಿ, ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ವಿಜ್ಞಾನಿಗಳ ಜೊತೆ ಶಿಕ್ಷಕರು ಸಹ ಕೈಜೋಡಿಸಬೇಕು’ ಎಂದರು.

ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾದ ಶಿಕ್ಷಣ ತಜ್ಞ ಪ್ರೊ.ಎಂ.ಐ. ಸವದತ್ತಿ ಮಾತನಾಡಿ, ವಿಜ್ಞಾನವನ್ನು ಬೆಳೆಸಬೇಕಾದರೆ ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ಈ ಕ್ಷೇತ್ರದತ್ತ ಆಕರ್ಷಿಸುವಂತಹ ಕೆಲಸವಾಗಬೇಕು. ಇದರ ಜೊತೆ ವಿಜ್ಞಾನ ಅಭಿವೃದ್ಧಿಗೆ ಅನುದಾನವನ್ನು ಹತ್ತು ಪಟ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ವಿಜ್ಞಾನಿ ಪ್ರೊ.ಸಿ.ಎನ್.ಆರ್. ರಾವ್ ಮಾತನಾಡಿ, ಐ.ಟಿ ರಾಜಧಾನಿಯಾಗಿರುವ ಬೆಂಗಳೂರನ್ನು ವಿಜ್ಞಾನ ಕೇಂದ್ರವನ್ನಾಗಿ ಮಾಡಬೇಕಾಗಿದೆ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಪಿ.ಬಲರಾಮ್, ಐ.ಟಿ, ಬಿ.ಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್, ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ಕಾರ್ಯದರ್ಶಿ ಪ್ರೊ.ಎಂ.ಎಸ್. ಮೋಹನ್ ಕುಮಾರ್ ಮತ್ತು ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT