ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್- ಕರ್ನಾಟಕ ಕನಸಿಗೆ ಬಣ್ಣ

ಲೋಕಸಭೆಯಲ್ಲಿ ಅನುಮೋದನೆ
Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ: ಹೈದರಾಬಾದ್- ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 118 ನೇ ತಿದ್ದುಪಡಿ ಮಸೂದೆ 371 (ಜೆ) ಗೆ ಲೋಕಸಭೆ ಮಂಗಳವಾರ ಸರ್ವಾನುಮತದ ಒಪ್ಪಿಗೆ ನೀಡುವ ಮೂಲಕ ಆರು ಜಿಲ್ಲೆಗಳ ಜನರ ಬಹು ಕಾಲದ ಕನಸಿಗೆ ಬಣ್ಣ ತುಂಬಿತು. ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾದ ಬಳಿಕ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಹೋಗಲಿದೆ.

ಸಂವಿಧಾನದ 371(ಜೆ) ನೇ ತಿದ್ದುಪಡಿಯಾಗಿದ್ದು, 2/3ರಷ್ಟು ಬಹುಮತದ ಅಗತ್ಯವಿತ್ತು. ಆದರೆ ಸದನದಲ್ಲಿದ್ದ ಎಲ್ಲ 347 ಸದಸ್ಯರೂ ಮಸೂದೆ ಪರ ಮತ ಹಾಕಿದರು.

ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಅಭಿವೃದ್ಧಿಗೆ `ಪ್ರತ್ಯೇಕ ಮಂಡಳಿ' ಸ್ಥಾಪನೆಗೆ ಅವಕಾಶ ನೀಡುವ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೂಲ ನಿವಾಸಿಗಳಿಗೆ ಮೀಸಲಾತಿ ಒದಗಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಗೃಹ ಖಾತೆ ರಾಜ್ಯ ಸಚಿವ ಆರ್.ಪಿ.ಎನ್ ಸಿಂಗ್ ಲೋಕಸಭೆಯಲ್ಲಿ ಮಂಡಿಸಿದರು. ಮಸೂದೆಗೆ ಎಲ್ಲ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದವು.

ಕೇಂದ್ರದ ಯುಪಿಎ ಸರ್ಕಾರ ಸಂವಿಧಾನದ 118ನೇ ತಿದ್ದುಪಡಿ ಮಸೂದೆಯನ್ನು ರೂಪಿಸಿ, ಜಾರಿಗೆ ತರಲು ಕಾರಣವಾದ ಸಂದರ್ಭವನ್ನು ಸಚಿವ ಸಿಂಗ್ ವಿವರಿಸಿದರು. ಇದರಿಂದ ಹಿಂದುಳಿದ ಆರು ಜಿಲ್ಲೆಗಳು ಸಮಗ್ರ ಅಭಿವೃದ್ಧಿ ಆಗಲಿದೆ ಎಂದರು. ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೈದರಾಬಾದ್- ಕರ್ನಾಟಕ ಭಾಗದ ಜನರ ಬಹುದಿನದ ವಿಶೇಷ ಸ್ಥಾನಮಾನದ ಬೇಡಿಕೆಗೆ ಎಲ್ಲ ಪಕ್ಷಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಲೋಕಸಭೆ ಚುನಾವಣೆ ಪ್ರಚಾರಕ್ಕೆ ಗುಲ್ಬರ್ಗಕ್ಕೆ ಬಂದಿದ್ದ ರಾಹುಲ್ ಗಾಂಧಿ ಸಂವಿಧಾನ ತಿದ್ದುಪಡಿ ಮಸೂದೆ ಜಾರಿಗೆ ತರುವ ಭರವಸೆ ನೀಡಿದ್ದರು. ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್‌ಸಿಂಗ್, ಸಚಿವರಾದ ಚಿದಂಬರಂ, ಸುಶೀಲ್ ಕುಮಾರ್ ಶಿಂಧೆ ಸಹಕಾರ ನೀಡಿದ್ದಾರೆ. ವಿದರ್ಭ, ತೆಲಂಗಾಣ ಮತ್ತು ಸೌರಾಷ್ಟ್ರ ಮಾದರಿಗಳನ್ನು ಒಗ್ಗೂಡಿಸಿ ಸರ್ಕಾರ ಅತ್ಯುತ್ತಮವಾದ ತಿದ್ದುಪಡಿ ಮಸೂದೆ ರೂಪಿಸಿದೆ ಎಂದು ಗುಲ್ಬರ್ಗ ಲೋಕಸಭೆ ಸದಸ್ಯರೂ ಆಗಿರುವ ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆಗೆ ಹೋಗಿದ್ದ 371 (ಜೆ) ತಿದ್ದುಪಡಿ ಮಸೂದೆಗೆ ವಿರೋಧ ಮಾಡಿ ರಾಜ್ಯ ಸರ್ಕಾರ ಪತ್ರ ಬರೆಯಿತು. ಇದರಿಂದ ಸ್ವಲ್ಪ ಗೊಂದಲ ಉಂಟಾಯಿತು. ನಾನು ಖುದ್ದು ಅನಂತಕುಮಾರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ಗೊಂದಲ ಪರಿಹರಿಸುವ ಪ್ರಯತ್ನ ಮಾಡಿದೆ ಎಂದು ಖರ್ಗೆ ವಿವರಿಸಿದರು. ಹೈದರಾಬಾದ್- ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಪಡೆಯಲು ಎಲ್ಲ ಪಕ್ಷಗಳು ಶ್ರಮ ಹಾಕಿವೆ ಎಂದರು.

ಮಸೂದೆ ಮೇಲೆ ಚರ್ಚೆ ಆರಂಭಿಸಿದ ಬಿಜೆಪಿ ಸದಸ್ಯ ಅನಂತ ಕುಮಾರ್, ಹೈದರಾಬಾದ್- ಕರ್ನಾಟಕದ ಜನ ವಿಶೇಷ ಸ್ಥಾನಮಾನಕ್ಕಾಗಿ ಚಳವಳಿ ನಡೆಸಿದ್ದರು. ನಿಜಾಮರ ಆಳ್ವಿಕೆ ಕಂಡ ಆರು ಜಿಲ್ಲೆಗಳು ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದಿವೆ.

ಪ್ರಾದೇಶಿಕ ಅಸಮತೋಲನ ಕುರಿತು ಅಧ್ಯಯನ ನಡೆಸಿದ ಡಾ. ಡಿ.ಎಂ. ನಂಜುಂಡಪ್ಪ ಈ ಭಾಗದ ಅಭಿವೃದ್ಧಿಗೆ ರೂ 36 ಸಾವಿರ ಕೋಟಿ ಅಗತ್ಯವಿದೆ ಎಂದು ಹೇಳಿದ್ದರು. 2009ರಲ್ಲಿ ರಾಜ್ಯ ಸರ್ಕಾರ ರೂ 9ಸಾವಿರ ಕೋಟಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ರಾಜ್ಯ ವಿಧಾನಮಂಡಲದ ಉಭಯ ಸದನಗಳು ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ನಿರ್ಣಯ ಅಂಗೀಕರಿಸಿದ್ದವು. ಜಗದೀಶ್ ಶೆಟ್ಟರ್ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.  ಕೇಂದ್ರ ಸರ್ಕಾರ ಕೊನೆಗೂ ಆರು ಜಿಲ್ಲೆಗಳಿಗೆ ನ್ಯಾಯ ಒದಗಿಸಿದೆ. ರಾಜ್ಯಗಳ ಪುನರ್‌ವಿಂಗಡಣೆಯಾದ 56 ವರ್ಷಗಳ ಬಳಿಕ ಜನರ ಕನಸು ಸಾಕಾರಗೊಳ್ಳುತ್ತಿದೆ ಎಂದರು ಅನಂತ ಕುಮಾರ್.

ಹೈದರಾಬಾದ್- ಕರ್ನಾಟಕ ಭಾಗದ ಬೇಡಿಕೆ ದೇವರಾಜ ಅರಸರ ಕಾಲದಿಂದಲೂ ಪರಿಹಾರ ಕಾಣದೆ ಉಳಿದಿತ್ತು. ಹಿಂದೊಮ್ಮೆ ಪ್ರಸ್ತಾವನೆ ತಿರಸ್ಕೃತವಾಗಿತ್ತು. ಅಂತಿಮವಾಗಿ ಯುಪಿಎ ಸರ್ಕಾರ ಬೇಡಿಕೆ ಈಡೇರಿಸುವ ಐತಿಹಾಸಿಕ ತೀರ್ಮಾನ ಮಾಡಿದೆ ಎಂದು ಜೆಡಿಎಸ್ ಸದಸ್ಯ ಎಚ್.ಡಿ. ದೇವೇಗೌಡ ಹೇಳಿದರು. ಕನ್ನಡದಲ್ಲಿ ಮಾತನಾಡಿದ ಕೊಪ್ಪಳದ ಸದಸ್ಯ ಶಿವರಾಮಗೌಡ ಮತ್ತು ರಾಯಚೂರು ಸದಸ್ಯ ಸಣ್ಣ ಫಕ್ಕೀರಪ್ಪ, ಮಸೂದೆ ಅಂಗೀಕಾರ ಪಡೆಯುತ್ತಿರುವುದು ನಮ್ಮ ಜನರ ಸುದೈವ ಎಂದು ಬಣ್ಣಿಸಿದರು.

ಆತ್ಮವಿಶ್ವಾಸ ಹೆಚ್ಚಿಸಲಿದೆ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮಾತನಾಡಿ, ಸಂವಿಧಾನ ತಿದ್ದುಪಡಿ ನಮ್ಮ ಭಾಗದ ಜನರ ಆತ್ಮವಿಶ್ವಾಸ ಹೆಚ್ಚಿಸಲಿದೆ ಎಂದರು. ಈ ಮಾತಿಗೆ ಪೂರಕವಾಗಿ ಉರ್ದು ಕವಿತೆಯೊಂದರ  ಸಾಲುಗಳನ್ನು ಉಲ್ಲೇಖಿಸಿದರು. ಚಿಕ್ಕಮಗಳೂರು ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ, ಜೆಡಿಯು ಮುಖಂಡ ಶರದ್ ಯಾದವ್, ಸಮಾಜವಾದಿ ಪಕ್ಷದ ಶೈಲೇಂದ್ರ ಕುಮಾರ್, ಟಿಎಂಸಿ  ಸದಸ್ಯ ಸೌಗತ್‌ರಾಯ್, ಶಿವಸೇನೆಯ ಅನಂತ ಗೀತೆ, ಟಿಡಿಪಿ ಸದಸ್ಯ ನಾಗೇಶ್ವರರಾವ್, ಆರ್‌ಜೆಡಿ ಸದಸ್ಯ ಲಾಲುಪ್ರಸಾದ್ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT