ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹೊಲದೊಡೆಯ' ಚಳವಳಿ ನಾಯಕನಿಗೆ ಪ್ರಶಸ್ತಿಯ ಗರಿ

Last Updated 19 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮಲೆನಾಡಿನಲ್ಲಿ ಸಮಾಜವಾದಿಗಳ ಘೋಷ ವಾಕ್ಯ `ಉಳುವವನೇ ಹೊಲದೊಡೆಯ'. ಈ ಚಳವಳಿ ಮೂಲಕ ಗೇಣಿದಾರ ರೈತರಿಗೆ ಭೂ ಒಡೆತನ ಸಿಗುವಂತೆ ಮಾಡಿದ ಅಪ್ಪಟ ಸಮಾಜವಾದಿ ಕೋಣಂದೂರು ಲಿಂಗಪ್ಪ ಅವರಿಗೆ ಈ ಬಾರಿಯ ಡಿ. ದೇವರಾಜ ಅರಸು ಪ್ರಶಸ್ತಿ ಒಲಿದಿದೆ.

ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡ ಅವರ ಒಡನಾಡಿಯಾಗಿದ್ದ ಕೋಣಂದೂರು ಲಿಂಗಪ್ಪ, ಅನೇಕ ಜನಪರ ಹೋರಾಟಗಳ ಮೂಲಕ ಹೆಸರಾದವರು. ಹಿಂದುಳಿದ ವರ್ಗದವರಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ ದೇವರಾಜ ಅರಸು ಅವರ ಆಡಳಿತದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಗೇಣಿದಾರಿಕೆ ಪದ್ಧತಿಗೆ ಇತಿಶ್ರೀ ಹಾಡಲು ಕಾರಣರಾದರು. ಬಡ ಗೇಣಿದಾರರಿಗೆ ಭೂ ಒಡೆತನದ  ಹಕ್ಕನ್ನು ಕೊಡಿಸು ವಲ್ಲಿ ಪ್ರಮುಖ  ಪಾತ್ರ ವಹಿಸಿ ದ್ದರು.

ಜನಪರ ಚಳ ವಳಿಗಳ ಕಾರಣ ದಿಂದಾಗಿ 1972 ರಿಂದ 1978ರವರೆಗೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೋಣಂದೂರು ಲಿಂಗಪ್ಪ ಅವರು ನಾಡಿನ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಶಾಸನ ಸಭೆಯಲ್ಲಿ ಚರ್ಚಿಸಿ ಉತ್ತಮ ಸಂಸದೀಯ ಪಟು ಎಂಬ ಹೆಗ್ಗಳಿಕೆಗೂ ಪಾತ್ರರಾದವರು.

ಕರ್ನಾಟಕ ಏಕೀಕರಣಗೊಂಡರೂ ವಿಶಾಲ ಮೈಸೂರು ಎನ್ನುವ ಹೆಸರಿನಲ್ಲಿಯೇ ಕರೆಯಲಾಗುತ್ತಿತ್ತು. ರಾಜ್ಯಕ್ಕೆ `ಕರ್ನಾಟಕ' ಎಂಬ ಹೆಸರನ್ನು ನಾಮಕರಣ ಮಾಡುವಂತೆ ಆಗ್ರಹಿಸಿಸುವ ಮೂಲಕ ಕನ್ನಡಪರ ಹೋರಾಟಕ್ಕೆ ಕೋಣಂದೂರ ಲಿಂಗಪ್ಪ ಚಾಲನೆ ನೀಡಿದ್ದರು.

ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಅವರನ್ನು `ಪ್ರಜಾವಾಣಿ' ಮಾತನಾಡಿಸಿದಾಗ...
* ಅರಸು ಪ್ರಶಸ್ತಿಗೆ ಆಯ್ಕೆಯಾದ ಬಗ್ಗೆ ನಿಮ್ಮ ಪ್ರತಿಕ್ರಿಯೆ?
- ನಾನು ನಿರೀಕ್ಷಿಸಿರಲಿಲ್ಲ. ಅನಿರೀಕ್ಷಿತವಾಗಿದೆ. ಪ್ರಶಸ್ತಿ ಬಗ್ಗೆ ಕಲ್ಪನೆಯನ್ನೂ ಸಹ ಮಾಡಿರಲಿಲ್ಲ. ಸಂತೋಷವಾಗಿದೆ.

* ಅರಸು ಅವರ ಆಡಳಿತದಲ್ಲಿ ನಿಮ್ಮ ಕಾರ್ಯವೈಖರಿ ಹೇಗಿತ್ತು?
-ದೇವರಾಜ ಅರಸು ಅವರನ್ನು ಮೊದಲು ಟೀಕಿಸಿದ್ದೇ ನಾನು. ರೈತರಿಗೆ ಅನುಕೂಲವಾಗುವ ಕಾನೂನು ಜಾರಿಗೆ ಬರಬೇಕು ಎಂಬ ನಮ್ಮ ಒತ್ತಾಸೆಗೆ ಬಂಗಾರಪ್ಪ, ಕಾಗೋಡು ತಿಮ್ಮಪ್ಪ,ಕಕ್ಕಿಲಾಯ, ಎಂ.ಎಸ್. ಕೃಷ್ಣರಾವ್ ಮುಂತಾದವರು ಬೆಂಬಲ ಸೂಚಿಸಿದರು.

* ಈಗಿನ ಚುನಾವಣೆಗಳ ಬಗ್ಗೆ ಏನೆನ್ನುತ್ತೀರಿ?
-ನಾನು ಚುನಾವಣೆಗೆ ನಿಂತಿದ್ದಾಗ ನನಗೆ ಒಂದು ರೂಪಾಯಿ ನೋಟು ಕೊಟ್ಟು, ಓಟೂ ಕೊಡುತ್ತಿದರು. ಆಗ ರೂ 8,300 ಖರ್ಚಾಗಿತ್ತು. ರೂ 3 ಸಾವಿರ ಹಣ ಉಳಿದಿತ್ತು. ಅದನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಂತವೇರಿ ಗೋಪಾಲಗೌಡ ಅವರ ಹಾಸಿಗೆಯ ತಲೆದಿಂಬಿನ ಅಡಿಯಲ್ಲಿ ಇಟ್ಟು ಅವರಿಗೆ ನಮಸ್ಕರಿಸಿ ಬಂದಿದ್ದೆ. ಈಗ ಗ್ರಾಮ ಪಂಚಾಯ್ತಿ ಚುನಾವಣೆಗೂ ರೂ 10ರಿಂದ ರೂ 20 ಲಕ್ಷ ಖರ್ಚಾಗುತ್ತದೆ ಎನ್ನುವುದು ಆಶ್ಚರ್ಯ.

* ಈಗ ಹೋರಾಟಗಳಿಗೆ ಮನ್ನಣೆ ಸಿಗುತ್ತಿದೆಯೇ?
-ಯಾವುದೇ ಸರ್ಕಾರಗಳು ಹೋರಾಟಗಳನ್ನು ಗೌರವಿಸಿಲ್ಲ. ಹೋರಾಟ ತೀವ್ರ ಆದಾಗ ಅದಕ್ಕೆ ಸ್ಪಂದಿಸುತ್ತವೆ. ಆಗಿನ ಹೋರಾಟಕ್ಕೆ ಜನಸ್ಪಂದನೆ, ಬದ್ಧತೆ ಹೆಚ್ಚಿರುತ್ತಿತ್ತು.
-ಶಿವಾನಂದ ಕರ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT