ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾತ್ಲು: ಊಟ ಸವಿದು ಪರಾರಿಯಾದ ನಕ್ಸಲರು

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಕಲೇಶಪುರ:  ತಾಲ್ಲೂಕಿನ ಬಿಸಿಲೆ ಅರಣ್ಯ ಸಮೀಪದ ಹೊನ್ನಾತ್ಲು ಗ್ರಾಮಕ್ಕೆ ಭಾನುವಾರ ಸಂಜೆ ನಕ್ಸಲರು ಪ್ರವೇಶ ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಹೊನ್ನಾತ್ಲು ಗ್ರಾಮದ ಎಚ್.ಎಸ್. ಪ್ರಕಾಶ್ ಎಂಬುವರ ಮನೆಗೆ ಭಾನುವಾರ ಸಂಜೆ ಮೂವರು ನಕ್ಸಲರು ಬಂದರು. ಇವರಲ್ಲಿ ವಿಕ್ರಂ ಗೌಡ ಸಹ ಸೇರಿದ್ದಾರೆ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಕಲೇಶಪುರದ ಹೊಂಗಡಹಳ್ಳ ಸಮೀಪದ ಸಿಂಕೇರಿ ಗ್ರಾಮದ ಲೋಕೇಶಗೌಡ ಮತ್ತು ಗೌಡೇಗೌಡ ಎಂಬುವರ ಮನೆಗಳಿಗೆ ಬಂದಿದ್ದ ನಕ್ಸಲರು ಅಲ್ಲಿ ಆಹಾರ ಸೇವಿಸಿ ಹೋಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಆರಂಭಿಸಿದ್ದರು. ಸರ್ಕಾರ ಕೆಲವು ದಿನಗಳ ಮಟ್ಟಿಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರಿಂದ ನಕ್ಸಲರು ಪಾರಾಗಿ ಹೋಗಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಭಾನುವಾರ ಸಂಜೆ ಹೊನ್ನಾತ್ಲು ಗ್ರಾಮದ ಎಚ್.ಎಸ್. ಪ್ರಕಾಶ್ ಅವರ ಮನೆಯಲ್ಲಿ ನಕ್ಸಲರು ಮತ್ತೆ ಕಾಣಿಸಿಕೊಂಡಿದ್ದಾರೆ.

ಸಂಜೆ 6.30ರಿಂದ 8ಗಂಟೆ ವರೆಗೂ ಈ ಮನೆಯಲ್ಲಿ ಮೂವರು ನಕ್ಸಲರು ತಂಗಿದ್ದರು. ಅಲ್ಲಿಯೇ ಊಟ ಮಾಡಿ, ತಮ್ಮ ಸಂಗಾತಿಗಳಿಗೂ ಊಟ ಕಟ್ಟಿಸಿಕೊಂಡರು. ಅಲ್ಲದೆ ಅಕ್ಕಿ, ರಾಗಿ, ಖಾರದಪುಡಿ, ಸಕ್ಕರೆ, ಈರುಳ್ಳಿ, ಬೆಲ್ಲ ಮತ್ತಿತರ ಅಗತ್ಯ ವಸ್ತುಗಳನ್ನು ಪಡೆದುಕೊಂಡು ಹೋಗಿದ್ದಾರೆ. ತಾವು ಮನೆಗೆ ಬಂದಿರುವ ಬಗ್ಗೆ ಯಾರಿಗೂ ಮಾಹಿತಿ ನೀಡಬಾರದು ಎಂಬ ಬೆದರಿಕೆ ಸಹ ಹಾಕಿದ್ದಾರೆ.

ಮನೆಗೆ ಬಂದ ಮೂವರಲ್ಲಿ ಒಬ್ಬ ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಗ್ರಾಮದಲ್ಲಿ ಕೇವಲ 6 ಮನೆಗಳಿವೆ. ಅವುಗಳ ನಡುವಿನ ಅಂತರ ಹೆಚ್ಚಾಗಿದ್ದ ಕಾರಣ ತಕ್ಷಣಕ್ಕೆ ಮಾಹಿತಿ ಹರಡಿಲ್ಲ. ನಕ್ಸಲರು ಭೇಟಿ ನೀಡಿದ ಮಾಹಿತಿ ತಿಳಿಯುತ್ತಿದ್ದಂತೆ ಮಂಗಳವಾರ ಬೆಳಿಗ್ಗೆ ಡಿವೈಎಸ್‌ಪಿ ಉಪೇಂದ್ರಕುಮಾರ್, ಯಸಳೂರು ಠಾಣೆ ಇನ್‌ಸ್ಪೆಕ್ಟರ್ ರತನ್‌ಸಿಂಗ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ನಕ್ಸಲರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಮನೆಯವರು ಪೊಲೀಸರಿಗೆ ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ ಎಂದು ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಕೂಂಬಿಂಗ್ ಸಿದ್ಧತೆ?

ಸಕಲೇಶಪುರ ವ್ಯಾಪ್ತಿಯಲ್ಲಿ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರದಿಂದ ಈ ಭಾಗದಲ್ಲಿ ಕೂಂಬಿಂಗ್ ಆರಂಭಿಸಲು ಸಿದ್ಧತೆ ನಡೆದಿದೆ. ಬುಧವಾರ ಉಡುಪಿಯಿಂದಲೂ ನಕ್ಸಲ್ ನಿಗ್ರಹಪಡೆ ಸಕಲೇಶಪುರಕ್ಕೆ ಆಗಮಿಸಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT