ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಸ್ಪೀಡ್ ರೈಲು ಯೋಜನೆ ಮರುಪರಿಶೀಲನೆ.

Last Updated 11 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ನಗರ ಮತ್ತು ದೇವನಹಳ್ಳಿ ವಿಮಾನ ನಿಲ್ದಾಣ ನಡುವೆ ‘ಹೈಸ್ಪೀಡ್ ರೈಲು ಯೋಜನೆ’ (ಎಚ್‌ಎಸ್‌ಆರ್‌ಪಿ) ಕೈಗೊಳ್ಳುವ ಕುರಿತು ರಾಜ್ಯ ಸರ್ಕಾರ ಪುನರ್ ಪರಿಶೀಲನೆ ನಡೆಸಲಿದೆ.ನಗರ ಹಾಗೂ ವಿಮಾನ ನಿಲ್ದಾಣ ನಡುವೆ ‘ಹೈಸ್ಪೀಡ್ ರೈಲು ಯೋಜನೆ’ ಅಗತ್ಯವಿದೆಯೇ ಅಥವಾ ‘ನಮ್ಮ ಮೆಟ್ರೊ’ ಸಾಕೇ ಎಂಬ ಬಗ್ಗೆ ಪರಿಶೀಲಿಸಿ ಅಂತಿಮ ನಿರ್ಧಾರ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.ಹೈಸ್ಪೀಡ್ ರೈಲು ಯೋಜನೆ ಕುರಿತು ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ದೆಹಲಿಯಲ್ಲಿ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಓಡಿಸುವ ವ್ಯವಸ್ಥೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಮೆಟ್ರೊಗೆ ಹೋಲಿಸಿದರೆ ಹೈಸ್ಪೀಡ್ ರೈಲು ಯೋಜನೆ ದುಬಾರಿ. ಇದರಿಂದ ಜನರು ಮತ್ತು ಪ್ರಯಾಣಿಕರ ಮೇಲೆ ಅನಗತ್ಯ ಹೊರೆ ಬೀಳುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆ ಕುರಿತು ಮರು ಚಿಂತನೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.ನಮ್ಮ ಮೆಟ್ರೊ ಕಾಮಗಾರಿ ವಿಳಂಬ ಗತಿಯಲ್ಲಿ ನಡೆಯುತ್ತಿಲ್ಲ. ಎಲ್ಲವೂ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುತ್ತಿದೆ. ಈಗಾಗಲೇ ಪೂರ್ಣಗೊಂಡಿರುವ ಕೆಎಸ್‌ಸಿಎ ಕ್ರೀಡಾಂಗಣ ಹಾಗೂ ಬಯ್ಯಪ್ಪನ ಹಳ್ಳಿ ಮಾರ್ಗದಲ್ಲಿ ಏಪ್ರಿಲ್ 4ರಂದು ಯುಗಾದಿ ದಿನ ಮೆಟ್ರೊ ಸಂಚಾರ ಆರಂಭಿಸಲಿದೆ ಎಂದರು.

‘ನಮ್ಮ ಮೆಟ್ರೊ’ ದೆಹಲಿ ಮೆಟ್ರೊಗಿಂತ ಉತ್ತಮವಾಗಿದೆ. ಆ ಬಗ್ಗೆ ಯಾವ ಅನುಮಾನ ಬೇಡ. ಮೆಟ್ರೊ ಉದ್ಘಾಟನೆಗೆ ಪ್ರಧಾನಿ ಅವರನ್ನು ಆಹ್ವಾನಿಸಲಾಗುವುದು ಎಂದು ಯಡಿಯೂರಪ್ಪ ವಿವರಿಸಿದರು.ಹೈಸ್ಪೀಡ್ ರೈಲು ಯೋಜನೆಗೆ ಎರಡೂವರೆ ಶತಕೋಟಿ ಡಾಲರ್‌ಗೂ ಹೆಚ್ಚು ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ‘ಕಾಯಂ ಸಂಕಷ್ಟ ಸೂತ್ರ’ ರೂಪಿಸುವುದರಿಂದ ಏನು ಪ್ರಯೋಜನ. ನದಿ ಒಡಲು ಬರಿದಾದರೆ ಎಲ್ಲಿಂದ ನೀರು ತರಬೇಕು ಎಂದು ಮುಖ್ಯಮಂತ್ರಿ ಖಾರವಾಗಿ ಪ್ರಶ್ನಿಸಿದರು.
ನದಿಯಲ್ಲಿ ನೀರಿದ್ದಾಗ ತಮಿಳುನಾಡಿಗೆ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ದಾಗ ನೀರು ಬಿಡುವುದಿಲ್ಲ. ಇದು ಎರಡು ರಾಜ್ಯಗಳು ಒಪ್ಪಿ ಅನುಸರಿಸಿಕೊಂಡು ಬರುತ್ತಿರುವ ವಿಧಾನ. ಹೀಗಿದ್ದಾಗಲೂ ಸಂಕಷ್ಟ ಸೂತ್ರ ಬೇಕೆಂದರೆ ಹೇಗೆ? ಈ ಒತ್ತಾಯ ರಾಜಕೀಯ ಪ್ರೇರಿತ. ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆ ಹುಟ್ಟಿಕೊಂಡಿದೆ ಎಂದರು.

ಕಬ್ಬಿಣ ಅದಿರು ರಫ್ತು ನಿಷೇಧದ ಹಿನ್ನೆಲೆಯಲ್ಲಿ ರಾಜ್ಯದ ಗಣಿಗಾರಿಕೆ ಮತ್ತು ಸಾಗಣೆ ನೀತಿ ಬಗ್ಗೆ ಶೀಘ್ರವೇ  ಅಧಿಸೂಚನೆ ಹೊರಡಿಸಲಾಗುವುದು. ಈಗಾಗಲೇ ನೀತಿ ರೂಪಿಸಲಾಗಿದೆ. ಅದರ ಪ್ರಕಟಣೆ ಮಾತ್ರ ಬಾಕಿ ಇದೆ ಎಂದು ಮುಖ್ಯಮಂತ್ರಿ ತಿಳಿಸಿದರು.ಗಣಿಗಾರಿಕೆ ಹಾಗೂ ಸಾಗಣೆ ನೀತಿ ಕುರಿತು ಮಾರ್ಚಿ 31ರೊಳಗೆ ಅಧಿಸೂಚನೆ ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಕುರಿತು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT