ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮಾದರಿಯ ಎಸ್‌ಯುವಿಗಳು

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜೀಪ್‌ ವ್ರ್ಯಾಂಗ್ಲರ್‌

ಬಿಡುಗಡೆಯ ದಿನಾಂಕ: ಜನವರಿ 2014 
ಅಂದಾಜು ಬೆಲೆ: ರೂ. 20ಲಕ್ಷ
ಜೀಪ್‌ ವ್ರ್ಯಾಂಗ್ಲರ್‌ ಕಾರನ್ನು ಈ ವರ್ಷದ ಡಿಸೆಂಬರ್‌ ವೇಳೆ ಬಿಡುಗಡೆ ಮಾಡುವುದಾಗಿ ಫಿಯೆಟ್‌ ಕಳೆದ ವರ್ಷವೇ ಹೇಳಿತ್ತು. ಆದರೆ ಬರುವ ವರ್ಷದ ಆರಂಭದಲ್ಲಿ ಅದು ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಜೀಪ್‌ ಕಂಪೆನಿಯ ಚರೋಕಿ ಹಾಗೂ ವ್ರ್ಯಾಂಗ್ಲರ್ ಎಂಬ ಎರಡು ಮಾದರಿಗಳನ್ನು ಒಟ್ಟಿಗೆ ಬಿಡುಗಡೆಯಾಗುತ್ತಿವೆ. ಚರೋಕಿ ನಗರ ಪ್ರದೇಶಗಳ ಎಸ್‌ಯುವಿ ಆದರೆ, ವ್ರ್ಯಾಂಗ್ಲರ್‌ ಅಪ್ಪಟ ಕಚ್ಚಾ ರಸ್ತೆಯ ಗಡಸು ವಾಹನ.

ವ್ರ್ಯಾಂಗ್ಲರ್‌ ತಂತ್ರಜ್ಞಾನ, ವಿನ್ಯಾಸ ಇಂದು ನಿನ್ನೆಯದಲ್ಲ. ಅದರ ಆರಂಭವಾಗಿದ್ದು 1986ರಲ್ಲಿ. ಆಗಿನ ವ್ರ್ಯಾಂಗ್ಲರ್‌ ಈಗಲೂ ಕೆಲವೊಂದು ಕಾಫಿ ಎಸ್ಟೇಟ್‌ಗಳಲ್ಲಿವೆ. ಅದೇ ಕಾರಿನ ನಾಲ್ಕನೇ ತಲೆಮಾರು ಈಗ ಬಿಡುಗಡೆಯಾಗುತ್ತಿದೆ. ಇದರ ಮೂಲ ಪ್ರತಿಷ್ಠಿತ ವಿಲ್ಲಿಸ್‌ ಜೀಪ್‌. ನಂತರದ ದಿನಗಳಲ್ಲಿ ಮಹೀಂದ್ರಾ ಎಸ್‌ಯುವಿಗಳು ಇದರ ಆಧಾರದ ಮೇಲೆಯೇ ನಿರ್ಮಿತವಾಗಿರುವುದನ್ನು ಗಮನಿಸಬಹುದು. ಹೀಗಾಗಿ ವ್ರ್ಯಾಂಗ್ಲರ್‌ ವಂಶ ಭಾರತೀಯರಿಗೆ ಪರಿಚಿತವೇ ಆಗಿದ್ದರೂ ಈಗ ಬಡುಗಡೆಯಾಗುತ್ತಿರುವ ವಾಹನ ಅಪ್ಪಟ ಜಟ್ಟಿಯಂತಿದೆ. ವ್ರ್ಯಾಂಗ್ಲರ್‌ ಮೂಲಕ ಫಿಯೆಟ್‌ ಭಾರತದಲ್ಲಿ ಹೊಸ ನಿರೀಕ್ಷೆಗಳೊಂದಿಗೆ ಹೊಸ ಹೆಜ್ಜೆಯನ್ನಿಡುತ್ತಿದೆ.

ಎರಡು ಬಾಗಿಲುಗಳ ಸಣ್ಣ ಚಾಸಿಯನ್ನೊಳಗೊಂಡ ಒಂದು ಬಗೆ ಹಾಗೂ ನಾಲ್ಕು ಬಾಗಿಲುಗಳ ಉದ್ದನೆಯ ಚಾಸಿಸ್‌ ಹೊಂದಿರುವ ಮತ್ತೊಂದು ಬಗೆಯ ವ್ರ್ಯಾಂಗ್ಲರ್ ಬಿಡುಗಡೆಯಾಗುತ್ತಿದೆ. ಎರಡೂ ವಾಹನಗಳಲ್ಲೂ 2.8 ಲೀ ಸಾಮರ್ಥ್ಯದ ಡೀಸೆಲ್‌ ಎಂಜಿನ್‌ ಅಳವಡಿಸಲಾಗಿದೆ. 200 ಪಿಎಸ್‌ ಹಾಗೂ 460ಎನ್‌ಎಂ ಟಾರ್ಕ್‌ ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿದೆ. ಎಂಜಿನ್‌ ಉತ್ಪಾದಿಸುವ ಶಕ್ತಿಯು ಐದು ಮ್ಯಾನುಯಲ್‌ ಗೇರ್‌ ಮೂಲಕ ನಾಲ್ಕೂ ಚಕ್ರಗಳಿಗೆ ಹರಿಯುತ್ತದೆ. ಇದಕ್ಕಾಗಿ ಅಮೆರಿಕದ ತಂತ್ರಜ್ಞಾನ ‘ಕಮಾಂಡ್‌ ಟ್ರ್ಯಾಕ್‌ ಫೋರ್‌ ವೀಲ್ ಡ್ರೈವ್‌’ ಎಂಬ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಹೊಂಡಾ ಮೊಬಿಲೊ

ಬಿಡುಗಡೆಯ ದಿನಾಂಕ: ಫೆಬ್ರುವರಿ 2014
ಅಂದಾಜು ಬೆಲೆ: ರೂ. 6.5ರಿಂದ 9ಲಕ್ಷ
ಬ್ರಿಯೊ ವಿನ್ಯಾಸ ಹೊಂಡಾ ಪಾಲಿಗೆ ಏಷ್ಯಾದ ಕಾರು ಮಾರುಕಟ್ಟೆಯಲ್ಲಿ ಅತ್ಯಂತ ಯಶಸ್ವಿ ಪ್ರಯೋಗ. ಇದೇ ವಿನ್ಯಾಸವನ್ನು ಆಧರಿಸಿ ಅಮೇಜ್‌ ಎಂಬ ಸೆಡಾನ್‌ ಕಾರು ಕೂಡಾ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿದೆ. ಇದೀಗ ಅದೇ ವಿನ್ಯಾಸದಲ್ಲಿ ಮೊಬಿಲೊ ಎಂಬ ಏಳು ಆಸನಗಳ ಎಂಪಿವಿ ವಾಹನ ಇಂಡೋನೇಷ್ಯಾದಲ್ಲಿ ಬಿಡುಗಡೆ ಗೊಂಡಿದ್ದು ಬರುವ ವರ್ಷ ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಕಡಿಮೆ ಬೆಲೆಗೆ ಲಭ್ಯವಿರುವ ಎಂಪಿವಿಗಳ ಸಾಲಿಗೆ ಸೇರುವ ಮೊಬಿಲೊ ಅಮೇಜ್‌ ರೂಪವನ್ನೇ ಹೊಂದಿದೆ. ಮಾರುತಿ ಸುಜುಕಿ ಎರ್ಟಿಗಾ, ಷವರ್ಲೆ ಎಂಜಾಯ್‌, ನಿಸ್ಸಾನ್‌ ಎವಾಲಿಯಾ, ಅಶೋಕ್ ಲೇಲ್ಯಾಂಡ್‌ ಸ್ಟೈಲ್‌ ಹಾಗೂ ಮಹೀಂದ್ರಾ ಕ್ವಾಂಟೊ ಪ್ರತಿಸ್ಪರ್ಧಿ. ಒಳಭಾಗದಲ್ಲಿ ಅಮೇಜ್‌ ಹಾಗೂ ಬ್ರಿಯೊ ಕಾರನ್ನೇ ಹೋಲಲಿದೆ. ಮುಂದಿನ ಎರಡು ಸಾಲುಗಳಲ್ಲಿ ಹೆಚ್ಚು ಆರಾಮದಾಯಕ ಆಸನಗಳಿವೆ. ಮೂರನೆಯ ಮಡಚುವಂಥ ಆಸನಗಳಲ್ಲಿ ಮಕ್ಕಳು ಹಾಗೂ ಸಣ್ಣಪುಟ್ಟ ಲಗೇಜ್‌ಗಳನ್ನು ಇಡಬಹುದಾದಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ (ಉದ್ದ 4.4 ಮೀ.).

ಮೊಬಿಲೊ 1.5 ಲೀ ಸಾಮರ್ಥ್ಯದ ಟರ್ಬೊಚಾರ್ಜರ್‌ ಡೀಸೆಲ್‌ ಎಂಜಿನ್‌ ಹೊಂದಿದೆ. 100ಪಿಎಸ್‌ ಹಾಗೂ 205ಎನ್‌ಎಂ ಶಕ್ತಿ ಉತ್ಪಾದಿಸುವುದು ಇದರ ಸಾಮರ್ಥ್ಯ. ಪೆಟ್ರೋಲ್‌ ಮಾದರಿಯ ಎಂಜಿನ್‌ನಲ್ಲಿ 1.5 ಲೀ. ಐವಿಟೆಕ್‌ ಎಂಜಿನ್‌ ಅಳವಡಿಸಲಾಗಿದೆ. ತೆರಿಗೆ ಉಳಿಸುವ ಸಲುವಾಗಿ ಭಾರತದಲ್ಲಿ ಈ ಕಾರಿನ ಉದ್ದ 4 ಮೀ.ಗೆ ಸೀಮಿತಗೊಳಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಒಟ್ಟಿನಲ್ಲಿ 2014ರ ಏಪ್ರಿಲ್‌ ವೇಳೆಗೆ ನಿರೀಕ್ಷಿಸಬಹುದಾದ ಹೊಂಡಾ ಮೊಬಿಲೊ ಕಾರಿನ ಬೆಲೆ ರೂ. 6.5ರಿಂದ ಪೆಟ್ರೋಲ್‌ ಕಾರಿನ ಬೆಲೆ ಆರಂಭವಾದರೆ ಡೀಸೆಲ್‌ ಮಾದರಿಯ ಟಾಪ್‌ ಎಂಡ್‌ ಮಾದರಿಯ ಬೆಲೆ ರೂ. 9 ಲಕ್ಷದವರೆಗೆ ಇರಬಹುದು ಎಂದು ಅಂದಾಜು ಮಾಡಲಾಗಿದೆ.

ಡಟ್ಸನ್‌ ಗೊ ಪ್ಲಸ್
ಬಿಡುಗಡೆಯ ದಿನಾಂಕ:
ಏಪ್ರಿಲ್‌ 2014
ಅಂದಾಜು ಬೆಲೆ: ರೂ. 5.7ರಿಂದ 7.5ಲಕ್ಷ
ಭಾರತದಲ್ಲಿ ಕೇವಲ ಎರಡು ತಿಂಗಳು ಪೂರೈಸಿರುವ ನಿಸ್ಸಾನ್‌ನ ಕೂಸು ಡಟ್ಸನ್‌ ಕಾರು ಕಂಪೆನಿ ಗೊ ಎಂಬ ಸಣ್ಣ ಕಾರಿನ ಮೂಲಕ ಸಣ್ಣಗೆ ದನಿ ಎತ್ತಿತ್ತು. ಸ್ಥಳೀಯ ಮಾರುಕಟ್ಟೆಗೆ ಸ್ಥಳೀಯವಾಗಿ ವಿನ್ಯಾಸಗೊಂಡ ಕಾರು ಎಂದು ಜಪಾನೀಯರು ಇದನ್ನು ಬಣ್ಣಿಸಿದ್ದರು. ಇದೇ ಕಂಪೆನಿಯ ಎರಡನೇ ಕಾರು ಡಟ್ಸನ್‌ ಗೊ ಪ್ಲಸ್‌ ಇಂಡೊನೇಷ್ಯಾದ ಆಟೊ ಎಕ್ಸ್‌ಪೊನಲ್ಲಿ ಅನಾವರಣಗೊಂಡು ದೊಡ್ಡ ಸುದ್ದಿಯನ್ನೇ ಮಾಡಿತ್ತು. ಇದೀಗ ಆ ಕಾರು ಭಾರತೀಯ ಮಾರುಕಟ್ಟೆಗೂ ಪ್ರವೇಶಿಸುವ ಹಂತದಲ್ಲಿದೆ.

ಡಟ್ಸನ್‌ ಗೋ ಪ್ಲಸ್‌ ಕೂಡಾ ತನ್ನ ಸಣ್ಣ ಕಾರಿನ ದೊಡ್ಡ ರೂಪ. 3.95 ಮೀಟರ್‌ ಉದ್ದವಿರುವ ಈ ಕಾರು ಭಾರತದಲ್ಲಿ ಸುಲಭವಾಗಿ ರಿಯಾಯಿತಿ ಗಿಟ್ಟಿಸಿಕೊಳ್ಳಲಿದೆ. ಹಿಂಭಾಗದಿಂದಲೂ ಸಣ್ಣ ಕಾರಿನ ರೂಪವನ್ನೇ ಹೊಂದಿರುವ ಕಾರು ಗಾತ್ರದಲ್ಲಿ ಮಾತ್ರ ಹಿರಿದಾಗಿದೆ. ಮೂರು ಸಾಲಿನ ಈ ಕಾರಿನ ಎಲ್ಲಾ ಆಸನಗಳಿಗೂ ಹವಾನಿಯಂತ್ರಣ ವ್ಯವಸ್ಥೆ ತಲುಪುವಂತೆ ಮಾಡಲಾಗಿದೆ. 1.2ಲೀ. ಮೂರು ಸಿಲಿಂಡರ್‌ ಪೆಟ್ರೋಲ್‌ ಎಂಜಿನ್‌ 75ಪಿಎಸ್‌ ಹಾಗೂ 104ಎನ್‌ಎಂ ಟಾರ್ಕ್‌ ಉತ್ಪತ್ತಿ ಮಾಡಬಲ್ಲದು. 1.5ಲೀ. ಸಾಮರ್ಥ್ಯದ ಡೀಸೆಲ್‌ ಎಂಜಿನ್‌ ಅನ್ನು ಗೋ ಪ್ಲಸ್‌ ಹೊಂದಿದೆ.

ಇಂಡೊನೇಷ್ಯಾದಲ್ಲಿ ಬಿಡುಗಡೆಯಾಗಿರುವ ಡಟ್ಸನ್‌ ಗೋ ಪ್ಲಸ್‌ನ ಬೆಲೆ ರೂ. 5.5ಲಕ್ಷ. ಆದರೆ ಭಾರತದಲ್ಲಿ ಇದರ ಬೆಲೆ ರೂ. 5.7ರಿಂದ 7.5ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿದೆ. ಭಾರತದಲ್ಲಿ 2014ರ ಆಟೊ ಎಕ್ಸ್‌ಪೊಗೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಅಲ್ಲಿ ಈ ಕಾರು ಅನಾವರಣಗೊಳ್ಳಲಿದೆ.

ಫೋಕ್ಸ್‌ ವ್ಯಾಗನ್‌ ಟೈಗನ್‌
ಬಿಡುಗಡೆ ದಿನಾಂಕ:
ಏಪ್ರಿಲ್‌ 2014
ಅಂದಾಜು ಬೆಲೆ: ರೂ. 9ರಿಂದ 14 ಲಕ್ಷ
ಫೋಕ್ಸ್‌ ವ್ಯಾಗನ್‌ ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಿದ ಯುರೋಪಿಯನ್‌ ಕಾರು. ಸಣ್ಣ ಕಾರು, ಉದ್ದನೆಯ ಕಾರುಗಳಿದ್ದರೂ ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿಯಾಗಲೀ ಎಂಯುವಿಯಾಗಲೀ ಇರಲಿಲ್ಲ. ಆದರೆ ಆ ನಿರ್ವಾತವನ್ನು ಸರಿಪಡಿಸಲು ಫೋಕ್ಸ್‌ವ್ಯಾಗನ್‌ ಟೈಗನ್‌ ಎಂಬ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ತುದಿಗಾಲಿನಲ್ಲಿ ನಿಂತಿದೆ.

ಸಣ್ಣ ಗಾತ್ರದ ಎಸ್‌ಯುವಿಗಳು ಭಾರತದಲ್ಲಿ ಹೆಚ್ಚು ಬೇಡಿಕೆ ಪಡೆಯುತ್ತಿರುವ ಲಾಭ ಪಡೆಯಲಿಚ್ಛಿಸಿರುವ ಫೋಕ್ಸ್‌ವ್ಯಾಗನ್‌ ತನ್ನ ಟೈಗನ್‌ ಕಾರನ್ನು ಅದೇ ರೀತಿಯಲ್ಲಿ ವಿನ್ಯಾಸ ಮಾಡಿದೆ. ಈಗಾಗಲೇ ಐರೋಪ್ಯ ರಾಷ್ಟ್ರಗಳಲ್ಲಿ ಟೈಗನ್‌ ಹಾಗೂ ಟರೇಜ್‌ ಎಂಬ ಮಾದರಿಯ ಎಸ್‌ಯುವಿಗಳು ಓಡುತ್ತಿವೆಯಾದರೂ ಭಾರತದಲ್ಲಿ ಅದರ ಸಣ್ಣ ರೂಪವನ್ನು ಬಿಡುಗಡೆ ಮಾಡಲು ಕಂಪೆನಿ ಇಚ್ಛಿಸಿದಂತಿದೆ.

ನಾಲ್ಕು ಆಸನಗಳ ಈ ಸಣ್ಣ ಎಸ್‌ಯುವಿ ಕಾರಿನೊಳಗೆ 1 ಲೀ. ಟಿಎಸ್‌ಐ ಪೆಟ್ರೋಲ್‌ ಎಂಜಿನ್‌ ಅಳವಡಿಸಲಾಗಿದೆ. 110 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಕಾರು ಡೈರೆಕ್ಟ್‌ ಫ್ಯುಯೆಲ್‌ ಇಂಜೆಕ್ಷನ್‌ ಹಾಗೂ ಟರ್ಬೋಚಾರ್ಜರ್‌ ಹೊಂದಿರುವುದರಿಂದ ಹೆಚ್ಚು ಶಕ್ತಿ ಹಾಗೂ ಉತ್ತಮ ಇಂಧನ ಕ್ಷಮತೆ (ಪ್ರತಿ ಲೀಟರ್‌ಗೆ 22 ಕಿ.ಮೀ.)ಯನ್ನು ಹೊಂದಿದೆ. ವಾಹನದ ತೂಕ 985 ಕೆ.ಜಿ. ಕಡಿಮೆ ತೂಕ ಇರುವುದರಿಂದ 175ಎನ್‌ಎಂ ಟಾರ್ಕ್‌ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಈ ಕಾರಿನ ಗರಿಷ್ಠ ವೇಗ 186 ಕಿ.ಮೀ. ಹಾಗೂ ಪ್ರತಿ ಗಂಟೆಗೆ 0ಯಿಂದ 100 ಕಿ.ಮೀ. ವೇಗ ತಲುಪಲು 9.2 ಸೆಕೆಂಡುಗಳನ್ನು ತೆಗೆದುಕೊಳ್ಳಲಿದೆಯಂತೆ.

ಫೋರ್ಡ್‌ ಎಕೋಸ್ಪೋರ್ಟ್ಸ್‌, ರಿನೊ ಡಸ್ಟರ್‌ ಹಾಗೂ ಮಹೀಂದ್ರಾ ಕ್ವಾಂಟೊ ಕಾರುಗಳಿಗೆ ಸ್ಪರ್ಧೆ ಒಡ್ಡಲಿರುವ ಫೋಕ್ಸ್‌ವ್ಯಾಗನ್‌ ಟೈಗನ್‌ ಬೆಲೆ ಪೊಲೊ ಕಾರಿನ ಆಸುಪಾಸಿನಲ್ಲಿ ಇರಲಿದೆ ಎಂದು ಮೂಲಗಳು ಹೇಳುತ್ತವೆ.

ಫಿಯೆಟ್‌ ಪಾಂಡಾ
ಬಿಡುಗಡೆ ದಿನಾಂಕ:
ಮೇ 2014
ಅಂದಾಜು ಬೆಲೆ: ರೂ. 8ರಿಂದ 10 ಲಕ್ಷ
ಜಗತ್ತಿನ ಅತಿ ದೊಡ್ಡ ಮೋಟಾರು ಕಾರುಗಳ ಪ್ರದರ್ಶನ ಫ್ರ್ಯಾಂಕ್‌ಫರ್ಟ್‌ ಮೊಟಾರ್‌ ಶೋನಲ್ಲಿ ಅನಾವರಣಗೊಂಡ ಫಿಯೆಟ್‌ ಪಾಂಡಾ ಬಹುಬೇಗ ಭಾರತಕ್ಕೆ ಬರಲಿರುವ ಸುದ್ದಿ ಹೊರಬಿದ್ದಿದೆ. ಸ್ಫೋರ್ಟಿ ರೂಪ ಹೊಂದಿರುವ ಪಾಂಡಾ ಸಾಕಷ್ಟು ಹೊಸತನಗಳನ್ನು ಹೊಂದಿದೆಯಂತೆ.

ಐದು ಆಸನಗಳ ಫಿಯೆಟ್‌ ಪಾಂಡಾ ಹೆಚ್ಚು ಸಾಮಾನು ಸರಂಜಾಮು ಸಾಗಿಸಲು ಅನುವಾಗುವಂತೆ ಬೂಟ್‌ ಸ್ಪೇಸ್‌ ಹೆಚ್ಚು ಮಾಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಟ್ವಿನ್‌ ಏರ್‌ ರೇಂಜ್‌ ಎಂಜಿನ್‌ ಹೊಂದಿದ್ದರೂ, ಭಾರತದಲ್ಲಿ ನಾಲ್ಕು ಸಿಲಿಂಡರ್‌ಗಳ 69ಪಿಎಸ್‌ ಶಕ್ತಿ ಉತ್ಪಾದಿಸುವ 1.2 ಲೀ. ಪೆಟ್ರೋಲ್‌ ಎಂಜಿನ್‌ ಹಾಗೂ 75 ಅಶ್ವಶಕ್ತಿಯ 1.3 ಮಲ್ಟಿಜೆಟ್‌ 2 ಟರ್ಬೊ ಎಂಜಿನ್‌ ಅಳವಡಿಸುವ ಸಾಧ್ಯತೆ ಇದೆ. ಜತೆಗೆ ಕಾರು ಚಾಲು ಹಾಗೂ ಬಂದ್ ಆಗುವ ಪುಷ್‌ ಬಟನ್‌ ಸ್ಟಾರ್ಟ್‌ ಸೌಲಭ್ಯವೂ ಇರಲಿದೆ.

ಪಾಂಡಾ ನೋಡಲು ಮಿನಿ ಎಂಯುವಿಯಂತೆ ಕಂಡರೂ ನಾಲ್ಕೂ ಚಕ್ರಗಳಿಗೆ ಶಕ್ತಿ ಪೂರೈಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಫಿಯೆಟ್‌ ಪಾಂಡಾ 4x4 ಕಠಿಣ ಹಾದಿಯಲ್ಲೂ ಸುಲಭವಾಗಿ ಸಾಗಬಲ್ಲದು. ಕಡಿದಾದ ರಸ್ತೆಯನ್ನು ಸುಲಭವಾಗಿ ಹತ್ತುವ ಸಾಮರ್ಥ್ಯ ಇದರದ್ದು. ಬರಲಿರುವ ದಿನಗಳಲ್ಲಿ ಒಂಬತ್ತು ಕಾರುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿರುವ ಫಿಯೆಟ್, ಆ ಪಟ್ಟಿಯ ಮೊದಲಿನಲ್ಲಿ ಬಹುಶಃ ಪಾಂಡಾ ಇರಬಹುದು. ಬರುವ ಮೇ ತಿಂಗಳಲ್ಲಿ ಈ ಕಾರು ಭಾರತದ ರಸ್ತೆಗೆ ಇಳಿಯುವ ಸಾಧ್ಯತೆಗಳಿದ್ದು ಇದರ ಬೆಲೆ 8ರಿಂದ 10 ಲಕ್ಷದ ಆಸುಪಾಸಿನಲ್ಲಿರಲಿದೆ.
– ಇ.ಎಸ್‌. ಸುಧೀಂದ್ರ ಪ್ರಸಾದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT