ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಕೇರಿದೇವಪುರದಲ್ಲಿ ಜನಸ್ಪಂದನ ಸಭೆ...

Last Updated 7 ಆಗಸ್ಟ್ 2011, 8:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಾಮಾಜಿಕ ಭದ್ರತಾ ಯೋಜನೆ ಅಡಿ ಮಾಸಾಶನ ಪಡೆಯುತ್ತಿರುವವರ ಭೌತಿಕ ಪರಿಶೀಲನೆ ನಡೆಸಲು ನೀಡುತ್ತಿದ್ದ ಮಾಸಾಶನ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಈಗಾಗಲೇ ಪರಿಶೀಲನಾ ಕಾರ್ಯ ಪೂರ್ಣವಾಗಿರುವುದರಿಂದ ಸರ್ಕಾರದ ಆದೇಶ ಬಂದ ತಕ್ಷಣ ವೇತನ ಬಿಡುಗಡೆ ಮಾಡಲಾಗುವುದು ಎಂದು ಹೊಳಲ್ಕೆರೆ ತಹಶೀಲ್ದಾರ್ ಬಿ.ಬಿ. ಸರೋಜಾ ತಿಳಿಸಿದರು.

ಹೊಳಲ್ಕೆರೆ ತಾಲ್ಲೂಕಿನ ಹೊರಕೇರಿ ದೇವಪುರದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಮಾತನಾಡಿದರು.ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಯೋಜನೆಗಳಾದ ವಯೋವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ, 65 ವರ್ಷ ಮೇಲ್ಪಟ್ಟವರಿಗೆ ಸಂಧ್ಯಾಸುರಕ್ಷಾ ಮಾಸಾಶನ ನೀಡಲಾಗುತ್ತದೆ.

ನಾಗರಿಕರು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಮಧ್ಯವರ್ತಿಗಳ ಬಳಿ ಹೋಗದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆಯಬೇಕು.  ಇಲ್ಲದಿದ್ದರೆ ಮಧ್ಯವರ್ತಿಗಳ ಆಸೆ, ಆಮಿಷಗಳಿಗೆ ಬಲಿಯಾಗಿ ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ ಎಂದರು.

ಗ್ರಾಮಾಂತರ ಪ್ರದೇಶದಿಂದ ತಾಲ್ಲೂಕು ಕೇಂದ್ರಗಳಿಗೆ ನೂರಾರು ರೂಪಾಯಿ ವೆಚ್ಚ ಮಾಡಿ ಕಚೇರಿಗಳನ್ನು ಸಂಪರ್ಕಿಸಿ ತಮಗೆ ಬೇಕಾದ ಸೌಲಭ್ಯ, ಮಾಹಿತಿ ಪಡೆಯಲು ತೊಂದರೆಯಾಗುತ್ತಿದೆ. ಇದನ್ನು ಮನಗಂಡ ಸರ್ಕಾರ ಜನರ ಮನೆಯ ಬಾಗಿಲ ಬಳಿಯೇ ಆಡಳಿತ ಹಾಗೂ ಯೋಜನೆಗಳ ಸೌಲಭ್ಯ ಹಾಗೂ ಮಾಹಿತಿಯನ್ನು ನೀಡುವ ಉದ್ದೇಶದಿಂದ ಹೋಬಳಿಮಟ್ಟದ ಗ್ರಾಮಗಳಲ್ಲಿ ಪ್ರತಿ ತಿಂಗಳ ಮೊದಲ ಶನಿವಾರ ತಾಲ್ಲೂಕಿನ ಒಂದು ಹೋಬಳಿಯ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದೆ. ಜನರು ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಹೊರಕೇರಿದೇವಪುರದಲ್ಲಿನ ಪರಿಶಿಷ್ಟ ಜಾತಿಯವರಿಗಾಗಿ ರುದ್ರಭೂಮಿ ಇಲ್ಲದಿರುವುದರಿಂದ ಪ್ರತ್ಯೇಕವಾಗಿ ಮಂಜೂರು ಮಾಡಿಕೊಡಬೇಕು. ಮೂರು ವರ್ಷಗಳ ಹಿಂದೆ ಘಟಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ ಕಸವನಹಳ್ಳಿಯ ಅನಿತಾ ಎನ್ನುವ ವಿದ್ಯಾರ್ಥಿನಿ ಅಂಗವಿಕಲತೆಗೆ ಒಳಗಾಗಿದ್ದು, ಇವರಿಗೆ ಅಂಗವಿಕಲರ ವೇತನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದರೂ ಇದುವರೆಗೂ ಮಂಜೂರು ಮಾಡಿಲ್ಲ ಎಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಮಾನವೀಯತೆ ದೃಷ್ಟಿಯಿಂದ ಅಂಗವಿಕಲರ ವೇತನದ ಯೋಜನೆ ಮುಂದುವರಿಕೆಗೆ ಆದೇಶ ಬಂದ ತಕ್ಷಣ ಮಂಜೂರು ಮಾಡಿಕೊಡಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದರು.

ಕಸವನಹಳ್ಳಿಯಿಂದ ಮಹದೇವನಕಟ್ಟೆಗೆ ಬಸ್ ಸೌಲಭ್ಯ ಹಾಗೂ ರಸ್ತೆ ಅಭಿವೃದ್ದಿ ಮಾಡಿಕೊಡಬೇಕು ಹಾಗೂ ಕಸವನಹಳ್ಳಿ ಮತ್ತು ನೆಲ್ಲಿಕಟ್ಟೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಹೊರಕೇರಿದೇವಪುರದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಾಗೂ ಆಶ್ರಯ ಯೋಜನೆ ಅಡಿ ಮನೆಗಳನ್ನು ಮಂಜೂರು ಮಾಡಬೇಕು ಎಂದು ಗ್ರಾಮಸ್ಥರು ಅಹವಾಲು ಸಲ್ಲಿಸಿದರು.

ಜನಸ್ಪಂದನ ಕಾರ್ಯಕ್ರಮವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಲೆ ರಾಜಣ್ಣ ಉದ್ಘಾಟಿಸಿದರು. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸನಾವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT