ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಟೆಕ್‌ ಆಸ್ಪತ್ರೆಯಲ್ಲಿ ಲೋ ಟೆಕ್‌ ಸೌಲಭ್ಯ

ಐಸಿಯು, ಡಯಾಲಿಸಿಸ್ ಘಟಕ ಬಂದ್‌
Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗದಗ: ‘ಕೋಟಿಗಟ್ಲೇ ರೊಕ್ಕಾ ಖರ್ಚ ಮಾಡಿ ವಿಧಾನ­ಸೌಧಾದಂಗ ಬಿಲ್ಡಿಂಗ ಕಟ್ಟ್ಯಾರ, ಆದ್ರ ಏನ್‌ ಕೇಳಿದ್ರೂ ಡಾಕ್ಟ್ರ ಇಲ್ಲಾ ಅಂತಾರ, ಔಷಧಿ ಚೀಟಿ ಬರದ ಕೊಟ್ಟು ಹೊರಗ ತಗೊಳ್ರಿ ಅಂತಾರೆ. ನಮ್ಮಂತಾ ಬಡವ್ರ ಎಲ್ಲಿಗೆ ಹೋಗಬೇಕ್ರಿ ಸಾರ್’. ನಗರದ ಹೊರವಲಯ ಮಲ್ಲಸಮುದ್ರದಲ್ಲಿ ನಿರ್ಮಿಸಿರುವ ನೂತನ ಜಿಲ್ಲಾ ಆಸ್ಪತ್ರೆಗೆ ಮುಂಡರಗಿಯಿಂದ ಚಿಕಿತ್ಸೆಗೆ ಬಂದಿದ್ದ ರೋಗಿಯೊಬ್ಬರನ್ನು ಮಾತನಾಡಿಸಿದಾಗ ಇಲ್ಲಿನ ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದು ಹೀಗೆ.

ನಗರದಿಂದ 8 ಕಿ.ಮೀ. ದೂರದಲ್ಲಿ ಅಂದಾಜು ₨ 35 ಕೋಟಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ಕಟ್ಟಿಸಿದ್ದರೂ ಪೂರ್ಣ ಪ್ರಮಾಣದ ಸೇವೆ ಜನರಿಗೆ ದೊರೆಯುತ್ತಿಲ್ಲ. ಬಹುತೇಕ ವಿಭಾಗಗಳ ಬಾಗಿಲಿಗೆ ಬೀಗ ಜಡಿಯಲಾಗಿದೆ. ಸಿಬ್ಬಂದಿ ಕೊರತೆ­ಯಿಂದ ತುರ್ತು ನಿಗಾ ಘಟಕ (ಐಸಿಯು) ಕಾರ್ಯ ನಿರ್ವಹಿಸುತ್ತಿಲ್ಲ. ಡಯಾಲಿಸಿಸ್ ಘಟಕ ಬಂದ್‌ ಆಗಿದೆ. ಶವಾ­ಗಾರವೇ ಇಲ್ಲ. ಆಸ್ಪತ್ರೆ ಆವರಣದಲ್ಲಿರುವ ಸಣ್ಣ ಕೊಠಡಿ­ಯಲ್ಲಿ ಶವ ಪರೀಕ್ಷೆಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

ಜಿಲ್ಲೆಯಲ್ಲಿ ಎಲ್ಲಿಯೇ ಅಪಘಾತ ಸಂಭವಿಸಿದರೂ ಗಾಯಾಳುಗಳನ್ನು ಇಲ್ಲಿಗೆ ಕರೆ ತರಲಾಗುತ್ತದೆ. ದಿನಕ್ಕೆ 1,000 ಕ್ಕಿಂತ ಹೆಚ್ಚಿನ ಹೊರ ರೋಗಿಗಳು ಬರುತ್ತಾರೆ. ಅವರನ್ನು ಉಪಚರಿಸಲು ಅಗತ್ಯ ವೈದ್ಯರೇ ಇಲ್ಲ. ರೋಗಿಗಳು ಜೀವ ಉಳಿಸಿಕೊಳ್ಳ­ಬೇಕಾದರೆ ಖಾಸಗಿ ಆಸ್ಪತ್ರೆ ಅಥವಾ ಹುಬ್ಬಳ್ಳಿಯ ಕಿಮ್ಸ್‌ಗೆ ಹೋಗಬೇಕು.

ಎಕ್ಸರೆ ಅಧ್ಯಯನ ಮಾಡಿ ಚಿಕಿತ್ಸೆಗೆ ಸಲಹೆ ನೀಡಲು ಜಿಲ್ಲಾ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್‌ ಇಲ್ಲ. ಕಣ್ಣು, ಕಿವಿ, ಮೂಗು ಮತ್ತು ಗಂಟಲು, ಚರ್ಮ ರೋಗ ತಜ್ಞರೂ ಇಲ್ಲ. ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಎರಡು ವರ್ಷವಾದರೂ ಹುದ್ದೆಗಳ ಸಂಖ್ಯೆ ಹೆಚ್ಚಿಸಿಲ್ಲ. 250 ಹಾಸಿಗೆ ಸಾಮರ್ಥ್ಯ ಹೊಂದಿ­ದ್ದರೂ ಹಿಂದೆ ಮಂಜೂರಾ­ಗಿರುವ ಹುದ್ದೆಗಳೇ ಈಗಲೂ ಇವೆ.

‘ದೊಡ್ಡದಾಗಿ ಆಸ್ಪತ್ರೆ ಕಟ್ಟಿದ್ದಾರೆ. ಆದರೆ ಸಿಬ್ಬಂದಿಯೇ ಇಲ್ಲ. ರೋಗಿಗಳಿಗೆ ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ. ವೈದ್ಯರು ಇಲ್ಲವೆಂಬ ಕಾರಣಕ್ಕೆ ರೋಗಿ ಸಂಬಂಧಿಕರು ಎಷ್ಟೋ ಸಾರಿ ಗಲಾಟೆ ಮಾಡಿದ್ದಾರೆ. ನಮ್ಮ ಮಾತು ಕೇಳುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ’ ಎಂಬುದು ಆಸ್ಪತ್ರೆ ಸಿಬ್ಬಂದಿ ಆಳಲು.

ಹೆರಿಗೆ ಆಸ್ಪತ್ರೆಯ ಸಮಸ್ಯೆ ಹೇಳತೀರದು. ಕೆಲ ತಿಂಗಳ ಹಿಂದೆಯಷ್ಟೇ ಬಾಣಂತಿಯೊಬ್ಬರು ಮೃತಪಟ್ಟರು. ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆಕೆಯ ಸಂಬಂಧಿಕರು ಆಸ್ಪತ್ರೆ ಗಾಜು, ಪೀಠೋಪಕರಣಗಳನ್ನು ಪುಡಿ ಮಾಡಿದ್ದರು. ಒಂದು ತಿಂಗಳು ಆಸ್ಪತ್ರೆ ಬಂದ್‌ ಆಗಿತ್ತು. ಸರಾಸರಿ ನೂರಕ್ಕೂ ಹೆಚ್ಚು ಗರ್ಭಿಣಿಯರು ಮತ್ತು ಮಕ್ಕಳು ಇಲ್ಲಿಗೆ ಬರುತ್ತಾರೆ.

ಒಬ್ಬರೇ ಪ್ರಸೂತಿ ತಜ್ಞರು. ದಿನಕ್ಕೆ ಅಂದಾಜು ಹತ್ತು ಹೆರಿಗೆ ಆಗುತ್ತವೆ. ಅದರಲ್ಲಿ 4–5 ಸಿಜೇರಿಯನ್‌. ಅಕ್ಟೋಬರ್‌ ತಿಂಗಳಲ್ಲಿ 260 ಹೆರಿಗೆ ಆಗಿವೆ. ಆಸ್ಪತ್ರೆಯಲ್ಲಿ ಸ್ಪಚ್ಛತೆ ಎಂಬುದು ಮರೀಚಿಕೆ. ಎಲ್ಲೆಂದರಲ್ಲಿ ಉಗಿದಿರುವುದು, ಆಸ್ಪತ್ರೆ ತ್ಯಾಜ್ಯ ಬಿಸಾಡಿರುವುದು ಕಾಣುತ್ತದೆ. ಶೌಚಾಲಯದ ಬಳಿ ಸುಳಿಯಲು ಆಗದಷ್ಟು ಕೆಟ್ಟ ವಾಸನೆ.

ವಾರ್ಡ್‌ನಲ್ಲಿ ಗಾಳಿ, ಬೆಳಕು ಇಲ್ಲ. ಬಿಸಿನೀರು ಸಿಗುವುದಿಲ್ಲ. ಸಮೀಪದ ಹೋಟೆಲ್‌ನಿಂದ ₨ 5 ನೀಡಿ ಬಿಸಿ ನೀರು ತರಬೇಕು. ಕೆಲವರಿಗೆ ಮಡಿಲು ಕಿಟ್‌ ದೊರೆತಿರಲಿಲ್ಲ. ನವಜಾತು ಶಿಶುಗಳನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಮಲಗಿಸಲಾಗಿತ್ತು. ಈ ಕುರಿತು ಪ್ರಶ್ನಿಸಿದರೆ, ‘ಸಂಬಂಧಪಟ್ಟ ದಾಖಲೆ ನೀಡಿಲ್ಲ. ಅದಕ್ಕೆ ಕೊಟ್ಟಿಲ್ಲ’ ಎನ್ನುತ್ತಾರೆ ಆಸ್ಪತ್ರೆ ಸಿಬ್ಬಂದಿ.

ಗದಗ
* ರೇಡಿಯಾಲಜಿಸ್ಟ್‌
* ಚರ್ಮ ರೋಗ ತಜ್ಞ
* ಕಿವಿ, ಮೂಗು, ಗಂಟಲು ತಜ್ಞ
* ನೇತ್ರ ತಜ್ಞ

ಗದಗ ಜಿಲ್ಲಾಸ್ಪತ್ರೆ
ಒಟ್ಟು ಹುದ್ದೆಗಳು 118
ಸೇವೆಯಲ್ಲಿ ಇರುವವರು 75
ಖಾಲಿ ಹುದ್ದೆಗಳು 43.

ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವ
ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡುವಂತೆ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಸಿಬ್ಬಂದಿ ಕೊರತೆಯಿಂದ ಐಸಿಯು, ಡಯಾಲಿಸಿಸ್‌ ಘಟಕ ಬಂದ್‌ ಮಾಡಲಾಗಿದೆ. ಹೆರಿಗೆ ಆಸ್ಪತ್ರೆಯಲ್ಲಿ ಹಣ ತೆಗೆದುಕೊಳ್ಳುವ ಬಗ್ಗೆ ಮಾಹಿತಿ ಇಲ್ಲ. ಆದರೆ ಕೆಳ ದರ್ಜೆ ನೌಕರರನ್ನು ನಿಯಂತ್ರಿಸಲು ಆಗುತ್ತಿಲ್ಲ. ಅವರನ್ನು ಬದಲಿಸಲು ಹೋದರೆ ನಮ್ಮನ್ನೇ ಬದಲಿಸಲು ಪ್ರಯತ್ನಿಸುತ್ತಾರೆ.
–ಆರ್‌.ಎನ್‌.ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ.

ಆಯ್ಕೆ ಪ್ರಕ್ರಿಯೆ ವಿಳಂಬ
ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಇಲಾಖೆ ಪ್ರಧಾನ ಕಾರ್ಯದರ್ಶಿ ಗಮನಕ್ಕೂ ತರಲಾಗಿದೆ. ಕೆಲವೆಡೆ ಉಪಕರಣ ಇದ್ದರೆ ಸಿಬ್ಬಂದಿ ಇರುವುದಿಲ್ಲ, ಸಿಬ್ಬಂದಿ ಇದ್ದರೆ ಉಪಕರಣ ಇರುವುದಿಲ್ಲ. ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದೆ ಎಂದು ಸಚಿವರೇ ತಿಳಿಸಿದ್ದಾರೆ.
–ಡಿ.ಬಿ.ಚನ್ನಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ.

ಹಗಲಲ್ಲೇ ಸೊಳ್ಳೆ ಕಾಟ

ದವಾಖಾನಿ ತುಂಬಾ ನಾರತೈತಿ, ಹಗಲಲ್ಲೇ ಸೊಳ್ಳಿ ಕಾಟ, ದುರ್ವಾಸ­ನೆಯಿಂದಾಗಿ ಊಟಾ ಮಾಡಾಕೂ ಮನಸು ಬರುದಿಲ್ಲಾ, ರಾತ್ರಿ ನಿದ್ದಿ ಬರುದಿಲ್ಲಾ. ಹೋಟೆಲ್‌ನ್ಯಾಗ ರೊಕ್ಕಾ ಕೊಟ್ಟ ಬಿಸ್ನೀರ ತಗೊಂಡು ಬರಬೇಕು.
–ಭೀಮವ್ವ, ಲಕ್ಕುಂಡಿ.

ಸಹಜ ಹೆರಿಗೆಗೆ ₨ 900, ಸಿಜೇರಿಯನ್‌ಗೆ ₨ 3,000
‘ನಾರ್ಮಲ್‌ ಹೆರಿಗೆಗೆ ₨ 900, ಸಿಜೇರಿ­ಯನ್‌ಗೆ ₨ 3,000 ರೊಕ್ಕಾ ಕೊಡಬೇಕು.  ವಾರ್ಡಿಗೆ ಹಾಕೋ ಮುಂಚೆ ರೊಕ್ಕಾ ಕೊಡ­ಬೇಕು. ಇಲ್ಲಾಂದ್ರ ಮಗೂಗೆ  ಏನಾದ್ರು ಆಗೈತಿ ಅಂಥ ಹೆದರಸ್ತಾರಿ’ ಎಂದು ಅಣ್ಣಿಗೇರಿಯ ಮಹಿಳೆಯೊಬ್ಬರು ಹೇಳಿದರು ‘ತಾಯಿ, ಮಗಾ ಚಂದಗ ಇರ್ಲಿ ಅಂತ ಸಾಲಾ, ಸೋಲಾ ಮಾಡಿ ಅವರಿಗೆ ರೊಕ್ಕಾ ಕೊಡಬೇಕು. ಖಾಸಗಿ ದವಾಖ್ಯಾನಾಗ ಕೇಳದಷ್ಟು ರೊಕ್ಕಾ ಕೊಡಾಕ ನಮ್ ಹತ್ರ ಶಕ್ತಿ ಇಲ್ಲಾ. ಅದ್ಕ ಇಲ್ಲಿಗೆ ಕರ್ಕೋಂಡ ಬಂದಿೀವಿ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT