ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರನಾಡಿನಲ್ಲಿ ರಥೋತ್ಸವ

Last Updated 7 ಮಾರ್ಚ್ 2011, 17:25 IST
ಅಕ್ಷರ ಗಾತ್ರ

ಹೊರನಾಡು (ಕಳಸ): ಇಲ್ಲಿನ ಅನ್ನಪೂರ್ಣೇಶ್ವರಿ ಕ್ಷೇತ್ರದ ವಾರ್ಷಿಕ ರಥೋತ್ಸವ ಸೋಮವಾರ ಭಕ್ತರ ಸಡಗರದ ನಡುವೆ ನಡೆಯಿತು.

ಕಳೆದ ಶನಿವಾರ ಗಣಪತಿ ಪೂಜೆ ಮೂಲಕ ರಥೋತ್ಸವಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದವು. ಆನಂತರದ ದಿನಗಳಲ್ಲಿ ಗಣಪತಿ ಹೋಮ, ರಂಗಪೂಜೆ, ಧ್ವಜಾರೋಹಣ ಮತ್ತು ಪುಷ್ಪಕಾರೋಹಣ ವಿಧಿವತ್ತಾಗಿ ನಡೆದಿದ್ದವು.

ರಥೋತ್ಸವದ ದಿನವಾದ ಸೋಮವಾರ ದೇವಸ್ಥಾನದ ಪರಿಸರವೆಲ್ಲವನ್ನೂ ಬಗೆಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರ ದಂಡು ದೇವಸ್ಥಾನದ ಸುತ್ತಲಿನ ಪ್ರಾಂಗಣದಲ್ಲಿ ನೆರೆದು ರಥೋತ್ಸವ ವೀಕ್ಷಿಸಲು ಕಾತರಿಸಿತ್ತು. ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿದ್ದ ಅನ್ನಪೂರ್ಣೇಶ್ವರಿ ದೇವಿಗೆ ಪೂಜೆ ನಡೆದ ನಂತರ ದೇವಸ್ಥಾನದ ಸುತ್ತಲೂ ದೇವಿಯ ಉತ್ಸವ ಮೂರ್ತಿಯ ಪ್ರದಕ್ಷಿಣೆ ನಡೆಯಿತು.

ಆನಂತರ ರಥಬೀದಿಯಲ್ಲಿ ನಿಲ್ಲಿಸಲಾಗಿದ್ದ ರಥಕ್ಕೆ ದೇವಿಯ ಉತ್ಸವ ಮೂರ್ತಿ ಆರೋಹಣ ನಡೆಯಿತು. ಭಕ್ತರ ಜೈಕಾರ ಮುಗಿಲು ಮುಟ್ಟಿದರೆ, ಸುಡುಮದ್ದುಗಳ ಸದ್ದು ಕಿವಿಗಡಚಿಕ್ಕುತ್ತಿತ್ತು. ನೆರೆದಿದ್ದ ಭಕ್ತರು  ಆನಂತರ ರಥವನ್ನು ಸ್ವಲ್ಪ ದೂರದವರೆಗೆ ಎಳೆದರು. ಬಣ್ಣ ಬಣ್ಣದ ಛತ್ರಿ, ತೋರಣ, ಪತಾಕೆಗಳನ್ನು ಸಾಲಾಗಿ ಹಿಡಿದಿದ್ದ ದೇವಸ್ಥಾನದ ಸಿಬ್ಬಂದಿ ಸುಂದರ ದೃಶ್ಯ ಸೃಷ್ಟಿಸಿದ್ದರು. ದೇವಸ್ಥಾನದ ಧರ್ಮದರ್ಶಿ ಜಿ.ಭೀಮೇಶ್ವರ ಜೋಷಿ, ರಾಮನಾರಾಯಣ ಜೋಷಿ, ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT