ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸ್ಕಾಂ ಕಾರ್ಯವೈಖರಿ ತರಾಟೆ

Last Updated 21 ಸೆಪ್ಟೆಂಬರ್ 2011, 8:25 IST
ಅಕ್ಷರ ಗಾತ್ರ

ಬೆಳಗಾವಿ: `ವಿದ್ಯುತ್ ಪರಿವರ್ತಕಗಳನ್ನು ಸರಿಯಾಗಿ ನೀಡುತ್ತಿಲ್ಲ. ಲಂಚ ನೀಡಿದವರಿಗೆ ಮಾತ್ರ ನೀಡಲಾಗುತ್ತಿದೆ. ಏಜೆಂಟರ ಮೂಲಕ ಕೆಲಸ ಮಾಡುತ್ತಿದ್ದೀರಿ~

ಹೀಗೆಂದು ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಸ್ಕಾಂ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ತರಾಟೆಗೆ ತೆಗೆದುಕೊಂಡರು.

`ಸುಟ್ಟು ಹೋದ ವಿದ್ಯುತ್ ಪರಿವರ್ತಕಗಳನ್ನು ನಿಗದಿತ ಸಮಯದಲ್ಲಿ ಬದಲಾವಣೆ ಮಾಡಿ ಕೊಡುತ್ತಿಲ್ಲ. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡುತ್ತಿಲ್ಲ. ಹಣ ನೀಡಿದವರಿಗೆ ನೀಡಲಾಗುತ್ತಿದೆ. ರಾಯಬಾಗ ಹಾಗೂ ಗೋಕಾಕ ತಾಲ್ಲೂಕಿನಲ್ಲಿ ಏಜೆಂಟರು ತುಂಬಿಕೊಂಡಿದ್ದಾರೆ~ ಎಂದು ಸಚಿವರೇ ಆರೋಪಿಸಿದರು.

`ನಿಗದಿತ ಸಮಯದಲ್ಲಿ ಪರಿವರ್ತಕಗಳನ್ನು ನೀಡಬೇಕು. ಮೊದಲು ಬಂದವರಿಗೆ ಮೊದಲು ನೀಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ~ ಎಂದು ಅವರು ಎಚ್ಚರಿಸಿದರು.

ಉದ್ಯಮಬಾಗಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ಉದ್ಯಮ ನಡೆಸುವುದೇ ಕಷ್ಟವಾಗಿದೆ ಎಂದು ಉದ್ಯಮಿಗಳಾದ ಬಸವರಾಜ ಜವಳಿ, ರಾಜೇಂದ್ರ ಹರಕುಣಿ, ವಿಕಾಸ ಕಲಘಟಗಿ ದೂರಿದರು. `ವಿದ್ಯುತ್ ಕಡಿಮೆ ಪೂರೈಕೆಯಾಗುತ್ತಿರುವುದರಿಂದ ಹೀಗಾಗುತ್ತದೆ. ಅದನ್ನು ಸರಿಪಡಿಸಲು ಪ್ರಯತ್ನ ಮಾಡಲಾಗುವುದು~ ಎಂದು ಮುಖ್ಯ ಎಂಜಿನಿಯರ್ ರಾಜಪ್ಪ ಹೇಳಿದರು.

`ಬೆಳಿಗ್ಗೆ 8 ರಿಂದ ಸಂಜೆ 6ರ ವರೆಗೆ ಸತತವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ನಡುವೆ ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು~ ಎಂದು ಉದ್ಯಮಿಗಳು ಕೋರಿದರು.

`ವಿದ್ಯುತ್ ಸಮಸ್ಯೆ ಆಗದಂತೆ ಇನ್ನು ಮುಂದೆ ಕ್ರಮಕೈಗೊಳ್ಳಲಾಗುವುದು~ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ ಪಾಂಡೆ ಹೇಳಿದರು. `ಗಂಗಾ ಕಲ್ಯಾಣ ಯೋಜನೆಯಡಿ ಬಹಳಷ್ಟು ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಪ್ರತಿ ಸಭೆಯಲ್ಲಿಯೂ ಭರವಸೆ ನೀಡಲಾಗುತ್ತದೆ. ಆದರೆ ಕ್ರಮಕೈಗೊಳ್ಳುತ್ತಿಲ್ಲ. ಯಾವಾಗ ಪೂರ್ಣಗೊಳಿಸಲಾಗುವುದು~ ಎಂದು ಸಚಿವ ಕತ್ತಿ ಪ್ರಶ್ನಿಸಿದರು.

ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹೆಸ್ಕಾಂ ಎಂಡಿ ಪಂಕಜಕುಮಾರ ಪಾಂಡೆ ಮಾತನಾಡಿ, 2009ರ ವರೆಗಿನ ಕೊಳವೆಬಾವಿಗಳಿಗೆ ಡಿಸೆಂಬರ್ ಅಂತ್ಯದೊಳಗೆ ಹಾಗೂ ಇಲ್ಲಿಯವರೆಗಿನ ಕೊಳವೆಬಾವಿಗಳಿಗೆ ಮಾರ್ಚ್ ಅಂತ್ಯದೊಳಗೆ ಸಂಪರ್ಕ ಒದಗಿಸಲಾಗುವುದು ಎಂದು ಹೇಳಿದರು.

ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ, ಉಪಾಧ್ಯಕ್ಷೆ ಸುನೀತಾ ಶಿರಗಾವಿ, ಜಿಲ್ಲಾಧಿಕಾರಿ ಏಕ್‌ರೂಪ ಕೌರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಯ್ ನಾಗಭೂಷಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT