ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನಕ್ಷತ್ರಗಳಿಂದ ಹೊಸ ತಿರುವು

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನಕ್ಷತ್ರಗಳು ಅಚಲ; ಅವಕ್ಕೆ ಆದಿ ಅಂತ್ಯ ಎಂಬುದೇ ಇಲ್ಲ ಎಂಬ ನಂಬಿಕೆ ಇದ್ದ ಕಾಲ. ಆಲೋನಾಮಗ್ನನಾಗಿ ರಸ್ತೆಯಲ್ಲಿ ನಡೆಯುತ್ತಿದ್ದವನೊಬ್ಬ ಕತ್ತಿತ್ತಿ ನೋಡಿದ. ಉತ್ತರದ ಕೆಸಿಯೋಪಿಯಾ (ಕುಂತಿ) ಎಂಬ ಪುಂಜದಲ್ಲಿ ಹೊಸದೊಂದು ನಕ್ಷತ್ರ ಕಂಡಿತು. ಇದು ಭ್ರಮೆಯೇ? ಆತ ಮನೆಗೆ ಓಡಿ ತನ್ನ ವೀಕ್ಷಣಾಲಯದ ಬಾಗಿಲನ್ನು ತೆರೆದ. ಹೊಸ ನಕ್ಷತ್ರದ ಸ್ಥಾನ ವಿವರಗಳನ್ನು ಬರೆದಿಟ್ಟ. ಗೆಳೆಯರಿಗೆ ಸುದ್ದಿ ಮುಟ್ಟಿಸಿದ.

ಮರುರಾತ್ರಿಯೂ ಆ ನಕ್ಷತ್ರ ಇದ್ದಲ್ಲೇ ಇತ್ತು. ಇನ್ನೂ ಅನೇಕರು ಅದನ್ನು ವೀಕ್ಷಿಸಿದರು. ಅದರ ಪ್ರಕಾಶ ದಿನೇ ದಿನೇ ಹೆಚ್ಚಿತು. ಜನಸಾಮಾನ್ಯರೂ ಬರಿಗಣ್ಣಿನಿಂದಲೇ ಗುರುತಿಸುವಂತಾಯಿತು. ಕೆಲವೇ ದಿನಗಳಲ್ಲಿ ಅದು ಶುಕ್ರ ಗ್ರಹಕ್ಕಿಂತ ಪ್ರಕಾಶಮಾನವಾಯಿತು.

ಇದಕ್ಕೆ ನೋವಾ ಅಂದರೆ ಹೊಸ ನಕ್ಷತ್ರ ಎಂಬ ಹೆಸರು ಸಿಕ್ಕಿತು. ಇದನ್ನು ಗುರುತಿಸಿ ನಕ್ಷತ್ರಗಳ ಅಧ್ಯಯನದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಿದಾತ ಟೈಕೋ ಬ್ರಾಹೆ (1546 - 1601).

ಈ ನಕ್ಷತ್ರ ಸುಮಾರು ಎರಡು ವರ್ಷಗಳ ಕಾಲ ಅಂದರೆ 1572ರಿಂದ 1574ರವರೆಗೆ ಬೆಳಗಿ ಅನೇಕ ಬಗೆಯ ಚರ್ಚೆಗಳಿಗೆ ಅನುವು ಮಾಡಿಕೊಟ್ಟಿತು.

ಇದಾದ 12 ವರ್ಷಗಳಲ್ಲಿ ಯೋಹಾನೆಸ್ ಕೆಪ್ಲರ್ (1571 - 1630) ಹೀಗೆಯೇ ಇನ್ನೊಂದು ನೋವಾವನ್ನು ಒಫಿಯೂಕಸ್ (ಉರಗಧರ - ಇದು ವೃಶ್ಚಿಕ ಮತ್ತು ಧನುಗಳ ನಡುವೆ ಸ್ವಲ್ಪ ಉತ್ತರಕ್ಕೆ ಇದೆ.) ನಕ್ಷತ್ರಪುಂಜದಲ್ಲಿ ಗುರುತಿಸಿದ. ಈ ಎರಡೂ ಘಟನೆಗಳನ್ನು ಹೊಸ ನಕ್ಷತ್ರಗಳ ಹುಟ್ಟು ಎಂದು ಅಂದು ನಂಬಿದ್ದುದು ಒಂದು ವಿಪರ್ಯಾಸ ಎನ್ನಬಹುದು.

ಏಕೆಂದರೆ ಈಗ ನಮಗೆ ತಿಳಿದಿರುವಂತೆ ಇದು ಆಯಾ ನಕ್ಷತ್ರಗಳ ಅವಸಾನದ ಘೋಷಣೆ.
ಆದರೆ, ಈ ವಿಷಯ ತಿಳಿದುಕೊಳ್ಳಲು ಸುಮಾರು 400 ವರ್ಷಗಳೇ ಬೇಕಾದವು.
 
ದೂರದರ್ಶಕಗಳ ಬಳಕೆ ಆರಂಭವಾದ ಹಾಗೆ ನಕ್ಷತ್ರಗಳ ಪ್ರಕಾಶದಲ್ಲಿ ಸೂಕ್ಷ್ಮ ವ್ಯತ್ಯಾಸಗಳನ್ನು ಅಳತೆ ಮಾಡುವುದು ಸಾಧ್ಯವಾಯಿತು. ನಿಯತಕಾಲಿಕವಾಗಿ ಬೆಳಕಿನ ವ್ಯತ್ಯಾಸ ಸೂಚಿಸುವ ನಕ್ಷತ್ರಗಳ ಹೊಸ ಹೊಸಪಟ್ಟಿಯನ್ನು ತಯಾರಿಸಿದವರಲ್ಲಿ ಮದ್ರಾಸ್ ವೀಕ್ಷಣಾಲಯದ ನಿರ್ದೇಶಕರಾಗಿದ್ದ ನಾರ್ಮನ್ ಪಾಗ್ಸನ್ ಅವರ ಹೆಸರೂ ಇದೆ.

ಮುಂದೆ ಈ ಬಗೆಯ ಚಂಚಲ ನಕ್ಷತ್ರಗಳ ಅಧ್ಯಯನ ನೋವಾಗಳು ಹೊಸ ನಕ್ಷತ್ರಗಳಲ್ಲ - ತಾತ್ಕಾಲಿಕವಾಗಿ ಪ್ರಕಾಶ ಪಡೆಯುತ್ತವೆ ಎಂಬ ಸಂಗತಿ ಬೆಳಕಿಗೆ ಬಂದಿತು. ಟೈಕೋ ಮತ್ತು ಕೆಪ್ಲರ್ ಗುರುತಿಸಿದ್ದ ನೋವಾಗಳು  ಈ ವರ್ಗದವಲ್ಲ ಎಂದೂ ತಿಳಿದುಬಂದಿತು. ಈ ಮಧ್ಯೆ ನಮ್ಮ ಗೆಲಾಕ್ಸಿಯ ಮಿತಿಯ ಆಚೆ ಇರುವ ಆಂಡ್ರೊಮೆಡಾ ಮುಂತಾದ ಗೆಲಾಕ್ಸಿಗಳಲ್ಲಿ ನಕ್ಷತ್ರಗಳನ್ನು ಪ್ರತ್ಯೇಕಿಸಿ ಅಭ್ಯಸಿಸುವ ತಂತ್ರಜ್ಞಾನ ಬೆಳೆಯಿತು.

ಸೂರ್ಯ ಸುಮಾರು 10 ದಶಲಕ್ಷ ವರ್ಷಗಳಲ್ಲಿ ಉತ್ಸರ್ಜಿಸುವ ಚೈತನ್ಯವನ್ನು ಒಮ್ಮಲೇ ಚಿಮ್ಮಿಸುವ ಈ ವಿದ್ಯಮಾನವನ್ನು ಸೂಪರ್ ನೋವಾ ಎಂದು ಹೆಸರಿಸಿದ್ದು ಝ್ವಿಕಿ ಎಂಬ ವಿಜ್ಞಾನಿ. ಮುಂದೆ  ಅವುಗಳಿಗೂ ನೋವಾಗಳಿಗೂ ಬಹಳ ವ್ಯತ್ಯಾಸವಿದೆ ಎಂಬ ಅಂಶ ತಿಳಿಯಿತು.

1941ರ ಹೊತ್ತಿಗೆ ಇತರ ಗೆಲಾಕ್ಸಿಗಳ ಅನೇಕ ಸೂಪರ್ ನೋವಾಗಳ ರೋಹಿತಗಳ ಅಧ್ಯಯನ ನಡೆಯಿತು; ವಸ್ತು ಸೆಕೆಂಡಿಗೆ 6000 ಕ್ಕೂ ಹೆಚ್ಚು ಕಿಮೀ ವೇಗದಲ್ಲಿ ಧಾವಿಸುತ್ತಿದೆ. ಇದಕ್ಕೆ ಸಮಕಾಲೀನ ಭೌತ ವಿಜ್ಞಾನದ ಹೊಸ ಬೆಳವಣಿಗೆಗಳೂ ಪೂರಕವಾದವು. ಅತಿ ಹೆಚ್ಚು ದ್ರವ್ಯರಾಶಿಯ ನಕ್ಷತ್ರದ ಅವಸಾನದ ಹಂತವೇ ಸೂಪರ್ ನೋವಾ ಎಂಬ ಘಟನೆ.

1604ರಿಂದ ಈಚೆಗೆ ನಮ್ಮ ಗೆಲಾಕ್ಸಿಯಲ್ಲಿ ಯಾವುದೇ ಸೂಪರ್ ನೋವಾ ಕಂಡುಬಂದಿಲ್ಲ. 19ನೆಯ ಶತಮಾನದಲ್ಲಿ ಒಂದು ನಡೆದಿರಬಹದು ಎಂಬ ಅನುಮಾನವಿದೆ. ವಾಲ್ಟರ್ ಬಾಡೆ ಎಂಬ ಜರ್ಮನ್ ವಿಜ್ಞಾನಿ ಅಮೆರಿಕದಲ್ಲಿ ನೆಲೆಸಿದ ಆರಂಭದಲ್ಲಿ ಎರಡನೆಯ ವಿಶ್ವಯುದ್ಧ ಆರಂಭವಾಯಿತು.

ಆತನನ್ನು ನಾಗರಿಕ ವಲಯಗಳಿಂದ ದೂರ ಕಳಿಸುವ ಸನ್ನಾಹ ನಡೆದಾಗ ಆತನೇ ಖುದ್ದಾಗಿ ದೂರದರ್ಶಕದಿಂದ ಅಧ್ಯಯನ ಕೈಗೊಳ್ಳುವ ಅವಕಾಶಕ್ಕಾಗಿ ಕೇಳಿಕೊಂಡ. ಬ್ಲಾಕ್ ಔಟ್ ಕಾರಣ ರಾತ್ರಿಗಳಲ್ಲಿ ಪ್ರಕಾಶಮಾಲಿನ್ಯವೂ ಇರಲಿಲ್ಲ. ಎಲ್ಲರನ್ನೂ ಮಿಲಿಟರಿ ಸೇವೆಗೆ ಕರೆದುಕೊಂಡಿದ್ದರಿಂದ ದೂರದರ್ಶಕದ ಎಲ್ಲ ಶುಭ್ರರಾತ್ರಿಗಳೂ ವಾಲ್ಟರ್‌ಗೆ ಅನಾಯಾಸವಾಗಿ ದೊರಕಿದವು.

ಇದನ್ನು ಬಳಸಿಕೊಂಡು ಆತ ಬಹಳ ಮಹತ್ವದ ಶೋಧನೆಗಳನ್ನು ಮಾಡಿದ. ಇಂದು ಕ್ರಾಬ್ ನೆಬ್ಯುಲಾ ಎಂದು ಪರಿಚಿತವಾಗಿರುವ ನೆಬ್ಯುಲಾ 1054ರಲ್ಲಿ ಸ್ಫೋಟಿಸಿದ ಸೂಪರ್ ನೋವಾ ಎಂದು ತೋರಿಸಿಕೊಟ್ಟ.  ಇತರ ಅನೇಕ ಸೂಪರ್ ನೋವಾಗಳನ್ನು ಅಧ್ಯಯನ ಮಾಡಿ ಅವುಗಳ ಬೆಳಕು ಗರಿಷ್ಠ ಪ್ರಕಾಶದ ನಂತರ ಹೇಗೆ ಕ್ಷೀಣಿಸುತ್ತದೆ ಎಂಬುದರ ಆಧಾರದ ಮೇಲೆ ಟೈಪ್ 1 ಮತ್ತು ಟೈಪ್ 2 ಎಂಬ ಎರಡು ವರ್ಗಗಳನ್ನು ಗುರುತಿಸಿದ.

ಮೊದಲನೆಯ ವರ್ಗದ್ದು ಗರಿಷ್ಠದ ನಂತರ ಕೆಲವೇ ದಿನಗಳಲ್ಲಿ ಕ್ಷೀಣಿಸುತ್ತದೆ. ಎರಡನೆಯ ವರ್ಗದವು ನಿಧಾನವಾಗಿ ಕ್ಷೀಣಿಸುತ್ತವೆ. ಈ ಅಂಶ  ದೂರದ ಗೆಲಾಕ್ಸಿಗಳ ದೂರಗಳನ್ನು ನಿಖರವಾಗಿ ಗುರುತಿಸಲು ಬಳಕೆಯಾಗಿದ್ದು ಹೀಗೆ.

ಅವುಗಳ ಆಂತರಿಕ ಚೈತನ್ಯ ನಿಖರವಾಗಿ ತಿಳಿದಿರುವುದರಿಂದ ಪ್ರಕಾಶದ ಆಧಾರದ ಮೇಲೆ ಅವುಗಳ ದೂರ ಲೆಕ್ಕ ಹಾಕಬಹುದು.

ಆಶ್ಚರ್ಯದ ಸಂಗತಿ ಎಂದರೆ ಮೊದಲನೆಯ ವರ್ಗದ ಸೂಪರ್ ನೋವಾಗಳ ರೋಹಿತದಲ್ಲಿ ಹೈಡ್ರೋಜನ್ ಕಾಣೆಯಾಗಿರುವುದು. ಇದರ ಮೂಲ ಹುಡುಕುತ್ತಾ ಹೊರಟಾಗ ಇನ್ನಷ್ಟು ಹೊಸ ಸಂಗತಿಗಳು ಬಯಲಾದವು.

ನಮಗೆ ಈಗ ತಿಳಿದಿರುವಂತೆ ಅತಿ ಹೆಚ್ಚು ದ್ರವ್ಯರಾಶಿಯ ನಕ್ಷತ್ರಗಳು ನ್ಯೂಟ್ರಾನ್ ನಕ್ಷತ್ರ ಅಥವಾ ಕಪ್ಪುಕುಳಿಯ ಹಂತ ತಲುಪುವಾಗ ಸೂಪರ್ ನೋವಾ ಉಂಟಾಗುತ್ತದೆ. ಇದು ಟೈಪ್ 2 ವರ್ಗಕ್ಕೆ ಸೇರುತ್ತವೆ. ಆದರೆ ಮೊದಲನೆಯವರ್ಗಕ್ಕೆ ಇದು ಕಾರಣವಲ್ಲ. ಅದು ಯಮಳ ನಕ್ಷತ್ರವೊಂದರ ಅವಸಾನ ಹಂತ.
 
ಯಮಳಗಳಲ್ಲಿ ಒಂದು ಸೂರ್ಯನಂತಹ ನಕ್ಷತ್ರದ ಅವಸಾನಹಂತವಾದ ಶ್ವೇತ ಕುಬ್ಜ. ಅದರ ಸಂಗಾತಿ ಸಾಧಾರಣ ನಕ್ಷತ್ರ ತನ್ನ ವಿಕಾಸದ ಸಹಜ ಹಂತಗಳನ್ನು ತಲುಪಿ ಕೆಂಪು ದೈತ್ಯವಾಗುತ್ತದೆ. ಅದರಿಂದ ಹೊರಬಿದ್ದ ವಸ್ತು ಶ್ವೇತ ಕುಬ್ಜದ ಮೇಲೆ ಸಂಚಯನವಾಗುತ್ತದೆ. ಪರಿಣಾಮವಾಗಿ ಶ್ವೇತಕುಬ್ಜದ ದ್ರವ್ಯರಾಶಿ ಹೆಚ್ಚ ತೊಡಗುತ್ತದೆ.

ಆದರೆ, ಶ್ವೇತ ಕುಬ್ಜಗಳಿಗೆ ಒಂದು ಮಿತಿ ಇದೆ. 1.4 ಸೌರರಾಶಿಗಿಂತ ಹೆಚ್ಚಿನ ದ್ರವ್ಯರಾಶಿ ಅವುಗಳಿಗೆ ಇರಲು ಸಾಧ್ಯವಿಲ್ಲ. ಇದನ್ನು ಸೈದ್ಧಾಂತಿಕವಾಗಿ ನಿರೂಪಿಸಿದವರು ನೊಬೆಲ್ ಪ್ರಶಸ್ತಿ ವಿಜೇತ ಎಸ್ ಚಂದ್ರಶೇಖರ್ ಅವರು.

ಅಕಸ್ಮಾತ್ ಈ ಮಿತಿಯನ್ನು ಮೀರಿದರೆ?. ಇದೇ ಎರಡನೆಯ ವರ್ಗದ ಸೂಪರ್ ನೋವಾ ಸ್ಫೋಟದ ರಹಸ್ಯ.  ಇದನ್ನು ಅತಿ ಸಮರ್ಪಕವಾಗಿ ಬಳಸಿಕೊಂಡದ್ದು ಈಗ್ಗೆ ಎರಡು ದಶಕಗಳಿಂದ ಈಚೆಗೆ. ದೂರ ದೂರದ ಗೆಲಾಕ್ಸಿಗಳನ್ನು ಅಳೆಯಲು ಅತಿ ಮಹತ್ವದ ಸಾಧನಗಳಾದ ಇವು ಬೇರೊಂದು ವಿಷಯವನ್ನೂ ತೋರಿಸಿಕೊಟ್ಟವು. ಅದನ್ನು ತಿಳಿಯಲು ವಿಶ್ವವಿಜ್ಞಾನದ ಕೆಲವು ಬೃಹತ್ ಪ್ರಶ್ನೆಗಳತ್ತ ಗಮನ ಹರಿಸೋಣ.

ಇಂದು ಪ್ರಚಲಿತವಿರುವ ಬಿಗ್ ಬ್ಯಾಂಗ್ (ಮಹಾಸ್ಫೋಟ) ಸಿದ್ಧಾಂತದ ಪ್ರಕಾರ ವಿಶ್ವ ವಿಸ್ತರಿಸುತ್ತಿದೆ. ಎಲ್ಲ ಗೆಲಾಕ್ಸಿಗಳೂ ಪರಸ್ಪರ ದೂರ ಸರಿಯುತ್ತಿವೆ. ಈ ವಿಸ್ತಾರ ಎಂದೆಂದಿಗೂ ಹೀಗೆಯೇ ಮುಂದುವರೆಯುತ್ತದೆಯೇ? ಅಥವಾ ಒಂದು ಹಂತದವರೆಗೂ ವಿಸ್ತರಿಸಿ ಅಲ್ಲಿಯೇ ನಿಲ್ಲತ್ತದೆಯೇ? ಅಥವಾ ಪುನಃ ಕುಸಿಯಲು ಆರಂಭಿಸುತ್ತದೆಯೇ? - ಈ ಪ್ರಶ್ನೆಗಳಿಗೆ ನೇರವಾದ ಉತ್ತರ ದೊರಕುವುದಿಲ್ಲ.
 
ಈ ಕುರಿತು ಸೈದ್ಧಾಂತಿಕ ಚಿಂತನೆಗೆ ತೊಡಗಿದ ಆಲ್ಬರ್ಟ್ ಐನ್‌ಸ್ಟೈನ್ ವಿಶ್ವವು ನಿಶ್ಚಲವಾದದ್ದು ಎಂಬ ಪರಿಕಲ್ಪನೆಯಿಂದ ತಮ್ಮ ಸೂತ್ರಗಳನ್ನು ರಚಿಸಿದರು. ಅವರು ಗುರುತ್ವದ ಪ್ರಭಾವದ ಕಾರಣ ವಿಶ್ವ ಎಂದೆಂದೂ ವಿಸ್ತರಿಸುತ್ತಲೇ ಇರುವುದು ಸಾಧ್ಯವಾಗುವುದಿಲ್ಲ ಎಂದು ಕಲ್ಪಿಸಿಕೊಂಡರು.
 
ಈ ಸೂತ್ರಗಳು ವಿಶ್ವದ ವಿಕಾಸವನ್ನು ಸಮರ್ಪಕವಾಗಿ ವಿವರಿಸಿದಂತೆ ಕಂಡರೂ ಅವರಿಗೆ ತಮ್ಮ ಪರಿಕಲ್ಪನೆಯ ಬಗ್ಗೆ ಸಂದೇಹವೇ ಇತ್ತು. ಆದ್ದರಿಂದ ಅವರು ಅದನ್ನು ಸೂಚಿಸುವ `ಕಾಸ್ಮಲಾಜಿಕಲ್ ಕಾನ್ಸ್ಟೆಂಟ್~ ಎಂಬ ಪರಿಕಲ್ಪನೆಯನ್ನೇ ಹಿಂತೆಗೆದುಕೊಂಡರು. ವಿಶ್ವದ ಮುಂದಿನ ಹಂತ ಪ್ರಶ್ನೆಯಾಗಿಯೇ ಉಳಿುತು.

ಖಗೋಲದಲ್ಲಿಯೇ ಇದಕ್ಕೆ ಉತ್ತರ  ಹುಡುಕುವ ಪ್ರಯತ್ನಗಳು ಆರಂಭವಾದವು. ಇದಕ್ಕಾಗಿ ನಾವು ಬಹಳ ದೂರದ ಗೆಲಾಕ್ಸಿಗಳನ್ನು ನೋಡಬೇಕು. ಉದಾಹರಣೆಗೆ ನಾವು 6 ಶತಕೋಟಿ ಜ್ಯೋತಿರ್ವರ್ಷಗಳ ದೂರದ ಗೆಲಾಕ್ಸಿ  ನೋಡುತ್ತಿದ್ದೇವೆಂದರೆ ಅಲ್ಲಿಂದ 6 ಶತಕೋಟಿ ವರ್ಷಗಳ ಹಿಂದೆ ಹೊರಟ ಬೆಳಕು ನಮ್ಮನ್ನು ಇಂದು ತಲುಪುತ್ತಿದೆ ಎಂದರ್ಥ.

ಅಂದರೆ ನಾವು ನೋಡುತ್ತಿರುವುದು ಹಳೆಯ ಸುದ್ದಿ - ಹಿಂದಿನ ದಿನದ `ಪ್ರಜಾವಾಣಿ~ ಓದಿದ ಹಾಗೆ. ಇನ್ನೂ ದೂರದ ಗೆಲಾಕ್ಸಿ ನಮಗೆ ಇನ್ನೂ ಹಳೆಯ ಸುದ್ದಿಯನ್ನು ಒದಗಿಸುತ್ತದೆ. ಹೀಗೆ ದೂರ ದೂರಕ್ಕೆ ದೃಷ್ಟಿ ಹರಿಸಿದ ಹಾಗೆ ಹೊಸದೊಂದು ಸಮಸ್ಯೆ ಎದುರಾಗುತ್ತದೆ.  ನಮ್ಮ ದೂರದ ನಿಖರತೆಯನ್ನು ತಿಳಿಯುವುದು ಹೇಗೆ? ಇಲ್ಲಿ ಟೈಪ್ 1 ಎಂಬ ಸೂಪರ್ ನೋವಾ ನೆರವಿಗೆ ಬಂದದ್ದು.

ಇದರ ಮಹತ್ವವನ್ನು ಅರಿತ ವಿಜ್ಞಾನಿಗಳು ಅತಿ ದೂರದ ಸೂಪರ್ ನೋವಾಗಳನ್ನು ಹುಡುಕುವ ಹೊಸ ಯೋಜನೆಗಳನ್ನು ಆರಂಭಿಸಿದ್ದು 1990ರ ದಶಕದಲ್ಲಿ. ಎರಡು ಬೇರೆ ಬೇರೆ ಗುಂಪುಗಳು ದೂರದ ಗೆಲಾಕ್ಸಿಗಳನ್ನು ಸೂಪರ್ ನೋವಾ ಗಳಿಗಾಗಿ ಹೊಂಚು ಹಾಕಿದವು. ಇಂದು ಒಂದು ಚಿತ್ರ ತೆಗೆದು ಮೂರು ವಾರಗಳ ನಂತರ ಮತ್ತೊಂದು ಚಿತ್ರ ತೆಗೆಯ ಬೇಕು; ಬಹಳ ತಾಳ್ಮೆಯಿಂದ ಅವುಗಳನ್ನು ಪರಿಶೀಲಿಸಬೇಕು. ಹೊಸದೊಂದು (ಕ್ಷೀಣ) ಚಿಕ್ಕೆ ಕಂಡು ಬಂದಲ್ಲಿ ಅದು ಸೂಪರ್ ನೋವಾ ಹೌದೇ ಅಲ್ಲವೇ ಎಂದು ಖಚಿತಪಡಿಸಿಕೊಳ್ಳಬೇಕು.

ಸುಮಾರು 50 ಸೂಪರ್ ನೋವಾಗಳೇನೋ ಪತ್ತೆಯಾದವು. ಆದರೆ, ಹೊಸದೊಂದು ಸಮಸ್ಯೆ ಎದುರಾಯಿತು. ಅವು ಲೆಕ್ಕ ಹಾಕಿದ್ದಕ್ಕಿಂತ ಹೆಚ್ಚು ದೂರದಲ್ಲಿದ್ದವು. ದೂರ ಹೆಚ್ಚಿದಂತೆ ಈ ವ್ಯತ್ಯಾಸವೂ ಗಣನೀಯಯಿತು. ಇಲ್ಲಿ ಮತ್ತೆ ವಿಶ್ವವಿಕಾಸದ ಹಂತಗಳ ಪುನರ್ಮನನ ನಡೆಯಿತು. ಗುರುತ್ವದ ವಿರುದ್ಧ ಗುಣಗಳುಳ್ಳ ಯಾವುದೋ ಚೈತನ್ಯ ಗೆಲಾಕ್ಸಿಗಳನ್ನು ದೂರ ತಳ್ಳುತ್ತಿದೆ; 

ಹೀಗೆ ಕಲ್ಪಿಸಿಕೊಂಡು ವೇಗೋತ್ಕರ್ಷದ ತಿದ್ದುಪಡಿ ಅಳವಡಿಸಿದ ಕೂಡಲೇ ವೀಕ್ಷಣೆಯ ವಿವರಗಳು ಸಮರ್ಪಕವಾದ ರೀತಿಯಲ್ಲಿ ಹೊಂದಿಕೊಂಡವು.ಅಂದರೆ ವಿಶ್ವ ವೇಗೋತ್ಕರ್ಷ ಪಡೆದು ವಿಸ್ತರಿಸುತ್ತಿದೆಯೇ? ಐನ್ ಸ್ಟೈನ್ ಅವರು ಅನುಕೂಲಕ್ಕೆಂದು ಮಾಡಿಕೊಂಡ ಪರಿಕಲ್ಪನೆ ಬಹಳ ಸಮರ್ಪಕವಾದುದೇ?

ಹೀಗೆ ಹೊರಬಿದ್ದ ಚಿಂತನೆಗಳು ಅವ್ಯಕ್ತ ಚೈತನ್ಯ ಎಂಬ ಹೊಸದೊಂದು ಪರಿಕಲ್ಪನೆ ಸೃಷ್ಟಿಸಿದವು. ವಿಶ್ವದ ಶೇಕಡಾ 70ರಷ್ಟು ಭಾಗವನ್ನು ಆವರಿಸಿರುವ ಡಾರ್ಕ್ ಎನರ್ಜಿ ಎಂಬ ಈ ಶಕ್ತಿಯ ಸ್ವಭಾವವೇನು? ಗೆಲಾಕ್ಸಿಗಳ ವೇಗೋತ್ಕರ್ಷವಲ್ಲದೆ ಇನ್ನು ಯಾವ ವಿಧವಾಗಿ ಇದು ಅಭಿವ್ಯಕ್ತವಾಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ.

ಮೂವರಿಗೆ ಭೌತಶಾಸ್ತ್ರ ನೊಬೆಲ್ 

2011ರ ಭೌತಶಾಸ್ತ್ರ ವಿಭಾಗದ ನೊಬೆಲ್ ಬಹುಮಾನವನ್ನು ಸೌಲ್ ಪರ್ಲ್‌ಮಟರ್, ರಿಯಾನ್  ಷ್ಮಿಡ್ಟ್ ಮತ್ತು ಆಡಂ ರೀಸ್ ಇವರಿಗೆ ಹಂಚಲಾಗಿದೆ. ದೂರದ ಸೂಪರ್ ನೋವಾಗಳ ಅಧ್ಯಯನದಿಂದ ವಿಶ್ವದ ವಿಸ್ತಾರವು ವೇಗೋತ್ಕರ್ಷ ಪಡೆದಿದೆ ಎಂಬ ಮಹತ್ಸಾಧನೆಗಾಗಿ ಈ ಪ್ರಶಸ್ತಿ ಕೊಡಲಾಗಿದೆ.

ವಿಶ್ವ ವಿಕಾಸ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಯಲು ಈ ಮೂವರು ಬೇರೆ ಬೇರೆ ಬಗೆಯ ದಾರಿಗಳನ್ನು ಹಿಡಿದರೂ ಫಲಿತಾಂಶ ಸಿಕ್ಕಿದ್ದು ಮಾತ್ರ ಒಂದೇ. ವಿಶ್ವದ ಒಟ್ಟು ದ್ರವ್ಯರಾಶಿ ಎಷ್ಟು ಎಂದು ಲೆಕ್ಕ ಹಾಕುವ ಪ್ರಯತ್ನ ರೀಸ್ ಅವರದ್ದು. ವಿಕಿರಣ ರೂಪದಿಂದ ವಸ್ತುವಾಗಿ ಪರಿವರ್ತನೆಗೊಂಡಾಗ ಗುರುತ್ವದ ಪ್ರಭಾವ ಗಮನಾರ್ಹವಾಯಿತು.
 
ಆದ್ದರಿಂದ ವಿಶ್ವದ ವಿಕಾಸದಲ್ಲಿ ನಿಧಾನವಾಗಬೇಕು ಎಂದು ನಿರೂಪಿಸಲು ಹೊರಟಿದ್ದ ಇವರುಗಳಿಗೆ ತದ್ವಿರುದ್ಧವಾದ ಫಲಿತಾಂಶ ಕಂಡಿತು. ಈ ವೇಗೋತ್ಕರ್ಷ ಹೇಗೆ ಒದಗುತ್ತಿದೆ? ಎಂಬ ಪ್ರಶ್ನೆ ಎದ್ದಿತು. ಇದು ಕಾಸ್ಮಾಲಜಿ ಅಥವಾ ವಿಶ್ವ ವಿಜ್ಞಾನಕ್ಕೆ ಹೊಸ ತಿರುವನ್ನೇ ತಂದು ಕೊಟ್ಟಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT