ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೇನು ಗೂಡಿಗೆ ಬಿತ್ತು ಕಲ್ಲು

ಜಿಲ್ಲೆಯಲ್ಲಿ ಅವಸಾನದತ್ತ ಸಾಗಿದ ಜೇನು ಕೃಷಿ
Last Updated 22 ಏಪ್ರಿಲ್ 2013, 8:26 IST
ಅಕ್ಷರ ಗಾತ್ರ

ನಾಪೋಕ್ಲು: ಅನಾದಿ ಕಾಲದಿಂದಲೂ ಮುಂದುವರಿದು ಬಂದ ಮನುಷ್ಯರ ಅವಶ್ಯಕತೆಗಳಲ್ಲಿ ಜೇನು ಕೂಡ ಒಂದು. ಅದರಲ್ಲೂ ಕೊಡಗಿನ ಜೇನು ಎಂದರೆ ದೇಶದೆಲ್ಲೆಡೆ ಪ್ರಸಿದ್ಧ. ಬೆಟ್ಟ-ಗುಡ್ಡ, ಗಿರಿ-ಗವ್ವರ, ರುದ್ರ ರಮಣೀಯ ನಿಸರ್ಗ, ವೈವಿಧ್ಯಮಯ ಹೂಗಳ ಸಾಮ್ರಾಜ್ಯ ಇರುವ ಕೊಡಗಿನಲ್ಲೂ ಈಗ ಜೇನು ಅವಸಾನದತ್ತ ಸಾಗಿದ್ದು ಕಳವಳಕಾರಿ.

ಒಂದು ಕಾಲದಲ್ಲಿ ಜಿಲ್ಲೆಯ ಕಾಫಿ ತೋಟಗಳಲ್ಲಿ ಅಲ್ಲಲ್ಲಿ ದೊಡ್ಡ ಮರಗಳ ತುಂಬಾ ಹೆಜ್ಜೇನು ಗೂಡುಗಳೇ ಕಂಡು ಬರುತ್ತಿದ್ದವು.ಸಂರಕ್ಷಿಸಲ್ಪಟ್ಟ ದೇವರ ಕಾಡುಗಳಲ್ಲಿನ ದೊಡ್ಡ ವೃಕ್ಷಗಳಲ್ಲಿ ಹೆಜ್ಜೇನು ಕೂಡುಗಳು ತೂಗು ಬೀಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಆದರೆ, ಇದೀಗ ಕಾಡಿನ ಪ್ರಮಾಣ ಇಳಿಮುಖವಾಗುತ್ತಿದ್ದಂತೆ ಜೇನು ಸಂತತಿ ದಿನೇದಿನೇ ಕಡಿಮೆಯಾಗುತ್ತಿದೆ.

ಅಡಗಿದ ಅಡವಿ ಜೇನು
ಇತ್ತೀಚೆಗೆ ಅಡವಿ ಜೇನು ಕಂಡುಬರುವುದು ಅಪರೂಪವಾಗುತ್ತಿದೆ. ಜೇನುಗಳಲ್ಲಿ ಹಲವು ವಿಧಗಳಿವೆ. ಹೆಜ್ಜೇನು (ಅಪಿಸ್ ದೋರ್ಸಲ್), ತುಡಜೇನು (ಅಪೀಸ್ ಸೆರೆನಾ ಇಂಡಿಕಾ), ಕೋಲ್ಜೇನು (ಅಪೀಸ್ ಫ್ಲೋರಿಯಾ), ಮಿಸ್ಸರಿ (ಸ್ಟ್ರಿಂಗ್‌ಲೆಸ್ ಬೀ) ಇವಿಷ್ಟು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡುಬರುವ ಜೇನಿನ ಪ್ರಬೇಧಗಳು. ಜೊತೆಗೆ ವಿದೇಶದಿಂದ ಆಮದು ಮಾಡಿಕೊಂಡ ಅಪೀಸ್, ಮೆಲ್ಲಿಫೆರಾ ಪ್ರಮುಖ ಪ್ರಭೇದಗಳು.

ಕೊಡಗು ಜಿಲ್ಲೆಯು ಜೇನು ಕೃಷಿಗೆ ಪ್ರಾಮುಖ್ಯತೆ ಪಡೆದಿದ್ದು, ಹಿಂದೆ ಹೆಜ್ಜೇನು ಕೃಷಿಕರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಬೇಸಿಗೆಯ ಅವಧಿಯಲ್ಲಿ ಹೆಜ್ಜೇನು ಸಂಗ್ರಹಣೆ ಮಾಡುವವರು ಕಾಡಿನಲ್ಲಿರುವ ಹೆಜ್ಜೇನು ಮರಕ್ಕೆ ಏಣಿ ಕಟ್ಟುತ್ತಾರೆ. ಪಕ್ಕದ ಮರದಿಂದ ಉದ್ದನೆಯ ಗಾಳ ಹಾಕಿ ಅದರಿಂದ ಆ ಮರವನ್ನು ದಾಟಿ ಹೋಗಿ ರಾತ್ರಿಯ ಸಮಯದಲ್ಲಿ ಹೆಜ್ಜೇನು ಕೊಯ್ಲು ಮಾಡುವುದು ಸಾಮಾನ್ಯ.
ಹಿಂದೆ ಒಂದೇ ಹೆಜ್ಜೇನು ಗೂಡಿನಿಂದ 15 ರಿಂದ 20 ಕೆ.ಜಿ. ಜೇನು ಕೊಯ್ಲು ಮಾಡುತ್ತಿದ್ದರು! ಅಂದರೆ ಒಂದೇ ಮರದಿಂದ ಟಿನ್‌ಗಟ್ಟಲೆ ಜೇನು ಸಂಗ್ರಹವಾಗುತ್ತಿತ್ತು!

ಹೆಜ್ಜೇನು ಕುಗ್ಗಲು ಕಾರಣವೇನು?
ಈಗ ಜೇನು ಕೊಯ್ಲು ಮಾಡುವ ನುರಿತ ಕಾರ್ಮಿಕರಿಲ್ಲ. ಜೊತೆಗೆ ಹೆಜ್ಜೇನು ಗಾತ್ರವೂ ತಗ್ಗಿದೆ. ಜಾಗತಿಕವಾಗಿ ಆಹಾರದ ಕೊರತೆಯೇ ಜೇನು ಸಂತತಿ ಕಡಿಮೆಯಾಗಲು ಕಾರಣ ಎಂದು ಸಂಶೋಧಕರು ಹೇಳುತ್ತಾರೆ. ಜೊತೆಗೆ ಅವಧಿಗೆ ಮುನ್ನವೇ ಅವೈಜ್ಞಾನಿಕವಾಗಿ ಜೇನು ಸಂಗ್ರಹ ಮಾಡುವುದರಿಂದಲೂ ಹೆಜ್ಜೇನು ಸಂತತಿ ಇಳಿಮುಖಗೊಳ್ಳುತ್ತಿದೆ.

ಕಾಡಿನ ನಾಶ, ಹೂ ಬಿಡುವ ಪ್ರಬೇಧಗಳ ಕೊರತೆ, ವಿಪರೀತ ರಾಸಾಯನಿಕಗಳ ಬಳಕೆ, ಅವೈಜ್ಞಾನಿಕ ಸಂಗ್ರಹಣಾ ಪದ್ಧತಿ... ಇವೆಲ್ಲ ಅಡವಿ ಜೇನಿನ ಕುಟುಂಬಕ್ಕಿರುವ ಕಂಟಕಗಳು.

ಇಂತಹ ಹತ್ತಾರು ಕಾರಣಗಳಿಂದ ಜೇನಿನ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಜೇನು ಆಹಾರಕ್ಕಾಗಿ ಅವಲಂಬಿಸಿರುವ ಹೂವಿನ ಪ್ರಬೇಧಗಳ ರಕ್ಷಣೆ, ಅಭಿವೃದ್ಧಿ, ಜೇನು ಆಶ್ರಯ ಪಡೆಯುವ ಮರಗಳ ಸಂರಕ್ಷಣೆ ಮುಂತಾದ ವಿಧಾನಗಳಿಂದ ಅಡವಿ ಜೇನಿನ ಸಂತತಿಯನ್ನು ಸಂರಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT