ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಬುಜದ ಪದ್ಮಾವತಿ ಅಮ್ಮ

Last Updated 17 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಶ್ರೀಕ್ಷೇತ್ರ ಹೊಂಬುಜ ಜೈನ ಪುಣ್ಯಕ್ಷೇತ್ರ. ಇಲ್ಲಿನ ಅಧಿದೇವತೆ ಶ್ರೀ ಪದ್ಮಾವತಿ ದೇವಿ ಇಪ್ಪತ್ಮೂರನೆಯ ತೀರ್ಥಂತರ ಶ್ರೀ ಪಾರ್ಶ್ವನಾಥ ಸ್ವಾಮಿಯ ಯಕ್ಷಿಯೂ ಹೌದು. ಹೊಂಬುಜ ಸಾಂತರ ಆಳ್ವಿಕೆಗೆ ಒಳಪಟ್ಟಿತ್ತು.

ಜೈನರಿಗೂ, ಜೈನೇತರರಿಗೂ ಧಾರ್ಮಿಕ ಕೇಂದ್ರವಾಗಿದ್ದ ಹೊಂಬುಜಕ್ಕೆ 1500 ವರ್ಷಗಳ ಇತಿಹಾಸವಿದೆ. ಹೊಂಬುಜವನ್ನು ಹುಂಚ, ಪೊಂಬುಚ್ಚ ಎಂದೂ ಕರೆಯುತ್ತಾರೆ. `ಸಾಂತಳಿಗೆ ಸಾಸಿರ~ ವೆಂಬ ನಾಡಾಗಿ ಸಾವಿರ ವರ್ಷಕ್ಕೂ ಹೆಚ್ಚು ಕಾಲ ಸಾಂತರರ ರಾಜಧಾನಿಯಾಗಿ ಮೆರೆದ ಹೊಂಬುಜದಲ್ಲಿ ಶೈವ, ವಿಶ್ವಕರ್ಮ ದೇವಸ್ಥಾನಗಳಿವೆ. ಆದರೆ ಇದು ಜಿನಾಲಯಗಳ ಬೀಡಾಗಿ ವಾಸ್ತುಶಿಲ್ಪ ವೈಭವ ಹಾಗೂ ಧಾರ್ಮಿಕ ಪರಂಪರೆಯಿಂದ ಜೈನ ಆರಾಧನಾ ಕ್ಷೇತ್ರವಾಗಿ ಗಮನ ಸೆಳೆದಿದೆ.

ಪಾರ್ಶ್ವನಾಥ ತೀರ್ಥಂಕರ ಬಸದಿ: ಮೂಲನಾಯಕ ಪಾರ್ಶ್ವನಾಥ ಸ್ವಾಮಿ ದೇವಾಲಯವು ವಿಶಾಲವಾಗಿದ್ದು, ಮೇಲಂತಸ್ತು ಹೊಂದಿದೆ. ಧ್ಯಾನಸ್ಥ ಭಂಗಿಯ ಮೂಲನಾಯಕ ವಿಗ್ರಹವು ನಿರಾಭರಣವಾಗಿದೆ. ನಿತ್ಯವೂ ಜಲಾಭಿಷೇಕ, ಹಾಲಿನ ಮಜ್ಜನ, ಶ್ರೀಗಂಧ, ಚಂದನ, ಅರಿಶಿನ ದ್ರವ್ಯಗಳಿಂದ ಅಭಿಷೇಕ ನಡೆಯುತ್ತದೆ.

ಇದೇ ಬಸದಿಯಲ್ಲಿ ಇತರ ಎರಡು ಪಾರ್ಶ್ವನಾಥ ತೀರ್ಥಂಕರ ವಿಗ್ರಹಗಳು ಖಡ್ಗಾಸನ ಭಂಗಿಯಲ್ಲಿವೆ. ಒಂದು ವಿಗ್ರಹ ಧ್ಯಾನಸ್ಥ ಭಂಗಿಯಲ್ಲಿ ವಿರಾಜಮಾನವಾಗಿದೆ.

ಧರಣೇಂದ್ರ ಯಕ್ಷ, ಪದ್ಮಾವತಿ ದೇವಿ ವಿಗ್ರಹಗಳೂ ಇವೆ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪೀಠ ಇದೆ. ಮೇಲಂತಸ್ತಿನಲ್ಲಿ ಜಿನಬಿಂಬಗಳಿವೆ. ಶಿಲಾಸ್ತಂಭಗಳಲ್ಲಿ ಕೆತ್ತನೆಗಳಿವೆ. ಈ ಮಂದಿರದಲ್ಲಿ ಪಾರ್ಶ್ವನಾಥ ಸ್ವಾಮಿ ಆರಾಧನೆಗಳು ನಡೆಯುತ್ತವೆ. ಬಸದಿಯ ಮುಂಭಾಗದಲ್ಲಿ ಮಾನಸ್ತಂಭ ಇದೆ.

 ಪದ್ಮಾವತಿ ದೇವಿ ಬಸದಿ: ಪದ್ಮಾವತಿ ದೇವಿ ಹೊಂಬುಜ ಕ್ಷೇತ್ರದಲ್ಲಿ ಉಳಿದುಕೊಂಡು, ಜಿನದತ್ತರಾಯನಿಗೆ ಈ ನಗರವನ್ನು ರಾಜಧಾನಿಯಾಗಿ ಕಲ್ಪಿಸಿ, ಸಿಂಹಲಾಂಛನವನ್ನು ಕರುಣಿಸಿದಳು. ಹೀಗೆ ಪದ್ಮಾವತಿ ದೇವಿಯ ಕಾರಣಿಕ, ಮಹಾತ್ಮೆ ಪ್ರಸಿದ್ಧಿಗೆ ಬಂದಿತು ಎಂಬುದು ನಂಬಿಕೆ.

ನೆಕ್ಕಿ ಮರದ ಕೆಳಗೆ ಸುಂದರ ಬಸದಿಯನ್ನು ನಿರ್ಮಿಸಿದ ಇತಿಹಾಸವಿದೆ. ಈಗಲೂ ನೆಕ್ಕಿ ಮರ, ಆ ಮರದ ಕೆಳಗಡೆ ಭದ್ರಗೋಡೆಯ ಶಿಲಾಫಲಕದಲ್ಲಿ ಶ್ರೀ ಪದ್ಮಾವತಿ ದೇವಿ, ಕೆಳಗಡೆ ಅಶ್ವಾರೋಹಿಯು ಕಂದುಕ ಕ್ರೀಡಾದಂಡವನ್ನು ಹಿಡಿದಿರುವ ವಿಕ್ರಮ ಸಾಂತರ ಶಿಲ್ಪವಿದೆ. ಈ ಜಿನಮಂದಿರವನ್ನು 1950ರ ವೇಳೆಗೆ ಜೀರ್ಣೋದ್ಧಾರ ಮಾಡಲಾಗಿದೆ.
 
ನಿತ್ಯವೂ ಭಕ್ತರು ತಮ್ಮ ಭಕ್ತಿಯ ಸಂಕೇತವಾಗಿ ಪೂಜಾ ವಿಧಿವಿಧಾನಗಳನ್ನು ಸಮರ್ಪಿಸಿ, ಪದ್ಮಾವತಿ ದೇವಿ ಕೃಪಾಕಟಾಕ್ಷಕ್ಕೆ ನಿವೇದಿಸಿಕೊಳ್ಳುತ್ತಾರೆ.
ಕುಂಕುಮಾರ್ಚನೆ, ಸೀರೆ - ಚಿನ್ನ - ಬೆಳ್ಳಿ ಸಮರ್ಪಣೆ, ಉಡಿತುಂಬಿಸುವ ಸಂಪ್ರದಾಯವಿದೆ. ಇಷ್ಟಾರ್ಥ ಸಿದ್ಧಿಗಾಗಿ ಬೇರೆ ಬೇರೆ ಪೂಜೆ, ತುಲಾಭಾರ, ನಂದಾದೀಪ, ಅಭಿಷೇಕ, ಪಂಚಕಜ್ಜಾಯ, ವರಹ ಪೂಜೆ, ನೈವೇದ್ಯ ಪೂಜೆ, ಹಣ್ಣು ಕಾಯಿ ಪೂಜೆ ಇತ್ಯಾದಿ ಹರಕೆ ಸಲ್ಲಿಸುತ್ತಾರೆ.

ಶ್ರಾವಣ ಮಾಸದ (ಸಂಪತ್ ಶುಕ್ರವಾರ) ಶುಕ್ರವಾರಗಳಂದು ಸಹಸ್ರಾರು ಭಕ್ತರು ದೇವಿಯ ದರ್ಶನ ಮಾಡಿ ಪೂಜೆ ಸಲ್ಲಿಸುತ್ತಾರೆ. ನವರಾತ್ರಿ, ಕಾರ್ತಿಕ ದೀಪೋತ್ಸವ, ಯುಗಾದಿ, ಶ್ರುತಪಂಚಮಿ, ಪರ್ವದಿನಗಳಲ್ಲಿಯೂ ಆರಾಧನೆ, ಉತ್ಸವಾದಿ ಧಾರ್ಮಿಕ ವಿಧಾನಗಳು ನಡೆಯುತ್ತವೆ. ಜೈನಧರ್ಮೀಯರಿಗಾಗಿ ಸೀಮಿತವಾಗದ ಪದ್ಮಾವತಿ ದೇವಿ ಅನುಗ್ರಹಕ್ಕಾಗಿ ಸರ್ವಧರ್ಮೀಯರೂ ಪ್ರಾರ್ಥಿಸಿಕೊಳ್ಳುತ್ತಾರೆ. ಫಾಲ್ಗುಣ ಮಾಸದಲ್ಲಿ ವಾರ್ಷಿಕ ರಥೋತ್ಸವ ನೆರವೇರುವುದು. ಶುಕ್ರವಾರ, ಮಂಗಳವಾರ, ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತವೆ.

ಇತರ ಬಸದಿ, ಜಿನವಿಗ್ರಹಗಳು, ಹೊಂಬುಜದ  ಶ್ರೀಮಠವೂ ಪುರಾತನಕಾಲದಿಂದಲೂ ಇದೆ. (ಸದ್ಯ ಹಿಂದಿನ ಭಟ್ಟಾರಕರ ಅಗಲಿಕೆಯಿಂದಾಗಿ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ) ಶ್ರೀ ನೇಮೀಶ್ವರ ಸ್ವಾಮಿ, ಶ್ರೀ ಸರಸ್ವತಿ ದೇವಿ ಬಸದಿಯಿದೆ. ಮಠದ ಹಿಂಭಾಗದಲ್ಲಿ ಬೋಗಾರ ಬಸದಿ ಶಿಥಿಲವಾಗಿದ್ದು, ಪ್ರಸ್ತುತ ನವೀಕರಿಸಲಾಗಿದೆ. ಏಕಶಿಲಾ ಬಾಹುಬಲಿ ಸ್ವಾಮಿ ವಿಗ್ರಹ (ಪ್ರಾಚೀನ) ಹಾಗೂ ಕೆಲವು ವರುಷಗಳ ಹಿಂದೆ ನಿರ್ಮಿಸಿರುವ ಪಾರ್ಶ್ವನಾಥ ಸ್ವಾಮಿ ವಿಗ್ರಹವಿದೆ.

ಅತ್ಯಾಕರ್ಷಕ ಜಿನಬಿಂಬಗಳಿರುವ ಪಂಚಕೂಟ ಬಸದಿ, ಮಾನಸ್ತಂಭ, ಮಕ್ಕಳ ಬಸದಿ, ಪಾರ್ಶ್ವನಾಥ ಬಸದಿ, ಗುಹಾತೀರ್ಥಕುಂಡ, ಸಮಾಧಿ ಸ್ಥಳ, ಮುತ್ತಿನ ಕೆರೆ, ಹೊಂಬುಜ ಕ್ಷೇತ್ರದಲ್ಲಿ ನೋಡಬಹುದು. ದುರಸ್ತಿಕಾರ್ಯಗಳು  ಪೂರ್ಣಗೊಂಡ ನಂತರ ಕ್ಷೇತ್ರದ ಇತಿಹಾಸ ಮರುಕಳಿಸುತ್ತದೆ.

ಹೊಂಬುಜ ಕ್ಷೇತ್ರಕ್ಕೆ ಬರುವ ಯಾತ್ರಿಗಳಿಗೆ ಉಳಿದುಕೊಳ್ಳಲು ವಸತಿ ನಿಲಯಗಳಿವೆ. ಕುಟುಂಬ ಸಮೇತ ಬರುವ ಭಕ್ತರಿಗಾಗಿ ಊಟೋಪಚಾರದ ವ್ಯವಸ್ಥೆಯೂ ಇದೆ. ಒಂದೆರಡು ದಿನ ಹೊಂಬುಜದಲ್ಲಿ ಉಳಿದು ಜಿನಾಲಯಗಳ ದರ್ಶನ ಮಾಡಬಹುದು.

ಹೀಗಿದೆ ದಾರಿ: ಶಿವಮೊಗ್ಗದಿಂದ ರಿಪ್ಪನ್‌ಪೇಟೆ ಮೂಲಕ  ಹೊಂಬುಜ ಕ್ಷೇತ್ರಕ್ಕೆ ಬರಲು ಬಸ್‌ಗಳ ವ್ಯವಸ್ಥೆ ಇದೆ. ತೀರ್ಥಹಳ್ಳಿ, ಸಾಗರಗಳಿಂದಲೂ ಹೊಂಬುಜಕ್ಕೆ ನೇರ ಬಸ್‌ಗಳಿವೆ. ಹೆಚ್ಚಿನ  ವಿವರಗಳಿಗಾಗಿ ಸಂಪರ್ಕಿಸಬೇಕಾದ ದೂರವಾಣಿ: 08185 - 262722.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT