ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮನ್ವಂತರ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಹೊಸ ಖಾಸಗಿ ಬ್ಯಾಂಕ್‌ಗಳ ಸ್ಥಾಪನೆಗೆ ಹಾದಿ ಮಾಡಿಕೊಡುವ `ಬ್ಯಾಂಕಿಂಗ್ ಕಾಯ್ದೆ (ತಿದ್ದುಪಡಿ) ಮಸೂದೆ 2011', ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವುದರಿಂದ ದೇಶದ ಬ್ಯಾಂಕಿಂಗ್ ರಂಗದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದೆ. ದಶಕದ ನಂತರ ಬ್ಯಾಂಕಿಂಗ್ ರಂಗ ಪ್ರವೇಶಿಸಲು ಹೊಸಬರಿಗೆ ಈಗ ಹಾದಿ ಸುಗಮವಾಗಲಿದೆ. ಹೊಸ ಬ್ಯಾಂಕ್‌ಗಳ ಸ್ಥಾಪನೆಯ ಲೈಸನ್ಸ್ ಮಾರ್ಗದರ್ಶಿ ಸೂತ್ರಗಳು ಜನವರಿಯಲ್ಲಿ ಅಂತಿಮಗೊಳ್ಳಲಿದ್ದು ಶೀಘ್ರದಲ್ಲಿಯೇ ಹೊಸ ಬ್ಯಾಂಕ್‌ಗಳು ಕಾರ್ಯಾರಂಭ ಮಾಡಲಿವೆ. ಬ್ಯಾಂಕಿಂಗ್ ಸೌಲಭ್ಯ ವ್ಯಾಪ್ತಿಗೆ ಹೆಚ್ಚೆಚ್ಚು ಜನರನ್ನು ತರುವ, ಬ್ಯಾಂಕಿಂಗ್ ಸೌಲಭ್ಯ ವಿಸ್ತರಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಜಾರಿಯು ಈಗ ಇನ್ನಷ್ಟು ಸುಗಮವಾಗಲಿದೆ.

ಹೊಸ ಬ್ಯಾಂಕ್ ಶಾಖೆಗಳ ಸ್ಥಾಪನೆ ಮತ್ತು ಹಾಲಿ ಬ್ಯಾಂಕ್‌ಗಳ ವಿಸ್ತರಣೆ ಮೂಲಕ ಆರ್ಥಿಕ ಬೆಳವಣಿಗೆಯು ಇನ್ನಷ್ಟು ತ್ವರಿತಗೊಳ್ಳಲಿದೆ. ಹೊಸ ಉದ್ಯೋಗ ಅವಕಾಶಗಳೂ ಸೃಷ್ಟಿಯಾಗಲಿವೆ. ಹೊಸ ಬ್ಯಾಂಕ್ ಸ್ಥಾಪನೆಯ ಲೈಸೆನ್ಸ್ ಪೂರ್ವ ಬಹುತೇಕ ಷರತ್ತುಗಳನ್ನು ಈಡೇರಿಸುವ ನಿಯಮಗಳೂ ಮಸೂದೆಯಲ್ಲಿ ಇವೆ. ವಾಣಿಜ್ಯ ಬ್ಯಾಂಕ್‌ಗಳ ನಿಯಂತ್ರಣಕ್ಕೆ `ಆರ್‌ಬಿಐ'ಗೆ ಹೆಚ್ಚಿನ ಅಧಿಕಾರ, ಬ್ಯಾಂಕ್‌ಗಳಲ್ಲಿ ಹೂಡಿಕೆದಾರರ ಮತದಾನ ಹಕ್ಕು ಹೆಚ್ಚಳ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಬೋನಸ್ ಮತ್ತು ಹಕ್ಕಿನ ಷೇರುಗಳ ಮೂಲಕ ಬಂಡವಾಳ ಕ್ರೋಡೀಕರಣಕ್ಕೂ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸರಕುಗಳ ವಾಯಿದಾ ವಹಿವಾಟು ನಡೆಸಲು ಅವಕಾಶ ನೀಡುವ ವಿವಾದಾತ್ಮಕ ಪ್ರಸ್ತಾವವನ್ನು ಸರ್ಕಾರ ಕೈಬಿಟ್ಟಿದ್ದರಿಂದ ತಿದ್ದುಪಡಿ ಕಾಯ್ದೆ ಅಂಗೀಕಾರಕ್ಕೆ ಇದ್ದ ಪ್ರಮುಖ ಅಡಚಣೆಯು ದೂರವಾಗಿದೆ. ಒಂದು ವೇಳೆ ಬ್ಯಾಂಕ್‌ಗಳಿಗೆ ವಾಯಿದಾ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿದ್ದರೆ ಅದರಿಂದ ಊಹಾತ್ಮಕ (ಸಟ್ಟಾ) ವ್ಯಾಪಾರಕ್ಕೆ ಮತ್ತು ಅದರಿಂದ ಇನ್ನಷ್ಟು ಬೆಲೆ ಏರಿಕೆಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತಿತ್ತು. ಈಗ ಅಂತಹ ಸಾಧ್ಯತೆ ಇಲ್ಲದಿರುವುದು ಸಮಾಧಾನಕರ ಸಂಗತಿ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ), ಉದ್ದಿಮೆ ಸಂಸ್ಥೆ ಬೆಂಬಲಿತ ಹಣಕಾಸು ಸಂಸ್ಥೆಗಳು, ಬೃಹತ್ ಉದ್ದಿಮೆ ಸಮೂಹಗಳು ಬ್ಯಾಂಕಿಂಗ್ ರಂಗ ಪ್ರವೇಶಿಸುವ ಮಾರ್ಗ ಸುಗಮವಾದಂತಾಗಿದೆ. ಎಲ್‌ಆಂಡ್‌ಟಿ ಫೈನಾನ್ಸ್, ಶ್ರೀರಾಂ ಗ್ರೂಪ್, ಮಹೀಂದ್ರಾ  ಫೈನಾನ್ಸ್, ಬಜಾಜ್ ಗ್ರೂಪ್ ಮುಂತಾದವು ಬ್ಯಾಂಕ್‌ಗಳ ಸ್ಥಾಪನೆಗೆ ಉತ್ಸುಕವಾಗಿದ್ದು, `ಆರ್‌ಬಿಐ' ನಿಗದಿಪಡಿಸಿರುವ ಷರತ್ತುಗಳನ್ನು ಪೂರ್ಣಗೊಳಿಸುವ ಎಲ್ಲ ಅರ್ಹತೆಯನ್ನೂ ಹೊಂದಿವೆ. ಖಾಸಗಿ ಷೇರುದಾರರಿಗೆ ಶೇ 10ರಷ್ಟು ಮತದಾನದ ಹಕ್ಕು ನೀಡುವುದರಿಂದ ಅವರಿಗೆ ಸಾರ್ವಜನಿಕರ ಹಣದ ನ್ಯಾಯಯುತ ಬಳಕೆಗಿಂತ ಹೆಚ್ಚು ಲಾಭ ಗಳಿಸುವುದೇ ಮುಖ್ಯವಾಗುವ ಅಪಾಯ ಇದೆ ಎನ್ನುವ ಆತಂಕವನ್ನು ಬ್ಯಾಂಕ್ ಕಾರ್ಮಿಕ ಸಂಘಟನೆಗಳು ವ್ಯಕ್ತಪಡಿಸುತ್ತವೆ.

ಬ್ಯಾಂಕ್ ಪ್ರವರ್ತಕರ ಹಣಕಾಸು ಸಂಬಂಧಿ ವಹಿವಾಟಿನ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ  ಹೆಚ್ಚಿನ ಅಧಿಕಾರ ಇರುವುದರಿಂದ, ಹಾದಿ ತಪ್ಪುವ ನಿರ್ದೇಶಕ ಮಂಡಳಿಗಳನ್ನು ರದ್ದು ಪಡಿಸಬಹುದಾಗಿದೆ. ಇದರಿಂದ ಠೇವಣಿದಾರರ ಹಿತಾಸಕ್ತಿ ರಕ್ಷಣೆ ಸಾಧ್ಯವಾಗಲಿದೆ. ಹೀಗಾಗಿ ಬ್ಯಾಂಕ್‌ಗಳ ಗ್ರಾಹಕರು ನಿಶ್ಚಿಂತೆಯಿಂದ ಇರಬಹುದು. ಜೊತೆಗೆ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶಿ ಅರ್ಥವ್ಯವಸ್ಥೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಆಗದಿರಲು ನಮ್ಮಲ್ಲಿನ ಕಠಿಣ ಸ್ವರೂಪದ ಬ್ಯಾಂಕಿಂಗ್ ವ್ಯವಸ್ಥೆಯೂ ಕಾರಣ ಎನ್ನುವುದು ಈಗಾಗಲೇ ಸಾಬೀತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT