ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ತೀರ್ಪಿನ ಹಿನ್ನೆಲೆ:ಪಿಎಚ್.ಡಿ ವಾಪಸ್‌ಗೆ ಶೈಕ್ಷಣಿಕ ಪರಿಷತ್ ಒಪ್ಪಿಗೆ

Last Updated 9 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕೃತಿಚೌರ್ಯ~ದ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕೋಲಾರ ಬಂಗಾರಪೇಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಎಂ. ವೆಂಕಟರಮಣಪ್ಪ ಅವರ ಪಿಎಚ್.ಡಿ ಪದವಿಯನ್ನು ಹಿಂಪಡೆಯಲು ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ ಸಭೆ ತೀರ್ಮಾನಿಸಿತು.

ಕುಲಪತಿ ಡಾ.ಎನ್. ಪ್ರಭುದೇವ್ ಅಧ್ಯಕ್ಷತೆಯಲ್ಲಿ ಸೆಂಟ್ರಲ್ ಕಾಲೇಜಿನ ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ಸರ್ವಾನುಮತದಿಂದ ಈ ತೀರ್ಮಾನಕ್ಕೆ ಬರಲಾಯಿತು.

ಸಭೆಯ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಪ್ರಭುದೇವ್, `ಹೈಕೋರ್ಟ್ ನಿರ್ದೇಶನದಂತೆ     ಪಿಎಚ್.ಡಿ ಹಿಂಪಡೆಯುವ ತೀರ್ಮಾನಕ್ಕೆ ಬರಲಾಗಿದೆ~ ಎಂದರು.ಕುಲಸಚಿವ (ಮೌಲ್ಯಮಾಪನ) ಟಿ.ಆರ್. ಸುಬ್ರಹ್ಮಣ್ಯ ಮಾತನಾಡಿ, `1995ರಲ್ಲಿ ಪ್ರೊ. ವೈ.ನಾರಾಯಣ ಚೆಟ್ಟಿ ಮಾರ್ಗದರ್ಶನದಲ್ಲಿ ಎಂ. ವೆಂಕಟರಮಣಪ್ಪ ಪಿಎಚ್.ಡಿಗೆ ನೋಂದಣಿ ಮಾಡಿಸಿದ್ದರು.

ನಂತರ ಕನ್ನಡದಲ್ಲಿ ಪ್ರೌಢಪ್ರಬಂಧ ಮಂಡಿಸಲು ಹಾಗೂ ಡಾ.ಬಿ.ಸಿ. ಮೈಲಾರಪ್ಪ ಅವರನ್ನು ಮಾರ್ಗದರ್ಶಕರನ್ನಾಗಿ ಮಾಡಿಕೊಳ್ಳಲು 2002ರಲ್ಲಿ ಅನುಮತಿ ಕೋರಿದ್ದರು. ವಿವಿಯಿಂದ ಒಪ್ಪಿಗೆ ಸಿಕ್ಕ ಬಳಿಕ 2002ರ ಅಕ್ಟೋಬರ್‌ನಲ್ಲಿ ಪಿಎಚ್.ಡಿ ಪ್ರೌಢಪ್ರಬಂಧವನ್ನು ಮಂಡಿಸಿದ್ದರು~ ಎಂದು ತಿಳಿಸಿದರು.

ವೆಂಕಟರಮಣಪ್ಪ ಅವರಿಗೆ ಪಿಎಚ್.ಡಿ ಪದವಿ ನೀಡಿದ ಬಳಿಕ  ಕೃತಿಚೌರ್ಯ ನಡೆದಿದೆ ಎಂದು ಆರೋಪಿಸಿ ಆಗಿನ ಶೈಕ್ಷಣಿಕ ಪರಿಷತ್ತಿನ ಸದಸ್ಯ ಎಲ್. ವಾಸುದೇವಮೂರ್ತಿ ಎಂಬುವವರು ಕೋರ್ಟ್ ಮೊರೆ ಹೋಗಿದ್ದರು.

ಪಿಎಚ್.ಡಿ ವಾಪಸ್‌ಗೆ ಶೈಕ್ಷಣಿಕ ಪರಿಷತ್ ಒಪ್ಪಿಗೆ

ಮಾರ್ಗದರ್ಶಕರಾದ ಮೈಲಾರಪ್ಪ ಪುಸ್ತಕದಿಂದಲೇ 100 ಪುಟಗಳನ್ನು ವೆಂಕಟರಮಣಪ್ಪ ಕೃತಿ ಚೌರ್ಯ ಮಾಡಿರುವುದು ಸಾಬೀತಾಗಿದ್ದು, ವಿವಿ ಕಾಯ್ದೆಗೆ ಅನುಗುಣವಾಗಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ 2012ರ ಮಾರ್ಚ್ 6ರಂದು ನೀಡಿದ ತೀರ್ಪಿನಲ್ಲಿ ತಿಳಿಸಿತ್ತು~ ಎಂದು ಸಭೆಗೆ ತಿಳಿಸಿದರು.

ಶೈಕ್ಷಣಿಕ ಪರಿಷತ್ ಸದಸ್ಯ ಕರಣ್ ಕುಮಾರ್ ಮಾತನಾಡಿ, `ಕೋರ್ಟ್ ನಿರ್ದೇಶನದಂತೆ ಕ್ರಮ ಕೈಗೊಳ್ಳಿ.
ಆದರೆ 12 ವರ್ಷಗಳ ಹಿಂದಿನ ಪ್ರಕರಣಕ್ಕೆ ಈಗ ಯಾಕೆ ಜೀವ ಬಂತು ಎಂಬುದು ಗೊತ್ತಾಗುತ್ತಿಲ್ಲ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕು~ ಎಂದು ವಿನಂತಿಸಿದರು.

ಸದಸ್ಯ ರಾಮಚಂದ್ರ ಸ್ವಾಮಿ ಮಾತನಾಡಿ, `ಈ ಒಂದು ವಿಚಾರಕ್ಕಾಗಿ ಮಾತ್ರ ಪ್ರತ್ಯೇಕ ಸಭೆ ಕರೆಯುವ ಅಗತ್ಯ ಇರಲಿಲ್ಲ. ಬೇರೆ ವಿಚಾರಗಳನ್ನು ಕಾರ್ಯಸೂಚಿಯಲ್ಲಿ ಸೇರಿಸಬಹುದಿತ್ತು. ಪ್ರೌಢಪ್ರಬಂಧದ ಪ್ರತಿಯನ್ನು ನಮಗೆ ನೀಡಬೇಕಿತ್ತು. ಏಕೆ ಹೀಗೆ ಮಾಡುತ್ತಿದ್ದೀರಿ~ ಎಂದು ಪ್ರಶ್ನಿಸಿದರು.

ಮತ್ತೊಬ್ಬ ಸದಸ್ಯ ಕರುಣಾಮೂರ್ತಿ, `ಮಾರ್ಚ್ 6ರಂದು ಹೈಕೋರ್ಟ್ ತೀರ್ಪು ನೀಡಿದೆ. ಒಂದು ತಿಂಗಳ ಮೊದಲೇ ಸಭೆ ಕರೆಯಬೇಕಿತ್ತು. ಇಷ್ಟು ವಿಳಂಬವಾಗಿ ಸಭೆ ಕರೆದುದು ಏಕೆಂದು ಅರ್ಥವಾಗುತ್ತಿಲ್ಲ.
ಇದರ ಹಿಂದೆ ಸ್ಥಾಪಿತ ಹಿತಾಸಕ್ತಿ ಇರುವ ಶಂಕೆ ಇದೆ. ಬೇರೆ ಸಾಕಷ್ಟು ಪ್ರಮುಖ ವಿಚಾರಗಳು ಚರ್ಚಿಸಲು ಇವೆ. ಈ ಬಗ್ಗೆ ಚರ್ಚೆ ಆಗುತ್ತಿಲ್ಲ. ಮೂರು ತಿಂಗಳಿಂದ ಸಭೆಯೇ ನಡೆದಿಲ್ಲ~ ಎಂದು ದೂರಿದರು.

`ಹೈಕೋರ್ಟ್ ತೀರ್ಪಿನ ಪ್ರತಿ ಸಿಗುವಾಗ ವಿಳಂಬವಾಯಿತು. ಹಾಗಾಗಿ ಈಗ ಸಭೆ ಕರೆಯಲಾಗಿದೆ~ ಎಂದು ಕುಲಪತಿ ಅವರು ಸಮಜಾಯಿಷಿ ನೀಡಿದರು. ಬಳಿಕ, ಪಿಎಚ್.ಡಿ ಹಿಂಪಡೆಯುವ ನಿರ್ಧಾರಕ್ಕೆ ಸದಸ್ಯರು ಸಹಮತ ಸೂಚಿಸಿದರು. ಸರ್ವಾನುಮತದಿಂದ ಪಿಎಚ್.ಡಿ ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕುಲಪತಿ ಘೋಷಿಸಿದರು.ವಿವಿ ಹಣಕಾಸು ಅಧಿಕಾರಿ ರಂಗನಾಥ್ ಉಪಸ್ಥಿತರಿದ್ದರು.

`ನಾನು ಹರಕೆಯ ಕುರಿ~
`ಪ್ರೌಢಪ್ರಬಂಧ ನಕಲು ಎಂಬುದು ಕಟ್ಟುಕಥೆ. ಡಾಕ್ಟರೇಟ್ ಪದವಿ ಪಡೆದು 12 ವರ್ಷಗಳ ಬಳಿಕ ನಕಲು ಮಾಡಲಾಗಿದೆ ಎಂಬ ವಾದ ಮಂಡಿಸುತ್ತಿರುವುದು ಪೂರ್ವಯೋಜಿತ ಸಂಚು. ಕುಲಸಚಿವರನ್ನು ತುಳಿಯಲು ಮಾಡಿರುವ ಸಂಚಿದು. ನಾನು ಹರಕೆಯ ಕುರಿ~ 
 ಉಪನ್ಯಾಸಕ ಎಂ. ವೆಂಕಟರಮಣಪ್ಪ

ಅರ್ಥವಿಲ್ಲದ ಕ್ರಮ: ಮೈಲಾರಪ್ಪ

`ಸರ್ಕಾರಿ ಲೆಕ್ಕ ಪರಿಶೋಧಕರ ಶಿಫಾರಸಿನ ಮೇರೆಗೆ ವಿವಿ ವಿಶೇಷಾಧಿಕಾರಿ ಸಯ್ಯದ್ ಜಮಾಲ್, ಹೆಚ್ಚುವರಿ ಕಾನೂನು ಸಲಹೆಗಾರ ಗಂಗಾಧರ ಗುರುಮಠ್ ವಿರುದ್ಧ ಕ್ರಮ ಕೈಗೊಳ್ಳಲು ನಾನು ಮುಂದಾಗಿದ್ದರಿಂದ ಕುಲಪತಿ ಸಿಟ್ಟಿಗೆದ್ದಿದ್ದಾರೆ. ಎರಡು ತಿಂಗಳ ಹಿಂದಿನ ಕೋರ್ಟ್ ತೀರ್ಪನ್ನು ನೆಪವಾಗಿಟ್ಟುಕೊಂಡು ವಿಶೇಷ ಸಿಂಡಿಕೇಟ್ ಸಭೆ ಕರೆದಿದ್ದಾರೆ. ಇದೊಂದು ಅರ್ಥರಹಿತ, ವ್ಯರ್ಥ ಪ್ರಯತ್ನ~ ಎಂದು ಕುಲಸಚಿವ ಡಾ.ಬಿ.ಸಿ. ಮೈಲಾರಪ್ಪ ಆರೋಪಿಸಿದರು.

`ವೆಂಕಟರಮಣಪ್ಪ ಅವರಿಗೆ ನಾನು ಎರಡನೇ ಗೈಡ್. 12 ವರ್ಷಗಳ ಹಳೆಯ ಪ್ರಕರಣ. ಒಂದೂವರೆ ವರ್ಷಗಳ ಹಿಂದೆಯೇ ಪಿಎಚ್.ಡಿ ರದ್ದು ಮಾಡಲಾಗಿದೆ. 2003ರಲ್ಲೇ ಸಿಂಡಿಕೇಟ್ ಸಭೆ ಹಾಗೂ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಈಗ ಅನಗತ್ಯವಾಗಿ ತಮ್ಮ ವಿಚಾರ ಪ್ರಸ್ತಾಪ ಮಾಡಲಾಗುತ್ತಿದೆ.

ಸುಪ್ರೀಂ ಕೋರ್ಟಿನ ತೀರ್ಪು ಸೇರಿದಂತೆ ಈಗಾಗಲೇ ನಮ್ಮ ಪರ ಮೂರು ತೀರ್ಪುಗಳು ಬಂದಿವೆ. ಹೈಕೋರ್ಟ್ ಈಗ ನೀಡಿರುವ ತೀರ್ಪನ್ನು ಗೌರವಿಸುತ್ತೇನೆ~ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. `ಶೈಕ್ಷಣಿಕ ಪರಿಷತ್ ಸಭೆ ಅಂತಿಮ ಅಲ್ಲ.
 
ಈ ವಿಚಾರ ಸಿಂಡಿಕೇಟ್ ಸಭೆಯ ಮುಂದೆ ಬರುತ್ತದೆ. ವಿ.ವಿ. ತೆಗೆದುಕೊಳ್ಳುವ ಕ್ರಮದ ಬಗ್ಗೆ ಸಮಜಾಯಿಷಿ ನೀಡಲು ವೆಂಕಟರಮಣಪ್ಪ ಅವರಿಗೆ ಕಾಯ್ದೆ ಪ್ರಕಾರ ಒಂದು ತಿಂಗಳ ಕಾಲಾವಕಾಶ ನೀಡಬೇಕು. ಸಿಂಡಿಕೇಟ್ ನಿರ್ಧಾರದ ಬಳಿಕ ಈ ವಿಚಾರ ರಾಜ್ಯಪಾಲರಲ್ಲಿಗೆ ಹೋಗುತ್ತದೆ. ಅವರ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗುವ ಅವಕಾಶ ಇದೆ~ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT