ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರನಾಡ ಕನ್ನಡ ಸಂಘಗಳ ಮಹಾಮೇಳಕ್ಕೆ ಚಾಲನೆ

Last Updated 9 ಡಿಸೆಂಬರ್ 2013, 5:14 IST
ಅಕ್ಷರ ಗಾತ್ರ

ಬರೋಡಾ- (ಗುಜರಾತ್‌): ಧಾರ­ವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಬರೋಡಾದ ಸರ್ ಸೈಯಾ­ಜಿರಾವ್ ನಗರಗೃಹದಲ್ಲಿ ಭಾನುವಾರ­ದಿಂದ ಆರಂಭವಾದ ಎರಡು ದಿನಗಳ ಹೊರನಾಡ ಕನ್ನಡ ಸಂಘಗಳ ಮಹಾಮೇಳಕ್ಕೆ ಬರೋಡಾ ವಿಶ್ವವಿದ್ಯಾ­ಲಯದ ಕುಲಪತಿ  ಪ್ರೊ.ಯೋಗೇಶ ಸಿಂಗ್ ಚಾಲನೆ ನೀಡಿದರು.

‘ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗಳ ಹಿರಿಮೆ ಗರಿಮೆಗಳನ್ನು ಕೊಂಡಾಡಿದ ಅವರು, ಮೈಸೂರಿನ ಇನ್ಫೊಸಿಸ್ ಸಂಸ್ಥೆಯ ತರಬೇತಿ ಕೇಂದ್ರದ ಕಾರ್ಯವೈಖರಿಯನ್ನು ಪ್ರಶಂ­ಸಿ­ಸಿ­ದರು. ವಿದೇಶಿಗರಿಗೂ ತರಬೇತಿ ನೀಡುತ್ತಿರುವ ಈ ಸಂಸ್ಥೆ ಕರ್ನಾಟಕಕ್ಕೆ ಅಷ್ಟೇ ಅಲ್ಲ. ಭಾರತಕ್ಕೂ ಗೌರವವನ್ನು ತಂದುಕೊಟ್ಟಿದೆ’ ಎಂದು ಸಿಂಗ್‌ ಹೇಳಿದರು.

ಬರೋಡಾ ವಿ.ವಿ. ಕುಲಸಚಿವ ಡಾ.ಅಮಿತ್‌ ಢೋಲಕಿಯಾ, ‘ಕರ್ನಾ­ಟಕ ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಕ್ರೀಡೆಗಳಿಗೆ ತನ್ನದೇ ಆದ ಕೊಡುಗೆ ನೀಡಿದ್ದು, ವಿಶ್ವದಲ್ಲೇ ಕರ್ನಾಟಕ ಒಂದು ಗೌರವಾನ್ವಿತ ರಾಜ್ಯವಾಗಿದೆ. ಹೊರನಾಡ ಕನ್ನಡಿಗರು ತಮ್ಮ ಮಕ್ಕಳನ್ನು ವರ್ಷಕ್ಕೆ ಒಮ್ಮೆಯಾದರೂ ತಮ್ಮ ತಾಯ್ನಾಡಿಗೆ ಕರೆದುಕೊಂಡು ಹೋಗಿ ಅಲ್ಲಿಯ ಸಾಹಿತ್ಯ ಕಲೆ, ಸಂಸ್ಕೃತಿಯನ್ನು ಪರಿಚಯಿಸಬೇಕು’ ಎಂದು ಸಲಹೆ ನೀಡಿದರು.

ಖ್ಯಾತ ಭಾಷಾ ತಜ್ಞ ಪ್ರೊ.ಎನ್.ಗಣೇಶದೇವಿ, ‘ನಾನು ಇವತ್ತು ಏನನ್ನಾದರೂ  ಸಾಧಿಸಿದ್ದರೆ ಅದಕ್ಕೆ ಕನ್ನಡಿಗರ ಕೊಡುಗೆ ಅಪಾರ. ಸಾಹಿತಿ ವಿ.ಕೃ.ಗೋಕಾಕ, ಶಾಂತಿನಾಥ ದೇಸಾಯಿ, ಡಾ.ಗಿರೀಶ ಕಾರ್ನಾಡ ಅವರಂತಹ ಮಹನೀಯರನ್ನು ಮರೆಯಲು ಅಸಾಧ್ಯ. ದೇಶದ ಪ್ರಮುಖ ಭಾಷೆಯಲ್ಲಿ ಕನ್ನಡ ಭಾಷೆ ಎಂಟನೇ ಸ್ಥಾನದಲ್ಲಿದ್ದು,  ನಾಲ್ಕು ಪ್ರಮುಖ ಭಾಷೆಗಳಲ್ಲಿ ಕನ್ನಡವು ಒಂದಾಗಿದೆ’ ಎಂದರು.

ಮಹಾಮೇಳದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ, ‘ಕರ್ನಾಟಕ ದೇಶದಲ್ಲಿಯೇ ವೈಶಿಷ್ಟ್ಯ­ಪೂರ್ಣ ರಾಜ್ಯವಾಗಿದ್ದು, ಸಾಮರಸ್ಯ­ದಿಂದ ಬದುಕುತ್ತಿದ್ದ ಕನ್ನಡ ಮತ್ತು ಮರಾಠಿ ಜನರ ಮಧ್ಯೆ ಹೋರಾಟದ ಕಿಚ್ಚನ್ನು ಕೆಲವು ರಾಜಕಾರಣಿಗಳು ಹುಟ್ಟು ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕರ್ನಾಟಕದ ಅಷ್ಟೇ ಅಲ್ಲ ದೇಶದ ವಿವಿಧ ಮೂಲೆಮೂಲೆಗಳಲ್ಲಿ ವಾಸಿ­ಸುವ ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯ­ವನ್ನು ವಿದ್ಯಾವರ್ಧಕ ಸಂಘ ಮಾಡುತ್ತಿದೆ’ ಎಂದು ಕಾರ್ಯಾಧ್ಯಕ್ಷ ಪ್ರೊ.ಬಿ.ವಿ.ಗುಂಜೆಟ್ಟಿ ಹೇಳಿದರು.

ಬರೋಡಾ ಕರ್ನಾಟಕ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಸ್ವಾಗತಿಸಿ­ದರು. ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ನಿರೂಪಿಸಿದರು. ರಾಘವೇಂದ್ರ ವಂದಿಸಿದರು. ಎನ್.ಆರ್.ಮೊಕ್ತಾಲಿ, ಶಿವಣ್ಣ ಬೆಲ್ಲದ, ಪ್ರೊ.ಹೇಮಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ದೇಶದ ವಿವಿಧ ಭಾಗಗಳಿಂದ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT