ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಒತ್ತುವರಿ: ತೆರವಿಗೆ ಆಗ್ರಹ

ಜಿಲ್ಲಾಡಳಿತವೇ ಹೊಣೆ; ಮಾಜಿ ಸಚಿವ ಶಿವಣ್ಣ ಎಚ್ಚರಿಕೆ
Last Updated 5 ಡಿಸೆಂಬರ್ 2013, 7:07 IST
ಅಕ್ಷರ ಗಾತ್ರ

ತುಮಕೂರು: ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ದರ್ಗಾಗೆ ರಾಷ್ಟ್ರೀಯ ಹೆದ್ದಾರಿ (ಬಿ.ಎಚ್‌.ರಸ್ತೆ) ಒತ್ತುವರಿ ಮಾಡಿ ಕಾಂಪೌಂಡ್‌ ನಿರ್ಮಾಣ ಮಾಡುತ್ತಿದ್ದು, ಅಧಿಕಾರಿ­ಗಳು ತಕ್ಷಣ ಕ್ರಮಕೈಗೊಳ್ಳ­ಬೇಕು. ಇಲ್ಲದಿದ್ದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾದರೆ ಜಿಲ್ಲಾ­ಡಳಿತವೇ ಹೊಣೆ ಎಂದು ಮಾಜಿ ಸಚಿವ ಎಸ್‌.ಶಿವಣ್ಣ ಎಚ್ಚರಿಕೆ ನೀಡಿದರು.

ನಗರದ ಶೆಟ್ಟಿಹಳ್ಳಿ ಮುಖ್ಯ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಎಚ್‌ಎಂಎಸ್‌ ಪಾಲಿಟೆಕ್ನಿಕ್‌ಗೆ ಕಾಂಪೌಂಡ್‌ ಹಾಕಲಾಗುತ್ತಿದೆ. ರಸ್ತೆಗಳ ಒತ್ತುವರಿ­ಯನ್ನು ಸಹಿಸಲು ಸಾಧ್ಯವಿಲ್ಲ. ತೆರವಿಗೆ ತಕ್ಷಣ ಕ್ರಮಕೈಗೊಳ್ಳದಿದ್ದರೆ ಮುಂದಿನ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿ­ಯಲ್ಲಿ ತಿಳಿಸಿದರು.

ಮಾಫಿಯಾ ‘ಕೈ’ಗೆ ಮರಳು ದಂಧೆ
ಶಿರಾ ತಾಲ್ಲೂಕು ಮದಲೂರು ಕೆರೆಯಲ್ಲಿ 160 ಅಡಿ ಆಳದವರೆಗೆ ಮರಳು ತೆಗೆಯಲಾಗಿದೆ. ಮರಳು ದಂಧೆ ಮಾಫಿಯಾ ಕೈಗೆ ವರ್ಗಾವಣೆ ಆಗಿದೆ. ಮರಳು ಗಣಿಗಾರಿಕೆಯಿಂದ ಸುತ್ತಲಿನ ರೈತರ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿದೆ. ಅಕ್ರಮ ಪ್ರಶ್ನಿಸಿದವರ ವಿರುದ್ಧ ಬೆದರಿಕೆ ಹಾಕಲಾಗುತ್ತಿದೆ. ಪೊಲೀಸ್‌ ಸಿಬ್ಬಂದಿ ದಂಧೆಯಲ್ಲಿ ಪಾಲುದಾರ­ರಾಗಿದ್ದು, ಬೇನಾಮಿ ಹೆಸರಿನಲ್ಲಿ ಸ್ವಂತ ಲಾರಿ ಕೊಂಡು ಮರಳು ಸಾಗಿಸಲಾಗುತ್ತಿ­ದ್ದಾರೆ ಎಂದು ಆಪಾದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಇಡೀ ಜಿಲ್ಲಾಡಳಿತ ‘ಅಲಿಬಾಬಾ ಮತ್ತು 40 ಮಂದಿ ಕಳ್ಳರಂತೆ’ ಮರಳು ದಂಧೆಯನ್ನು ಬೆಂಬಲಿಸುತ್ತಿದ್ದಾರೆ. ‘ಜಿಲ್ಲಾಧಿಕಾರಿಗೆ ತಾಕತ್ತಿದ್ದರೆ ನನ್ನ ಜೊತೆಗೆ ಬರಲಿ, ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮರಳು ದಂಧೆ ತೋರಿಸುತ್ತೇನೆ’ ಎಂದು ಅವರು ಸವಾಲು ಹಾಕಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ರೂ. 185 ಕೋಟಿ ಮೊತ್ತದ ಕಾಮಗಾರಿಗಳು ಲೋಕಾಯುಕ್ತ ತನಿಖೆಯಿಂದ ಅರ್ಧಕ್ಕೆ ನಿಂತಿವೆ. ಸಂಸದ ಜಿ.ಎಸ್.ಬಸವರಾಜು ಲೋಕಾಯುಕ್ತಕ್ಕೆ ದೂರು ನೀಡಿ ಕಾಮಗಾರಿ ನಿಲುಗಡೆ ಮಾಡಿದ್ದು, ಈಗ ಕಾಮಗಾರಿ ಆರಂಭಿಸಲು ಅವರೇ ಮುಂದಾಗಲಿ ಎಂದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿ. 7ರಂದು ಅಕ್ಕಮಹಾದೇವಿ ಸಭಾಂಗಣದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.

ನಗರದ ಟೌನ್‌ಹಾಲ್‌, ಸ್ವಾತಂತ್ರಚೌಕ, ಸರ್ಕಾರಿ ಕಚೇರಿ ಸಮೀಪ ಪ್ಲೆಕ್ಸ್‌ ಹಾಕುವಂತಿಲ್ಲ ಎಂದು ನಗರಸಭೆ ನಿರ್ಣಯ ಕೈಗೊಂಡಿದೆ. ನಿರ್ಣಯವನ್ನು ನಗರಸಭೆ ಆಡಳಿತವೇ ಗಾಳಿಗೆ ತೂರಿ ಟೌನ್‌ಹಾಲ್‌ ವೃತ್ತದಲ್ಲಿ ಪ್ಲೆಕ್ಸ್‌ ಅಳವಡಿಸಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಪಿ.ಮಹೇಶ್‌ ಆರೋಪಿಸಿದರು. 

ಮುಖಂಡರಾದ ಶಿವಪ್ರಸಾದ್‌, ಮಂಜುನಾಥ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT